ADVERTISEMENT

ಗರ್ಭನಿರೋಧಕ ಮಾತ್ರೆ ವೈದ್ಯರನ್ನು ಸಂಪರ್ಕಿಸಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 19:30 IST
Last Updated 9 ಸೆಪ್ಟೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

1. ನನಗೀಗ 25 ವರ್ಷಗಳು. ಮದುವೆಯಾಗಿ ಒಂದು ತಿಂಗಳಾಯಿತು. ನನ್ನ ಪತ್ನಿಗೆ 20 ವರ್ಷ. ನಮ್ಮದು ಪ್ರೇಮವಿವಾಹ. ನಮಗೆ ಇನ್ನೂ ಮೂರುವರ್ಷ ಮಕ್ಕಳು ಬೇಡ. ಇಬ್ಬರಿಗೂ ಸಂಭೋಗದಲ್ಲಿ ಆಸಕ್ತಿ ಇದೆ. ಸದ್ಯಕ್ಕೆ ನಿರೋಧ್ ಬಳಸುತ್ತಿದ್ದೇವೆ.ಗರ್ಭ ಧರಿಸದಿರುವುದಕ್ಕೆ ಯಾವ ಕ್ರಮ ಅನುಸರಿಸಬೇಕು. ದಯವಿಟ್ಟು ತಿಳಿಸಿರಿ.

ಹೆಸರು, ಊರು ತಿಳಿಸಿಲ್ಲ

ಜೀವಜಗತ್ತನ್ನ ಮುಂದುವರಿಸಲು, ನಿಮ್ಮದೇ ಕುಟುಂಬ ಹೊಂದಲುಸಂತಾನೋತ್ಪತ್ತಿ ಅನಿವಾರ್ಯ. ಆದರೂ, ಈ ಪ್ರಕ್ರಿಯೆ ಅಪೇಕ್ಷಿತ ಘಟನೆಯಾಗಬೇಕೆ ಹೊರತು ಅನಪೇಕ್ಷಿತ ಅವಘಡವಾಗಬಾರದು. ಹಾಗಾಗಿ ಕುಟುಂಬವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ನಿರ್ಣಯಿಸಿರುವ ನಿಮಗೆ ಅಭಿನಂದನೆ.

ADVERTISEMENT

ತಾತ್ಕಾಲಿಕ ಗರ್ಭನಿರೋಧಕಗಳನ್ನು 3 ವರ್ಷಗಳ ಕಾಲ ಬಳಸಬೇಕಾಗುತ್ತದೆ. ಕಾಂಡೋಮ್‌ ಬಳಕೆಯು ಪುರುಷರಲ್ಲಿ ಜನಪ್ರಿಯವಾದ ತಾತ್ಕಾಲಿಕ ಸಂತಾನ ನಿಯಂತ್ರಣ ವಿಧಾನ. ಖರ್ಚು ಕಡಿಮೆ. ಕಾಂಡೋಮ್‌ಗಳನ್ನು ಬಳಸಿದಾಗ ವೀರ್ಯವನ್ನು ಸಂಗ್ರಹಿಸಿಕೊಂಡು ಗರ್ಭ ನಿಲ್ಲದಂತೆ ತಡೆಯುತ್ತದೆ. ಹಾಗೆಯೇ ಗರ್ಭಕೊರಳ ಕ್ಯಾನ್ಸರ್ ಕೂಡ ಮಹಿಳೆಯರಲ್ಲಾಗುವ ಸಂಭವವನ್ನು ಕಡಿಮೆ ಮಾಡುತ್ತದೆ. ಆದರೆ ಇದರಲ್ಲಿ ಶೇ 10 ರಿಂದ 14 ರಷ್ಟು ವಿಫಲತೆಯ ಪ್ರಮಾಣವಿದೆ. ಸರಿಯಾದ ವಿಧಾನದಲ್ಲಿ ಬಳಸಿದರೆ ವಿಫಲತೆ ಕಡಿಮೆ.

ಇನ್ನು ನೈಸರ್ಗಿಕ ವಿಧಾನವಾದ ಋತುಫಲಪ್ರದ ದಿನಗಳಲ್ಲಿ ಅಂದರೆ ಪ್ರತಿ ಋತುಚಕ್ರದ 8 ರಿಂದ 18ನೇ ದಿನದವರೆಗೆ ಲೈಂಗಿಕ ಸಂಪರ್ಕ ಮಾಡದೇ ಇರುವುದು. ಇದರಲ್ಲಿ ವಿಫಲತೆಯ ಪ್ರಮಾಣ ಶೇ 25ರಷ್ಟು, ಇನ್ನೂ ಲೈಂಗಿಕ ಸಂಪರ್ಕದ ಸಮಯದಲ್ಲಿ ವೀರ್ಯವನ್ನು ಸ್ತ್ರೀಯ ದೇಹದ ಹೊರಗೆ ಬಿಡುವುದು ಬಳಕೆಯಲ್ಲಿದ್ದರೂ ವಿಫಲತೆಯೆ ಪ್ರಮಾಣ ಹೆಚ್ಚಿದೆ.ಮಹಿಳೆಯರು ಕೂಡ ‘ಡ್ರಯಾಫ್ರಾಮ್’ ಎನ್ನುವ ಸಂತಾನನಿಯಂತ್ರಣವನ್ನು ಬಳಸಬಹುದು. ನಮ್ಮ ದೇಶದಲ್ಲಿ ಇದರ ಬಳಕೆ ವ್ಯಾಪಕವಾಗಿಲ್ಲ. ಮಹಿಳೆಯರು ಬಳಸಬಹುದಾದ ಇನ್ನೊಂದು ತಾತ್ಕಾಲಿಕ ಸಂತಾನ ನಿಯಂತ್ರಣ ಕ್ರಮವೆಂದರೆ ವೀರ್ಯನಾಶಕಗಳ ಬಳಕೆ. ಇಲ್ಲಿ ಜೆಲ್ಲಿ, ಕ್ರೀಂ, ಪೆಸರಿ ಇತ್ಯಾದಿಗಳನ್ನು ಲೈಂಗಿಕ ಸಂಪರ್ಕಗಳ ಮೊದಲೇ ಯೋನಿದ್ವಾರದಲ್ಲಿ ಇಟ್ಟುಕೊಳ್ಳುವುದು. ಈ ವಿಧಾನದಲ್ಲಿ ವಿಫಲತೆ ಹೆಚ್ಚು.

ವಂಕಿಗಳು ಅಥವಾ ಗರ್ಭಕೋಶದೊಳಗಿಡುವ ಉಪಕರಣಗಳು ಮಹಿಳೆಯರಲ್ಲಿ ಬಳಸಬಹುದಾದ ಅತ್ಯುತ್ತಮ ಸಂತಾನ ನಿಯಂತ್ರಣ ಕ್ರಮವಾದರೂ ಒಂದು ಮಗುವೂ ಆಗದೇ ಇದ್ದವರಲ್ಲಿ ಬಳಸುವುದು ಇವು ಅಷ್ಟು ಸೂಕ್ತವಲ್ಲ. ಒಂದು ಮಗುವಾದ ನಂತರದಲ್ಲಿ, ಎರಡು ಮಕ್ಕಳ ನಡುವಿನ ಅಂತರ ಕಾಯ್ದುಕೊಳ್ಳಲು ಇವುಗಳನ್ನು ಬಳಸಬಹುದು. ನಿಮಗೆ ಕಾಂಡೊಮ್ ಬಳಸುವುದು ನಿರಂತರವಾಗಿ ಕಷ್ಟವೆನಿಸಿದರೆ ಪತ್ನಿ ಕೂಡ ಹಾರ್ಮೋನಿನ ಮಾತ್ರೆ ಬಳಸಬಹುದು. ಇಸ್ಟ್ರೋಜನ್‌ ಹಾಗೂ ಪ್ರೊಜೆಸ್ಟಿರಾನ್ ಹಾರ್ಮೋನುಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಹೊಂದಿರುವ ಸಮ್ಮಿಶ್ರ ಹಾರ್ಮೋನು ಗುಳಿಗೆಗಳು ತಾತ್ಕಾಲಿಕ ಸಂತಾನ ನಿಯಂತ್ರಣ ಮಾಡುತ್ತದೆ. ಈ ವಿಧಾನದಲ್ಲಿ ಶೇ 0.1 ರಷ್ಟು ಮಾತ್ರ ವಿಫಲತೆ ಕಂಡುಬರುತ್ತದೆ.

ಮಾತ್ರೆಗಳನ್ನು ಬಳಸುವ ಮೊದಲು ವೈದರನ್ನು ಭೇಟಿ ಮಾಡಿ. ಕುಟುಂಬದಲ್ಲಿ ಸ್ತನ ಕ್ಯಾನ್ಸರ್‌, ಎದೆಯಲ್ಲಿ ಗಂಟು , ಏರು ರಕ್ತದೊತ್ತಡವಿದ್ದರೆ ಸಂಯೋಜಿತ ಹಾರ್ಮೋನು ಗುಳಿಗೆಗಳನ್ನು ಬಳಸಬಾರದು. ಇಂತಹ ಮಾತ್ರೆಗಳನ್ನು ನಿಲ್ಲಿಸಿದ ನಾಲ್ಕಾರು ತಿಂಗಳೊಳಗೆ ಫಲವತ್ತತೆ ಮತ್ತೆ ಮರಳಿ ಬರುವುದರಿಂದ ಮಗು ಪಡೆಯುವ ನಾಲ್ಕಾರು ತಿಂಗಳ ಮೊದಲೇ ಮಾತ್ರೆ ನಿಲ್ಲಿಸಿ. ಪೋಲಿಕ್‌ ಆ್ಯಸಿಡ್‌ ಮಾತ್ರೆ ಸೇವಿಸಿ. ಸ್ಟೆರಾಯಿಡ್‌ ರಹಿತ ಗರ್ಭನಿರೋಧಕ ಮಾತ್ರೆ ಸೆಂಟ್‌ ಕ್ರೋಮನ್‌ ಸರ್ಕಾರದಿಂದ ಲಭ್ಯವಿದೆ. ನಿಮಗೆ ಸೂಕ್ತವಾದ ವಿಧಾನ ಅನುಸರಿಸಿ.

2. ನನಗೆ 15 ವರ್ಷ. ಮುಟ್ಟಾದಾಗ ತೀವ್ರ ಹೊಟ್ಟೆನೋವು ಬರುತ್ತದೆ.ವಾಂತಿ ಇರುತ್ತದೆ. ಜತೆಗೆ ರಕ್ತಸ್ರಾವ ಹೆಚ್ಚಿರುತ್ತದೆ. ಜತೆಗೆ ಸ್ತನ ಭಾಗದಲ್ಲಿ ತೀವ್ರ ನೋವಿರುತ್ತದೆ. ಸ್ತನದ ಬೆಳವಣಿಗೆಯೂ ಕಡಿಮೆ ಇದೆ.

ವಂದನಾ, ಊರು ತಿಳಿಸಿಲ್ಲ

ವಂದನಾರವರೇ ನಿಮಗಿನ್ನೂ 15 ವರ್ಷಗಳು, ಈ ವಯಸ್ಸಿನಲ್ಲಿ ಮುಟ್ಟಾದಾಗ ಹೊಟ್ಟೆನೋವು, ವಾಂತಿ ಇರುವುದು ಸಹಜ. ವೈದ್ಯರ ಸಲಹೆಯ ಮೇರೆಗೆ ನೋವು ನಿವಾರಕ ಮಾತ್ರೆ ಸೇವಿಸಬಹುದು. ನೋವಿನ ಸಮಯದಲ್ಲಿ ಹೊಟ್ಟೆಯ ಮೇಲ್ಭಾಗ ಬಿಸಿನೀರಿನ ಚೀಲ ಇಟ್ಟರೆ ತಾತ್ಕಾಲಿಕವಾಗಿ ನೋವು ಉಪಶಮನಗೊಳ್ಳುತ್ತದೆ. ಸುಲಭವಾಗಿಜೀರ್ಣವಾಗುವ ಆಹಾರ ಸೇವಿಸಿ. ಮುಂಜಾಗ್ರತಾ ಕ್ರಮವಾಗಿ ಬದ್ಧಕೋಣಾಸನ, ವಜ್ರಾಸನ, ಚಕ್ಕಿಚಲನಾಸನ, ಸೂರ್ಯನಮಸ್ಕಾರ ಮಾಡುತ್ತಿರಿ.

ರಕ್ತಹೀನತೆ ಆಗದೇ ಇದ್ದ ಹಾಗೇ ಕಬ್ಬಿಣಾಂಶ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಿ. ಹಾರ್ಮೋನಿನ ಅಸಮತೋಲನದಿಂದ ಸ್ತನ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕರಿದ, ಹುರಿದ ಆಹಾರ ಸೇವನೆ ಕಡಿಮೆ ಮಾಡಿ. ಹಣ್ಣು, ತರಕಾರಿ, ನಿಂಬೆರಸ, ದಾಲ್ಚಿನ್ನಿ, ಶುಂಠಿ ಸೇವನೆ ಹೆಚ್ಚಿರಲಿ. ಬೆಳವಣಿಗೆಯಾದಂತೆ ಸ್ತನದ ಗಾತ್ರವು ಹೆಚ್ಚುತ್ತದೆ ಚಿಂತಿಸದಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.