ಒಂದೆಡೆ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕುರಿತು ಅರಿವು, ಜಾಗೃತಿ ಮೂಡಿರುವುದು ಸಮಾಧಾನದ ಸಂಗತಿಯೆನಿಸಿದರೆ, ಸ್ತನ ಕ್ಯಾನ್ಸರ್ ಪ್ರಕರಣ ಹೆಚ್ಚುತ್ತಲೇ ಸಾಗಿರುವುದು ಆತಂಕಕಾರಿ ಸತ್ಯ.
ನಿಜ. ಕಳೆದ ಎರಡು ವರ್ಷಗಳ ಹಿಂದಕ್ಕೊಮ್ಮೆ ಹೊರಳಿ ನೋಡಿದರೆ ಸ್ತನ ಕ್ಯಾನ್ಸರ್ ಪ್ರಕರಣಗಳ ಪತ್ತೆ ದುಪ್ಪಟ್ಟು ಆಗಿದೆ.ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ವರದಿ ಪ್ರಕಾರ ಪ್ರತಿವರ್ಷ ಸುಮಾರು ಹದಿನಾಲ್ಕು ಲಕ್ಷ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಸುಮಾರು ನಾಲ್ಕೂವರೆ ಲಕ್ಷ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಸಾಯುತ್ತಾರೆ. ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ಮಹಿಳೆ ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದರೆ, ಪ್ರತಿ 13 ನಿಮಿಷಕ್ಕೆ ಒಬ್ಬ ಮಹಿಳೆ ಇದೇ ಕ್ಯಾನ್ಸರ್‌ನಿಂದಾಗಿ ಸಾಯುತ್ತಿದ್ದಾಳೆ. 2018ರ ಅಂಕಿ–ಅಂಶಗಳ ಪ್ರಕಾರಣ ದೇಶದಲ್ಲಿ 1,62,468 ಹೊಸ ರೋಗಿಗಳು ಮತ್ತು 87,090 ರೋಗಿಗಳು ಸ್ತನ ಕ್ಯಾನ್ಸರ್‌ನಿಂದಾದ ಸಾವುಗಳು ದಾಖಲಾಗಿವೆ. 2021ರ ಅಂಕಿ–ಅಂಶ ನಮ್ಮ ಹುಬ್ಬೇರಿಸುತ್ತವೆ. ಹೊಸ ಪ್ರಕರಣಗಳು 19 ಲಕ್ಷಕ್ಕೇರಿದರೆ, ಸಾವಿನ ಸಂಖ್ಯೆ 6.08 ಲಕ್ಷಕ್ಕೇರಿದೆ.
ಇದೆಲ್ಲ ಮಹಿಳೆ ಇಂದು ಮನೆ ಒಳಗೂ, ಹೊರಗೂ ಕೆಲಸ ನಿರ್ವಹಿಸುತ್ತಿರುವ ಪರಿಣಾಮವೂ ಆಗಿದೆ. ಒತ್ತಡ ಭರಿತ ಬದುಕಿನಿಂದ ಮಹಿಳೆಯರು ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಸ್ತನ ನ್ಯಾನ್ಸರ್‌ಗೆ ಸಾಕಷ್ಟು ಕಾರಣಗಳನ್ನು ಸಂಶೋಧನೆಗಳು ಪಟ್ಟಿ ಮಾಡಿದ್ದರೂ ಮಾನಸಿಕ ಒತ್ತಡ ಕೂಡ ಪ್ರಮುಖ ಕಾರಣವಾಗುತ್ತಿದೆ. ಇಂಥ ಅಪಾಯಕಾರಿ ಸ್ತನಕ್ಯಾನ್ಸರ್‌ನಿಂದ ಹೊರಗಿರಲು ಮಾರ್ಗೋಪಾಯಗಳಿವೆ. ಅದು ಮನಸ್ಸಿಗೆ ಸಂಬಂಧಿಸಿದ್ದು ಕೂಡ. ಮಹಿಳೆ ಮಾನಸಿಕ ಒತ್ತಡವನ್ನು ನಿಭಾಯಿಸುವಿಕೆಯನ್ನು ಕರಗತ ಮಾಡಿಕೊಂಡಲ್ಲಿ ಸ್ತನ ಕ್ಯಾನ್ಸರ್‌ಅನ್ನು ದೂರವಿಡಬಹುದು. ಜೊತೆಗೆ ಸ್ತನ ಕ್ಯಾನ್ಸರ್‌ನಿಂದ ಹೆಚ್ಚುತ್ತಿರುವ ಸಾವಿನ ಪ್ರಮಾಣದಲ್ಲಿ ಭಯದ ಕಾರಣವೂ ಇದೆ. ಇಂಥ ಭಯದಿಂದ ಹೊರಗಿದ್ದು, ಸಂಕಷ್ಟವನ್ನು ಎದುರಿಸಲು ನಾವು ಮಾನಸಿಕವಾಗಿ ಗಟ್ಟಿಗೊಳ್ಳುವ ಅವಶ್ಯವಿದೆ.
ಹಾಗಾದರೆ ಮಾನಸಿಕ ಒತ್ತಡವನ್ನು ಹೇಗೆ ನಿಭಾಯಿಸುವುದು? ಹೇಗೆ ಮಾನಸಿಕ ಸ್ತಿಮಿತ ಕಾಯ್ದುಕೊಳ್ಳುವುದು? – ಇಂಥ ಪ್ರಶ್ನೆಗಳು ನಿಮ್ಮದಾಗಿದ್ದರೆ, ಉತ್ತರವಿರುವುದು ನಮ್ಮ ಪ್ರಾಚೀನ ಯೋಗದಲ್ಲಿ. ಮಹಿಳೆ ತಮ್ಮ ನಿತ್ಯದ ಜಂಜಡಗಳ ಜೊತೆಗೆ ಕನಿಷ್ಠ ಒಂದರ್ಧ ತಾಸು ಯೋಗಕ್ಕಾಗಿ ಮೀಸಲಿಟ್ಟರೆ ಮಾನಸಿಕ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಬಹುದು. ಆ ಯೋಗದಲ್ಲಿ ಸೂರ್ಯನಮಸ್ಕಾರ, ಪ್ರಾಣಾಯಾಮ, ಧ್ಯಾನ, ಗಾಯತ್ರೀಮುದ್ರೆಗಳಿರಲಿ. ಸೂರ್ಯನಮಸ್ಕಾರದಿಂದ ದೇಹದ ಎಲ್ಲ ಅಂಗಾಂಗಗಳಿಗೂ ವ್ಯಾಯಾಮ ಸಿಗಲಿದೆ. ಇದರಿಂದ ರಕ್ತಪರಿಚಲನೆ ಸರಾಗಗೊಂಡು ದೈಹಿಕ ಆರೋಗ್ಯವನ್ನು ಕಾಪಾಡಲಿದೆ. ಪ್ರಾಣಾಯಾಮ ನಮ್ಮ ಉಸಿರಾಟವನ್ನು ನಿಗ್ರಹಿಸುತ್ತ ಅಗತ್ಯ ಆಮ್ಲಜನಕವನ್ನು ಪೂರೈಸುತ್ತ ಮನಸ್ಸಿನ ಮೇಲೆ ಹಿಡಿತ ಸಾಧಿಸಲಿದೆ. ಗಾಯತ್ರೀಮುದ್ರೆಗಳು ಕ್ಯಾನ್ಸರ್ ಭಯವನ್ನು ದೂರಗೊಳಿಸಲಿದೆ. ಧ್ಯಾನವು ಮನಸ್ಸನ್ನು ನಿರ್ಮಲಗೊಳಿಸಿ ಸಮಚಿತ್ತ ಕಾಯ್ದುಕೊಳ್ಳುವಲ್ಲಿ ಸಹಕಾರಿಯಾಗಲಿದೆ. ಜೊತೆಗೆ ನಿತ್ಯವೂ ಹತ್ತು ನಿಮಿಷ ಬೆಳಗಿನ ಎಳೆಬಿಸಿಲಿನ ಸಖ್ಯ ಬೆಳೆಸಿ, ನಡಿಗೆ ರೂಢಿಸಿಕೊಳ್ಳಿ. ಇವಿಷ್ಟನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮನಸ್ಸು ಸಹಜವಾಗಿ ಸಕಾರಾತ್ಮಕತೆಯತ್ತ ವಾಲಲಿದೆ. ಮನಸ್ಸು ಯಾವಾಗ ನಕಾರಾತ್ಮಕ ಚಿಂತನೆಗಳಿಂದ ಹೊರಬಂದು ಸಕಾರಾತ್ಮಕ ಚಿಂತನೆಯನ್ನು ಹೊಂದುವುದೋ ಅದರಿಂದ ಆತ್ಮವಿಶ್ವಾಸ ತನ್ನಿಂದತಾನೇ ವೃದ್ಧಿಯಾಗಲಿದೆ. ಆತ್ಮವಿಶ್ವಾಸ ವೃದ್ಧಿಯಾದಲ್ಲಿ ಸಂಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ನಮ್ಮದಾಗಲಿದೆ.
ಅಧೈರ್ಯವನ್ನು ದೂರಗೊಳಿಸಿ ಸಂಕಷ್ಟವನ್ನು ಒಪ್ಪಿಕೊಂಡು, ಅದರಿಂದ ಸುಲಭವಾಗಿ ಹೊರಬರಲು ಅಂತಸ್ಥೈರ್ಯ ಸಿಗಲಿದೆ. ಕಾಯಿಲೆಗಳಿಗೂ ನಮ್ಮ ಮನಸ್ಸಿಗೂ ನಿಕಟವಾದ ಸಂಬಂಧವಿದೆ. ನಮ್ಮ ಮನಸ್ಸು ಇಂಥ ಸ್ತಿಮಿತ ಹಂತ ತಲುಪಿದಲ್ಲಿ ಕ್ಯಾನ್ಸರ್‌ನಂಥ ರೋಗಗಳಿಂದಲೂ ಹೊರಗುಳಿಯಬಹುದು.
ಇನ್ಯಾಕೆ ತಡ. ನಾಳೆಯಿಂದ ಎಂಬ ಮಾತನ್ನು ಬದಿಗೊತ್ತಿ ಇಂದಿನಿಂದಲೇ ಯೋಗ ಜೀವನ ಶುರುಹಚ್ಚಿಕೊಳ್ಳಿ. ನಿಮ್ಮ ಮೈಮನಸ್ಸನ್ನು ಹರಿಯುವ ತಿಳಿನೀರಿನಂತೆ ತಿಳಿಯಾಗಿಸಿಕೊಳ್ಳಿ.
ವೈದ್ಯರ ಮಾತು...
2030ರ ವೇಳೆಗೆ ಸ್ತನ ಕ್ಯಾನ್ಸರ್‌ನಿಂದ ಸಾವಿನ ಪ್ರಮಾಣ ಹೆಚ್ಚಾಗಲಿವೆ. ಸ್ತನ ಕ್ಯಾನ್ಸರ್‌ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದರಿಂದ ರೋಗವನ್ನು ಗುಣಪಡಿಸಬಹುದು.
ದೇಶದಲ್ಲಿ ಸ್ತನಕ್ಯಾನ್ಸರ್ ಪೀಡಿತಶೇ. 50ರಷ್ಟು ಮಹಿಳೆಯರು ಮಾತ್ರ ರೋಗ ಉಲ್ಬಣವಾದಾಗ ವೈದ್ಯರನ್ನು ಸಂಪರ್ಕಿಸುತ್ತಾರೆ. ಇದರಿಂದ ಕಾಯಿಲೆಯನ್ನು ಗುಣಪಡಿಸುವ ಪ್ರಮಾಣ ಕಡಿಮೆಯಾಗುತ್ತಿದೆ. ಆದ್ದರಿಂದ ಸ್ತನ ಕ್ಯಾನ್ಸರನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿ, ಚಿಕಿತ್ಸೆ ಪಡೆಯುವುದು ಅಗತ್ಯ.
ಡಾ. ವಿನಯ ಮುತ್ತಗಿ
ಎಚ್‌ಸಿಜಿ–ಎನ್‌ಎಂಆರ್ ಕ್ಯಾನ್ಸರ್ ಕ್ಯೂರ್ ಸೆಂಟರ್, ಹುಬ್ಬಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.