1. ಮುಖದಲ್ಲಿ ಅತಿ ಹೆಚ್ಚಾಗಿ ಕೂದಲು ಬೆಳವಣಿಗೆ ಆಗಿದೆ. ಹುಡುಗಿಯಾದ ಕಾರಣ ನನಗೆ ಮುಜುಗರ ಉಂಟಾಗಿ ಮಾನಸಿಕ ಒತ್ತಡ ಹೆಚ್ಚಾಗಿದೆ. ಇದಕ್ಕೆ ಏನಾದರೂ ಪರಿಹಾರವಿದೆಯೇ?
-ಹೆಸರು ಊರು ತಿಳಿಸಿಲ್ಲ.
ನೀವು ನಿಮ್ಮ ವಯಸ್ಸನ್ನು ಕೂಡಾ ತಿಳಿಸಿಲ್ಲ. ನಿಮಗೆ ವಿವಾಹವಾಗಿದೆಯೇ ಕೂಡಾ ತಿಳಿಸಿಲ್ಲ. ಆದರೆ ಯಾವುದೇ ವಯಸ್ಸಿನಲ್ಲಿ ಅತೀ ಹೆಚ್ಚಾಗಿ ಮುಖದಲ್ಲಿ ಕೂದಲು ಇರುವುದು ನೀವು ಹೇಳಿದ ಹಾಗೇ ಮುಜುಗರದ ಸಮಸ್ಯೆಯೇ ಸರಿ. ಅದರಲ್ಲೂ ಹದಿವಯಸ್ಸಿನವರಲ್ಲಿ ಶಾಲೆಕಾಲೇಜಿಗೆ ಹೋಗುವವರಲ್ಲಂತೂ ಹಲವು ಸಹಪಾಠಿಗಳಿಂದ ನಿಂದನೆಗೊಳಗಾಗುತ್ತಾ ಆತ್ಮವಿಶ್ವಾಸವೇ ಇದರಿಂದ ಕಡಿಮೆ ಆಗಿಬಿಡುತ್ತದೆ. ನಿಮಗೆ ಹೆಚ್ಚು ಹೆಚ್ಚು ಕೂದಲು ಇರುವುದು ಶೇ 95 ರಷ್ಟು ಸಂದರ್ಭಗಳಲ್ಲಿ ಪಾಲಿಸಿಸ್ಟಿಕ್ ಓವರಿಯನ್ ಡಿಸೀಸ್(ಪಿ.ಸಿ.ಓ.ಡಿ)ನ ಭಾಗವಾಗಿರಬಹುದು. ನಿಮಗೆ ಪಿ.ಸಿ.ಓ.ಡಿ ಇದ್ದಲ್ಲಿ ಕೂದಲು ಹೆಚ್ಚಿರುವುದರ ಜೊತೆಗೆ ಋತುಚಕ್ರದಲ್ಲಿ ಏರುಪೇರು ಉಂಟಾಗಿರಬಹುದು ಮತ್ತು ಮೊಡವೆಯೂ ಕೆಲವರಲ್ಲಿ ಹೆಚ್ಚಿರಬಹುದು.
ಮುಖ್ಯವಾಗಿ ಕೂದಲು ಮುಖದಲ್ಲಿ ಹಾಗೂ ಎದೆಯಭಾಗ, ಬೆನ್ನಿನಭಾಗ, ಕಾಲಿನಭಾಗಗಳಲ್ಲಿ ಇರುವುದು ಆಂಡ್ರೋಜನ್ ಹಾರ್ಮೋನು(ಪುರುಷರಲ್ಲಿನ ಮುಖ್ಯ ಹಾರ್ಮೋನು) ಹೆಚ್ಚಳದಿಂದಾಗಿ ಈ ರೀತಿಯಾಗಿ ಪುರುಷ ರೀತಿಯಲ್ಲಿ ಕೂದಲು ಮಹಿಳೆಯರಲ್ಲಿ ಹೆಚ್ಚಾಗುತ್ತದೆ. ಇನ್ನೂ ಶೇ 5 ರಿಂದ10ರಷ್ಟು ಮಹಿಳೆಯರಲ್ಲಿ ಅಧಿಕ ಕೂದಲು ಸಹಜವಾಗಿಯೇ ಇರಬಹುದು. ಆ ಬಗ್ಗೆ ವಿಶೇಷವಾಗಿ ಚಿಂತಿಸುವುದು ಬೇಡ. ಆದರೆ ಆಂಡ್ರೋಜನ್ ಹಾರ್ಮೋನು ಹೆಚ್ಚಳದಿಂದ ಮುಖದಲ್ಲಿ ನಿಮಗೆ ಕೂದಲು ಹೆಚ್ಚಾಗಿರುವ ಸಾಧ್ಯತೆ ಅಧಿಕವಾಗಿದೆ. ಯಾವುದಕ್ಕೂ ನೀವು ಹತ್ತಿರದಲ್ಲಿರುವ ಸ್ತ್ರೀರೋಗ ತಜ್ಞರ ಹತ್ತಿರ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳಿ.
ಯಾಕೆಂದರೆ ಕೂದಲು ಹೆಚ್ಚಿದ್ದರೆ ಅದು ಕೇವಲ ಸೌಂದರ್ಯದ ಸಮಸ್ಯೆ ಅಷ್ಟೇ ಆಗಿರದೇ ಜೊತೆಗೆ ಪಿ.ಸಿ.ಓ.ಡಿ. ಸಮಸ್ಯೆಯ ಭಾಗವಾಗಿದ್ದರೆ ಅದರಿಂದ ಮುಂದೆ ಮದುವೆಯಾದ ನಂತರ ಬಂಜೆತನದ ಸಮಸ್ಯೆಯೂ ಕಾಡಬಹುದು. ಜೊತೆಗೆ ಟೈಪ್–2 ಮಧುಮೇಹ ಬೇಗನೆಬರಬಹುದು ಹೃದಯದ ತೊಂದರೆಗಳು, ಏರುರಕ್ತದೊತ್ತಡ ಇತ್ಯಾದಿಗಳಿಗೆ ಸಿಲುಕಿಕೊಳ್ಳಬಹುದು. ಆದ್ದರಿಂದ ಪಿ.ಸಿ.ಓ.ಡಿ. ಚಿಕಿತ್ಸೆಯಲ್ಲಿ ಜೀವನಶೈಲಿ ಬದಲಾವಣೆಯೇ ಬಹಳ ಮುಖ್ಯ ಚಿಕಿತ್ಸೆ.
ಅದರಲ್ಲೂ ಪಿ.ಸಿ.ಓ.ಡಿ. ಸಮಸ್ಯೆಗೆ ಮುಖ್ಯಕಾರಣವಾದ ಇನ್ಸೂಲಿನ್‌ಪ್ರತಿರೋಧತೆಯನ್ನು ಕಡಿಮೆಮಾಡಲು ನೀವು ಸಾಧ್ಯವಾದಷ್ಟು ಹೆಚ್ಚು ಪ್ರೋಟಿನ್‌ಯುಕ್ತ, ಹೆಚ್ಚು ಹೆಚ್ಚು ಸೊಪ್ಪು, ತರಕಾರಿಯನ್ನೊಳಗೊಂಡ ಆಹಾರ ಸೇವಿಸಬೇಕು. ಜೊತೆಗೆ ಹೈನುಪದಾರ್ಥಗಳು, ಜಂಕ್‌ಫುಡ್‌ಗಳನ್ನು ಕಡಿಮೆ ಸೇವಿಸಬೇಕು. ನಿತ್ಯ ಕನಿಷ್ಠ ಒಂದು ಗಂಟೆಯಾದರೂ ಉತ್ತಮ ದೈಹಿಕಶ್ರಮವಾಗುವಂತಹ ವ್ಯಾಯಾಮ ಮಾಡಬೇಕು. ಪ್ರತಿ ನಿತ್ಯ 6 ರಿಂದ 8 ತಾಸು ನಿದ್ದೆ ಅಗತ್ಯ. ವೈದ್ಯರ ಸಲಹೆಮೇರೆ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಪಿ.ಸಿ.ಓ.ಡಿ ಸಮಸ್ಯೆಯನ್ನು ನಿರ್ವಹಣೆ ಮಾಡಬಹುದು. ಹೆಚ್ಚಿಗೆ ಕೂದಲಿಗೆ ವ್ಯಾಕ್ಸಿಂಗ್, ಶೇವಿಂಗ್ ಅಷ್ಟೇ ಚಿಕಿತ್ಸೆಯಲ್ಲ. ಈಗ ಎಲೆಕ್ಟ್ರಾಲಿಸಿಸ್ ಚಿಕಿತ್ಸೆ, ಲೇಸರ್ ಚಿಕಿತ್ಸೆ ಹೀಗೆ ಹಲವು ರೀತಿಯಲ್ಲಿ ಚಿಕಿತ್ಸೆಗಳು ಲಭ್ಯವಿವೆ. ಈ ಬಗ್ಗೆ ಸೂಕ್ತ ತಜ್ಞರನ್ನ ಭೇಟಿಮಾಡಿ.
ಯಾವುದೇ ವಯಸ್ಸಿನಲ್ಲೂ ಹೆಚ್ಚಿಗೆ ಕೂದಲಿರುವುದು ಒಂದು ರೀತಿಯ ಹಿಂಸೆಯೇ ಸರಿ. ಜೊತೆಗೆ ಇದು ಮುಂದೆ ಹಲವು ಸಮಸ್ಯೆಗಳಿಗೆ ಎಡೆಮಾಡಿಕೊಡಬಹುದು. ಹಾಗಾಗಿ ನಿರ್ಲಕ್ಷಿಸದೇ ತಜ್ಞವೈದರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ನಿಮಗೆ ಬೊಜ್ಜಿದ್ದರೆ ತೂಕ ಕಡಿಮೆಮಾಡಿಕೊಳ್ಳಿ. ನಿರ್ಲಕ್ಷ್ಯ ಮಾಡಬೇಡಿ.
2. ನಾನು ನಾಲ್ಕು ತಿಂಗಳ ಗರ್ಭಿಣಿ. ಅನಾಮಲಿ ಟೆಸ್ಟ್‌ನಲ್ಲಿ VDRL reactive ಬಂತು ಅದಕ್ಕೆ ಡಾಕ್ಟರ್ 6 ಪೆನ್ಸಿಲಿನ್ ಇಂಜೆಕ್ಷನ್ ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ. ಅದ್ರೆ VDRL reactive ನಿಂದ ಗರ್ಭದಲ್ಲಿರುವ ಮಗುವಿಗೆ ಏನಾದರೂ ತೊಂದರೆ ಆಗುತ್ತಾ?
-ಹೆಸರು ಊರು ತಿಳಿಸಿಲ್ಲ.
ನಿಮಗೆ ಮಾಡಿರುವ VDRL ಪರೀಕ್ಷೆ ಕೇವಲ ಸ್ಕ್ರೀನಿಂಗ್ ಪರೀಕ್ಷೆಅಷ್ಟೇ. ಈ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಬಂದಿದ್ದರೆ ಇದನ್ನು ಎಫ್.ಟಿ.ಎ.ಬಿ.ಎಸ್ (FTA-ABS) ಎನ್ನುವ ಪರೀಕ್ಷೆಯಿಂದ ಸಾಬೀತು ಪಡಿಸಿಕೊಂಡು ನಂತರ ಬೆಂಜಾತೀನ್ ಪೆನ್ಸಿಲಿನ್ ಎನ್ನುವ ಇಂಜೆಕ್ಷನ್ ಅನ್ನು ವೈದ್ಯರ ಸಲಹೆಮೇರೆಗೆ ತೆಗೆದುಕೊಂಡಾಗ ಈ ಸೋಂಕು ಸಂಪೂರ್ಣ ಗುಣವಾಗುತ್ತದೆ. ತುಂಬಾ ಹಳೆಯ ಕಾಲದಿಂದಲೂ ಇರುವ ಲೈಂಗಿಕ ರೋಗವಾದ ‘ಸಿಫಿಲಿಸ್‘ ಎನ್ನುವ ಈ ಕಾಯಿಲೆ ಪರಸ್ಪರ ಲೈಂಗಿಕ ಸಂಪರ್ಕದಿಂದ ಬರುವಂತದ್ದು. ಟ್ರೀಪನಿಮಾ ಪ್ಯಾಲಿಡಂ ಎನ್ನುವ ರೋಗಾಣು ಈ ರೋಗಕ್ಕೆ ಕಾರಣವಾಗಿದೆ. ಗರ್ಭಿಣಿಯರಿದ್ದಾಗ ಈ ರೋಗ ತಗಲಿದರೆ ಗರ್ಭಪಾತ ಉಂಟಾಗಬಹುದು ಇಲ್ಲವೇ ಹುಟ್ಟುವಾಗಲೇ ಹೊಟ್ಟೆಯೊಳಗೆ ಮಗು ಸತ್ತು ಹುಟ್ಟಬಹುದು. ಆದ್ದರಿಂದ ವೈದ್ಯರ ಸಲಹೆಯ ಮೇರೆಗೆ ಪತಿಪತ್ನಿಯರಿಬ್ಬರೂ ಸೂಕ್ತಚಿಕಿತ್ಸೆ ತೆಗೆದುಕೊಂಡರೆ ಮುಂದಾಗುವ ಅಪಾಯದಿಂದ ಪಾರಾಗಬಹುದು. ಗರ್ಭಿಣಿಯಾಗುವುದಕ್ಕಿಂತ ಮುಂಚೆಯೇ ಅಥವಾ ಗರ್ಭಿಣಿಯಾದ 3 ತಿಂಗಳೊಳಗೆ ಕಾಯಿಲೆ ಪತ್ತೆಹಚ್ಚಿ ಸೂಕ್ತಚಿಕಿತ್ಸೆ ಪಡೆದುಕೊಂಡರೆ ಗರ್ಭದಲ್ಲಿರುವ ಮಗುವನ್ನು ಕಾಪಾಡಬಹುದು. ಯಾವುದಕ್ಕೂ ವೈದ್ಯರನ್ನು ಸಂಪರ್ಕಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.