ADVERTISEMENT

ಆರೋಗ್ಯ: ಚಿಕಿತ್ಸೆಯಲ್ಲಿ ಮಾತು ಮತ್ತು ಮಾತ್ರೆ!

ಜಾಹೀರಾತಿನಿಂದ ಜಾಹೀರಾತಿಗೆ ಹಾರುವವರು ಬಹಳಷ್ಟು ಜನ. ಅವರೆಲ್ಲರ ಹಂಬಲ ಒಂದೇ ‘ಗುಣಮುಖವಾಗುವುದು’.

ಡಾ.ಕೆ.ಎಸ್.ಪವಿತ್ರ
Published 1 ಜುಲೈ 2024, 18:40 IST
Last Updated 1 ಜುಲೈ 2024, 18:40 IST
<div class="paragraphs"><p>ಆರೋಗ್ಯ: ಚಿಕಿತ್ಸೆಯಲ್ಲಿ ಮಾತು ಮತ್ತು ಮಾತ್ರೆ!</p></div>

ಆರೋಗ್ಯ: ಚಿಕಿತ್ಸೆಯಲ್ಲಿ ಮಾತು ಮತ್ತು ಮಾತ್ರೆ!

   

‘ಡಾಕ್ಟ್ರೇ, ಮಾತ್ರೆ ಬಿಟ್ಟ ತಕ್ಷಣ ಮತ್ತೆ ತಲೆನೋವು. ನಿದ್ರೆ ಬರದೇ ಇರೋದು, ಮೈಕೈ ನೋವು ಎಲ್ಲಾ ವಾಪಸ್ ಬಂದ್ಬಿಡುತ್ತೆ. ಮಾತ್ರೆ ತೊಗೊಳ್ತಾನೇ ಇದ್ರೆ ನಾನು ಚೆನ್ನಾಗೇ ಇರ್ತೀನಿ. ಈ ಕಾಯಿಲೆಗಳೆಲ್ಲ ಗುಣವಾಗೋದೇ ಇಲ್ವೆ?’ ‘ಸೊಮಟೈಸೇಷನ್’ ಎಂಬ ಮನೋದೈಹಿಕ ಕಾಯಿಲೆಯಿಂದ ನರಳುವ ಮಹಿಳೆ ಕೇಳಿದ ಪ್ರಶ್ನೆ.

‘ನನ್ನ ಬಿ.ಪಿ. ಸರೀನೇ ಇದೆ. ಆದ್ರೂ ಡಾಕ್ಟ್ರು ಮಾತ್ರೆ ನಿಲ್ಲಿಸೋದಿಕ್ಕೇ ಬಿಡಲ್ಲ. ಅವರನ್ನೋದು ‘ಬಿ.ಪಿ.’ ಸರಿಯಾಗಿರೋದು ಬಿ.ಪಿ. ಮಾತ್ರೆಯಿಂದ ಅಷ್ಟೆ. ಬಿ.ಪಿ. ಮಾತ್ರೆ ಬಿಟ್ಟರೆ ಬಿ.ಪಿ. ಜಾಸ್ತಿಯಾಗಿ ಹಾರ್ಟ್ ಅಟ್ಯಾಕೋ, ಸ್ಟ್ರೋಕೋ ಆಗುತ್ತೆ. ಅದಕ್ಕೆ ಬಿ.ಪಿ. ಮಾತ್ರೆ ಮಾತ್ರ ಬಿಡಬೇಡಿ’ ಅಂತ. ಏನೋಪ್ಪ ನನಗೆ ಬಿ.ಪಿ. ಸರೀ ಇದ್ರೂನೂ ಇವರ್ಯಾಕೆ ಬಿ.ಪಿ. ಮಾತ್ರೆ ತೆಗೆದುಕೊಳ್ಳಲೇಬೇಕು ಅಂತ ಹೆದರಿಸ್ತಾರೆ ಅನ್ನಿಸುತ್ತೆ’.

ADVERTISEMENT

ಹೀಗೆ ಕಾಯಿಲೆಗಳಿಗೆ ಶಾಶ್ವತ ಗುಣಮುಖವಾಗುವ ಪರಿಹಾರವನ್ನು ಹುಡುಕುತ್ತಾ ವೈದ್ಯರಿಂದ ವೈದ್ಯರಿಗೆ, ವೈದ್ಯಕೀಯ ಪದ್ಧತಿಯಿಂದ ಪದ್ಧತಿಗೆ, ಜಾಹೀರಾತಿನಿಂದ ಜಾಹೀರಾತಿಗೆ ಹಾರುವವರು ಬಹಳಷ್ಟು ಜನ. ಅವರೆಲ್ಲರ ಹಂಬಲ ಒಂದೇ ‘ಗುಣಮುಖವಾಗುವುದು’.

‘ಗುಣವಾಗುವುದು’ ಎಂದರೆ ಕೇವಲ ರೋಗಲಕ್ಷಣಗಳು ಮಾಯವಾಗಿ ಆರಾಮವಾಗಿರುವುದಲ್ಲ; ಮಾತ್ರೆ-ಔಷಧ-ವೈದ್ಯರ ಭೇಟಿ ಯಾವುದೂ ಇರದೆ, ರೋಗದ ಲಕ್ಷಣಗಳು ಮತ್ತೆ ಬರದಿರುವುದು ಎಂಬುದೇ ಇಲ್ಲಿನ ನಿರೀಕ್ಷೆ.

ರೋಗಿಗಳ ಇಂತಹ ನಿರೀಕ್ಷೆಗಳನ್ನು ನಿಭಾಯಿಸಲು, ಚಿಕಿತ್ಸೆಯನ್ನು ಅವರು ಒಪ್ಪಿಕೊಳ್ಳುವಂತೆ ಮಾಡಲು ಚಿಕಿತ್ಸೆಯಲ್ಲಿ ವೈದ್ಯರು-ರೋಗಿಗಳು ಇಬ್ಬರೂ ಮಾತ್ರೆಯಷ್ಟೇ ‘ಮಾತ’ನ್ನೂ ಉಪಯೋಗಿಸಬೇಕಾಗುತ್ತದೆ. ಹಾಗಾಗಿ ಕೇವಲ ಮಾನಸಿಕ ರೋಗವಲ್ಲ; ಯಾವುದೇ ರೋಗದಲ್ಲಿಯೂ ಮಾತ್ರೆಯಷ್ಟೇ ಮಹತ್ವವನ್ನು ಸಂದೇಹ-ಪ್ರಶ್ನೆಗಳು-ತಪ್ಪು ನಂಬಿಕೆಯನ್ನು ಕೇಳುವ ‘ರೋಗಿಯ ಮಾತು’, ಅವುಗಳಿಗೆ ಸಮಾಧಾನ ನೀಡಿ, ತನ್ನ ಅನುಭವದಿಂದ ಸಲಹೆ ನೀಡುವ ‘ವೈದ್ಯನ ಮಾತು’ - ಈ ಎರಡಕ್ಕೂ ನೀಡಬೇಕಾಗುತ್ತದೆ.

ಬಾಯಿಮಾತಿಗೆ ಬಹುಜನರು ಮಾತ್ರೆಗಳಿಂದ ಅಡ್ಡಪರಿಣಾಮ ಬರಬಹುದು ಎಂದು, ಮತ್ತೆ ಮತ್ತೆ ಹೇಳಿದರೂ, ಜೀವನಶೈಲಿಯ ಸೂತ್ರಗಳಾದ ನಿಯಮಿತ ವ್ಯಾಯಾಮ-ಆಹಾರಕ್ರಮಗಳನ್ನು ಪಾಲಿಸುವುದು, ಔಷಧಗಳನ್ನು ತೆಗೆದುಕೊಳ್ಳುವ ಕಷ್ಟಕ್ಕಿಂತ ಗುರುತರವಾದದ್ದು ಎನ್ನುವುದನ್ನು ಒಪ್ಪುತ್ತಾರೆ. ಯಾವುದಾದರೊಂದು ಪವಾಡದಂತಹ ಪರಿಹಾರ ನಮಗೆ ಸಿಕ್ಕಬಾರದೆ ಎಂಬ ಆಸೆ ಅವರದ್ದು! ಅಂದರೆ ‘ನಾವು ಇರುವ ಹಾಗೇ ಇರುತ್ತೇವೆ. ಮಧ್ಯೆ ಮಧ್ಯೆ ಹೇಗೆ ಬೇಕಾದರೂ ಹಾಗೆ ತಿಂದರೂ ಸರಿ /ವಾಕಿಂಗ್ ಮಾಡದಿದ್ದರೂ ಸರಿ / ಕುಡಿದು-ಸಿಗರೇಟು ಸೇದಿ ತಂಬಾಕು ಅಗಿದರೂ ಪರವಾಗಿಲ್ಲ, ಕಾಯಿಲೆ ಮಾತ್ರ ತಲೆ ಹಾಕಬಾರದು! ಒಂದು ಸಲ ವೈದ್ಯರ ಬಳಿ ಹೋಗಿ ಬಂದರೆ ಸಾಕಾಗಬೇಕು; ಗರಿಷ್ಠ ಹತ್ತರಿಂದ-ಇಪ್ಪತ್ತು ದಿನಗಳಲ್ಲಿ ಮತ್ತೆ ಇನ್ನೆಂದೂ ವೈದ್ಯರ ಬಳಿ ಹೋಗದಂತೆ ಕಾಯಿಲೆ ಮಂಗ ಮಾಯವಾಗಬೇಕು’ ಎಂಬುದು ಅವರ ಬಲವಾದ ಆಶಯ. ಇದು ಹೊರಹೊಮ್ಮುವುದು ವೈದ್ಯರ ಬಳಿ ರೋಗಿಗಳು ಬಂದು ಕೇಳುವ ‘ಡಾಕ್ಟ್ರೇ ಇನ್ನೆಷ್ಟು ಸಲ ನಾವು ಬರಬೇಕು? ಮಾತ್ರೆ ನಿಲ್ಲಿಸೋಕೆ ಆಗೋದೇ ಇಲ್ವೆ? ಈ ಕಾಯಿಲೆ ನಮ್ಮನ್ನು ಬಿಡೋದು ಯಾವಾಗ?’ ಮೊದಲಾದ ಮಾತುಗಳ ಮೂಲಕ.

ಇಂದು ಹೆಚ್ಚಿನ ಕಾಯಿಲೆಗಳ ಅವಧಿ ದೀರ್ಘವಾಗಿದೆ. ಹಿಂದೆ ಕೆಲವು ದಿನಗಳಲ್ಲಿ ತನ್ನಿಂತಾನೇ ಗುಣವಾಗುತ್ತಿದ್ದ, ಮನೆ ಮದ್ದಿನಿಂದ ಸುಲಭ ನಿಯಂತ್ರಣಕ್ಕೆ ಒಳಪಡುತ್ತಿದ್ದ ಸಾದಾ ನೆಗಡಿ-ಕೆಮ್ಮು-ಮೈ ಕಡಿತದಂತಹ ಸಮಸ್ಯೆಗಳು ಇಂದು ತಿಂಗಳುಗಟ್ಟಲೆ ಮುಂದುವರಿಯುತ್ತವೆ. ಸೋಂಕು ರೋಗಗಳಿಗೇ ಈ ಅವಸ್ಥೆ ಬಂದಿರುವಾಗ, ಮೊದಲಿನಿಂದ ದೀರ್ಘಕಾಲಿಕ ರೋಗಗಳು ಎಂಬ ವಿಭಾಗಕ್ಕೇ ಸೇರಿದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಥೈರಾಯ್ಡ್, ಖಿನ್ನತೆಯಂತಹ ಕಾಯಿಲೆಗಳಿಗೆ ಚಿಕಿತ್ಸೆ ಅನಿರ್ದಿಷ್ಪ ಕಾಲದವರೆಗೆ - ಹೆಚ್ಚಿನವರಲ್ಲಿ ಜೀವನಪೂರ್ತಿ ಬೇಕಾಗುವುದರಲ್ಲಿ ಅಚ್ಚರಿಯ ಮಾತೇನೂ ಇರಬಾರದು. ಆದರೂ ಈ ಸತ್ಯವನ್ನು ಒಪ್ಪಿಕೊಳ್ಳುವುದು, ಚಿಕಿತ್ಸೆಯನ್ನು ಸರಿಯಾಗಿ, ಸತತವಾಗಿ ಮುಂದುವರಿಸುವುದು ಬಹಳಷ್ಟು ಜನರಿಗೆ ಸುಲಭಸಾಧ್ಯ ಎನಿಸುವುದಿಲ್ಲ. ಎಷ್ಟೋ ಬಾರಿ ಕಾಯಿಲೆಗಿಂತ, ಈ ‘ನಿರಾಕರಣೆ’ ಯೇ ಹೆಚ್ಚು ನರಳುವಿಕೆಯನ್ನು ತರುತ್ತದೆ.
ವೈದ್ಯರ ಮಾತಿನಲ್ಲಿ ಮಾತ್ರೆಯನ್ನು ತೆಗೆದುಕೊಳ್ಳುವ ಅದರ ನಿಯಮಗಳು, ಅಡ್ಡಪರಿಣಾಮಗಳು ಇವುಗಳ ಜೊತೆಗೇ ಜೀವನಶೈಲಿಯ ಹಲವು ಅಂಶಗಳೂ ಅಡಕವಾಗುತ್ತವೆಯಷ್ಟೆ. ಆದರೆ ಅವುಗಳನ್ನು ಮಾತ್ರೆಯಂತೆ ಪರಿಗಣಿಸಿ, ನಿರ್ದಿಷ್ಟವಾಗಿ ಪಾಲಿಸುವವರು ಬಲು ಕಡಿಮೆ. ಎಲ್ಲಾ ಕಾಯಿಲೆಗಳಿಗೂ ಅವು ಬರದಂತೆ ತಡೆಗಟ್ಟುವ ಕ್ರಮಗಳ ಪಟ್ಟಿಯಲ್ಲಿ ವ್ಯಾಯಾಮ–ಆಹಾರಕ್ರಮ-ವ್ಯಸನಗಳಿಂದ ದೂರವಿರುವುದು ಬಂದೇ ಬರುತ್ತವೆ. ಒಂದೊಮ್ಮೆ ಕಾಯಿಲೆಗಳು ಬಂದೇ ಬಿಟ್ಟವೆನ್ನಿ. ಅವುಗಳ ಚಿಕಿತ್ಸೆಯ ಕ್ರಮಗಳು ಮತ್ತೆ ಇವೇ! ಆದರೂ ವ್ಯಾಯಾಮ ಮಾಡುವುದು, ಸರಿಯಾದ ಆಹಾರಕ್ರಮ ರೂಢಿಸಿಕೊಳ್ಳುವುದು ಮತ್ತು ವ್ಯಸನಗಳಿಂದ ದೂರವಿರುವುದು - ಇವುಗಳನ್ನು ಹೆಚ್ಚಿನ ಮನಸ್ಸುಗಳು ‘ಕಷ್ಟಕರ’, ‘ತಮಗೆ ಸಾಧ್ಯವಿಲ್ಲದ್ದು’ ಎಂದೇ ಭಾವಿಸಿ ಬಿಡುತ್ತವೆ. ಬಾಯಿಯಲ್ಲಿ ತಂಬಾಕು ಅಗಿಯುತ್ತಲೇ, ಆಪರೇಷನ್ ಇಲ್ಲದೆ ತನ್ನ ಕ್ಯಾನ್ಸರ್ ಸರಿಪಡಿಸಲು ಸಾಧ್ಯವಿಲ್ಲವೆ ಎಂದು ರೋಗಿ ಪ್ರಶ್ನಿಸಬಹುದು! ಉಪ್ಪಿನಕಾಯಿ ತಿನ್ನುವುದನ್ನು ಕಡಿಮೆ ಮಾಡದೆ, ಬಿ.ಪಿ.ಯ ಮಾತ್ರೆ ನಿಲ್ಲಿಸಲಾಗದೆ ಎಂದೂ ಕೇಳಬಹುದು ಅಥವಾ ವ್ಯಾಯಾಮವನ್ನೇ ಮಾಡದ ಮಧ್ಯ ವಯಸ್ಕ ಮಹಿಳೆ ಸಕ್ಕರೆ ಕಾಯಿಲೆಯ ಮಾತ್ರೆಯನ್ನು ದಿನ ಬಿಟ್ಟು ದಿನ ತೆಗೆದುಕೊಂಡು ‘ಪ್ರಯೋಗಶೀಲ’ಳಾಗಬಹುದು!!

ಮಾತ್ರೆಯ ಅಡ್ಡಪರಿಣಾಮದ ಬಗ್ಗೆ ಅತಿ ಕಾಳಜಿ-ತಪ್ಪು ನಂಬಿಕೆಗಳನ್ನು ತೋರುವ ಜನರು ಕಾಯಿಲೆಯ ಘೋರಪರಿಣಾಮಗಳ ಬಗ್ಗೆ ಮಾತ್ರ ಯೋಚಿಸಲಾರರು! ಕಾಯಿಲೆಯ ನರಳುವಿಕೆ-ಜೀವನದ ಗುಣಮಟ್ಟಗಳ ಇಳಿಯುವಿಕೆಗಳ ಬಗ್ಗೆ ಅವರದ್ದು ದಿವ್ಯನಿರ್ಲಕ್ಷ್ಯ! ಮಾತ್ರೆ ಬಿಟ್ಟರೂ, ಜೀವನಶೈಲಿಯ ಇತರ ಅಂಶಗಳನ್ನು ಪಾಲಿಸದಿದ್ದಾಗ್ಯೂ, ಕಾಯಿಲೆ ಮರುಕಳಿಸುವ ಬಗ್ಗೆ ಮಾತ್ರ ಅವರದ್ದು ಅಚ್ಚರಿಯ ಭಾವ!! ಇವೆಲ್ಲವೂ ಅವರ ಮಾತಿನಲ್ಲಿ ಸ್ಪಷ್ಟವಾಗಿ ವ್ಯಕ್ತ. ‘ಮಾತ್ರೆ ತೊಗೊಂಡು ತೊಗೊಂಡು ಬೇಜಾರಾಗಿ ಹೋಗಿದೆ. ಏನಾದರೂ ಆಪರೇಷನ್ ಮಾಡಿ ಒಂದೇ ಸಲ ಕಾಯಿಲೆ ತೆಗೆದು ಹಾಕಲು ಸಾಧ್ಯವಿಲ್ಲವೆ. ನಮಗೇ ಇಂತಹ ಕಾಯಿಲೆ ಯಾಕೆ ಬಂತು’ ಇತ್ಯಾದಿ ಇತ್ಯಾದಿ.

ತನ್ನ ಪ್ರಶ್ನೆ-ಸಂದೇಹಗಳನ್ನು ಮುಕ್ತವಾಗಿ ರೋಗಿ ಮಾತಿನ ಮೂಲಕ ಕೇಳುವುದು, ವೈದ್ಯನು ಮಾತಿನ ಮೂಲಕ ಅವುಗಳನ್ನು ಉತ್ತರಿಸಿ, ಮತ್ತೆ ಮತ್ತೆ ಮಾತನ್ನೂ ಒಂದು ಟಾನಿಕ್‍ನಂತೆ, ಮಾತ್ರೆಯಂತೆ ವೈದ್ಯ-ರೋಗಿ ಸಂಭಾಷಣೆಯಲ್ಲಿ ಬಳಸುವುದು, ಮಾತ್ರೆಯ ಪರಿಣಾಮವನ್ನೇ ಚಿಕಿತ್ಸೆಯಲ್ಲಿ ಉಂಟುಮಾಡಬಹುದು ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಹಾಗೆಯೇ ಔಷಧಗಳು ರೋಗದ ಮೇಲೆ ಬೀರುವ ಗುಣವಾಗುವಿಕೆಯ ಪರಿಣಾಮವನ್ನು ‘ಮಾತು’ ಹೆಚ್ಚಿಸಲೂಬಹುದು; ರೋಗಿಯ ನಡವಳಿಕೆಯಲ್ಲಿ ರೋಗಶಮನಕ್ಕೆ ಸಹಾಯಕವಾಗುವ ಬದಲಾವಣೆಗಳನ್ನು ತರಲು ಅವಶ್ಯವಾದ ವೈದ್ಯ-ರೋಗಿಯ ಸಂಬಂಧದಲ್ಲಿ ಮಾತು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದು ಸಂಶೋಧನೆಗಳಿಂದ ಈಗಾಗಲೇ ನಿರೂಪಿತವಾದ ಅಂಶ.

ಯಾವುದೇ ರೋಗದ ಚಿಕಿತ್ಸೆಯಲ್ಲಿ ಮಾತ್ರೆಯೂ ಬೇಕು. ಮಾತಿನ ಮೂಲಕ ನಡವಳಿಕೆಯಲ್ಲಿ ಅಳವಡಿಕೆಯಾಗಬಹುದಾದ ಜೀವನಶೈಲಿಯ ಅಂಶಗಳೂ ಬೇಕೇ ಬೇಕು. ಮೊದಲು ಬದಲಾಗಬೇಕಾದದ್ದು ಜೀವನಶೈಲಿ. ಸತತವಾದ ಸಹನೆಯ ವೈದ್ಯನ-ರೋಗಿಯ ಮಾತು ಮಾತ್ರ ರೋಗದ ನೋವನ್ನು ವೈದ್ಯನಿಗೆ, ಜೀವನಶೈಲಿಯ ಮಹತ್ವವನ್ನು ರೋಗಿಗೆ ಮನದಟ್ಟು ಮಾಡಿಸಬಹುದು. ಅಂತಹ ಮಾತು ಮಾತ್ರೆಯ ಅಗತ್ಯವನ್ನೂ ತಗ್ಗಿಸಿ, ಜೀವನದ ಗುಣಮಟ್ಟವನ್ನೂ ಸುಧಾರಿಸುವುದು ಖಂಡಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.