ADVERTISEMENT

ಧೈರ್ಯಂ ಸರ್ವತ್ರ ಸಾಧನಂ

ಸುಮಾವೀಣಾ, ಹಾಸನ
Published 28 ಜೂನ್ 2024, 23:29 IST
Last Updated 28 ಜೂನ್ 2024, 23:29 IST
   

‘ಧೈರ್ಯ’ ಎಂಬ ಪದವನ್ನು ಕೇಳಿಸಿಕೊಳ್ಳುತ್ತಿದ್ದರೆ ನಮಗೆ ನಾವೇ ಒಂದು ಬೆಂಬಲ ತಂದುಕೊಂಡಂತೆ ಅನ್ನಿಸುತ್ತದೆ.

‘ಧೈರ್ಯ’ ಈ ಪದದ ಮೋಡಿಯೇ ಹಾಗೆ. ಒಂದೇ ಬಾರಿಗೆ ಎದೆಯಲ್ಲಿ ಎಚ್ಚರ ಗಂಟೆಯನ್ನು ಬಾರಿಸಿದ ಅನುಭವಾಗುತ್ತದೆ. ಏನೇ ಕೆಲಸ ಮಾಡಿದರೂ ಈ ಧೈರ್ಯ ಎಲ್ಲಿ ಸಿಗುತ್ತೆ ? ನಾವು ತಂದುಕೊಳ್ಳಬೇಕು ಎಲ್ಲಿಂದ? ಬೇಕಾದ ಹಾಗೆ ತರೋಕೆ ಇದು ವಿಕ್ರಯಕ್ಕೆ ಸಿಗುವ ವಸ್ತುವಂತೂ ಅಲ್ಲ. ನಮಗೆ ನಾವೇ ಮುನ್ನುಗ್ಗುವ ನಿರ್ಧಾರ ಮಾಡಬೇಕು ಹಾಗಂತ ‘ಮನಸ್ಸಿದ್ದಲ್ಲಿ ಮಾರ್ಗ’ ಎಂಬ ಮಾತು ಇಲ್ಲಿ ಈ ಸಂದರ್ಭಕ್ಕೆ ಅನ್ವಯವಾಗುವುದಿಲ್ಲ.

ಬದುಕಲ್ಲಿ ಏನಾದರೊಂದು ಸಾಧಿಸುವ ತುಡಿತ ಜೊತೆಗೆ ಅದಕ್ಕೊಂದು ಪೂರ್ವತಯಾರಿ ಇರಲೇಬೇಕು. ಜತೆಗೆ ಅಲ್ಲಿ ಎದುರಾಗುವ ಸಮಸ್ಯೆಗಳಿಗೆ ಎದೆಯೊಡ್ಡಬಲ್ಲೆ ಎಂಬ ಧೃಡ ಸಂಕಲ್ಪವೇ ಧೈರ್ಯ.

ADVERTISEMENT

ಹೇಗಾದರೂ ಸರಿ ಓದಿ ಪರೀಕ್ಷೆ ಬರೆಯುವೆ ಎಂಬ ಸಾತ್ವಿಕ ಧೈರ್ಯವೇ ಬೇರೆ; ಹೇಗಾದರೂ ಸರಿ ಕಾಪಿ ಹೊಡೆದು ಪಾಸಾಗಬೇಕು ಎಂಬ ಭಂಡ ಧೈರ್ಯವೇ ಬೇರೆ. ಹೀಗೇ ಮಾಡಿ ಬಿಡುತ್ತೇನೆ. ನೋಡಿಯೇ ಬಿಡುತ್ತೇನೆ ಏನಾಗುತ್ತೆ ಮಹಾ! ಎಂದರೆ ಅದು ಸಾಧುವಲ್ಲ.

ರಾಘವಾಂಕ ‘ನಡೆವರೆಡಹದೆ ಕುಳಿತವರೆಹುವರೆ’ ಎಂದು ಹೇಳಿರುವುದು ಧೈರ್ಯ ಮಾಡಬೇಕು ಎಂತಲೆ ‘ದೀಪಧಾರಿ’ ಎಂಬ ಕವಿತೆಯಲ್ಲಿ ಕಣವಿಯವರು ಪುಟ್ಟ ಮಗು ನಡೆಯುವುದನ್ನು ಹೇಗೆ ಕಲಿಯುತ್ತದೆ ಎಂದು ವಿವರಿಸುತ್ತ ಎದ್ದೆದ್ದು ಬಿದ್ದು , ಮುನ್ನುಗ್ಗುವ ಬಯಕೆ ಮಗುವಿನದ್ದಾಗುತ್ತದೆ ಎನ್ನುತ್ತಾರೆ.

ಹಾಗೆ ಸೋಲುಗಳನ್ನು ಸ್ವೀಕಾರ ಮಾಡುವುದೇ ಛಲಗಾರಿಕೆ. ಅದೇ ಸೋಲನ್ನು ಗೆಲುವಾಗಿ ಪರಿವರ್ತಿಸಿಕೊಳ್ಳುವುದು ಬುದ್ದಿವಂತಿಕೆ. ‘ಮರ ಮರ’ ಎಂದು ಜಪಿಸಿದರೆ ಗೊತ್ತಿಲ್ಲದಂತೆ ‘ರಾಮ ರಾಮ’ ಎಂದು ಭಜಿಸಿದಂತಾಗುತ್ತದೆಯಲ್ಲವೆ. ಹಾಗೆ ಅಂದುಕೊಂಡು ಕೆಲಸ ಮಾಡುವುದು ಮುಖ್ಯ.

ಹಾಗೆ ಧೈರ್ಯವೆಂಬುದು ನಾವು ದಿನನಿತ್ಯ ತೆಗೆದುಕೊಳ್ಳುವ ಔಷಧಿ ಎಂದರೆ ತಪ್ಪಾಗುವುದಿಲ್ಲ. ‘ಧೈರ್ಯ ಸರ್ವತ್ರಸಾಧನಂ’ ಎಂದು ಕರೆಯುವುದಿದೆ. ಅಂತಹ ಧೈರ್ಯವಿದ್ದುದ್ದರಿಂದಲೇ ಜೀವನದಲ್ಲಿ ಯಶೋಗಾಥೆಗಳು ಸಂಭವಿಸುವುದು. ಧೈರ್ಯ ಮತ್ತು ಸ್ವಾಭಿಮಾನ ಈ ಎರಡು ಮೇಳೈಸಿದರೆ ಯಶಸ್ಸಿಗೊಂದು ಗರಿ ಹೆಚ್ಚು.

ನೀರಿಗಿಳಿಯಲು ಚಳಿ ಎಂದರಾಯಿತೇ? ಇಳಿಯಬೇಕು ಇಳಿದ ಮೇಲೆ ತಾನೆ ಅದಕ್ಕೆ ಒಗ್ಗಿಕೊಳ್ಳುವುದು. ಹಾಗೆ ಇವು ಉತ್ತಮಸಂಯೋಜನೆಗಳು. ಧೃತಿ ಎಂಬ ಪದ ಧೈರ್ಯಕ್ಕೆ ಪರ್ಯಾಯ. ಸಮಾಧಾನ ಮಾಡುವ ಜನರು ‘ಧೃತಿಗೆಡಬೇಡ’, ‘ಧೈರ್ಯಗುಂದಬೇಡ’ ಎಂದೇ ಹೇಳುವುದಿದೆ. ಆಚೆ ಆಟ ಆಡಿವ ಮಗುವಿನ ಮೇಲೆ ಕಾರೊಂದು ಹರಿಯುತ್ತದೆ ಎಂದು ವ್ಯಕ್ತಿಯೊಬ್ಬ ಇಡೀ ಕಾರನ್ನೇ ಎತ್ತುತ್ತಾನೆ, ಈಜುಬಾರದೆ ಇದ್ದರೂ ಮುಳಗುವವರನ್ನು ರಕ್ಷಿಸುವುದು, ಹಿಂಡು ಆನೆಗಳು ಬಂದರೂ ಕಾರು ಗ್ಲಾಸ್ ಏರಿಸಿ ಸುಮ್ಮನೆ ಕುಳಿತುಕೊಂಡು ಅವೆಲ್ಲಾ ಹಿಂದಿರುಗಿದ ನಂತರ ಕಾಲು ಚಲಾಯಿಸುವುದೂ ಧೈರ್ಯವೇ.

ಧೈರ್ಯದ ಜೊತೆಗೆ ಬುದ್ಧಿವಂತಿಕೆ ಇರಬೇಕು ಕುತ್ಸಿತ ಬುದ್ಧಿಯಲ್ಲ ಸುಬುದ್ಧಿಯಿರಬೇಕು. ರೋಗಗಳನ್ನು ಎದುರಿಸಲೂ ಧೈರ್ಯಬೇಕು. ಭಯಂಕರ ರೋಗ ವಾಸಿಯಾಗದು ನಾನೇನು ಮಾಡಲಿ? ನಾನೇನು ಮಾಡಲಿ? ಎಂದುಕೊಂಡರೆ ರೋಗ ಗುಣವಾಗದು ಬಿಡಿ. ನನಗೇನಾಗಿದೆ ಹದಗೆಟ್ಟಿರುವ ಆರೋಗ್ಯ ಸ್ಥಿತಿಯನ್ನು ಸುಧಾರಿಕೊಳ್ಳಬಲ್ಲೆ ಎಂದು ಔಷಧಿತೆಗೆದುಕೊಂಡರೆ ರೋಗಿ ನಿರೋಗಿಯಾಗುತ್ತಾನೆ. ಇಲ್ಲಿ ಧೈರ್ಯ ಮತ್ತು ಶಿಸ್ತು ಇವೆರಡರ ಸಂಯೋಜನೆ ಕೆಲಸ ಮಾಡುತ್ತದೆ.

ಧೈರ್ಯದ ಜೊತೆಗೆ ಸ್ವಾಭಿಮಾನ, ಸಂಕಲ್ಪ, ನಿಷ್ಠುರತೆ, ಪ್ರಾಮಾಣಿಕತೆ ಎಂಬ ಸಂಯೋಜನೆಗಳು ಇರಬೇಕು. ಹಾಗಿದ್ದಲ್ಲಿ ಧೈರ್ಯವಂತರು ಎಂಬ ವಿಚಾರವಂತಿಕೆಗೆ ಅರ್ಥ ಲಭಿಸಿದಂತಾಗುತ್ತದೆ. ಏನೇ ಆಗಲಿ ಒಟ್ಟು ಧೈರ್ಯ ಬೇಕು ಹೌದಲ್ವ!⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.