ಈಗಾಗಲೇ ಕೋವಿಡ್-19 ಕಾಯಿಲೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಮಹಾಮಾರಿ ಎಂದು ಘೋಷಿಸಿದೆ. ಚೀನಾದಿಂದ ಭಾರತಕ್ಕೆ ಬಂದಿರುವವರ ಮೂಲಕ ಈ ಕಾಯಿಲೆಯು ದೇಶದ ವಿವಿಧೆಡೆಯೂ ಕಾಣಿಸಿಕೊಂಡಿದ್ದು, ಕರ್ನಾಟಕದಲ್ಲಿಯೂ ಸೋಂಕು ಪೀಡಿತರು ಪತ್ತೆಯಾಗಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಇಂಥ ಹಂತದಲ್ಲಿ ಸುಳ್ಳು ಸುದ್ದಿಗಳು, ವದಂತಿಗಳು, ಭಯ ಹುಟ್ಟಿಸುವ ಕಪೋಲ ಕಲ್ಪಿತ ವರದಿಗಳಿಂದಾಗಿ ಜನರು ಕಂಗೆಟ್ಟಿರುವುದು ಸುಳ್ಳಲ್ಲ.
ಕೋವಿಡ್ 19 ಕಾಯಿಲೆಗೆ ಕಾರಣವಾಗಬಲ್ಲ ಕೊರೊನಾ ವೈರಸ್ 2 ಕುರಿತಾಗಿ ಆತಂಕ ಹುಟ್ಟಿಸುವ ಅದೆಷ್ಟೋ ಲೇಖನಗಳು, ಚಿತ್ರಗಳು, ವೀಡಿಯೊಗಳು ಸಾಮಾಜಿಕ ಜಾಲತಾಣಗಳವೇ ಮುಂತಾದ ವಿಭಿನ್ನ ಮಾಧ್ಯಮಗಳಲ್ಲಿಯೂ ಹರಿದಾಡುತ್ತಿದೆ. ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎಂದು ಕಕ್ಕಾಬಿಕ್ಕಿಯಾಗಿರುವ ಜನರಿಗೆ ತಿಳಿಹೇಳಲು ವಿಶ್ವ ಆರೋಗ್ಯ ಸಂಸ್ಥೆಯೇ ಈಗ ಯಾವುದು ಸತ್ಯ, ಯಾವುದು ಮಿಥ್ಯೆ ಎಂಬುದನ್ನು ಪ್ರಚುರ ಪಡಿಸಿದೆ. ಪ್ರಜಾವಾಣಿ ಓದುಗರಿಗಾಗಿ ಈ ಮಾಹಿತಿ ಇಲ್ಲಿದೆ.
ಕೊರೊನಾ ವೈರಸ್ ಬಾರದಂತೆ ಮತ್ತು ಹರಡದಂತೆ ಅನುಸರಿಸಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು (WHO) ಆನಿಮೇಟೆಡ್ ಚಿತ್ರವನ್ನೂ ಬಿಡುಗಡೆ ಮಾಡಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ.
These are 7 simple steps to protect yourself and others from #COVID19.
👉 https://t.co/RU2gRs6jmc #coronavirus pic.twitter.com/TNAw5YrP0u
ಕೊರೊನಾ ವೈರಸ್ ಹರಡುವಿಕೆ ತಡೆಯಲು 6 ಕ್ರಮಗಳು
1. ಆಗಾಗ್ಗೆ ನಿಮ್ಮ ಕೈಗಳನ್ನು ಸೋಪು, ನೀರಿನಿಂದ ಸ್ವಚ್ಛಗೊಳಿಸುತ್ತಿರಿ.
2. ಕಣ್ಣುಗಳು, ಬಾಯಿ ಮತ್ತು ಮೂಗು ಸ್ಪರ್ಶಿಸುವ ಅಭ್ಯಾಸ ಬಿಟ್ಟುಬಿಡಿ.
3. ಸೀನುವಾಗ ಅಥವಾ ಕೆಮ್ಮುವಾಗ ಕೈಗಳಿಂದ ಅಥವಾ ಟಿಶ್ಯೂ ಪೇಪರ್ ಇಲ್ಲವೇ ಕರವಸ್ತ್ರದಿಂದ ಬಾಯಿ ಮುಚ್ಚಿಕೊಳ್ಳಿ.
4. ಜನಜಂಗುಳಿ ಇರುವ ಪ್ರದೇಶಕ್ಕೆ ಹೋಗುವುದನ್ನು ಸಾಧ್ಯವಿದ್ದಷ್ಟೂ ತಪ್ಪಿಸಿ.
5. ಸಣ್ಣ ಜ್ವರ ಮತ್ತು ಕೆಮ್ಮು ಸೇರಿದಂತೆ ಸಣ್ಣ ಅನಾರೋಗ್ಯದ ಲಕ್ಷಣವಿದ್ದರೂ ಮನೆಯಲ್ಲೇ ಉಳಿದುಕೊಳ್ಳಿ.
6. ಜ್ವರ, ಕೆಮ್ಮು ಮತ್ತು ಉಸಿರಾಡಲು ತೊಂದರೆಯಾಗುತ್ತಿದ್ದರೆ, ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ. ಮೊದಲು ಫೋನ್ ಮೂಲಕವೇ ತಿಳಿಸಿಬಿಡಿ.
ಕೊನೆಯದಾಗಿ, ವಿಶ್ವ ಆರೋಗ್ಯ ಸಂಸ್ಥೆಯಿಂದ ಲಭ್ಯವಾಗುವ ತಾಜಾ ಮಾಹಿತಿಯನ್ನು ತಿಳಿದುಕೊಳ್ಳಿ.
ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಬರುವ ನಂಬಲನರ್ಹ ಪೋಸ್ಟ್‌ಗಳನ್ನು, ಭೀತಿ ಹುಟ್ಟಿಸುವ ವಿಡಿಯೊಗಳನ್ನು ನಂಬಿ ಮತ್ತಷ್ಟು ಕುಗ್ಗಿ ಹೋಗಬೇಡಿ, ಜೊತೆಗೆ ಅಂಥವುಗಳನ್ನು ಫಾರ್ವರ್ಡ್ ಮಾಡಲೂ ಹೋಗದಿರಿ. ಈ ಕೆಳಗಿನ ಅಪನಂಬಿಕೆಗಳು ಮತ್ತು ಸತ್ಯಾಂಶದ ವಿವರಗಳನ್ನು ಓದಿ, ತಿಳಿಯದವರಲ್ಲಿ ಅರಿವು ಮೂಡಿಸಿ.
ಇದನ್ನೂ ಓದಿ: ಏನಿದು ಕೊರೊನಾ ವೈರಸ್, ಮುನ್ನೆಚ್ಚರಿಕೆ ಕ್ರಮಗಳೇನು?
ನಂಬಿಕೆ: ಬಿಸಿ ಅಥವಾ ಉಷ್ಣ ವಾತಾವರಣದಲ್ಲಿ ಕೊರೊನಾ ವೈರಸ್ ಬದುಕುಳಿಯುವುದಿಲ್ಲ
ಸತ್ಯ: ಇದುವರೆಗೆ ದೊರೆತ ಆಧಾರಗಳ ಪ್ರಕಾರ, ಯಾವುದೇ ರೀತಿಯ ಬಿಸಿಯಾದ ಮತ್ತು ಶುಷ್ಕ ವಾತಾವರಣದಲ್ಲಿಯೂ ಕೋವಿಡ್-19 ವೈರಸ್ ಹರಡಬಲ್ಲುದು. ಹೀಗಾಗಿ ಕೋವಿಡ್-19 ಸುಳಿವು ಇರುವ ಯಾವುದೇ ಪ್ರದೇಶಕ್ಕೆ ಹೋಗುವಾಗ, ಮುನ್ನೆಚ್ಚರಿಕೆಯಾಗಿ ಈ ಮೇಲಿನ ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸಲೇಬೇಕು.
ನಂಬಿಕೆ: ಶೀತ ಮತ್ತು ಹಿಮವಿರುವ ಶೈತ್ಯ ವಾತಾವರಣವು ಕೊರೊನಾ ವೈರಸ್ಸನ್ನು ಕೊಲ್ಲುತ್ತದೆ
ಸತ್ಯ: ಇದನ್ನು ನಂಬಲು ಪುರಾವೆಗಳಿಲ್ಲ. ಹೊರಗೆ ಎಷ್ಟೇ ಉಷ್ಣತೆ ಇದ್ದರೂ ಮಾನವನ ದೇಹವು 36.5-37 ಡಿಗ್ರಿ ಸೆಂಟಿಗ್ರೇಡ್ ತಾಪಮಾನವನ್ನು ಕಾಯ್ದುಕೊಳ್ಳುತ್ತದೆ. ವೈರಸ್ ಮಾನವನ ದೇಹದೊಳಗೆ ಪ್ರವೇಶಿಸುತ್ತದೆ ಎಂಬುದು ನೆನಪಿರಲಿ.
ನಂಬಿಕೆ: ಬಿಸಿ ನೀರು ಸ್ನಾನ ಮಾಡಿದರೆ ಕೊರೊನಾ ವೈರಸ್ ಹರಡುವುದಿಲ್ಲ ಅಥವಾ ಸೋಂಕುವುದಿಲ್ಲ
ಸತ್ಯ: ಇಲ್ಲ. ಬಿಸಿ ನೀರು ಸ್ನಾನ ಮಾಡಿದರೆ ಕೋವಿಡ್-19 ಬರುವುದನ್ನು ತಡೆಯಲಾಗುವುದಿಲ್ಲ. ದೇಹದ ಸಾಮಾನ್ಯ ತಾಪಮಾನಕ್ಕಿಂತ ತೀರಾ ಬಿಸಿಯಾಗಿರುವ ನೀರಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು.
ನಂಬಿಕೆ: ಸೊಳ್ಳೆಗಳಿಂದ ಕೊರೊನಾ ವೈರಸ್ ಹರಡುತ್ತದೆ
ಸತ್ಯ: ಇದಕ್ಕೆ ಯಾವುದೇ ಪುರಾವೆ ಇದುವರೆಗೂ ಸಿಕ್ಕಿಲ್ಲ. ಹೊಸ ಕೊರೊನಾ ವೈರಸ್ ಎಂಬುದು ಶ್ವಾಸಕೋಶಕ್ಕೆ ಸೋಂಕುವ ವೈರಸ್ ಆಗಿದ್ದು, ಸೋಂಕಿತ ವ್ಯಕ್ತಿಯು ಕೆಮ್ಮುವಾಗ ಅಥವಾ ಸೀನಿದಾಗ ಹೊರಬರುವ ಎಂಜಲಿನ ಹನಿಗಳಿಂದ ಇಲ್ಲವೇ ಮೂಗಿನಿಂದ ಬರುವ ದ್ರವದ ಕಣಗಳಿಂದ ಹರಡುತ್ತದೆ. ಇದಕ್ಕಾಗಿಯೇ ಸೀನುವಾಗ/ಕೆಮ್ಮುವಾಗ ಬಾಯಿ-ಮೂಗಿಗೆ ಕರವಸ್ತ್ರ ಇಲ್ಲವೇ ಟಿಶ್ಯೂ ಪೇಪರ್ ಅಥವಾ ಕೈಗಳನ್ನು ಅಡ್ಡಹಿಡಿದುಕೊಂಡು, ಬಳಿಕ ಸೋಪು ನೀರಿನಿಂದ ಕೈತೊಳೆದುಕೊಳ್ಳಬೇಕು ಅಥವಾ ಆಲ್ಕೋಹಾಲ್ ಮಿಶ್ರಿತ ಕೈತೊಳೆಯುವ ಮಿಶ್ರಣ (ಸ್ಯಾನಿಟೈಸರ್) ಬಳಸಬೇಕು. ಕೈತೊಳೆದ ಬಳಿಕ ಕೈಗಳನ್ನು ಒಣಗಿಸಿಕೊಳ್ಳುವುದು ಸೂಕ್ತ.
ನಂಬಿಕೆ: ಒದ್ದೆ ಕೈಗಳನ್ನು ಒಣಗಿಸುವ ಯಂತ್ರವು (ಹ್ಯಾಂಡ್ ಡ್ರೈಯರ್) ಕೊರೊನಾ ವೈರಸ್ ಕೊಲ್ಲುವಲ್ಲಿ ಪರಿಣಾಮಕಾರಿ
ಸತ್ಯ: ಇಲ್ಲ. ಹ್ಯಾಂಡ್ ಡ್ರೈಯರ್‌ಗಳಿಂದ ಕೊರೊನಾ ವೈರಸ್ ನಾಶ ಸಾಧ್ಯವಿಲ್ಲ. ಕೈಗಳನ್ನು ಸ್ಯಾನಿಟೈಸರ್ ಬಳಸಿ ಸ್ವಚ್ಛವಾಗಿಟ್ಟುಕೊಳ್ಳಿ ಅಥವಾ ಸೋಪು-ನೀರಿನಿಂದ ಕೈತೊಳೆದುಕೊಂಡು ಟವೆಲ್, ಟಿಶ್ಯೂ ಇಲ್ಲವೇ ಏರ್ ಡ್ರೈಯರ್‌ನಿಂದ ಒಣಗಿಸಿಕೊಳ್ಳುವುದು ಉಚಿತ.
ನಂಬಿಕೆ: ಅಲ್ಟ್ರಾವಯಲೆಟ್ (UV) ಸೋಂಕುನಿರೋಧಕ ದೀಪದಿಂದ ಕೊರೊನಾ ವೈರಸ್ ಅನ್ನು ನಿವಾರಿಸಬಹುದೇ?
ಸತ್ಯ: ನೇರಳಾತೀತ ಕಿರಣಗಳನ್ನು ಹೊರಸೂಸುವ ಬೆಳಕನ್ನು ಕೈಗಳ ಅಥವಾ ದೇಹದ ಯಾವುದೇ ಭಾಗದ ಸ್ವಚ್ಛತೆಗೆ ಬಳಸಲೇಬಾರದು. ಅದರಿಂದ ಹೊರಬರುವ ವಿಕಿರಣವು ಚರ್ಮದ ಸಮಸ್ಯೆಗೆ ಕಾರಣವಾಗಬಹುದು.
ನಂಬಿಕೆ: ಕೊರೊನಾ ವೈರಸ್ ಸೋಂಕಿತರನ್ನು ಪತ್ತೆ ಮಾಡಲು ಥರ್ಮಲ್ ಸ್ಕ್ಯಾನರ್ ಬಳಸಿದರೆ ಸಾಕು
ಸತ್ಯ: ಥರ್ಮಲ್ ಸ್ಕ್ಯಾನರ್‌ಗಳಿಂದ ಜ್ವರ ಬಂದವರನ್ನಷ್ಟೇ ಗುರುತಿಸಬಹುದು, ಸೋಂಕಿತರನ್ನಲ್ಲ. ಯಾಕೆಂದರೆ ಕೊರೊನಾ ವೈರಸ್ ಸೋಂಕಿದ ಬಳಿಕ ಜ್ವರ ಮತ್ತು ಅನಾರೋಗ್ಯ ಕಾಣಿಸಿಕೊಳ್ಳಲು 2ರಿಂದ 10 ದಿನಗಳು ಬೇಕಾಗುತ್ತವೆ.
ನಂಬಿಕೆ: ದೇಹಕ್ಕೆ ಆಲ್ಕೋಹಾಲ್ ಅಥವಾ ಕ್ಲೋರಿನ್ ಸಿಂಪಡಿಸಿಕೊಂಡರೆ ಕೊರೊನಾ ವೈರಸ್ ಸಾಯುತ್ತದೆ
ಸತ್ಯ: ಇಲ್ಲ. ಕೊರೊನಾ ವೈರಸ್ ದೇಹದೊಳಗೆ ಪ್ರವೇಶಿಸಿದ ಬಳಿಕ ಈ ರೀತಿ ಮಾಡಿ ಏನೂ ಪ್ರಯೋಜನವಿಲ್ಲ. ಇವನ್ನು ಸಿಂಪಡಿಸುವುದರಿಂದ ಬಟ್ಟೆಗೆ ಮತ್ತು ಕಣ್ಣು, ಬಾಯಿಯ ಮ್ಯೂಕಸ್ ಮೆಂಬ್ರೇನ್‌ಗಳಿಗೆ ಹಾನಿಯಾಗಬಹುದು. ಆಲ್ಕೋಹಾಲ್ ಮತ್ತು ಕ್ಲೋರಿನ್‌ಗಳು ಹೊರಭಾಗದ ಸೋಂಕನ್ನಷ್ಟೇ ತಡೆಯಬಹುದು ಎಂಬುದು ನೆನಪಿರಲಿ. ಅವುಗಳನ್ನೂ ಸೂಕ್ತ ಪರಿಣತರ ಉಸ್ತುವಾರಿಯಲ್ಲೇ ಬಳಸಬೇಕು.
ನಂಬಿಕೆ: ಮನೆಯಲ್ಲಿರುವ ಸಾಕುಪ್ರಾಣಿಗಳೂ ಕೊರೊನಾ ವೈರಸ್ ಹರಡುತ್ತವೆ
ಸತ್ಯ: ಸದ್ಯಕ್ಕೆ ಈ ಮಾತಿಗೆ ಯಾವುದೇ ಪುರಾವೆ ಸಿಕ್ಕಿಲ್ಲ. ಅಂದರೆ, ನಾಯಿ, ಬೆಕ್ಕುಗಳಿಗೆ ಕೊರೊನಾ ವೈರಸ್ ಸೋಂಕು ಆಗಿರುವ ಪ್ರಕರಣಗಳು ಇದುವರೆಗೆ ಇಲ್ಲ. ಆದರೂ, ಸಾಕುಪ್ರಾಣಿಗಳನ್ನು ಮುಟ್ಟಿದ ಬಳಿಕ ಇ.ಕೊಲಿ ಮತ್ತು ಸಾಲ್ಮೊನೆಲ್ಲಾ ಮುಂತಾದ ಸಾಮಾನ್ಯ ಬ್ಯಾಕ್ಟೀರಿಯಾಗಳನ್ನು ತಡೆಯುವ ನಿಟ್ಟಿನಲ್ಲಿ ಕೈಗಳನ್ನು ತೊಳೆದುಕೊಳ್ಳಲೇಬೇಕು.
ನಂಬಿಕೆ: ನ್ಯುಮೋನಿಯಾ ಲಸಿಕೆ ಬಳಸಿ ಕೊರೊನಾ ವೈರಸ್‌ನಿಂದ ಬಚಾವಾಗಬಹುದು
ಸತ್ಯ: ಇಲ್ಲ. ನ್ಯುಮೋನಿಯಾ ಲಸಿಕೆಯು ಕೊರೊನಾ ವೈರಸ್‌ನಿಂದ ರಕ್ಷಣೆ ನೀಡುವುದಿಲ್ಲ. ಕೊರೊನಾ ವೈರಸ್ 2019-nCoV ವಿರುದ್ಧ ಲಸಿಕೆ ಇನ್ನಷ್ಟೇ ತಯಾರಾಗಬೇಕಿದೆ.
ನಂಬಿಕೆ: ಮೂಗನ್ನು ಸಲೈನ್‌ನಿಂದ ಆಗಾಗ್ಗೆ ತೊಳೆಯುವುದರಿಂದ ಕೊರೊನಾ ವೈರಸ್ ಬಾರದಂತೆ ತಡೆಯಬಹುದು.
ಸತ್ಯ: ಇಲ್ಲ. ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಸಾಮಾನ್ಯ ಶೀತ, ನೆಗಡಿಯಾದಾಗ ಉಪ್ಪು ನೀರು ಅಥವಾ ಕ್ಷಾರೀಯ ದ್ರಾವಣವು ನೆರವಿಗೆ ಬಂದಿರುವುದಕ್ಕೆ ಪುರಾವೆಯಿದೆ ಆದರೂ, ಹೊಸ ಕೊರೊನಾ ವೈರಸ್ ಸೋಕದಂತೆ ತಡೆಯುವುದು ಇದುವರೆಗೆ ಸಾಬೀತಾಗಿಲ್ಲ.
ನಂಬಿಕೆ: ಬೆಳ್ಳುಳ್ಳಿ ತಿಂದರೆ ಹೊಸ ಕೊರೊನಾ ವೈರಸ್ ಸೋಂಕು ತಡೆಯಬಹುದು.
ಸತ್ಯ: ಬೆಳ್ಳುಳ್ಳಿಯು ಆರೋಗ್ಯಕರ ಆಹಾರವಾಗಿದೆ ಮತ್ತು ಸೂಕ್ಷ್ಮಾಣುಜೀವಿ ನಿರೋಧಕ ಗುಣಗಳನ್ನು ಹೊಂದಿದೆ ಎಂಬುದು ಸತ್ಯ. ಆದರೆ, ಬೆಳ್ಳುಳ್ಳಿ ಸೇವನೆಯು ಹೊಸ ಕೊರೊನಾ ವೈರಸ್‌ನಿಂದ ರಕ್ಷಣೆ ನೀಡುತ್ತದೆ ಎಂಬುದಕ್ಕೆ ಇದುವರೆಗೆ ಪುರಾವೆಗಳು ಲಭ್ಯವಾಗಿಲ್ಲ.
ನಂಬಿಕೆ: ಹೊಸ ಕೊರೊನಾ ವೈರಸ್ ವಯೋವೃದ್ಧರನ್ನು ಮತ್ತು ಮಕ್ಕಳನ್ನು ಜಾಸ್ತಿ ಕಾಡುತ್ತದೆ
ಸತ್ಯ: ಎಲ್ಲ ವಯೋಮಾನದ ಜನರಿಗೂ ಕೊರೊನಾ ವೈರಸ್ ಹರಡುತ್ತದೆ. ಆಸ್ತಮಾ, ಮಧುಮೇಹ ಮತ್ತು ಹೃದ್ರೋಗ ಮುಂತಾದ ಕಾಯಿಲೆ ಸಾಧ್ಯತೆ ಹೆಚ್ಚಿರುವ ವಯಸ್ಸಾದ ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕೊರೊನಾ ವೈರಸ್ ಪರಿಣಾಮ ಅವರ ಮೇಲಾಗುವ ಸಾಧ್ಯತೆ ಹೆಚ್ಚು ಇರಬಹುದು. ಆದರೆ ಎಲ್ಲ ವಯೋಮಾನದವರು ಆರೋಗ್ಯಕರ ಆಹಾರ, ಶುಚಿತ್ವವನ್ನು ಅನುಸರಿಸಲೇಬೇಕು ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸು.
ನಂಬಿಕೆ: ಆಂಟಿಬಯೋಟಿಕ್ಸ್ (ಜೀವನಿರೋಧಕ) ಔಷಧಿಗಳಿಂದ ಕೊರೊನಾ ವೈರಸ್ ಸೋಂಕು ತಡೆಯಬಹುದು ಅಥವಾ ಚಿಕಿತ್ಸೆ ಸಾಧ್ಯ.
ಸತ್ಯ: ಇಲ್ಲ. ವೈರಸ್‌ಗಳ ವಿರುದ್ಧ ಆಂಟಿಬಯೋಟಿಕ್ಸ್ ಕೆಲಸ ಮಾಡುವುದಿಲ್ಲ. ಅವೇನಿದ್ದರೂ ಬ್ಯಾಕ್ಟೀರಿಯಾಗಳಿಗೆ ಮಾತ್ರ. ಆದರೆ, ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ, ಅನ್ಯ ಬ್ಯಾಕ್ಟೀರಿಯಾಗಳ ಸೋಂಕು ಬಾರದಿರಲಿ ಎಂಬ ಕಾರಣಕ್ಕಷ್ಟೇ ಆಂಟಿಬಯೋಟಿಕ್ಸ್ ನೀಡಲಾಗುತ್ತದೆ.
ನಂಬಿಕೆ: ಹೊಸ ಕೊರೊನಾ ವೈರಸ್ ಹರಡದಂತಿರಲು ಅಥವಾ ರೋಗ ಶಮನಕ್ಕೆ ಚಿಕಿತ್ಸೆ ಲಭ್ಯವಿದೆ.
ಸತ್ಯ: ಇಂದಿನವರೆಗೂ, ನಿರ್ದಿಷ್ಟ ಔಷಧಿ ಲಭ್ಯವಾಗಿಲ್ಲ. ಆದರೆ, ಸೋಂಕು ಪೀಡಿತರಿಗೆ ವಿಶೇಷವಾದ ಕಾಳಜಿಯಿಂದ ಮತ್ತು ಸೋಂಕು ಹರಡದಂತಾಗಲು ಪ್ರತ್ಯೇಕವಾಗಿರಿಸಿ ಅವರಿಗೆ ಚಿಕಿತ್ಸೆ ನೀಡಬೇಕಾಗಿರುವುದು ಅತ್ಯಗತ್ಯ. ನಿರ್ದಿಷ್ಟ ಚಿಕಿತ್ಸೆಗಳ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆಯೂ ಇದಕ್ಕೆ ಸಹಕರಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.