ADVERTISEMENT

ಕೋವಿಡ್‌ನಿಂದ ಮಾನಸಿಕವಾಗಿ ಕುಗ್ಗಿರುವ ಹಿರಿಯರ ಚೇತನಕ್ಕೆ ಇಲ್ಲಿದೆ ವೈದ್ಯರ ಸಲಹೆ

ಪ್ರಜಾವಾಣಿ ವಿಶೇಷ
Published 22 ಆಗಸ್ಟ್ 2022, 7:19 IST
Last Updated 22 ಆಗಸ್ಟ್ 2022, 7:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋವಿಡ್‌... ಈ ಸಾಂಕ್ರಮಿಕ ಈಗಲೂ ನಮ್ಮ ನಡುವೆ ವಾಸವಾಗಿದ್ದರೂ ಅಷ್ಟಾಗಿ ಪರಿಣಾಮ ಬೀರುತ್ತಿಲ್ಲ. ಆದರೆ ಕಳೆದೆರಡು ವರ್ಷಗಳಿಂದ ಬೀರಿದ ಪರಿಣಾಮ ಈಗಲೂ ಅದರ ತೊಂದರೆಗಳನ್ನು ಹಿರಿಯರು ಅನುಭವಿಸುತ್ತಿದ್ದಾರೆ. ಹೌದು, ಕೋವಿಡ್‌ನಿಂದ ಹೆಚ್ಚು ಸಂಕಷ್ಟ ಅನುಭವಿಸಿದ್ದು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು. ಈಗಾಗಲೇ ದೈಹಿಕವಾಗಿ ಕುಗ್ಗಿರುವ ಹಿರಿಯರ ಆರೋಗ್ಯ ಸೂಕ್ಷ್ಮತೆಯಿಂದ ಕೂಡಿರುತ್ತದೆ. ಜೊತೆಗೆ ಹಲವು ಕಾಯಿಲೆಗಳು ಅವರನ್ನು ಬಳಸುತ್ತಿರುತ್ತವೆ. ಇಂಥ ಸಂದರ್ಭದಲ್ಲಿ ಕೋವಿಡ್‌ ಸೋಂಕು ಆ ಜೀವಗಳನ್ನು ಇನ್ನಷ್ಟು ಕುಗ್ಗಿಸಿಬಿಟ್ಟಿತು. ಕೆಲವರು ಸಾವನ್ನಪ್ಪಿದರೆ, ಇನ್ನೂ ಕೆಲವರು ದೈಹಿಕವಾಗಿ ಗುಣವಾದರೂ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಕೋವಿಡ್‌ನಿಂದ ಮಾನಸಿಕವಾಗಿ ಕುಗ್ಗಿರುವ ಹಿರಿಯ ನಾಗಕರಿಕರನ್ನು ಹೇಗೆ ಸಲಹೆ ಬೇಕು ಹಾಗೂ ಅವರ ಮಾನಸಿಕ ಆರೋಗ್ಯ ಸುಧಾರಿಸುವ ಕುರಿತು ಫೊರ್ಟಿಸ್‌ ಆಸ್ಪತ್ರೆಯ ಮಾನಸಿಕ ಆರೋಗ್ಯ ತಜ್ಞ ಡಾ. ವೆಂಕಟೇಶ್‌ ಬಾಬು ವಿವರಿಸಿದ್ದಾರೆ.

ಶೇ. 57 ರಷ್ಟು ಹಿರಿಯರು ಮಾನಸಿಕವಾಗಿ ಕುಗ್ಗಿದ್ದಾರೆ ಕೋವಿಡ್‌ನಿಂದ ಬಳಲಿರುವ ಹಿರಿಯ ಜೀವಗಳು ತಮ್ಮ ಮಾನಸಿಕ ಉತ್ಸಾಹವನ್ನು ಕಳೆದುಕೊಳ್ಳುತ್ತಿದ್ದಾರೆ. ಅಂಟಾರಾ ಅವರ 'ಸ್ಟೇಟ್ ಆಫ್ ಸೀನಿಯರ್ಸ್ ಸಮೀಕ್ಷೆ' ಪ್ರಕಾರ, 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಶೇ. 57ರಷ್ಟು ಹಿರಿಯರು ಕೋವಿಡ್‌ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಇಂಟರ್‌ನ್ಯಾಷನಲ್ ಲಾಂಗ್ವಿಟಿ ಸೆಂಟರ್ (ಐಎಲ್‌ಸಿ) ನಡೆಸಿದ ಸಮೀಕ್ಷೆಯಲ್ಲಿ 55 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರಲ್ಲಿ ಭಾವನಾತ್ಮಕ ಹಾಗೂ ದೈಹಿಕ ಚೈತನ್ಯ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಈಗಲೂ ಸಹ ಕೋವಿಡ್‌ ಸೋಂಕು ಮೊದಲು ಹಿರಿಯರನ್ನೇ ಟಾರ್ಗೆಟ್‌ ಮಾಡುತ್ತಿದೆ. ಈಗಾಗಲೇ ಕೋವಿಡ್‌ ಸೋಂಕು ಬಂದ ಹಿರಿಯರಲ್ಲಿ ಮತ್ತೆ ಸೋಂಕು ಕಾಣಿಸಿಕೊಳ್ಳುವ ಆತಂಕ ಮಾನಸಿಕವಾಗಿ ಕುಗ್ಗಿಸುತ್ತಿದೆ ಎನ್ನಲಾಗಿದೆ.

ಹಿರಿಯರಿಗೆ ಅಭಯ ನೀಡಿ

ADVERTISEMENT

ಕೋವಿಡ್‌ ಸಂದರ್ಭದಲ್ಲಿ ಹಿರಿಯರಲ್ಲಿ ಕಾಡಿದ ಭಯವೆಂದರೆ, ಈ ಸೋಂಕು ನಮ್ಮ ಪ್ರಾಣ ಕಸಿಯಲಿದೆ ಎನ್ನುವುದು. ಜೊತೆಗೆ ತಮ್ಮನ್ನ ಮತ್ತಷ್ಟು ದೈಹಿಕವಾಗಿ ಕುಗ್ಗಿಸಿಬಿಡುತ್ತದೆ ಎನ್ನುವುದು. ಮೊದಲ ಅಲೆಯಲ್ಲಿ ಸೋಂಕು ಹಿರಿಯ ನಾಗರಿಕರನ್ನು ಟಾರ್ಗೆಟ್‌ ಮಾಡುತ್ತಿದೆ ಎಂಬ ಹೇಳಿಕೆಯಿಂದಲೇ ಹಿರಿಯರು ಸಾಕಷ್ಟು ಕುಗ್ಗಿಬಿಟ್ಟರು. ಆತಂಕದಲ್ಲಿದ್ದವರಿಗೆ ಸೋಂಕು ತಗುಲಿದರೆ, ಆ ಭಯ ಇನ್ನಷ್ಟು ಹೆಚ್ಚುತ್ತಿತ್ತು. ಕೋವಿಡ್‌ ಸಂಬಂಧ ದಾಖಲಾದ ಬಹುತೇಕ ಹಿರಿಯರಲ್ಲಿದ್ದ ಭಯ ಅವರ ಆರೋಗ್ಯವನ್ನು ಇನ್ನಷ್ಟು ಹಾಳು ಮಾಡುತ್ತಿತ್ತು ಎಂದು ಅಧ್ಯಯನಗಳು ತಿಳಿಸಿವೆ. ಕೇವಲ ಜ್ವರ ಎಂದು ಕೋವಿಡ್‌ ರೋಗಿಗಳಿಗೆ ನೀಡುವ ಚಿಕಿತ್ಸೆ ಹಾಗೂ ಕೋವಿಡ್‌ ಎಂದು ಸ್ಪಷ್ಟಪಡಿಸಿ ನೀಡುವ ಚಿಕಿತ್ಸೆ ನಡುವೆ ಸಾಕಷ್ಟು ವ್ಯತ್ಯಾಸಗಳನ್ನು ರೋಗಿಗಳಲ್ಲಿ ಕಾಣುತ್ತಿತ್ತು. ಜ್ವರ ಎಂದಾಗ ಹಿರಿಯ ನಾಗರಿಕರು ಮಾನಸಿಕವಾಗಿ ಸದೃಢರಾಗಿದ್ದರು. ಅದೇ ಕೋವಿಡ್‌ ಎಂದಾಗ ಅವರಲ್ಲಿ ಭಯ ಹೆಚ್ಚಾಗಿ, ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಚಿಂತಾಜನಕವಾಗುತ್ತಿತ್ತು. ಹೀಗಾಗಿ ಹಿರಿಯರಿಗೆ ಕೋವಿಡ್‌ ಬಂದ ಸಂದರ್ಭದಲ್ಲಿ ಸೋಂಕಿನ ಬಗ್ಗೆ ಭಯ ಉಂಟಾಗದಂತೆ ಅವರಿಗೆ ಅಭಯ ನೀಡುವುದು ದೊಡ್ಡ ಚಿಕಿತ್ಸೆಯಾಗಿದೆ.

ಖಿನ್ನತೆಗೆ ಕೋವಿಡ್‌ ಕಾರಣ

ಕೋವಿಡ್‌ ಸೋಂಕಿಗೆ ಒಳಗಾಗದ ಹಿರಿಯ ನಾಗರಿಕರು ಖಿನ್ನತೆಗೆ ಒಳಗಾಗಿದ್ದರು ಎನ್ನುವುದು ಅಧ್ಯಯನಗಳಿಂದ ದೃಢಪಟ್ಟಿದೆ. ಇದರ ಜೊತೆಗೆ ಹೆಚ್ಚಿದ ರಕ್ತದೊತ್ತಡ, ಹೃದ್ರೋಗ, ಸ್ಥೂಲಕಾಯತೆ, ದುರ್ಬಲಗೊಂಡ ಪ್ರತಿರೋಧ ಕಣಗಳು, ಖಿನ್ನತೆ, ಆತಂಕ ಹೆಚ್ಚಳವಾಗಿದೆ. ಇದರಲ್ಲಿ ಪ್ರಮುಖವಾಗಿ ಶೇ.50ರಷ್ಟು ಪ್ರಕರಣಗಳು ಬುದ್ಧಿ ಸ್ಥಿಮಿತ ಕಳೆದುಕೊಳ್ಳುವುದು ಹಾಗೂ ಖಿನ್ನತೆಗೆ ಒಳಗಾಗಿರುವುದು ಕಂಡು ಬಂದಿದೆ. ಶೇ. 29ರಷ್ಟು ಪರಿಧಮನಿಯ ಹೃದಯ ಕಾಯಿಲೆ ಹೆಚ್ಚಳವಾಗಿದೆ. ಶೇ. 32ರಷ್ಟು ಪ್ರಮಾಣ ಪಾರ್ಶ್ವವಾಯು ಅಪಾಯ ಹೆಚ್ಚಳವಾಗಿದೆ ಎಂದು ಅಧ್ಯಯನಗಳು ತಿಳಿಸಿದ್ದವು.

ಕೋವಿಡ್‌ ಬಳಿಕ ಹಿರಿಯರ ಮೇಲಿನ ಕಾಳಜಿ ಹೀಗಿರಲಿ: ಕೋವಿಡ್‌ ನಂತರದ ಸಂದರ್ಭದಲ್ಲಿ ಹಿರಿಯರನ್ನು ನೋಡಿಕೊಳ್ಳುವುದು ಅತಿ ದೊಡ್ಡ ಜವಾಬ್ದಾರಿ. ಕೋವಿಡ್‌ನಿಂದ ಗುಣಮುಖವಾದ ಹಿರಿಯರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿರುತ್ತಾರೆ. ಅವರ ದೈಹಿಕ ಶಕ್ತಿ ವೃದ್ಧಿಗೆ ವೈದ್ಯರ ಸಲಹೆ ಮೇರಿಗೆ ಔಷಧೋಪಚಾರ ನಡೆಸುವುದು ಒಳ್ಳೆಯದು ಹಾಗೂ ಆರೋಗ್ಯಕರ ಆಹಾರ ಪದಾರ್ಥ ಸೇವನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈಗಾಗಲೇ ಅವರಲ್ಲಿ ಇತರೆ ಕಾಯಿಲೆ ಇರುವುದರಿಂದ ಹಿರಿಯರಿಗೆ ಹೆಚ್ಚು ಪೌಷ್ಠಿಕಯುಕ್ತ, ಸಕ್ಕರೆ ಮುಕ್ತ ಆಹಾರ ನೀಡುವುದು ಒಳ್ಳೆಯದು. ಇನ್ನು ಮಾನಸಿಕವಾಗಿ ಅವರನ್ನು ಸ್ಥಿರಗೊಳಿಸಲು ಒಂದಷ್ಟು ಚಟುವಟಿಕೆಯಲ್ಲಿ ತೊಡಗಿಸಬೇಕು. ಹಿರಿಯರಿಗೆ ಯೋಗಾಭ್ಯಾಸ, ವಾಕಿಂಗ್‌, ಸ್ನೇಹಿತರೊಂದಿಗೆ ಒಂದಷ್ಟು ಕಾಲ ಹರಟೆ ಹಾಗೂ ಹಿರಿಯರು ಇಚ್ಛಿಸುವ ಚಟುವಟಿಕೆಯಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಲು ಮನೆಯವರು ಸಹಕರಿಸಬೇಕು. ಹಿರಿಯರಿಗೆ ಮನಸ್ಸಿನ ಶಾಂತಿ ಹೆಚ್ಚು ಮುಖ್ಯ. ಹೀಗಾಗಿ ಅವರ ಮನಸ್ಸಿಗೆ ನೆಮ್ಮದಿ ಉಂಟು ಮಾಡುವ ಚಟುವಟಿಕೆ ಇರಲಿ. ಇನ್ನು ಕೋವಿಡ್‌ ಬಗ್ಗೆ ನಕಾರಾತ್ಮಕ ವಿಷಯಗಳು ಕಿವಿಗೆ ಬೀಳದಂತೆ ಕಾಪಾಡಿಕೊಳ್ಳುವುದು ಒಳ್ಳೆಯದು. ಮನೆಯಲ್ಲಿ ಮಕ್ಕಳಿದ್ದರೆ ಹಿರಿಯರೊಂದಿಗೆ ಹೆಚ್ಚು ಬೆರೆಯಲು ಅನುವು ಮಾಡಿಕೊಡಿ. ಇದರ ಜೊತೆಗೆ ದೇಹಕ್ಕೆ ಹಿತವೆನಿಸುವ ವ್ಯಾಯಾಮ ಮಾಡುತ್ತಾ ಸಾಗಿದರೆ ಮಾನಸಿಕ ಖಿನ್ನತೆ ಕೂಡ ಕ್ರಮೇಣ ಕಡಿಮೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.