ADVERTISEMENT

ಕೋವಿಡ್: ಆತಂಕ ಬೇಡ, ಇರಲಿ ಎಚ್ಚರ– ಓದಲೇಬೇಕಾದ ಡಾ.ಕಿರಣ್ ವಿ.ಎಸ್ ಲೇಖನ

ಡಾ.ಕಿರಣ್ ವಿ.ಎಸ್.
Published 11 ಜನವರಿ 2022, 0:15 IST
Last Updated 11 ಜನವರಿ 2022, 0:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
  • ಕೋವಿಡ್-19ರ ವಿರುದ್ಧ ಗೆಲುವು ಶತಸ್ಸಿದ್ಧ. ಅನಗತ್ಯ ಆತಂಕಕ್ಕೆ ಒಳಗಾಗದಂತೆ ತಾಳ್ಮೆಯಿಂದ, ಜಾಣ್ಮೆಯಿಂದ, ಸರಿಯಾದ ದಾರಿಯಲ್ಲಿ ಇದನ್ನು ನಿರ್ವಹಿಸಿದರೆ ಬಹಳ ಬೇಗ ಜಗತ್ತು ಇದರಿಂದ ಮುಕ್ತವಾಗುತ್ತದೆ.

‘ಈ ಕೋವಿಡ್ ವೈರಸ್‌ನಿಂದ ಮುಕ್ತಿಯೇ ಇಲ್ಲವೇ? ಒಂದರ ಹಿಂದೆ ಮತ್ತೊಂದು ಹೆಸರಿನ ತಳಿಗಳು; ಇನ್ನೊಂದು ಅಲೆ ಎಂದು ಅಪ್ಪಳಿಸಲಿದೆಯೋ ಎಂಬ ಆತಂಕ; ಮಕ್ಕಳಿಗೆ ಏನಾಗುವುದೋ ಎಂಬ ಭಯ; ಪ್ರತಿ ಬಾರಿ ಲಾಕ್‌ಡೌನ್ ಮಾಡಿದಾಗಲೂ ‘‘ಸರ್ಕಾರ ನಮ್ಮಿಂದ ಏನನ್ನೋ ಮುಚ್ಚಿಡುತ್ತಿದೆ’’ ಎಂಬ ಗುಮಾನಿ; ಎರಡು ಬಾರಿ ಲಸಿಕೆ ಸಾಕೋ ಅಥವಾ ಇನ್ನೆಷ್ಟು ಬಾರಿ ಬೇಕೋ ಎಂದು ತಿಳಿಯದ ಸಂದಿಗ್ಧ; ಇಷ್ಟೆಲ್ಲಾ ಮಾಡಿದರೂ ಯಾರ್ಯಾರಿಗೋ ಕಾಯಿಲೆ ಬಂದಿದೆ ಎಂಬ ಸುದ್ದಿಗಳು. ಸಾಕಾಗಿ ಹೋಗಿದೆ; ಬದುಕು ಸಹಜವಾಗಲು ಇನ್ನೆಷ್ಟು ವರ್ಷಗಳು ಬೇಕೋ ತಿಳಿಯದು’ ಎಂಬ ಹತಾಶೆ ಒಬ್ಬಿಬ್ಬರದ್ದಲ್ಲ.

ಇದರ ಮೇಲೆ ಅಬ್ಬರಿಸುವ ಟಿ.ವಿ. ಸುದ್ದಿವಾಹಿನಿಗಳು, ಫೋನಿನ ಮೂಲಕ ನೇರವಾಗಿ ಮೆದುಳನ್ನೇ ತಲುಪುವ ಸಾಮಾಜಿಕ ಜಾಲತಾಣಗಳ ವದಂತಿಗಳು ಭೀತಿಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ವಾಸ್ತವದ ಅರಿವು ಇಲ್ಲದಾಗ ಗೊಂದಲ, ತಳಮಳ ಸಹಜ. ಇಂತಹ ವಿಷಮ ವಾತಾವರಣದಲ್ಲಿ ಮನಸ್ಸಿನ ಶಾಂತಿ, ನೆಮ್ಮದಿಗಳನ್ನು ಕಾಪಾಡಿಕೊಳ್ಳುವ ಮಾರ್ಗಗಳೇನು?

‘ಕೋವಿಡ್-19’ ರ ಬಗ್ಗೆ ಎಚ್ಚರವಿರಲಿ, ‘ಆತಂಕ ಬೇಡ’ ಎಂದು ತಜ್ಞರು ಮೊದಲನೆಯ ದಿನದಿಂದಲೂ ಹೇಳುತ್ತಿದ್ದಾರೆ. ಆದರೆ, ಸಮಾಜದ ಸ್ಥಿತಿ ಇದಕ್ಕೆ ಸಂಪೂರ್ಣ ವಿಲೋಮವಾಗಿದೆ. ಎಚ್ಚರಿಕೆಗಳನ್ನು ಗಾಳಿಗೆ ತೂರಿ, ‘ಮಾಡಬೇಡಿ’ ಎಂಬ ಕೆಲಸಗಳನ್ನು ಬೇಕೆಂದೇ ಮಾಡುತ್ತಾ, ಅಗತ್ಯಕ್ಕಿಂತ ಹೆಚ್ಚಿನ ಆತಂಕಕ್ಕೆ ಒಳಗಾಗುವುದು ಬಹುತೇಕರ ದಿನಚರಿ. ‘ಅಶಿಸ್ತು ಮತ್ತು ಆತಂಕ ಒಟ್ಟಿಗೆ ಸಾಗುತ್ತವೆ’ ಎನ್ನುವ ಮಾತು ವಿಪತ್ತಿನ ಕಾಲದಲ್ಲಿ ಸಾಬೀತಾಗುತ್ತದೆ. ಜೀವನದಲ್ಲಿ ಶಿಸ್ತಿನ ಅಗತ್ಯವನ್ನು ಕೋವಿಡ್-19 ಎನ್ನುವ ಜಾಗತಿಕ ವಿಪತ್ತು ಇನ್ನಿಲ್ಲದಂತೆ ಒತ್ತಿ ಹೇಳಿದೆ; ಪ್ರತಿಯೊಂದು ತಳಿ, ಪ್ರತಿಯೊಂದು ಅಲೆ ಮತ್ತೆ ಮತ್ತೆ ಹೇಳುತ್ತಲೇ ಇವೆ. ಪ್ರಸ್ತುತ ಕೋವಿಡ್ ತಳಿಯೂ ಇದಕ್ಕೆ ಹೊರತಲ್ಲ.

ADVERTISEMENT

ಕಾಯಿಲೆ ಯಾವುದಾದರೂ ಇರಲಿ ಅದರ ತೀವ್ರತೆ ಹೇಗಾದರೂ ಇರಲಿ – ನಮ್ಮ ಮನಸ್ಸು ಮತ್ತು ಚಿಂತನೆಗಳನ್ನು ಅದಕ್ಕೆ ಹೊಂದಿಸಿಕೊಳ್ಳುವುದು ಮುಖ್ಯ. ‘ನಾಳೆ ಏನಾಗಬಹುದು’ ಎನ್ನುವ ಚಿಂತೆ ನಮ್ಮ ಇಂದಿನ ದಿನವನ್ನು ಕೆಡಿಸುತ್ತದೆ. ಹಾಗಾಗಿ, ವರ್ತಮಾನದಲ್ಲಿ ಜೀವಿಸುವುದು ಮುಖ್ಯ. ‘ಈ ದಿನ, ಈ ಗಳಿಗೆ ಕಾಯಿಲೆ ಬಾರದಂತೆ ಮಾಡಲು ಏನು ಮಾಡಬಹುದು’ ಎನ್ನುವ ಪ್ರಶ್ನೆಗೆ ಉತ್ತರಿಸಿ, ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಸೂಕ್ತ. ಸಮಾಜದಲ್ಲಿ ಕಾಯಿಲೆ ಸಾಕಷ್ಟು ಹರಡುತ್ತಿರುವ ವೇಳೆಯಲ್ಲಿ ಎಲ್ಲಾದರೂ ಜನಜಂಗುಳಿಯಲ್ಲಿ ಹೋಗಲು, ಸಮಾರಂಭಗಳಲ್ಲಿ ಭಾಗವಹಿಸಲು ಮನಸ್ಸು ಹಾತೊರೆದಾಗ, ಈ ಪ್ರಶ್ನೆ ನಮ್ಮನ್ನು ಎಚ್ಚರದಿಂದ ಇರುವಂತೆ ಮಾಡುತ್ತದೆ. ಈ ಸರಳವಾದ ‘ವರ್ತಮಾನದಲ್ಲಿ ಚಿಂತಿಸುವ ಪ್ರಕ್ರಿಯೆ’ ಕೋವಿಡ್-19 ಹರಡುವ ಸಮಸ್ಯೆಯಿಂದ ನಮ್ಮನ್ನು ದೂರವಿಡಲು ಸಹಕಾರಿ.

ವಿಪರೀತ ಮಾಹಿತಿ ಹೆಕ್ಕುವಿಕೆ ಗೊಂದಲಗಳಿಗೆ ದೂಡುತ್ತದೆ. ‘ಅತಿ ಸರ್ವತ್ರ ವರ್ಜಯೇತ್’ ಎಂಬ ಮಾತು ಇಲ್ಲಿ ಅನ್ವಯವಾಗುತ್ತದೆ. ಅಂತರ್ಜಾಲದ ಮೇಲೆ ನಿಂತಿರುವ ಪ್ರಸ್ತುತ ಸುದ್ದಿವ್ಯವಸ್ಥೆ ಕ್ಷಣಾರ್ಧದಲ್ಲಿ ನಮಗೆ ಮಾಹಿತಿಯ ಮಹಾಪೂರವನ್ನೇ ಒದಗಿಸುತ್ತದೆ. ಇದರಲ್ಲಿ ಕಾಳು ಯಾವುದು; ಜೊಳ್ಳು ಯಾವುದು; ಸತ್ಯ ಎಷ್ಟು; ಉತ್ಪ್ರೇಕ್ಷೆ ಎಷ್ಟು ಎಂಬುದನ್ನು ನಿರ್ಧರಿಸುವುದು ಎಲ್ಲರಿಗೂ ಸುಲಭವಲ್ಲ. ಅನಧಿಕೃತ, ಅಸತ್ಯ ಮಾಹಿತಿ ಎಂದಿಗೂ ಅಪಾಯಕಾರಿಯೇ. ಮಾಹಿತಿಯ ಪ್ರಮಾಣ ಹೆಚ್ಚಾದಷ್ಟೂ ತಪ್ಪು ಮಾಹಿತಿ ಸೇರುವ ಸಾಧ್ಯತೆ ಅಧಿಕ. ಹೀಗಾಗಿ, ಕೋವಿಡ್-19 ಕಾಯಿಲೆಯ ಬಗ್ಗೆ ಅಧಿಕೃತ ಮಾಹಿತಿ ಪಡೆಯುವುದು ಮುಖ್ಯ. ವಿಶ್ವಾಸಾರ್ಹ ಸರ್ಕಾರಿ ಜಾಲತಾಣಗಳು, ಪರಿಚಯದ ತಜ್ಞ ವೈದ್ಯರು ಈ ಬಗ್ಗೆ ನೆರವಾಗಬಲ್ಲರು. ಹೆಚ್ಚಿನ ಜನರನ್ನು ಆಕರ್ಷಿಸಲು ರೋಚಕ ಮಾಹಿತಿ ನೀಡುವ ಪೈಪೋಟಿಯಲ್ಲಿ ಮನಸ್ಸಿಗೆ ಘಾಸಿಯಾಗುವ ಸುದ್ದಿವಾಹಿನಿಗಳಿಂದ ಸಂಪೂರ್ಣವಾಗಿ ದೂರವಿರುವುದು ಲೇಸು.

ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಕೋವಿಡ್-19ಕ್ಕಿಂತ ತೀವ್ರವಾದ, ಅಪಾಯಕಾರಿಯಾದ ನೂರಾರು ಕಾಯಿಲೆಗಳ ಸಂಕ್ರಮಣವನ್ನು ಈ ಪ್ರಪಂಚ ಈಗಾಗಲೇ ಕಂಡಿದೆ. ಅವುಗಳಿಂದ ಗೆದ್ದವರ ಪೀಳಿಗೆಯವರು ಪ್ರಪಂಚವನ್ನು ಈಗ ಮುನ್ನಡೆಸುತ್ತಿದ್ದಾರೆ. ಈ ಹಿಂದೆ ಆದಂತೆಯೇ ಈಗಲೂ ಕೋವಿಡ್-19ರ ವಿರುದ್ಧ ಗೆಲುವು ಶತಸ್ಸಿದ್ಧ. ಅನಗತ್ಯ ಆತಂಕಕ್ಕೆ ಒಳಗಾಗದಂತೆ ತಾಳ್ಮೆಯಿಂದ, ಜಾಣ್ಮೆಯಿಂದ, ಸರಿಯಾದ ದಾರಿಯಲ್ಲಿ ಇದನ್ನು ನಿರ್ವಹಿಸಿದರೆ ಬಹಳ ಬೇಗ ಇದರಿಂದ ಜಗತ್ತು ಮುಕ್ತವಾಗುತ್ತದೆ. ಈ ವಾಸ್ತವದ ಅರಿವು ಎಲ್ಲರಲ್ಲೂ ಮೂಡಬೇಕು; ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಯತ್ನಶೀಲರಾಗಬೇಕು. ಈ ರೀತಿಯ ಸಾಂಘಿಕ ಪ್ರಯತ್ನದಿಂದ ‘ಕೋವಿಡ್-19’ ಎಂಬ ವಿಪತ್ತನ್ನು ಬೇಗನೆ ಗೆಲ್ಲಬಹುದು.

ಕೋವಿಡ್-19ರ ಅನುಕ್ರಮ ತಳಿಗಳು ಯಾವ ರೀತಿ ವರ್ತಿಸುತ್ತಿವೆ ಎಂಬುದನ್ನು ಗಮನಿಸಿದರೆ, ವೈರಸ್ ಭವಿಷ್ಯದಲ್ಲಿ ರೂಪಾಂತರ ಹೊಂದಬಹುದಾದ ಪ್ರಕ್ರಿಯೆಯನ್ನು ಊಹಿಸಬಹುದು. ಈ ಅಧ್ಯಯನಗಳಿಂದ ವಿಜ್ಞಾನಿಗಳು ಮುಂದಿನ ದಿನಗಳನ್ನು ಕಾಯಿಲೆ ಮುಕ್ತವಾಗಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಹಾದಿಯ ಪ್ರತಿಯೊಂದು ಹೆಜ್ಜೆಯೂ ನಮ್ಮನ್ನು ಸುರಕ್ಷಿತವಾಗಿಸುವತ್ತ ಮುನ್ನಡೆಸುತ್ತಿವೆ. ಈ ಅಧ್ಯಯನಗಳ ಫಲಗಳನ್ನು ಈಗಾಗಲೇ ನಾವು ನೋಡುತ್ತಿದ್ದೇವೆ. ಕಾಯಿಲೆ ಪತ್ತೆ ಮಾಡುವ ವಿಧಾನಗಳು, ಲಸಿಕೆಗಳು, ಔಷಧಗಳು, ಜೀವನಶೈಲಿಯಲ್ಲಿನ ಬದಲಾವಣೆಗಳು ಭವಿಷ್ಯದಲ್ಲಿ ಬರಬಹುದಾದ ಮತ್ತಷ್ಟು ಜಾಗತಿಕ ವಿಪತ್ತುಗಳನ್ನು ಎದುರಿಸುವ ಸಾಮರ್ಥ್ಯವನ್ನು ನಮಗೆ ನೀಡುತ್ತಿವೆ. ಕಷ್ಟಗಳು ಕಲಿಸುವುದನ್ನು ಸುಖ ಕಲಿಸಲಾರದು. ಪ್ರಸ್ತುತ ಕೋವಿಡ್-19 ಇದಕ್ಕೆ ಪ್ರಬಲ ಉದಾಹರಣೆ.

ಕಳೆದ ಎರಡು ವರ್ಷಗಳು ನಮಗೆ ಅನೇಕ ಜೀವನಮೌಲ್ಯಗಳನ್ನು ಕಲಿಸಿವೆ. ಕುಟುಂಬದ ಮಹತ್ವ; ಸಮಾಜದ ಬಗ್ಗೆ ಕಳಕಳಿ; ಅಪರಿಚಿತರಿಗೂ ನೆರವಾಗುವ ಮನೋಭಾವ; ಕಷ್ಟಕರ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ವಿಧಾನಗಳು; ಕಲಿಕೆಯ ಹೊಸ ಸಾಧ್ಯತೆಗಳು; ನಮ್ಮ ಸ್ಥಾಪಿತ ಮನೋವೃತ್ತಿಗಳನ್ನು ಪುನಃ ಪರಿಶೀಲಿಸುವ ಗುಣ; ಆಪ್ತರ ವಿಯೋಗವನ್ನು ಸಹಿಸುವ ಸ್ಥೈರ್ಯ; ಮಾನಸಿಕ ಧೃಢತೆ – ಮುಂತಾದ ಪಾಠಗಳು ಜೀವನದತ್ತ ನಮ್ಮ ನಿಲುವುಗಳನ್ನು ಬದಲಾಯಿಸಿವೆ. ಎಂತಹ ವಿಪತ್ತಿನ ಸಂದರ್ಭಗಳಲ್ಲೂ ಆಶಾಭಾವನೆ ಮತ್ತು ಧನಾತ್ಮಕ ಚಿಂತನೆಗಳು ನಮ್ಮ ವರ್ತಮಾನವನ್ನು ಸಹ್ಯವಾಗಿಸಿ, ಭವಿಷ್ಯವನ್ನು ಸುಂದರವಾಗಿಸುತ್ತವೆ. ಪ್ರಸ್ತುತ ವೈರಸ್ ತಳಿ ಕೋವಿಡ್-19ರ ವಿಪತ್ತಿನ ಅಂತ್ಯದ ಆರಂಭವನ್ನು ಸೂಚಿಸುತ್ತಿದೆ ಎಂದು ತಜ್ಞರ ಅಭಿಮತ. ಈ ಮಾತು ನಿಜವಾಗಲಿ ಎಂಬುದು ಪ್ರತಿಯೊಬ್ಬರ ಮನಸ್ಸಿನ ಆಶಯ.

–ಡಾ.ಕಿರಣ್ ವಿ.ಎಸ್

(ಲೇಖಕ: ವೈದ್ಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.