ಪ್ರಶ್ನೆ 1: ನನ್ನ ತಂಗಿ 5 ತಿಂಗಳ ಗರ್ಭಿಣಿ. ಒಂದೇ ದಿನ ಜ್ವರ ಬಂದಿತ್ತು. ಆಶಾ ಕಾರ್ಯಕರ್ತೆಯರು ಪರೀಕ್ಷಿಸಿ ಕೋವಿಡ್ ಪಾಸಿಟಿವ್ ಎಂದರು. ‘ಮನೆಯಲ್ಲೇ ಇರಿ’ ಎಂದು ಹೇಳಿದ್ದಾರೆ. ವಿಟಮಿನ್ ಮಾತ್ರೆ ಕೊಟ್ಟಿದ್ದಾರೆ. ನನ್ನ ಅಮ್ಮನಿಗೆ 45 ವರ್ಷ, ಅವರಿಗೂ ಕೋವಿಡ್ ಪಾಸಿಟಿವ್ ಬಂದಿದೆ. ಸ್ವಲ್ಪ ಶೀತ, ನೆಗಡಿ ಇದೆ. ನನಗೆ ಹೆದರಿಕೆಯಾಗುತ್ತಿದೆ. ಏನು ಮಾಡಲಿ?
–ರಾಜೇಶ್ವರಿ, ಬೀರೂರು
ಉತ್ತರ: ರಾಜೇಶ್ವರಿಯವರೇ, ಆಶಾ ಕಾರ್ಯಕರ್ತೆಯರು ಹೇಳಿದ ಹಾಗೆ ಏನೂ ತೊಂದರೆ ಇಲ್ಲದಿದ್ದರೆ ಅವರು ಕೊಟ್ಟ ವಿಟಮಿನ್ ಮಾತ್ರೆ ಸೇವಿಸುತ್ತಾ ಮನೆಯಲ್ಲಿರಬಹುದು. ಆದರೆ ಗರ್ಭಿಣಿಯರು ತಜ್ಞ ವೈದ್ಯರ ಸಲಹೆ ಇಲ್ಲದೇ ಯಾವುದೇ ಆ್ಯಂಟಿ ಬಯೋಟಿಕ್ ಮಾತ್ರೆಗಳನ್ನು ಸೇವಿಸಬಾರದು. ಈಗ ಹಲವರು ಅವರಾಗಿಯೇ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಡಾಕ್ಸಿಸೈಕ್ಲಿನ್, ಅಜಿತ್ರೋಮೈಸಿನ್ ಹಾಗೂ ಕೆಲವೊಮ್ಮೆ ಸ್ಟೀರಾಯ್ಡ್ ಮಾತ್ರೆಗಳನ್ನು ಸೇವಿಸುತ್ತಾರೆ. ಇದು ತಪ್ಪು. ಅದರಲ್ಲೂ ಗರ್ಭಿಣಿಯರು ಡಾಕ್ಸಿಸೈಕ್ಲಿನ್ ಮಾತ್ರೆಗಳನ್ನು ಸೇವಿಸಲೇಬಾರದು. ಇದರಿಂದ ಹುಟ್ಟುವ ಮಗುವಿಗೂ ತೊಂದರೆಯಾಗಬಹುದು. ಯಾವುದಕ್ಕೂ ನೀವು ಹಾಗೂ ನಿಮ್ಮ ತಂಗಿ ಮತ್ತು ಅಮ್ಮ ತಜ್ಞರ ಮೇಲ್ವಿಚಾರಣೆಯಲ್ಲಿದ್ದು ಜಾಗರೂಕತೆಯಿಂದಿರಿ. ಅದರಲ್ಲೂ ನಿಮ್ಮ ತಂಗಿಗೆ ಸೋಂಕು ಆರಂಭವಾದ 8ನೇ ದಿನದಿಂದ 15ನೇ ದಿನವರೆಗೆ ಜ್ವರ ಬರುತ್ತಿದ್ದಲ್ಲಿ ಅಥವಾ ಉಸಿರಾಟದ ತೊಂದರೆ ಇದ್ದಲ್ಲಿ ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಲಹೆ, ಚಿಕಿತ್ಸೆ ಪಡೆದುಕೊಳ್ಳಿ. ತಾಯಿಗೆ ಕೋವಿಡ್ ಇದ್ದಾಗ ಮಗುವಿಗೆ ತೊಂದರೆಯಾಗುವ ಸಂಭವ ಅತೀ ಕಡಿಮೆ. ಹೆರಿಗೆಯ ಕ್ರಮದಲ್ಲೂ, ಹೆರಿಗೆಯ ಸಂದರ್ಭದ ಚಿಕಿತ್ಸೆಯಲ್ಲೂ ವ್ಯತ್ಯಾಸವೇನೂ ಇಲ್ಲ. ನಂತರ ಎದೆಹಾಲನ್ನೂ ಎಂದಿನಂತೆ ಕುಡಿಸಬಹುದು. ಆದರೆ ಮುಂಜಾಗ್ರತೆ ಇರಬೇಕು. ತಾಜಾ ಪೌಷ್ಟಿಕ ಆಹಾರ ಸೇವಿಸಿ. ಆತಂಕಗೊಳ್ಳದೆ, ತಪ್ಪದೇ ಮನೆಯಲ್ಲೂ ಕೂಡಾ ಮಾಸ್ಕ್ ಧರಿಸುತ್ತಾ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
**
ಪ್ರಶ್ನೆ 2: ನನಗೆ 18 ವರ್ಷ. ನಾನು ಕಳೆದ 2 ವರ್ಷಗಳಿಂದ ಋತುಚಕ್ರದ ತೊಂದರೆಯಿಂದ ಬಳಲುತ್ತಿದ್ದೆ. ಆದರೆ ಈಗ ಎರಡು ತಿಂಗಳಿಂದ ಸರಿಯಾಗಿದೆ. ಆದರೆ ಮೊದಲ ಸಲ ನನಗೆ ಸೊಂಟದ ನೋವು ಶುರುವಾಗಿದೆ. ಅದು ಕಡಿಮೆ ಆಗ್ತಾ ಇಲ್ಲ. ನಾನು ಈ ಸಮಸ್ಯೆಗೆ ಡಾಕ್ಟರ್ ಸಲಹೆ ಪಡೆದು ಔಷಧ ತೆಗೆದುಕೊಂಡಿದ್ದೆ. ಈಗ ಆಸ್ಪತ್ರೆಗೆ ಹೋಗಲು ಆಗುತ್ತಿಲ್ಲ. ಇದಕ್ಕೆ ಪರಿಹಾರ ತಿಳಿಸಿ.
–ಅನುಷಾ, ಭಟ್ಕಳ
ಉತ್ತರ: ಅನುಷಾರವರೇ, ಮೊದಲೆರಡು ವರ್ಷ ಋತುಚಕ್ರದ ಆರಂಭದಲ್ಲಿ ಋತುಚಕ್ರದ ಏರುಪೇರು ಸಹಜ. ಆದರೆ 18ನೇ ವಯಸ್ಸಿನಲ್ಲಿ ಸೊಂಟದ ನೋವು ಸಹಜವಲ್ಲ. ಋತುಚಕ್ರ ಸಮಯದಲ್ಲಿ ಸ್ವಲ್ಪಮಟ್ಟಿಗೆ ಸೊಂಟ ನೋವು, ಹೊಟ್ಟೆ ನೋವು ಎಲ್ಲ ಸಹಜವೇ. ಯಾಕೆಂದರೆ ಮುಟ್ಟಾಗುವಾಗ ಪ್ರೋಸ್ಟಗ್ಲಾಂಡಿನ್‌ನಂತಹ ಸ್ಥಳೀಯ ಹಾರ್ಮೋನುಗಳು ಒಂದು ರೀತಿಯ ಹೊಟ್ಟೆನೋವು, ಸೊಂಟನೋವು ಇನ್ನಿತರ ಅಸ್ವಸ್ಥತೆಯನ್ನು ಹೆಣ್ಣುಮಕ್ಕಳಲ್ಲಿ ಉಂಟುಮಾಡುತ್ತವೆ. ವೈದ್ಯರ ಸಲಹೆ ಮೇರೆಗೆ ಅವಶ್ಯವಿದ್ದರೆ ನೋವು ನಿವಾರಕ ಔಷಧ ತೆಗೆದುಕೊಂಡರೆ ಕಡಿಮೆ ಆಗುತ್ತದೆ. ಕಡಿಮೆ ಆಗದಿದ್ದಲ್ಲಿ ನೀವು ನಿಮ್ಮ ಸೊಂಟನೋವಿಗೆ ಕಾರಣವನ್ನು ಹುಡುಕಲು ಪ್ರಯತ್ನಿಸಿ. ನೀವು ಕುಳಿತುಕೊಳ್ಳುವ ಭಂಗಿಯೇ ಸರಿಯಿಲ್ಲದಿರ ಬಹುದು, ನೀವು ನಿಲ್ಲುವಾಗ, ಕೂರುವಾಗ ಬೆನ್ನುಹುರಿ ಸದಾ ನೇರವಾಗೇ ಇರಲಿ ಇನ್ನು ಕೆಲವರಲ್ಲಿ ಗರ್ಭಕೋಶವು ಹಿಮ್ಮುಖವಾಗಿ ಬಾಗಿರುತ್ತದೆ (ರೆಟ್ರೋವರ್ಟೆಡ್). ಅಂತಹವರಿಗೂ ಕೂಡ ಈ ತರಹದ ಸೊಂಟ ನೋವು ಬರಬಹುದು. ಯಾವುದಕ್ಕೂ ತಜ್ಞವೈದ್ಯರಿಂದ ಸೂಕ್ತ ತಪಾಸಣೆ ಮಾಡಿಸಿಕೊಂಡು ಅವಶ್ಯವಿದ್ದಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸುವುದು ಒಳ್ಳೆಯದು ಮತ್ತು ಕಟಿಪ್ರದೇಶದ ಸ್ನಾಯುಗಳ (ಪೆಲ್ವಿಕ್ ಪ್ಲೋರ್‌ಮಸಲ್ಸ್) ಬಲವರ್ಧನೆಗಾಗಿ ನಿಯಮಿತವಾಗಿ ಬದ್ದಕೋಣಾಸನ, ಉಪವಿಷ್ಟಕೋಣಾಸನ, ಸೇತುಬಂಧಾಸನ, ಚಕ್ಕಿಚಲನಾಸನ, ಸೂರ್ಯ ನಮಸ್ಕಾರ ಇತ್ಯಾದಿಗಳನ್ನು ದಿನವೂ ಮಾಡಿದರೆ ಅತ್ಯುತ್ತಮ ಲಾಭ ಸಿಗುತ್ತದೆ.
ಪ್ರಶ್ನೆ 3: ನನಗೆ 21 ವರ್ಷ. 150 ಸೆಂ.ಮಿ. ಎತ್ತರ, 49 ಕೆ.ಜಿ ತೂಕವಿದೆ. ನನಗೆ ಪಿಸಿಒಡಿ ಸಮಸ್ಯೆಯಿದ್ದು ಟ್ರೀಟ್‌ಮೆಂಟ್ ಕೂಡಾ ತೆಗೆದುಕೊಂಡಿದ್ದೇನೆ. ನಿಯಮಿತವಾಗಿ ವ್ಯಾಯಾಮ ಮಾಡುತ್ತೇನೆ, ಆರೋಗ್ಯಕರ ಆಹಾರ ಸೇವಿಸುತ್ತೇನೆ. ಆದರೂ ಸಹ ಋತುಚಕ್ರ ನಿಯಮಿತವಾಗಿ ಬರುವುದಿಲ್ಲ ಮತ್ತು ಋತುಚಕ್ರ ಆದಾಗ ಮೊದಮೊದಲು ಸರಿಯಾಗಿ ಋತುಸ್ರಾವ ಆಗುವುದಿಲ್ಲ ಮತ್ತು ಆಮೇಲೆ ಅದು ನಿಲ್ಲವುದೇ ಇಲ್ಲ. ಇದಕ್ಕೆ ಪರಿಹಾರ ಇದೆಯೇ?
-ಅನೂಪ, ಊರಿನ ಹೆಸರಿಲ್ಲ
ಉತ್ತರ: ನಿಮ್ಮ ವಯಸ್ಸಿಗೆ ಹಾಗೂ ಎತ್ತರಕ್ಕೆ ತಕ್ಕನಾಗಿ ನಿಮ್ಮ ತೂಕ 45 ಕೆ.ಜಿ ಇರಬೇಕು. ಈಗ ನಿಮ್ಮ ತೂಕ ಹೆಚ್ಚಿದೆ. ಪಿಸಿಒಡಿ ಸಮಸ್ಯೆಯಲ್ಲಿ ಒಂದು ಬಾರಿ ಚಿಕಿತ್ಸೆ ತೆಗೆದುಕೊಂಡು ಬಿಟ್ಟರೆ ಸಾಕಾಗುವುದಿಲ್ಲ. ನಿರಂತರವಾಗಿ ಉತ್ತಮ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುತ್ತಾ, ಸಮತೂಕ ಕಾಪಾಡಿಕೊಂಡು ಸಮಸ್ಯೆಯನ್ನು ಎದುರಿಸಬೇಕೆ ಹೊರತು ಕೆಲವು ದಿನ ಉತ್ತಮ ಆಹಾರ ಸೇವಿಸಿ, ವ್ಯಾಯಾಮ ಮಾಡಿ ನಂತರ ಬಿಟ್ಟುಬಿಡುವುದಲ್ಲ. ಸದಾ ಕನಿಷ್ಠ ಒಂದು ಗಂಟೆಯಾದರೂ ಉತ್ತಮ ದೈಹಿಕ ಚಟುವಟಿಕೆ, ಪ್ರತಿ ದಿನ ರಾತ್ರಿ ಆರರಿಂದ ಎಂಟು ತಾಸು ನಿದ್ರೆ, ಹೆಚ್ಚು ಪ್ರೊಟೀನ್ ಮತ್ತು ಕಡಿಮೆ ಕೊಬ್ಬು ಮತ್ತು ಶರ್ಕರ– ಪಿಷ್ಠಗಳಿರುವ ಆಹಾರಸೇವನೆ ಇವುಗಳನ್ನು ಬಿಡಬಾರದು. ಯಾಕೆಂದರೆ ಪಿಸಿಒಡಿಯಲ್ಲಿ ಬರೀ ಋತುಚಕ್ರದ ಸಮಸ್ಯೆಯಷ್ಟೇ ಅಲ್ಲ, ನಿರ್ಲಕ್ಷಿಸಿದರೆ, ನಿಯಂತ್ರಣದಲ್ಲಿ ಇಡದಿದ್ದರೆ ಹಾಗೆಯೇ ಮುಂದುವರೆದು ಬಂಜೆತನ, ಟೈಪ್ 2 ಮಧುಮೇಹ, ಏರುರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳ, ನಿದ್ರೆಯಲ್ಲಿ ಉಸಿರಾಟದ ತೊಂದರೆ, ಹಾಗೇಯೇ ಮುಂದುವರೆದು ಎಂಡೋಮೆಟ್ರಿಯಲ್ ಕ್ಯಾನ್ಸರ್‌ವರೆಗೂ ಹಲವು ಸಮಸ್ಯೆಗಳ ಸರಮಾಲೆಯೇ ಉಂಟಾಗಬಹುದು. ಜಾಗರೂಕರಾಗಿರಿ.
ಪ್ರಶ್ನೆ 4: ನನಗೆ 24 ವರ್ಷ. ಮದುವೆಯಾಗಿ 9 ತಿಂಗಳುಗಳಾಗಿವೆ. ಮದುವೆಯಾದ ಮೇಲೆ ಮುಟ್ಟು ಪ್ರತಿ ತಿಂಗಳು 45 ದಿನಕ್ಕೆ ಬರುತ್ತಿತ್ತು. ನಾನು ವೈದ್ಯರ ಸಲಹೆ ತೆಗೆದುಕೊಂಡೆ. ಆದರೂ ಸಹ ಮುಟ್ಟು ಹಾಗೆ ಏರುಪೇರು ಆಗುತ್ತಿದೆ. ಕಳೆದ 2 ತಿಂಗಳಿಂದ ಮುಟ್ಟು ಬಂದಿಲ್ಲ. ನನ್ನ ಗರ್ಭ ಪರೀಕ್ಷೆ ಕೂಡಾ ನೆಗೆಟಿವ್ ಇದೆ. ಇದಕ್ಕೆಪರಿಹಾರ ತಿಳಿಸಿ.
ಉತ್ತರ: ನಿಮಗೆ ಪಿಸಿಒಡಿ ಸಮಸ್ಯೆ ಇರಬಹುದು. ಕೆಲವೊಮ್ಮೆ ಥೈರಾಯಿಡ್ ಹಾರ್ಮೋನ್ ಕಡಿಮೆ ಸ್ರಾವವಾಗುವುದರಿದಲೂ ಈ ರೀತಿ ತೊಂದರೆಯಾಗಬಹುದು. ಮತ್ತೊಮ್ಮೆ ತಜ್ಞ ವೈದ್ಯರನ್ನು ಭೇಟಿಯಾಗಿ, ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ. ಉತ್ತಮ ಜೀವನಶೈಲಿ ಅನುಸರಿಸಿ. ನಿಮ್ಮ ಸಮಸ್ಯೆ ಬಗೆಹರಿಯುತ್ತದೆ.
ಸ್ಪಂದನ...
ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್ ಮುಂತಾದ ಸಮಸ್ಯೆಗಳಿದ್ದರೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.in ಗೆ ಕಳಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.