ADVERTISEMENT

ಬಾಣಂತಿಗೆ ಕೋವಿಡ್‌: ನಿರ್ವಹಣೆ ಹೇಗೆ?

ಡಾ.ವೀಣಾ ಎಸ್‌ ಭಟ್ಟ‌
Published 21 ಮೇ 2021, 19:30 IST
Last Updated 21 ಮೇ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

1. ನನಗೆ 19 ವರ್ಷಕ್ಕೆ ಮದುವೆ, 21ಕ್ಕೆ ಮಗು ಆಗಿದೆ. ಈಗ ನನಗೆ 27 ವರ್ಷ. ಆದರೆ ತೂಕ ಹೆಚ್ಚಳ ಮತ್ತು ಮುಟ್ಟಿನ ಸಮಸ್ಯೆ ಆಗುತ್ತಿದೆ. ನಾನು 158 ಸೆಂ.ಮೀ. ಎತ್ತರ ಇದ್ದು, ತೂಕ 55ರಿಂದ 68 ಕೆಜಿಗೆ ಹೆಚ್ಚಿದೆ. ಒಂದೇ ಮಗು ಇರುವುದರಿಂದ ಫ್ಯಾಮಿಲಿ ಪ್ಲಾನಿಂಗ್ ಅಲ್ಲಿ ಇದ್ದೇವೆ. ತೂಕ ಹೆಚ್ಚಳಕ್ಕೆ ಅದು ಏನಾದರೂ ಕಾರಣವೇ? ಪ್ರತಿದಿನ ಬೆಳಿಗ್ಗೆ 4 ಕಿ.ಮೀ ರನ್ನಿಂಗ್, 4 ಕಿ.ಮೀ ಸೈಕ್ಲಿಂಗ್ ಹೋಗುತ್ತೇನೆ. 6 ತಿಂಗಳಿಂದ ಋತುಚಕ್ರದ ಸಮಯದಲ್ಲಿ ಜ್ವರ ಬರುತ್ತದೆ. ಸ್ರಾವ ಸರಿಯಾಗಿ ಆಗುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಇದೆಯೇ?

ಚೈತ್ರ ಸತೀಶ್, ತುಮಕೂರು

ಉತ್ತರ: ಚೈತ್ರಾರವರೇ, ಕುಟುಂಬ ಯೋಜನೆ ವಿಧಾನವಾಗಿ ಸಂತಾನ ನಿಯಂತ್ರಣ ಗುಳಿಗೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಆ ಕಾರಣವಾಗಿಯೂ ನಿಮ್ಮ ತೂಕ ಹೆಚ್ಚುತ್ತಿರಬಹುದು. ವ್ಯಾಯಾಮದ ಜೊತೆ ತೂಕ ನಿಯಂತ್ರಣದಲ್ಲಿ ಆಹಾರ ಸೇವನೆಯೂ ಬಹಳ ಮುಖ್ಯ. ಅಧಿಕ ತೂಕವನ್ನು ನಿರ್ಣಯಿಸುವುದು ಶೇ 70ರಷ್ಟು ಸಂದರ್ಭದಲ್ಲಿ ಆಹಾರ ಸೇವನೆಯೇ. ಹಿತಮಿತ ಆಹಾರ ಸೇವನೆ ಇರಲಿ. ಹಸಿವೆ ಇಂಗಿಸುವಷ್ಟೇ ಮಾತ್ರ ತಿನ್ನಿ, ಹೊಟ್ಟೆ ಬಿರಿಯುವಷ್ಟಲ್ಲ. ಥೈರಾಯಿಡ್ ಹಾರ್ಮೋನ್‌ಗಳ ಬಗ್ಗೆ ಪರೀಕ್ಷಿಸಿಕೊಳ್ಳಿ. ಥೈರಾಯಿಡ್ ಗ್ರಂಥಿಯ ಸ್ರಾವದ ಏರುಪೇರಿನಲ್ಲೂ ಮುಟ್ಟು ಕಡಿಮೆಯಾಗಬಹುದು ಅಥವಾ ನಿಮಗೆ ಪಿಸಿಒಡಿ ಸಮಸ್ಯೆಯೂ ಇರಬಹುದು. ಋತುಚಕ್ರ ಸಮಯದಲ್ಲಿ ಕೆಲವು ಪ್ರೋಸ್ಟ್ಗ್ರಾಂಡಿನಿಸ್‌ನಂತಹ ಸ್ಥಳೀಯ, ರಾಸಾಯನಿಕಗು ಬಿಡುಗಡೆಯಾಗಿ ಜ್ವರ ಬಂದ ಹಾಗೆ ಅನಿಸಬಹುದು. ಯಾವುದಕ್ಕೂ ತಜ್ಞ ವೈದ್ಯರ ಹತ್ತಿರ ಪರೀಕ್ಷಿಸಿಕೊಳ್ಳಿ.

ADVERTISEMENT

2. ನನಗೆ 60 ವರ್ಷ. ಗರ್ಭಕೋಶ ಸ್ವಲ್ಪ ಜಾರಿದೆ. 1 ವರ್ಷದ ಹಿಂದೆ ಸ್ತ್ರೀರೋಗತಜ್ಞರು ಏನೂ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ನನಗೀಗ ಎರಡು ವಾರಗಳಿಂದ ಸ್ವಲ್ಪ ಬಿಳಿಮುಟ್ಟು ಆಗುತ್ತಿದೆ. ಕೊರೊನಾದಿಂದ ವೈದ್ಯರನ್ನು ಭೇಟಿಯಾಗಲು ಆಗುತ್ತಿಲ್ಲ. ದಯವಿಟ್ಟು ಸಲಹೆ ಕೊಡಿ.

ಶಾರದಾ, ಮಂಡ್ಯ

ಉತ್ತರ: ಗರ್ಭಕೋಶ ಸ್ವಲ್ಪ ಜಾರಿದರೆ ಏನೂ ತೊಂದರೆಯಿಲ್ಲ. ಗರ್ಭಕೋಶ ಪೂರಾ ಹೊರಗೆ ಜಾರಿ ನಿಮ್ಮ ದೈನಂದಿನ ದಿನಚರಿಗೆ ತೊಂದರೆಯಾಗಿದ್ದರೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಿ. ನೀವು ನಿಯಮಿತವಾಗಿ ಕೆಗಲ್ಸ್ ವ್ಯಾಯಾಮವನ್ನು ಮಾಡುತ್ತಿರಿ. ಈ ವ್ಯಾಯಾಮವನ್ನು ಪ್ರತಿಯೊಬ್ಬ ಮಹಿಳೆಯೂ ಚಿಕ್ಕ ವಯಸ್ಸಿನಿಂದಲೇ ಮಾಡುವುದರಿಂದ ಅಸ್ಥಿಕುಹರದ ಸ್ನಾಯುಗಳನ್ನು (ಪೆಲ್ವಿಕ್ ಮಸಲ್ಸ್) ಬಲಿಷ್ಠವಾಗಿಟ್ಟು ಮುಂದೆ ಗರ್ಭಕೋಶ ಜಾರದ ಹಾಗೆ ಮುಂಜಾಗ್ರತೆ ವಹಿಸಬಹುದು. ಇದರ ಜೊತೆಗೆ ಪೌಷ್ಟಿಕ ಸಮತೋಲನ ಆಹಾರವು ಮುಖ್ಯ. ನಿಮಗೆ ಬಿಳಿಮುಟ್ಟು ಆಗುತ್ತಿರುವುದು ಯಾವುದೇ ವಾಸನೆ ಹಾಗೂ ಕಡಿತವಿಲ್ಲದಿದ್ದರೆ ಅದು ಸಹಜ ಬಿಳಿಮುಟ್ಟು. ಅದಕ್ಕೆ ಯಾವುದೇ ಚಿಕಿತ್ಸೆ ಅಗತ್ಯವಿಲ್ಲ. ಕೆಲವೊಮ್ಮೆ 60ನೇ ವಯಸ್ಸಿನಲ್ಲಿ ಈಸ್ಟ್ರೋಜೆನ್ ಹಾರ್ಮೋನ್‌ ಕೊರತೆಯಿಂದ ಕೂಡ ಬಿಳಿಮುಟ್ಟು ಆಗಬಹುದು. ಬ್ಯಾಕ್ಟೀರಿಯಾ ಅಥವಾ ಇನ್ನಿತರ ಸೂಕ್ಷ್ಮಾಣುಜೀವಿಗಳಿಂದ ಸೋಂಕಾಗಿದ್ದರೆ ಬಿಳಿಮುಟ್ಟು ವಾಸನೆಯಿಂದ ಕೂಡಿದ್ದು ಆ ಜಾಗದಲ್ಲಿ ಕೆರೆತವೂ ಉಂಟಾಗಬಹುದು. ನಿಮಗೆ ಮಧುಮೇಹ ಕಾಯಿಲೆ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಯಾವುದಕ್ಕೂ ನಿರ್ಲಕ್ಷಿಸದೇ ತಜ್ಞವೈದ್ಯರನ್ನು ಸಂಪರ್ಕಿಸಿ.

ಕೆಗಲ್ಸ್ ವ್ಯಾಯಾಮ ಮಾಡುವ ವಿಧಾನ ಅಂತರ್ಜಾಲದಲ್ಲಿ ಎಲ್ಲೆಡೆ ಲಭ್ಯ (ಮೂತ್ರ ವಿಸರ್ಜನೆಯನ್ನು ಮಾಡಿ ನಂತರ ಮೂತ್ರ ವಿಸರ್ಜನೆ ಮಾಡುವ ಹಾಗೆ ಮುಕ್ಕಿ ನಂತರ ಮೂತ್ರದ್ವಾರ, ಯೋನಿದ್ವಾರ, ಗುದದ್ವಾರ ಈ ಮೂರನ್ನು ಒಂದೇ ಬಾರಿ ಬಿಗಿಯಾಗಿ ಒಳಗೆ ಹಿಡಿದಿಟ್ಟುಕೊಳ್ಳಬೇಕು. (ಕನಿಷ್ಠ 5 ಸೆಕೆಂಡ್) ನಂತರ ಮಾಂಸಖಂಡಗಳನ್ನು ಸಡಿಲಿಸಬಹುದು. ಹೀಗೆ ಮಾಡುವಾಗ ಹೊಟ್ಟೆಯ ಹಾಗೂ ತೊಡೆಯ ಮಾಂಸಖಂಡಗಳನ್ನು ಉಪಯೋಗಿಸಬಾರದು. ದಿನಕ್ಕೆ 50– 100 ಬಾರಿಯಾದರೂ ಮಾಡಬೇಕು. ಕುಂತಾಗ, ನಿಂತಾಗ, ಮಲಗುವಾಗ ಯಾವಾಗ ಬೇಕಾದರೂ ಮಾಡಬಹುದು.

3. ನನಗೆ 25 ವರ್ಷ. ಒಂದು ತಿಂಗಳ ಗಂಡು ಮಗುವಿನ ಬಾಣಂತಿ. ನನಗೆ ಕೋವಿಡ್ ಪಾಸಿಟಿವ್ ಬಂದಿದೆ. ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಲು ನಿರ್ಧರಿಸಿರುವ ನಾನು ಈ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕೆಂಬ ಗೊಂದಲದಲ್ಲಿದ್ದೇನೆ. ನನ್ನ ಮಗುವಿಗೆ ಸೋಂಕು ತಗುಲದ ಹಾಗೆ ಹೇಗಿರಬೇಕು ಮತ್ತು ನನ್ನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಾನು ಏನೇನು ತಿನ್ನಬೇಕು ಎಂಬುದನ್ನು ತಿಳಿಸಿ.

ಹೆಸರು, ಊರು ತಿಳಿಸಿಲ್ಲ

ಉತ್ತರ: ನಿಮಗೆ ಕೋವಿಡ್ ಪಾಸಿಟಿವ್ ಆಗಿದ್ದರೂ ನೀವು ಇದನ್ನು ಧೈರ್ಯವಾಗಿ ಎದುರಿಸಿ. ಗರ್ಭಧಾರಣೆ, ಬಾಣಂತನದಿಂದ ರೋಗ ನಿರೋಧಕ ಶಕ್ತಿ ಸ್ವಲ್ಪ ಕಡಿಮೆ ಆಗಿರುತ್ತದೆಯಾದರೂ ಹೆದರಿಕೆ, ಗೊಂದಲ ಬೇಡ. ನೀವು ನಿಮ್ಮ ಮನೆಯಲ್ಲೇ ಪ್ರತ್ಯೇಕ ಒಂದು ಕೊಠಡಿಯಲ್ಲಿರಿ ಮತ್ತು ಯಾವುದಾದರೊಂದು ತಜ್ಞವೈದ್ಯರ ಮೇಲ್ವಿಚಾರಣೆಯಲ್ಲಿ ದೂರವಾಣಿ ಮೂಲಕವಾದರೂ ಸಂಪರ್ಕದಲ್ಲಿರಿ. ನಿಮ್ಮ ಮಗುವಿಗೂ ಕೂಡ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡಿಸಿ. ತಾಯಿ ಮಗು ಒಟ್ಟಿಗೆ ಇರಬೇಕು. ಮೊದಲ ಆರುತಿಂಗಳು ನೀವದಕ್ಕೆ ಕೇವಲ ಎದೆಹಾಲು ಮಾತ್ರ ಉಣಿಸುವುದು ಅತ್ಯಂತ ಸುರಕ್ಷಿತ ಹಾಗೂ ಅತಿ ಅಗತ್ಯ. ಎದೆಹಾಲಿನಿಂದ ಮಗುವಿಗೆ ವೈರಸ್ ವರ್ಗಾವಣೆ ಆಗುವ ಸಂಭವ ಕಡಿಮೆ. ಒಮ್ಮೆ ಆದರೂ ವೈರಸ್ ಸೋಂಕು ತೀವ್ರವಾಗಿ ಏನೂ ಇರುವುದಿಲ್ಲ. ಮೊದಲನೆಯ ಸೀಮಿತ ಅಧ್ಯಯನದಲ್ಲಿ ತಾಯಿಗೆ ಸೋಂಕಿದ್ದು ತಾಯಿ-ಮಗುವನ್ನು ಬೇರೆ ಮಾಡಿದಾಗ ಆದ ಅನುಕೂಲಕ್ಕಿಂತ ಅನಾಕೂಲಗಳೇ ಹೆಚ್ಚಾಗಿದೆ ಎನ್ನುವುದು ತಿಳಿದುಬಂದಿದೆ. ಶೇ.80 ರಿಂದ 90ರಷ್ಟು ಜನರಲ್ಲಿ ಕೋವಿಡ್ ಸೋಂಕು ಅತ್ಯಂತ ಸೌಮ್ಯವಾಗಿ ಕೇವಲ ಶೀತ-ನೆಗಡಿ, ಜ್ವರ, ಸ್ವಲ್ಪ ಕೆಮ್ಮು ಬಂದು ಹಾಗೆಯೇ ವಾಸಿಯಾಗಿ ಬಿಡುತ್ತದೆ. ಸೋಂಕುಂಟಾಗಿ ಏಳೆಂಟು ದಿನದಿಂದ 14 ದಿನದವರೆಗೆ ಅತ್ಯಂತ ಕಾಳಜಿಯಿಂದಿರಿ. ಎಂಟನೆಯ ದಿನದ ನಂತರ ಎಲ್ಲಾ ಕೋವಿಡ್ ಸೋಂಕಿತರು ಅತಿ ಜಾಗ್ರತೆಯಿಂದಿರಬೇಕು. ಸ್ವಯಂ ಚಿಕಿತ್ಸೆ ಮಾಡಬಾರದು.

–ಡಾ. ವೀಣಾ ಎಸ್‌. ಭಟ್‌

ಮಗುವನ್ನು ನೀವಿರುವ ರೂಂನಲ್ಲೇ 6 ಅಡಿ ಅಂತರದಲ್ಲಿ ಮಲಗಿಸಿ. ನೀವು ಸರ್ಜಿಕಲ್ ಮಾಸ್ಕ್ ಧರಿಸಿ ಹಾಲುಣಿಸುವಾಗ ಕೆಮ್ಮು, ಸೀನು ಬರದ ಹಾಗೇ ನೋಡಿಕೊಳ್ಳಿ. ಮಾಸ್ಕ್ ಧರಿಸಿದ್ದರೂ ಅಂತಹ ಸಂದರ್ಭದಲ್ಲಿ ಮುಖವನ್ನು ಅಡ್ಡ ತಿರುಗಿಸಿ. ಕೈಗಳನ್ನು ಸೋಪಿನಿಂದ ಆಗಾಗ್ಗೆ ತೊಳೆದುಕೊಳ್ಳಿ. ಅನಗತ್ಯ ಮುಖ, ಮೂಗು ಅನಗತ್ಯವಾಗಿ ಮುಟ್ಟಿಕೊಳ್ಳಬೇಡಿ. ಬಾಣಂತನದಲ್ಲಿ ನೀವು ಸರಿಯಾಗಿ ನೀರು ಸೇವಿಸದಿದ್ದರೆ ಮೂತ್ರ ಸೋಂಕಾಗಿ, ಜ್ವರ ಬಂದರೆ, ಕೋವಿಡ್ ಸೋಂಕು ಜ್ವರವೇ ಅಥವಾ ಯು.ಟಿ.ಐ ಜ್ವರವೋ ಗೊಂದಲವಾಗಬಹುದು ಅದ್ದರಿಂದ 3-4 ಲೀಟರ್ ನೀರು ಪ್ರತಿದಿನ ಕುಡಿಯಬೇಕು.

ನಿಮ್ಮ ಆಹಾರದಲ್ಲಿ ದಿನಾ ಸೇಬು, ಮೂಸಂಬಿ, ಪಪ್ಪಾಯ ಇತ್ಯಾದಿ ಹಣ್ಣುಗಳನ್ನು ಸೇವಿಸಬಹುದು. ಬೀನ್ಸ್, ಕ್ಯಾರೆಟ್, ಬೀಟ್‌ರೂಟ್ ಇನ್ನಿತರ ತರಕಾರಿ, ಹಸಿರು ಸೊಪ್ಪುಗಳನ್ನು ಸಾಕಷ್ಟು ಬಳಸಿ, ಹೆಸರುಕಾಳು ಮೊಳಕೆ ಬರಿಸಿ ಬೇಯಿಸಿ ದಿನಾಲೂ ಸೇವಿಸಬೇಕು. ಸಹಜವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ಆಹಾರದಲ್ಲೇ ಶುಂಠಿ, ಅರಿಸಿನಗಳನ್ನು ಬಳಸಿ. ಪುದಿನ, ತುಳಸಿ, ಬ್ರಾಹ್ಮಿ, ನೆಲನೆಲ್ಲಿ ಇತ್ಯಾದಿಗಳ ಕಷಾಯ ಮಾಡಿಕೊಂಡು ಕುಡಿಯಬಹುದು. ಬಿಸಿನೀರಿನಲ್ಲಿ ಉಪ್ಪು ಹಾಕಿ ಆಗಾಗ್ಗೆ ಗಾರ್ಗಲ್ ಮಾಡುತ್ತಿರಿ. ಸಣ್ಣ-ಪುಟ್ಟ ವ್ಯಾಯಾಮಗಳನ್ನು ಮಾಡಿ. ದೀರ್ಘ ಉಸಿರಾಟ ಅಥವಾ ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡಿ. ದೀರ್ಘ ಉಸಿರಾಟದಿಂದ ಒತ್ತಡ ಕಡಿಮೆ ಮಾಡಿಕೊಳ್ಳುವುದರಿಂದಲೂ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಧ್ಯಾಹ್ನ 11 ರಿಂದ 3 ಗಂಟೆ ಬಿಸಿಲಿನಲ್ಲಿ 15 ರಿಂದ 20 ನಿಮಿಷ ಓಡಾಡಿ. ಸಕಾರಾತ್ಮಕವಾಗಿರಿ. ನೀವು ಕೋವಿಡ್‌ ಅನ್ನು ಧೈರ್ಯವಾಗಿ ಎದುರಿಸಬಹುದು.

ಸಾಕಷ್ಟು ನಿದ್ದೆ ಮಾಡುವುದೂ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮಗು ಮಲಗಿದಾಗೆಲ್ಲಾ ನೀವೂ ಮಲಗಿ ವಿಶ್ರಾಂತಿ ಪಡೆಯಿರಿ. ಎಚ್ಚರವಿದ್ದಾಗ ಮಧ್ಯೆ ಮಧ್ಯೆ ನಡೆದಾಡುತ್ತಾ ಇರುವುದು, ಕೈ ಕಾಲುಗಳ ವ್ಯಾಯಾಮ ಆಗಾಗ ಮಾಡುತ್ತಿದ್ದರೆ ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ (ಡಿ.ವಿ.ಟಿ.) ತಡೆಗಟ್ಟಬಹುದು. ಮದ್ಯಪಾನ, ಧೂಮಪಾನ ದೂರವಿಡಿ. ಉಪ್ಪು, ಸಕ್ಕರೆ, ಮೈದಾ ಬಳಕೆ ಮಿತಗೊಳಿಸಿ.

4. ನನಗೆ 28 ವರ್ಷ. ಮದುವೆಯಾಗಿ ಎರಡು ವರ್ಷಗಳಾಗಿವೆ. ನನಗೆ ಎಕ್ಟೋಪಿಕ್ ಆಗಿ 1 ಟ್ಯೂಬ್ ಇಲ್ಲ. ಇನ್ನೊಂದು ಬ್ಲಾಕ್ ಆಗಿದೆ. ಅದನ್ನು ಓಪನ್ ಮಾಡಲು ಸಾಧ್ಯವೇ ಅಥವಾ ಐವಿಎಫ್ ಮಾಡುವುದು ಒಳ್ಳೆಯದೇ?

ಹೆಸರು ತಿಳಿಸಿಲ್ಲ, ಧಾರವಾಡ

ಉತ್ತರ: ಇನ್ನೊಂದು ಟ್ಯೂಬ್ ಓಪನ್ ಮಾಡಿಸಲು ನೀವು ತಜ್ಞರ ಹತ್ತಿರ ಸೂಕ್ಷ್ಮ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು. ಆದರೆ ಫಲಿತಾಂಶ ನಿರ್ಧಿಷ್ಟ ಹೇಳಲಾಗದು. ನೀವು ಐವಿಎಫ್ ಮೊರೆ ಹೋಗಬಹುದು.

5. ನಾನು ಗರ್ಭಧಾರಣೆಗೆ ಪ್ಲ್ಯಾನ್‌ ಮಾಡುತ್ತಿದ್ದೇನೆ. ನಾನು ಹಾಗೂ ನನ್ನ ಪತಿ ವ್ಯಾಕ್ಸಿನ್ ತೆಗೆದುಕೊಳ್ಳಬಹುದೇ? ಎಷ್ಟು ತಿಂಗಳು ಅಂತರವಿರಬೇಕು?

ಹೆಸರು, ಊರು ತಿಳಿಸಿಲ್ಲ

ಉತ್ತರ: ಖಂಡಿತವಾಗಿಯೂ ನೀವಿಬ್ಬರೂ ವ್ಯಾಕ್ಸಿನ್ ತೆಗೆದುಕೊಳ್ಳಿ. ಇದು ಗರ್ಭಧಾರಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 4 ರಿಂದ 6 ವಾರ ಬೇಕಾದರೆ ಅಂತರ ಕಾಪಾಡಿಕೊಳ್ಳಬಹುದು.

6. ನನ್ನ ಮಾನಸಿಕ ಆರೋಗ್ಯಕ್ಕಾಗಿ ನಾನು ಒಲಿಯಾನ್ಸ್ ಆರ್ಟಿ 5 ಮಾತ್ರೆಗಳನ್ನು ತೆಗೆದುಕೊಂಡಿದ್ದೇನೆ. ನಾನು ತುಂಬಾ ಸೂಕ್ಷ್ಮ ಮನಸ್ಸಿನ ಹುಡುಗಿ. ನನಗೆ ಲೈಂಗಿಕತೆ, ಮದುವೆ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ಅಶುದ್ದತೆಯನ್ನು ನೋಡಿದಾಗ ನನಗೆ ವಾಕರಿಕೆ ಬರುತ್ತದೆ. ನನಗೆ ಋತುಸ್ರಾವವಾದಾಗ ಕೂಡ ವಾಕರಿಕೆ ಬರುತ್ತದೆ. ನನ್ನ ಈ ಎಲ್ಲಾ ಸಮಸ್ಯೆಗಳಿಗೆ ನಾನು ಏನು ಮಾಡಬೇಕು ಎಂಬುದನ್ನು ದಯವಿಟ್ಟು ತಿಳಿಸಿ.

ಹೆಸರು, ಊರು ತಿಳಿಸಿಲ್ಲ

ಉತ್ತರ: ನೀವು ನಿಮ್ಮ ಮಾನಸಿಕ ಆರೋಗ್ಯಕ್ಕೆ ಈಗಾಗಲೇ ಮಾನಸಿಕ ತಜ್ಙರನ್ನು ಭೇಟಿಯಾಗಿ ಚಿಕಿತ್ಸೆ ತೆಗೆದುಕೊಳ್ಳುತ್ತಾ ಇದ್ದೀರಲ್ಲವೇ? ನಿಮಗೆ ಲೈಂಗಿಕತೆಯ ಬಗ್ಗೆ ಆಪ್ತಸಮಾಲೋಚನೆ ಮಾಡುವ ಅಗತ್ಯವಿದೆ. ನಿಮಗೆ ಅಶುದ್ದತೆ ನೋಡಿದಾಗ, ಋತುಸ್ರಾವವಾದಾಗ ಆಗುವ ವಾಕರಿಕೆ ಗೀಳುಮನೋರೋಗದ ಭಾಗವಾಗಿರಬಹುದು. ಕೆಲವೊಮ್ಮೆ ಸ್ಕೀಝೋಫ್ರೇನಿಯಾ ಕಾಯಿಲೆಯಲ್ಲೂ ಈ ತರಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಎಲ್ಲಾ ಸಮಸ್ಯೆಗಳನ್ನೂ ಸೂಕ್ತ ಮಾನಸಿಕ ತಜ್ಞರ ಹತ್ತಿರ, ಆಪ್ತಸಮಾಲೋಚಕರ ಹತ್ತಿರ ವಿವರವಾಗಿ ತಿಳಿಸಿ ಸಲಹೆ, ಚಿಕಿತ್ಸೆ ಪಡೆದುಕೊಳ್ಳಬಹುದು.

ಸ್ಪಂದನ...
ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳಿದ್ದರೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್‌. ಭಟ್‌ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.in ಗೆ ಕಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.