ADVERTISEMENT

ಕೋವಿಡ್‌ ತಡೆಗೆ ಮನೆಯಲ್ಲಿಯೇ ಇದೆ ಮದ್ದು

ಕೊರೊನಾ ಒಂದಷ್ಟು ತಿಳಿಯೋಣ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 18:12 IST
Last Updated 14 ನವೆಂಬರ್ 2020, 18:12 IST
ವಿಶ್ವನಾಥ ಹೆಗಡೆ
ವಿಶ್ವನಾಥ ಹೆಗಡೆ   

ಬೆಂಗಳೂರು: ‘ಕೋವಿಡ್‌ ಎಂಬ ಕಾಯಿಲೆಯು ಮನುಕುಲವನ್ನು ಕಾಡಲಾರಂಭಿಸಿದೆ. ಈ ವೈರಾಣುವಿನ ಬಗ್ಗೆ ಪಾರಂಪರಿಕ ವೈದ್ಯಕೀಯ ಪದ್ಧತಿಗೆ ಸಂಬಂಧಿಸಿದ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ‘ಕಂಡ ಗುತ್ತಿಗೆ ಜ್ವರ’ ಎಂದು ಕರೆಯಲಾಗುತ್ತಿತ್ತು. ಈ ಜ್ವರ ಬಂದಾಗ ನಿರ್ದಿಷ್ಟ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಎಲ್ಲರೂ ಅಸ್ವಸ್ಥರಾಗುತ್ತಿದ್ದರು. ಈ ಮಾದರಿಯ ಜ್ವರಕ್ಕೆ ಪಾರಂ‍ಪರಿಕ ವೈದ್ಯಕೀಯ ಪದ್ಧತಿಯಲ್ಲಿ ಔಷಧವನ್ನೂ ಸಂಶೋಧಿಸಲಾಗಿದೆ’ ಎನ್ನುತ್ತಾರೆ ಪಾರಂಪರಿಕ ವೈದ್ಯರು.

ಕೋವಿಡ್‌ಗೆ ನಿಗದಿತ ಔಷಧ ಈವರೆಗೂ ಸಂಶೋಧಿಸಲ್ಪಟ್ಟಿಲ್ಲ. ಹಾಗಾಗಿ ಪೂರಕ ಚಿಕಿತ್ಸೆಗಳನ್ನು ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತಿದೆ. ಅಲೋಪತಿ ಜತೆಗೆ ವಿವಿಧ ವೈದ್ಯಕೀಯ ಪದ್ಧತಿ ಅಭ್ಯಾಸ ಮಾಡುತ್ತಿರುವ ವೈದ್ಯರು ಸಹ ಈ ಕಾಯಿಲೆಗೆ ಚಿಕಿತ್ಸೆ ಹಾಗೂ ಔಷಧ ಸಂಶೋಧಿಸುತ್ತಿದ್ದಾರೆ. ದೇಶದಲ್ಲಿ ಕೋವಿಡ್‌ ನಿಯಂತ್ರಣ ಮಾಡುವಲ್ಲಿ ಪಾರಂಪರಿಕ ವೈದ್ಯ ಪದ್ಧತಿ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಸ್ವತಃ ಕೇಂದ್ರ ಆರೋಗ್ಯ ಸಚಿವಾಲಯವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ರಾಜ್ಯದಲ್ಲಿ ಕೂಡ ಹಲವು ಪಾರಂಪರಿಕ ವೈದ್ಯರು ಕಾಯಿಲೆಗೆ ಹಾಗೂ ರೋಗನಿರೋಧ ಶಕ್ತಿ ವೃದ್ಧಿಗೆ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧ, ಚೂರ್ಣವನ್ನು ವಿವಿಧ ರೂಪದಲ್ಲಿ ನೀಡುತ್ತಿದ್ದಾರೆ.

‘ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಹಲವು ವಿಧಾನಗಳಿವೆ. ಪ್ರತಿನಿತ್ಯ ಎದ್ದ ತಕ್ಷಣ ನಾಲ್ಕು ತುಳಸಿ ಎಲೆಗಳನ್ನು ಜಗಿಯುವುದರಿಂದ ವೈರಾಣುಗಳು ನಮ್ಮ ದೇಹದ ಮೇಲೆ ದಾಳಿ ಮಾಡುವುದನ್ನು ತಡೆಯಲು ಸಾಧ್ಯ. ಬಜೆ ಎಂಬ ಗಿಡಮೂಲಿಕೆಯ ಸಣ್ಣ ತುಂಡನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ಕೂಡ ರೋಗನಿರೋಧ ಶಕ್ತಿ ವೃದ್ಧಿಯಾಗುತ್ತದೆ. ಊಟವಾದ ಬಳಿಕ ಒಂದು ಬೆಳ್ಳುಳ್ಳಿ ಎಸಳನ್ನು ಜಗಿದು, ನೀರು ಕುಡಿದರೆ ವೈರಾಣುಗಳು ಸಾಯಲಿವೆ’ ಎಂದು ಶಿರಸಿಯ ಶಕ್ತಿ ಆಯುರ್ವೇದ ಕೇಂದ್ರದ ಪಾರಂಪರಿಕ ವೈದ್ಯರಾದ ವಿಶ್ವನಾಥ ಹೆಗಡೆ ತಿಳಿಸಿದರು.

ADVERTISEMENT

ಸರ್ಕಾರವು ಆದ್ಯತೆ ನೀಡಲಿ: ‘ಶುಂಠಿ, ದಾಲ್ಚಿನಿ ಚಕ್ಕೆ, ತುಳಸಿ ಹಾಗೂ ಕಾಳು ಮೆಣಸಿನ ಕಷಾಯವನ್ನು ಪ್ರತಿನಿತ್ಯ ಕುಡಿಯುವುದರಿಂದಲೂ ರೋಗನಿರೋಧಕ ಶಕ್ತಿ ಹೆಚ್ಚಲಿದೆ. ಕಾಳು ಮೆಣಸು, ಶುಂಠಿ, ಜೀರಿಗೆ, ಬೆಳ್ಳುಳ್ಳಿ, ಪುದಿನ ಸೇರಿದಂತೆ ಔಷಧ ಗುಣಗಳುಳ್ಳ ಪದಾರ್ಥಗಳನ್ನು ಜಗಿದು, ಅದರ ರಸವನ್ನು ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ಕದಂಬ ಮರದ ಚಕ್ಕೆ, ಕಟುಕಿ, ಕೊತ್ತಂಬರಿ ಹಾಗೂ ಜೀರಿಗೆ ಮಿಶ್ರಣದ ಕಷಾಯವನ್ನು ಸೇವಿಸಿದಲ್ಲಿ ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಯಬಹುದಾಗಿದೆ. ಅಮೃತ ಬಳ್ಳಿಯ ಕಷಾಯಕ್ಕೆ ಹಾಲು ಹಾಗೂ ಸಕ್ಕರೆ ಮಿಶ್ರಣ ಮಾಡಿ, ಸೇವಿಸಬಹುದಾಗಿದೆ. ಈ ಸಂದರ್ಭದಲ್ಲಿ ಪಾಲಕ್‌ ಸೇರಿದಂತೆ ವಿವಿಧ ಸೊಪ್ಪಿನ ಪದಾರ್ಥಗಳನ್ನು ಹೆಚ್ಚಾಗಿ ಬಳಸಬೇಕು. ನಿಯಮಿತವಾಗಿ ಹಣ್ಣುಗಳನ್ನು ಸೇವಿಸಬೇಕು‌‌’ ಎಂದರು.

‘ಪಾರಂಪರಿಕ ವೈದ್ಯಕೀಯ ಪದ್ಧತಿ ವಿಧಾನದ ಮೂಲಕ ನ್ಯುಮೋನಿಯಾ ಜತೆಗೆ ಕೋವಿಡ್‌ ಲಕ್ಷಣಗಳನ್ನು ಎದುರಿಸುತ್ತಿರುವವರಿಗೆ ಕಾಯಿಲೆ ವಾಸಿಮಾಡಿದ್ದೇವೆ. ಈ ಪದ್ಧತಿಯಲ್ಲಿಯೂ ನಿರಂತರ ಸಂಶೋಧನೆ ಮಾಡಲಾಗುತ್ತಿದೆ. ಕೋವಿಡ್‌ನಂತಹ ಕಾಯಿಲೆಯನ್ನು ಎದುರಿಸಬೇಕಾದರೆ ಸರ್ಕಾರವು ಎಲ್ಲ ವೈದ್ಯಕೀಯ ಪದ್ಧತಿಯನ್ನೂ ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.