ADVERTISEMENT

ಕ್ಷೇಮ– ಕುಶಲ | ಡೆಂಗಿಗೆ ಸೊಳ್ಳೆಗಳೇ ಬಲ

ಡಾ.ಕುಶ್ವಂತ್ ಕೋಳಿಬೈಲು
Published 8 ಜುಲೈ 2024, 21:30 IST
Last Updated 8 ಜುಲೈ 2024, 21:30 IST
<div class="paragraphs"><p>ಸಾಂಕೇತಿಕ ಚಿತ್ರ&nbsp;</p></div>

ಸಾಂಕೇತಿಕ ಚಿತ್ರ 

   

ಕೆಲವು ಕಾಯಿಲೆಗಳಿಗೂ ಮತ್ತು ಭೂಮಿಯ ಮೇಲೆ ಮನುಷ್ಯನ ನಡವಳಿಕೆಗಳಿಗಳಿಗೂ ನೇರವಾದ ಸಂಬಂಧವಿದೆ. ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ಬರುವ ಹೆಚ್ಚಿನ ಸಾಂಕ್ರಾಮಿಕ ಕಾಯಿಲೆಗಳು ಈಗ ಉತ್ತಮವಾದ ಆ್ಯಂಟಿಬಯಾಟಿಕ್ ಮತ್ತು ಲಸಿಕೆಗಳ ಕಾರಣದಿಂದ ಕಡಿಮೆಯಾಗಿವೆ. ಸಾಂಕ್ರಾಮಿಕ ಕಾಯಿಲೆಗಳ ಪೈಕಿ ಮಾರಣಾಂತಿಕ ಕಾಯಿಲೆಗಳಾದ ಸಿಡುಬು ಮುಂತಾದ ಕೆಲವು ರೋಗಗಳು ಭೂಮಿಯ ಮೇಲಿಂದ ಕಣ್ಮರೆಯಾಗಿಸುವಲ್ಲಿ ವೈದ್ಯಕೀಯ ತಂತ್ರಜ್ಞಾನವು ಯಶಸ್ವಿಯಾಗಿವೆ. ಆದರೆ ಕಳೆದ ಐವತ್ತು ವರ್ಷಗಳಲ್ಲಿ ‘ಪ್ಲೇವಿ’ ವೈರಸ್ ಸಮೂಹಕ್ಕೆ ಸೇರಿದ ‘ಡೆಂಗಿ’ ಎಂಬ ವೈರಸ್ ಉಂಟು ಮಾಡುವ ಡೆಂಗ್ಯೂ ಕಾಯಿಲೆಯು ಸುಮಾರು ಮೂವತ್ತು ಪಟ್ಟು ಹೆಚ್ಚಾಗಿದೆ. ಪ್ರಪಂಚದ ಸುಮಾರು ನೂರಹತ್ತು ದೇಶಗಳಲ್ಲಿ ತಲೆನೋವಾಗಿರುವ ಈ ಕಾಯಿಲೆಯು ಸುಮಾರು ನಾಲ್ಕು ಕೋಟಿ ಜನರನ್ನು ಪ್ರತಿ ವರ್ಷ ಬಾಧಿಸುತ್ತದೆ. ಭಾರತದ ಕೊಲ್ಕೊತಾದಲ್ಲಿ 1964ನೇ ಇಸವಿಯಲ್ಲಿ ಮೊದಲ ಬಾರಿಗೆ ಪತ್ತೆಯಾದ ಡೆಂಗಿ ಇಂದು ಪ್ರತಿ ವರ್ಷ ಲಕ್ಷಾಂತರ ಭಾರತೀಯರಿಗೆ ಸೋಂಕನ್ನು ಉಂಟುಮಾಡುತ್ತಿದೆ. ಕೃಷಿ ಮತ್ತು ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುವವರನ್ನು ಹೆಚ್ಚಾಗಿ ಬಾಧಿಸುವ ಡೆಂಗಿ ವೈರಸ್ ಇಂದು ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ತನ್ನ ಸೋಂಕನ್ನು ಹರಡುತ್ತಿದೆ.

ಕಳೆದ ಐವತ್ತು ವರ್ಷಗಳಲ್ಲಿ ಹೆಚ್ಚಾದ ನಗರೀಕರಣ, ಪರಿಸರಮಾಲಿನ್ಯ, ಜಾಗತಿಕ ತಾಪಮಾನದ ಏರಿಕೆ, ಹೆಚ್ಚಾಗುತ್ತಿರುವ ಸ್ಲಮ್ ಪ್ರದೇಶಗಳು – ಮುಂತಾದ ಕಾರಣಗಳು ಡೆಂಗಿ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿವೆ. ಡೆಂಗಿ ವೈರಸ್ಸನ್ನು ಹರಡುವ ‘ಈಡೀಸ್ ಈಜಿಪ್ಟಿ’ ಸೊಳ್ಳೆಗಳು ಹಡಗು ಅಥವಾ ವಿಮಾನದ ಮೂಲಕ ಪ್ರಪಂಚದ ಮೂಲೆ ಮೂಲೆಗೂ ತಲುಪಿದ್ದಿರಬೇಕು.  ದಕ್ಷಿಣ ಅಮೆರಿಕಾ, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದ ದೇಶಗಳಲ್ಲಿ ಡೆಂಗ್ಯು ಹರಡಲು ಇದು ಪ್ರಮುಖ ಪಾತ್ರವನ್ನು ವಹಿಸಿದ್ದಿರಬೇಕು. ಕಾಲುಗಳ ಮತ್ತು ಬೆನ್ನಿನ ಮೇಲೆ ಬಿಳಿಕಲೆಗಳಿರುವ ‘ಈಡೀಸ್ ಈಜಿಪ್ಟಿ’ ಎಂಬ ಪುಟ್ಟ ಸೊಳ್ಳೆಯು ಡೆಂಗಿ ಜ್ವರ ಮಾತ್ರವಲ್ಲದೆ ಚಿಕನ್ ಗುನ್ಯಾ,‌ ಹಳದಿ ಜ್ವರ ಮತ್ತು ಝಿಕಾ ವೈರಸ್ ಸೋಂಕನ್ನೂ ಹರಡುತ್ತದೆ. ಈ ಸೊಳ್ಳೆಯ ಒಟ್ಟು ಸಂಚಾರವು ಸುಮಾರು ಇನ್ನೂರು ಮೀಟರುಗಳ ಒಳಗಿದ್ದು, ಇದು ಅರಣ್ಯ ಮತ್ತು ನಗರಪರಿಸರ ಎರಡರಲ್ಲೂ ಜೀವಿಸಬಲ್ಲದು. ತಾಪಮಾನ ಕಡಿಮೆಯಾದಂತೆ ಈ ಸೊಳ್ಳೆಯ ಆಯುಷ್ಯವು ಕಡಿಮೆಯಾಗುವ ಕಾರಣ ಏರುತ್ತಿರುವ ಜಾಗತಿಕ ತಾಪಮಾನದ ಕಾರಣದಿಂದ ಈ ಸೊಳ್ಳೆಯ ಜೀವಿತಾವಧಿಯು ಹೆಚ್ಚಾಗುತ್ತಿದೆ. ಈ ಕಾರಣ ಡೆಂಗಿ ಪ್ರಕರಣಗಳು ಜಾಗತಿಕ ಮಟ್ಟುದಲ್ಲಿ ಹೆಚ್ಚಾಗುತ್ತಿವೆ. ಬೆಳೆಯುತ್ತಿರುವ ನಗರಗಳಲ್ಲಿ ಸದಾ ಕಾಲ ನಡೆಯುವ ಕಟ್ಟಡ ಕಾಮಗಾರಿಯ ಕಾರಣದಿಂದ‌‌ ಉಂಟಾಗುವ ನಿಂತ ನೀರು ಈ ಸೊಳ್ಳೆಗಳಿಗೆ ಉತ್ತಮ ಆಶ್ರಯತಾಣವಾಗಿದೆ. ಆಕಾಲಿಕ ಮಳೆ ಬಂದ ನಂತರ ನೀರು ತುಂಬಿಕೊಳ್ಳುವ ಪ್ರದೇಶಗಳಲ್ಲಿಯೂ ಈ ಸೊಳ್ಳೆಗಳು ಹೆಚ್ಚಾದ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ಆದುದರಿಂದಲೇ ಜೂನ್ ತಿಂಗಳಿಂದ ಹಿಡಿದು ಸೆಪ್ಟೆಂಬರ್ ತಿಂಗಳ ತನಕ ಭಾರತದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ.

ADVERTISEMENT

ಕಳಪೆ ಚರಂಡಿ ವ್ಯವಸ್ಥೆ, ಶುಚಿತ್ವದ ಕೊರತೆಯಿರುವ ಕೊಳಚೆ ಪ್ರದೇಶಗಳು ಕೂಡ ಈಡೀಸ್ ಈಜಿಪ್ಟಿ ಸೊಳ್ಳೆಗಳಿಗೆ ಸಹಕಾರಿಯಾಗುವ ಜಾಗ. ಈ ಕಾರಣಗಳಿಂದ ಡೆಂಗಿ ರೋಗವನ್ನು ತಡೆಗಟ್ಟುವಲ್ಲಿ‌‌ ಅರೋಗ್ಯ ಇಲಾಖೆಗಿಂತ ಹೆಚ್ಚಿನ ಜವಾಬ್ದಾರಿ ನಗರಪಾಲಿಕೆಯ ಮೇಲಿರುತ್ತದೆ. ಈಡೀಸ್ ಈಜಿಪ್ಟಿ ಸೊಳ್ಳೆಯು ಡೆಂಗಿ ರೋಗಿಯ ರಕ್ತವನ್ನು ಹೀರಿದ ಸುಮಾರು ಹತ್ತರಿಂದ ಹದಿನಾಲ್ಕು ದಿನಗಳಲ್ಲಿ ಸೊಳ್ಳೆಯ ದೇಹದಲ್ಲಿ ಡೆಂಗಿ ವೈರಸ್ ಉತ್ಪತ್ತಿಯಾಗುತ್ತದೆ. ತದನಂತರ ಆ ಸೊಳ್ಳೆಯು ಆರೋಗ್ಯವಂತರಿಗೆ ಕಚ್ಚುವ ಮೂಲಕ ಅವರ ದೇಹದೊಳಗೆ ಡೆಂಗಿ ವೈರಸ್ಸನ್ನು ಸೇರಿಸಿ ಡೆಂಗ್ಯೂ ಜ್ವರವನ್ನು ಉಂಟುಮಾಡಬಲ್ಲದು.

ಡೆಂಗಿ ಒಂದು ವೈರಲ್ ಕಾಯಿಲೆಯಾಗಿರುವ ಕಾರಣ. ವೈರಸ್‌ ಇಡೀ ದೇಹವನ್ನು ವ್ಯಾಪಿಸಿ ತೀವ್ರವಾದ ಜ್ವರ, ಮೈಕೈ ನೋವು ಮತ್ತು ತಲೆನೋವನ್ನು ಉಂಟುಮಾಡಬಲ್ಲದು. ವಾಂತಿ ಮತ್ತು ಹೊಟ್ಟೆನೋವು ಕಂಡು ಬರುವ ಡೆಂಗಿರೋಗಿಗಳು ಹೆಚ್ಚಿನ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಡೆಂಗಿರೋಗಿಗಳಿಗೆ ಎಲ್ಲಿಯ ತನಕ ತೀವ್ರಪ್ರಮಾಣದ ಜ್ವರವಿರುತ್ತದೆಯೊ ಅಲ್ಲಿಯ ತನಕ ಅವರಲ್ಲಿ ರಕ್ತಸ್ರಾವ ಅಥವಾ ತೀವ್ರವಾದ ಅಸ್ವಸ್ಥತೆಗೆ ಗುರಿಯಾಗುವುದಿಲ್ಲ. ಡೆಂಗಿಜ್ವರ ನಿಂತ ನಂತರದ ಎರಡು ಮೂರು ದಿನಗಳು ರೋಗಿಯ ಆರೋಗ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ದಿನಗಳಾಗಿರುತ್ತದೆ. ಶೇ. 90ರಷ್ಟು ಜನರು ಯಾವುದೇ ಚಿಕಿತ್ಸೆಯಿಲ್ಲದೆ ಸುಧಾರಿಸಿಕೊಳ್ಳಬಲ್ಲರು. ಅದರೆ ಉಳಿದವರ ದೇಹದಲ್ಲಿ ರಕ್ತನಾಳಗಳು ರಕ್ತವನ್ನು ಒಳಗಡೆ ಹಿಡಿದಿಟ್ಟುಕೊಳ್ಳುವುದರಲ್ಲಿ ವಿಫಲವಾಗುವ ಕಾರಣ, ಅಂತಹ ರೋಗಿಗಳಲ್ಲಿ ರಕ್ತದೊತ್ತಡ ತೀವ್ರಗತಿಯಲ್ಲಿ ಕುಸಿಯಬಹುದು. ರಕ್ತನಾಳಗಳ ಸೋರಿಕೆಯ ಜೊತೆ ಜೊತೆಗೆ ಪ್ಲೇಟ್‌ಲೆಟ್ ಕಣಗಳು ಕಡಿಮೆಯಾಗುವುದರಿಂದ ದೇಹದೊಳಗೆ ರಕ್ತಸ್ರಾವವಾಗಬಹುದು. ಇಂತಹ ರೋಗಿಗಳನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಸೂಕ್ತ ಪ್ರಮಾಣದ ನೀರಿನಾಂಶವನ್ನು ನೀಡಿ ಅವರ ದೇಹದೊಳಗೆ ರಕ್ತದ ಪ್ರಮಾಣ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬೇಕು. ಹೆಚ್ಚಿನ ರೋಗಿಗಳು ಕಡೆ ಗಳಿಗೆಯಲ್ಲಿ ರಕ್ತದೊತ್ತಡ ತೀವ್ರವಾಗಿ ಕುಸಿದಿರುವ ಸಂದರ್ಭಗಳಲ್ಲಿ ಆಸ್ಪತ್ರೆಗೆ ತಲುಪುವ ಕಾರಣದಿಂದ ಡೆಂಗಿಗೆ ಬಲಿಯಾಗುತ್ತಾರೆ.

ಡಯಾಬಿಟಿಸ್, ರಕ್ತದೊತ್ತಡ, ಲಿವರ್ ಸಂಬಂಧಿ ಕಾಯಿಲೆಗಳನ್ನು ಹೊಂದಿರುವವರು; ಗರ್ಭಿಣಿಯರು ಮತ್ತು ಚಿಕ್ಕಮಕ್ಕಳಲ್ಲಿ ಡೆಂಗಿ ಹೆಚ್ಚು ಮಾರಣಾಂತಿಕವಾಗಬಲ್ಲದು. ಡೆಂಗಿ ವೈರಸ್ಸಿನಲ್ಲಿ ನಾಲ್ಕು ಪ್ರಬೇಧಗಳಿರುವ ಕಾರಣ ಈ ವೈರಲ್ ಕಾಯಿಲೆಗೆ ಸೂಕ್ತವಾದ ಲಸಿಕೆ ಇನ್ನು ಲಭ್ಯವಿಲ್ಲ. ಈಡೀಸ್ ಈಜಿಪ್ಟಿ ಸೊಳ್ಳೆಯು ಹಗಲಿನ ವೇಳೆ ಕಚ್ಚುವ ಕಾರಣದಿಂದ ರಾತ್ರಿಯ ವೇಳೆ ಮಾತ್ರ ಕಾಯಿಲ್ ಅಥವಾ ಸೊಳ್ಳೆ ಪರದೆ ಬಳಸುವವರು ಸುರಕ್ಷಿತರಲ್ಲ. ಮಳೆಗಾಲ ಬಂತೆಂದರೆ ಡೆಂಗ್ಯೂ ಹರಡುವ ಸೊಳ್ಳೆಯೂ ಬಂತೆಂಬ ಅರ್ಥವಿರುವ ಕಾರಣ ಡೆಂಗಿ ಕಾಣಿಸಿಕೊಂಡ ಪ್ರದೇಶದಲ್ಲಿ ಜನರು ಹೆಚ್ಚು ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.