ಏನಿದು ಗೆಸ್ಟೇಷನಲ್ ಡಯಾಬಿಟಿಸ್ ?
ಇದನ್ನು ಗರ್ಭಧಾರಣೆಯ ಮಧುಮೇಹ ಎಂದೂ ಹೇಳಬಹುದು. ಮಹಿಳೆಗೆ ಗರ್ಭಧಾರಣೆಯ ಪೂರ್ವದಲ್ಲಿ ಊಹೂಂ ! ಒಂದಿನಿತೂ ಮಧುಮೇಹ ರೋಗದ ಲಕ್ಷಣಗಳಿರುವುದಿಲ್ಲ. ಆದರೆ, ಗರ್ಭ ಧರಿಸಿ ಕೆಲವೇ ತಿಂಗಳಲ್ಲಿ ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯಂಶ ಸೇರಿಕೊಂಡು ಗರ್ಭಿಣಿಗೂ, ಭ್ರೂಣಕ್ಕೂ ತೊಂದರೆ ಉಂಟು ಮಾಡಬಹುದು.
ಏನು ಕಾರಣ?
ನಿರ್ದಿಷ್ಟ ಕಾರಣವನ್ನು ಇಂದಿಗೂ ಪತ್ತೆ ಹಚ್ಚಲು ಸಾಧ್ಯವಿಲ್ಲ. ಗರ್ಭಧಾರಣೆಯ ನಂತರ ವಿವಿಧ ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತವೆ. ಆರಂಭದಲ್ಲಿ ಯಾವುದೇ ಲಕ್ಷಣಗಳು ಕಂಡು ಬರದೇ ಹೋಗಬಹುದು. ನಂತರ ಅತಿಯಾದ ಬಾಯಾರಿಕೆ, ಮೂತ್ರವಿಸರ್ಜನೆ, ಆಯಾಸ, ದಣಿವು, ಮಂದದೃಷ್ಟಿ ಕಾಣಿಸಬಹುದು.
ಅಪಾಯವೇನು?
ಹುಟ್ಟು ಮಗು ‘ ಬಿನ್ ಬೇಬಿ’ ಆಗಬಹುದು. ಕೂಸಿನ ಗಾತ್ರ ಅತಿ ಹೆಚ್ಚಾಗಿ, ಹೆರಿಗೆ ಸಮಯದಲ್ಲಿ ವಿಪರೀತ ತೊಂದರೆ ಉಂಟಾಗಬಹುದು. ಶಿಶುವಿಗೆ ರಕ್ತದಲ್ಲಿ ಕಡಿಮೆ ಸಕ್ಕರೆಯಂಶ ಉಂಟಾಗುತ್ತದೆ. ಜಾಂಡೀಸ್ ಅಥವಾ ಕಾಮಾಲೆ (ಹಳದಿ ರೋಗ) ಬರಬಹುದು.
ಹೆರಿಗೆಯ ನಂತರದ ಹೇಗಿರಬೇಕು?
ಗರ್ಭಿಣಿಯರಿಗೆ ಮಧುಮೇಹ ಬಂದರೆ ಹೆರಿಗೆ ನಂತರ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಹಚ್ಚು. ಇನ್ನು ಕೆಲವರಿಗೆ ಟೈಪ್ 1 ಮಧುಮೇಹ ಬರಬಹುದು. ಇಂಥ ಸಂದರ್ಭದಲ್ಲಿ ಅದಕ್ಕಾಗಿಯೇ ಚಿಕಿತ್ಸೆ ತೆಗೆದುಕೊಳ್ಳಬಹುದು. ಇಷ್ಟು ಸಾಲದೆಂಬಂತೆ ಹುಟ್ಟಿದ ಮಗುವಿಗೆ ಬೊಜ್ಜು ಬಂದೀತು. ಮುಂದೆ ಇಂಥ ಮಗುವಿನಲ್ಲಿಯೂ ಮಧುಮೇಹ ಬಂದರೆ ಆಶ್ಚರ್ಯವೇನಿಲ್ಲ.
ಜಾಗ್ರತೆ ವಹಿಸುವುದು ಹೇಗೆ?
ಗರ್ಭಿಣಿಯರು ಹಿತಮಿತವಾದ ಆಹಾರ ಸೇವಿಸಿ. ಕಾಲ್ನಡಿಗೆ, ವ್ಯಾಯಾಮಗಳಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. 35 ಮೀರುವ ಮುನ್ನವೇ ಗರ್ಭ ಧರಿಸಿ. ಆಧುನಿಕ ಜೀವನ ಶೈಲಿ, ಮಾನಸಿಕ ಒತ್ತಡ, ಜಂಕ್ ಆಹಾರ ಸೇವನೆಯಿಂದ ಆದಷ್ಟು ದೂರವಿರಲು ಪ್ರಯತ್ನಿಸಿ. ವಂಶಪಾರಂಪರ್ಯವಾಗಿ ಈ ಸಮಸ್ಯೆ ಇದ್ದರೆ ಹೆಚ್ಚು ಮುತುವರ್ಜಿ ವಹಿಸುವುದು ಮುಖ್ಯ. ಅದರಲ್ಲಿಯೂ ಗರ್ಭ ಧರಿಸುವುದಕ್ಕೂ ಮುನ್ನ ಹೆಣ್ಣುಮಕ್ಕಳು ಸ್ತ್ರೀರೋಗತಜ್ಞರ ಬಳಿ ಆಪ್ತಸಮಾಲೋಚನೆ ನಡೆಸುವುದು ಒಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.