ಮೆಟ್‌ಫಾರ್ಮಿನ್ ಎಂಬ ಔಷಧವನ್ನು ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಮಾಡಲು ನೀಡಲಾಗುತ್ತದೆ. ಎರಡನೇ ಹಂತದ ಮಧುಮೇಹದ ಚಿಕಿತ್ಸೆಗಾಗಿ ಆಹಾರ ಪದ್ಧತಿ, ಜೀವನ ಶೈಲಿಯ ಬದಲಾವಣೆಗಳ ಸಲಹೆಯೊಂದಿಗೆ ವೈದ್ಯರು ಈ ಔಷಧವನ್ನು ಸೂಚಿಸುತ್ತಾರೆ.
ಉರಿಯೂತದ ವಿರುದ್ಧದ ಮೆಟ್‌ಫಾರ್ಮಿನ್‌ನ ಕಾರ್ಯವಿಧಾನವು ಶ್ವಾಸಕೋಶದ ಉರಿಯೂತವನ್ನೂ ಕಡಿಮೆ ಮಾಡುತ್ತದೆ. ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ಇಲಿಗಳ ಮೇಲೆ ನಡೆದ ಪ್ರಯೋಗದಲ್ಲಿ ಇದು ಖಚಿತವಾಗಿದೆ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್ ಡಿಯಾಗೋ (ಯುಸಿಎಸ್‌ಡಿ) ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರ ತಂಡ ನಡೆಸಿರುವ ಅಧ್ಯಯನದಲ್ಲಿ ಇದು ಗೊತ್ತಾಗಿದೆ. ಅಧ್ಯಯನ ವರದಿಯನ್ನು ‘ಇಮ್ಯೂನಿಟಿ’ ಎಂಬ ಅಂತರ್ಜಾಲ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.
ತೀವ್ರ ಉಸಿರಾಟದ ತೊಂದರೆಯ ಸಮಸ್ಯೆ (Acute Respiratory Distress Syndrome–ARDS) ಇದ್ದ ಇಲಿಗಳನ್ನು ಈ ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿದೆ. ಎಆರ್‌ಡಿಎಸ್ ಅಂದರೆ, ಶ್ವಾಸಕೋಶದಲ್ಲಿ ದ್ರವದ ಸೋರಿಕೆ ಉಂಟಾಗಿ, ಉಸಿರಾಟ ಕಷ್ಟಕರವಾಗುವುದು ಮತ್ತು ಇತರ ಅಂಗಗಳಿಗೆ ಆಮ್ಲಜನಕ ಪೂರೈಕೆ ಇಲ್ಲವಾಗುವುದು.
ಬಹುತೇಕ ಪ್ರಕರಣಗಳಲ್ಲಿ ಕೋವಿಡ್ ರೋಗಿಗಳ ಸಾವಿಗೆ ಎಆರ್‌ಡಿಎಸ್ ಸಮಸ್ಯೆ ಕಾರಣವಾಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.
ನ್ಯುಮೋನಿಯಾ, ಎಆರ್‌ಡಿಎಸ್‌ಗೆ ಕಾರಣವಾಗುವ ಬ್ಯಾಕ್ಟೀರಿಯಾದ ಎಂಡೋಟಾಕ್ಸಿನ್‌ಗೆ ತೆರೆದುಕೊಳ್ಳುವುದಕ್ಕೂ ಮೊದಲು ಅಥವಾ ನಂತರ ಇಲಿಗಳಿಗೆ ಮೆಟ್‌ಫಾರ್ಮಿನ್ ನೀಡಿ ಪ್ರಯೋಗ ನಡೆಸಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ. ಈ ಪ್ರಯೋಗದಲ್ಲಿ ಮೆಟ್‌ಫಾರ್ಮಿನ್ ಎಆರ್‌ಡಿಎಸ್‌ಗೆ ಪ್ರತಿರೋಧ ತೋರಿದೆ. ಅಲ್ಲದೆ, ರೋಗಲಕ್ಷಣಗಳು ಕಡಿಮೆಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಅಲ್ಲದೆ, ಸಾವಿನ ಸಾಧ್ಯತೆಗಳನ್ನು ಈ ಔಷಧ ಕಡಿಮೆ ಮಾಡಿತಲ್ಲದೇ, ದೇಹ ಪ್ರತಿರೋಧಕ ಶಕ್ತಿಯನ್ನು ರಕ್ಷಣೆ ಮಾಡಿದೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.
ಕೋವಿಡ್ ವಿರುದ್ಧ ಕೆಲಸ ಮಾಡಬಲ್ಲ ಲಸಿಕೆ ಮತ್ತು ಔಷಧಗಳ ಸಂಶೋಧನೆಯಲ್ಲಿ ಹಲವು ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಸದ್ಯ ವಿವಿಧ ಕಾಯಿಲೆಗಳಿಗೆ ಈಗಾಗಲೇ ಬಳಕೆಯಾಗುತ್ತಿರುವ ಔಷಧಗಳನ್ನೂ ಕೋವಿಡ್ ಚಿಕಿತ್ಸೆಗೆ ಬಳಸಲಾಗುತ್ತಿದೆ.
ಹೈಡ್ರೊಕ್ಲೋರಿಕ್ವಿನ್, ಐವರ್‌ಮೆಕ್ಟಿನ್, ಫೆವಿಪೆರಾವಿರ್, ರೆಮಿಡಿಸಿವಿರ್‌ಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿದೆಯಾದರೂ, ಇದೇ ಔಷಧಗಳು ಕೋವಿಡ್ ಅನ್ನು ನಿವಾರಿಸುತ್ತವೆ ಎಂದು ವಿಜ್ಞಾನಿಗಳು ಖಚಿತಪಡಿಸಿಲ್ಲ. ಆದರೆ, ಈ ಔಷಧಿಗಳನ್ನು ಕೋವಿಡ್ ರೋಗಿಗಳಿಗೆ ವೈದ್ಯರು ವ್ಯಾಪಕವಾಗಿ ಸೂಚಿಸುತ್ತಿದ್ದಾರೆ. ಈ ಮಧ್ಯೆ, ಹೈಡ್ರೊಕ್ಲೋರಿಕ್ವಿನ್, ಐವರ್‌ಮೆಕ್ಟಿನ್, ಫೆವಿಪೆರಾವಿರ್ ಔಷಧಗಳನ್ನು ಭಾರತದಲ್ಲಿ ಕೋವಿಡ್ ಚಿಕಿತ್ಸಾ ಮಾರ್ಗಸೂಚಿಯಿಂದ ಸರ್ಕಾರ ತೆಗೆದು ಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.