ಇತ್ತೀಚೆಗೆ ಹೆಚ್ಚಿನ ಹಿರಿಯ ನಾಗರಿಕರಲ್ಲಿ ಮಧುಮೇಹ ಕಾಣಿಸಿಕೊಳ್ಳಲಾರಂಭಿಸಿದೆ. ವಯೋಸಹಜ ಅನಾರೋಗ್ಯದ ಜತೆಗೆ, ಸಂಧ್ಯಾಕಾಲದ ಮಧುಮೇಹದ ಸಂಕಟ ಹಿರಿಯ ಜೀವಗಳಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತಿದೆ. ಅನೇಕರು ‘ಶಿಸ್ತುಬದ್ಧ ಜೀವನ ನಡೆಸುತ್ತಿರುವ ನಮಗೇಕೆ ಮಧುಮೇಹ ಬರಬೇಕೆಂದು‘ ಕೇಳುತ್ತಿದ್ದಾರೆ. ಹಿರಿಯರಲ್ಲಿ ಮೂಡುವ ಇಂಥ ಹಲವು ಸಾಮಾನ್ಯ ಪ್ರಶ್ನೆಗಳಿಗೆ ಮಧುಮೇಹ ತಜ್ಞ ಡಾ. ಗುರುಪ್ರಸಾದ್ ಉಡುಪಿ ಅವರು ಇಲ್ಲಿ ಉತ್ತರಿಸಿದ್ದಾರೆ.
---
ರಾಜಣ್ಣ ಅವರಿಗೆ ವಯಸ್ಸು 80. ಮಿತ ಆಹಾರ, ಹಿತವಾದ ನಡಿಗೆ, ವ್ಯಾಯಾಮದೊಂದಿಗೆ ಗಟ್ಟಿ ದೇಹ, ಅಷ್ಟೇ ಆರೋಗ್ಯ ಪೂರ್ಣ ಮನಸ್ಸು. ಎಂಟು ದಶಕಗಳ ಶಿಸ್ತುಬದ್ಧ ಜೀವನ ನಡೆಸಿದ್ದ ವರಿಗೆ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಮಧುಮೇಹ ಕಾಣಿಸಿಕೊಂಡಿತು. ‘ಜೀವನದಲ್ಲಿ ಆಸ್ಪತ್ರೆ ಮೆಟ್ಟಿಲೇರದವನಿಗೆ ಹೀಗೇಕಾಯ್ತು’ ಎಂಬ ಚಿಂತೆ ಶುರುವಾಯಿತು. ನಿತ್ಯ ಮಾತ್ರೆ ನುಂಗಬೇಕು. ಅದರಿಂದಾಗುವ ಅಡ್ಡ ಪರಿಣಾಮವನ್ನು ನಿರ್ವಹಿಸಬೇಕು. ಆಹಾರದಲ್ಲಿ ಪಥ್ಯ ಮಾಡೋಣ ಎಂದರೆ, ದೇಹ ಕೇಳುವುದಿಲ್ಲ. ಹಲ್ಲು ಸವೆದಿದೆ. ಆಹಾರ ಜಗಿಯಲಾಗುವುದಿಲ್ಲ. ಜಗಿಯದಿದ್ದರೆ ಆಹಾರ ಪಚನವಾಗುವುದಿಲ್ಲ. ಜತೆಗೆ ಮಲಬದ್ಧತೆ ಸಮಸ್ಯೆ. ಇಂಥ ಪರಿಸ್ಥಿತಿಯಲ್ಲಿ ರೋಗ ನಿಯಂತ್ರಣ ಹೇಗೆ ಎಂಬುದು ಚಿಂತೆ.
ಹಿತ–ಮಿತ ಆಹಾರದ ಜೀವನ ಶೈಲಿ, ಸದಾ ಪ್ರವಾಸ ಮಾಡುತ್ತಾ, ಚೈತನ್ಯದ ಚಿಲುಮೆಯಾಗಿದ್ದ 90 ವರ್ಷದ ಸುಬ್ಬಮ್ಮನವರಿಗೂ ಇಳಿ ವಯಸ್ಸಿನಲ್ಲಿ ಮಧುಮೇಹ ಕಾಣಿಸಿಕೊಂಡಿದೆ. ಎಲ್ಲವನ್ನೂ ತಿಂದು ಅರಗಿಸಿಕೊಳ್ಳುತ್ತಿದ್ದ ವರಿಗೆ ಈಗ ಸರಿಯಾಗಿ ಆಹಾರ ಸೇರುತ್ತಿಲ್ಲ. ಒಮ್ಮೊಮ್ಮೆ ಔಷಧವೂ ಮೈಗೆ ಹತ್ತಲ್ಲ. ‘ಈ ವಯಸ್ಸಿನಲ್ಲಿ ನಮ್ಗೆಲ್ಲ ಯಾಕ್ ಬರುತ್ತೆ ಈ ರೋಗ..‘ ಎನ್ನುವುದು ಅವರ ಪ್ರಶ್ನೆ.
ಇಂಥ ಪ್ರಶ್ನೆ, ಚಿಂತೆಗಳು ರಾಜಣ್ಣ, ಸುಬ್ಬಮ್ಮನವರದ್ದು ಮಾತ್ರವಲ್ಲ. ಇಳಿಗಾಲದಲ್ಲಿ ಮಧುಮೇಹದಿಂದ ಬಳಲುತ್ತಿರುವ ಹಲವು ಹಿರಿಯ ನಾಗರಿಕರದ್ದು. ಈ ಲಾಕ್‌ಡೌನ್ ಅವಧಿಯಲ್ಲಂತೂ ಹಿರಿಯ ನಾಗರಿಕರಲ್ಲಿ ಈ ಸಮಸ್ಯೆಗಳು ತೀವ್ರವಾಗಿವೆ. ರೋಗ ತಂದೊಡ್ಡುತ್ತಿರುವ ನೋವಿಗಿಂತ, ‘ಇಲ್ಲಿವರೆಗೂ ಆರೋಗ್ಯವಾಗಿದ್ದು, ಈ ಹಂತದಲ್ಲಿ ಹೀಗೆ ಕೊರಗುವಂತಾಯಿತಲ್ಲ‘ ಎಂಬ ನೋವು ಅವರನ್ನು ಕಾಡುತ್ತಿದೆ.
ಹಿರಿಯ ನಾಗರಿಕರಲ್ಲಿರುವ ಇಂಥ ಹಲವು ಪ್ರಶ್ನೆಗಳಿಗೆ ಬೆಂಗಳೂರಿನ ಮಧುಮೇಹ ತಜ್ಞ ಡಾ. ಗುರುಪ್ರಸಾದ್ ಉಡುಪಿ ಅವರು ಉತ್ತರಿಸಿದ್ದಾರೆ.
*****
1. ಮಿತ ಆಹಾರ, ನಿತ್ಯ ನಡಿಗೆಯಂತಹ ವ್ಯಾಯಾಮಗಳೊಂದಿಗೆ ದಶಕಗಳ ಕಾಲ ಆರೋಗ್ಯಪೂರ್ಣವಾಗಿ ಜೀವಿಸುವ ಹಿರಿಯ ನಾಗರಿಕರಿಗೆ ‘ಸಂಧ್ಯಾಕಾಲ’ದಲ್ಲೇಕೆ ಈ ‘ಸಿಹಿ’ ರೋಗ ಬಾಧಿಸುತ್ತದೆ ?
ಮಧುಮೇಹ – ಜೀವನ ಶೈಲಿಯಲ್ಲಾಗುವ ವ್ಯತ್ಯಾಸದಿಂದ ಬರುವಂತಹ ಒಂದು ಆರೋಗ್ಯ ಸಮಸ್ಯೆ. ಅದು ಇಂಥವರಿಗೆ ಬರಬೇಕು–ಬರಬಾರದು. ಇಷ್ಟೇ ವಯಸ್ಸಿಗೆ ಬರಬೇಕು.. ಇಂಥ ನಿಯಮಗಳೇನಿಲ್ಲ. ಒಟ್ಟಾರೆ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಕಡಿಮೆಯಾದಾಗ ಯಾರಿಗೆ ಬೇಕಾದರೂ, ಯಾವ ವಯಸ್ಸಿನಲ್ಲಾದರೂ ಇದು ಬಾಧಿಸಬಹುದು. ನೀವು ಗಮನಿಸಿರಬಹುದು; ದೇಹ ದಂಡಿಸುವ ಕ್ರೀಡಾಪಟುಗಳಿಗೆ, ಜಿಮ್ನಾಸ್ಟಿಕ್ ಮಾಡುವವರಿಗೆ, ಯೋಗಪಟುಗಳಿಗೂ ಮಧುಮೇಹ ಬಾಧಿಸಿರುವ ಸಾಕಷ್ಟು ಉದಾಹರಣೆಗಳಿವೆ.
ದೇಹದಲ್ಲಿ ನಡೆಯುವ ಜೆನೆಟಿಕ್ಸ್ ಮ್ಯುಟೇಷನ್‌ನಿಂದ(ವಂಶವಾಹಿ ಬದಲಾವಣೆ) ಇನ್ಸುಲಿನ್ ಉತ್ಪತ್ತಿಯಲ್ಲಿ ವ್ಯತ್ಯಾಸವಾಗುತ್ತದೆ. ಆಗ ಮಧುಮೇಹ ಕಾಣಿಸಿಕೊಳ್ಳುತ್ತದೆ.
ಜೆನೆಟಿಕ್ಸ್ ಮ್ಯುಟೇಷನ್ ಬದಲಾವಣೆಗೆ ಜೀವನಶೈಲಿ, ಮಾನಸಿಕ ಒತ್ತಡ, ಅನುವಂಶೀಯ ಕಾರಣಗಳೂ ಇರಬಹುದು. ಮಿತ ಆಹಾರ, ವ್ಯಾಯಾಮ ಅನುಸರಿಸುತ್ತಿರುವ ಹಿರಿಯ ನಾಗರಿಕರಿಗೆ, ಈ ಮೇಲೆ ಹೇಳಿದ ಕಾರಣಗಳಿಂದ ಮಧುಮೇಹ ಬಂದಿರಬಹುದು.
2. ಇಳಿ ವಯಸ್ಸಿನಲ್ಲಿ ಆರಂಭವಾಗುವ ಮಧುಮೇಹದ ತೀವ್ರತೆ ಹೇಗಿರುತ್ತದೆ ? ಹೆಚ್ಚು ಅಪಾಯ ತಂದೊಡ್ಡುತ್ತದೆಯೇ ?
70 ರಿಂದ 75ವರ್ಷಗಳ ನಂತರ ಮಧುಮೇಹ ಆರಂಭವಾಗುವುದು ಅಪರೂಪ. ಆದರೆ, ಚಿಕ್ಕವಯಸ್ಸಿನವರಿಗೆ (50 ವರ್ಷದೊಳಗೆ) ಬಾಧಿಸುವ ಈ ರೋಗಕ್ಕೆ ಹೋಲಿಸಿದರೆ, 70 ವರ್ಷದ ನಂತರ ಆರಂಭವಾಗುವ ಮಧುಮೇಹ ತುಂಬಾ ಸೌಮ್ಯ ಲಕ್ಷಣದ್ದಾಗಿರುತ್ತದೆ. ಹೀಗಾಗಿ ಹಿರಿಯ ನಾಗರಿಕರಿಗೆ ಇದರಿಂದ ಹೆಚ್ಚು ತೊಂದರೆ ಕೊಡುವುದಿಲ್ಲ. ಕಿಡ್ನಿ ಸಮಸ್ಯೆ, ಹೃದ್ರೋಗ, ಕಾಲಿನಲ್ಲಿನ ನರಗಳ ದೌರ್ಬಲ್ಯದಂತಹ ರೋಗಳಿಗೆ ದೂಡುವುದು ತೀರಾ ವಿರಳ. ಇದೇ ಕಾರಣಕ್ಕಾಗಿಯೇ ಕಡಿಮೆ ಔಷಧದೊಂದಿಗೆ ಲಘುವಾಗಿ ಚಿಕಿತ್ಸೆ ನೀಡುತ್ತಾ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣಕ್ಕೆ ತರುತ್ತೇವೆ. ಹೀಗಾಗಿ ಹಿರಿಯ ನಾಗರಿಕರು ತುಂಬಾ ಚಿಂತೆ ಮಾಡುವ ಅಗತ್ಯವಿಲ್ಲ.
3. ಕೊರೊನಾ – ಲಾಕ್‌ಡೌನ್ ಅವಧಿಯಲ್ಲಿ ಹಲವು ಹಿರಿಯ ನಾಗರಿಕರಿಗೆ ಮಧುಮೇಹ ಕಾಣಿಸಿಕೊಂಡಿದೆ ? ಕಾರಣ ಏನು ?
ಕೊರೊನಾ – ಲಾಕ್‌ಡೌನ್ ಅವಧಿಯಲ್ಲಿ 70 ವರ್ಷದ ನಂತರದವರಿಗೆ ಬಂದಿರುವ ಮಧುಮೇಹ, ಮಾನಸಿಕ ಒತ್ತಡದಿಂದ ಬಂದಿರುವಂಥದ್ದು. ಬಹಳಷ್ಟು ಜನರಿಗೆ ‘ಮುಂದೇನು‘ ಎಂಬ ಭವಿಷ್ಯದ ಅಭದ್ರತೆ ಕಾಡಿದ್ದರಿಂದಲೂ ಬಂದಿರಬಹುದು. ಒತ್ತಡದಿಂದ ಬರುವ ಮಧುಮೇಹ ತಾತ್ಕಾಲಿಕ. ಇದನ್ನು ಔಷಧ, ಚಿಕಿತ್ಸೆ, ಆಪ್ತಸಲಹೆಯಿಂದಲೂ ಕಡಿಮೆ ಮಾಡಬಹುದು.
ಮಕ್ಕಳು ವಿದೇಶದಲ್ಲಿದ್ದು, ಅಪ್ಪ–ಅಮ್ಮಇಲ್ಲಿ ಒಂಟಿಯಾಗಿ ವಾಸಿಸುತ್ತಿರುತ್ತಾರೆ. ಒಂಟಿತನದ ಒತ್ತಡ, ಅಭದ್ರತೆಯ ಭಾವದಿಂದ, ಅಂತವರಿಗೆ ಕೋವಿಡ್ ಕಾಲದಲ್ಲಿ ಮಧುಮೇಹ ಕಾಣಿಸಿಕೊಂಡಿರುವ ಉದಾಹರಣೆಗಳಿವೆ.
ಕೋವಿಡ್ ವೈರಸ್ ಸೋಂಕಿನಿಂದ ಬಳಲುವವರಲ್ಲೂ ಮಧುಮೇಹ ಕಾಣಿಸಿಕೊಂಡಿರುವುದನ್ನು ಗುರುತಿಸಿದ್ದೇವೆ, ಇದನ್ನು ಗಂಭೀರವಾಗಿ ಪರಿಗಣಿಸಿ, ಚಿಕಿತ್ಸೆ ನೀಡುತ್ತಿದ್ದೇವೆ. ಕೊರೊನಾ ವೈರಸ್, ಮೇದೋಜೀರಕ ಗ್ರಂಥಿ (ಪ್ಯಾಂಕ್ರಿಯಾಸ್) ಮೇಲೆ ದಾಳಿ ಮಾಡಿ ಬೀಟಾ ಕೋಶಗಳಿಗೆ ತೊಂದರೆ ಉಂಟುಮಾಡುತ್ತಿದೆ. ಇದು ಇನ್‌ಸುಲಿನ್ ಉತ್ಪತ್ತಿಯನ್ನು ತಡೆಯುತ್ತದೆ. ಇದು ಮಧುಮೇಹಕ್ಕೆ ಕಾರಣವಾಗುತ್ತದೆ.
ಕೋವಿಡ್ 19 ಸೋಂಕಿತರಲ್ಲಿ ಮಧುಮೇಹ ಕಾಣಿಸಿಕೊಂಡಿರುವುದನ್ನು ಗುರುತಿಸಿದ್ದೇವೆ. ಈಗಾಗಲೇ ಮಧುಮೇಹ ಇರುವವವರು ಕೊರೊನಾ ಸೋಂಕಿಗೆ ಒಳಗಾದ ಮೇಲೆ, ಅವರಲ್ಲಿ ಮಧುಮೇಹ ಹೆಚ್ಚಾಗಿರುವುದು, ಮಾತ್ರೆ ಸೇವಿಸುವ ಪ್ರಮಾಣದಲ್ಲಿ ಏರಿಕೆಯಾಗಿರುವುದನ್ನು ಗಮನಿಸಲಾಗಿದೆ. ಇದು ಎಲ್ಲ ವಯೋಮಾನದವರಲ್ಲೂ ಕಾಣಿಸಿಕೊಳ್ಳತ್ತಿದೆ.
3. ಇಂಥ ಹಿರಿಯ ಹಿರಿಯ ನಾಗರಿಕರಿಗೆ ಚಿಕಿತ್ಸೆ ಹೇಗೆ ? ಚಿಕಿತ್ಸೆಯನ್ನು ಅವರು ಹೇಗೆ ಸ್ವೀಕರಿಸಬೇಕು ?
ಮಧುಮೇಹದಿಂದ ಬಳಲುವ ಹಿರಿಯ ನಾಗರಿಕರಿಗೆ ಗಂಭೀರವಾದ (ಅಗ್ರೆಸ್ಸಿವ್) ಚಿಕಿತ್ಸೆ ನೀಡುವುದಿಲ್ಲ. ಏಕೆಂದರೆ, ಈ ವಯಸ್ಸಿನಲ್ಲಿ ಮೂತ್ರ ಪಿಂಡ(ಕಿಡ್ನಿ) ಸೇರಿದಂತೆ ಅಂಗಾಂಗಳ ಚಟುವಟಿಕೆ ಕಡಿಮೆಯಾಗಿರುತ್ತದೆ. ಮಧುಮೇಹ ನಿಯಂತ್ರಣಕ್ಕೆ ನೀಡುವ ಔಷಧಗಳು ಕಿಡ್ನಿಯ ಮೂಲಕವೇ ಹೊರಗೆ ಹೋಗಬೇಕು. ಹೀಗಿರುವಾಗ, ಗಂಭೀರ ಸ್ವರೂಪದ ಚಿಕಿತ್ಸೆ ನೀಡಿದರೆ ಅಂಗಾಂಗಳ ಮೇಲೆ ಒತ್ತಡ ಬೀಳಬಹುದು. ಜತೆಗೆ, ಪದೇ ಪದೇ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ (ಲೋ ಶುಗರ್), ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀರಬಹುದು.
ಹಾಗಾಗಿ, ಹಿರಿಯ ನಾಗರಿಕರು ಚಿಕಿತ್ಸೆ ಪಡೆಯುವಾಗ ಎಚ್ಚರದಿಂದರಬೇಕು. ಇಷ್ಟ ಬಂದಾಗ ಮಾತ್ರೆ ತಗೊಳ್ಳೋದು, ರೋಗ ನಿಯಂತ್ರಣಕ್ಕೆ ಬಂದಿದೆ ಎಂದು ಮಾತ್ರೆ ನಿಲ್ಲಿಸುವಂತಹ ಕೆಲಸ ಮಾಡಬಾರದು. ಕಡ್ಡಾಯವಾಗಿ ವೈದ್ಯರ ನಿರ್ದೇಶನ ಪಾಲಿಸಬೇಕು. ಅವರ ಮಾರ್ಗದರ್ಶನದಲ್ಲೇ ಔಷಧವನ್ನು ತೆಗೆದುಕೊಳ್ಳಬೇಕು.
4 ಹಿರಿಯ ನಾಗರಿಕರಲ್ಲಿ ಆರಂಭವಾಗುವ ಮಧುಮೇಹ ನಿಯಂತ್ರಣಕ್ಕೆ ಬಂದ ಮೇಲೆ ಔಷಧಗಳನ್ನು ನಿಲ್ಲಿಸಬಹುದೇ ?
ಇದನ್ನು ಹೀಗೆ ಎಂದು ಹೇಳುವುದು ಕಷ್ಟ. ಮೊದಲೇ ಹೇಳಿದಂತೆ ಕೋವಿಡ್ ಕಾಲದಲ್ಲಿ ಒತ್ತಡದಿಂದ ಶುರುವಾಗಿರುವ ಮಧುಮೇಹವನ್ನು ನಿಯಂತ್ರಿಸಬಹುದು. ಔಷಧಗಳನ್ನು ನಿಲ್ಲಿಸಲು ಸೂಚಿಸಬಹುದು. ಆದರೆ, ಜೆನಿಟಿಕ್ ಬದಲಾವಣೆಯಿಂದ ಬಂದಿರುವ ಮಧುಮೇಹಕ್ಕೆ ಚಿಕಿತ್ಸೆ ಪಡೆಯುತ್ತಿರುವವರಿಗೆ ಈ ರೀತಿ ಹೇಳಲಾಗುವುದಿಲ್ಲ.
ಮಧುಮೇಹ ಪರೀಕ್ಷೆಗಾಗಿ ‘ಎಚ್‌ಬಿಎ1ಸಿ‘ ಎಂಬ ಪರೀಕ್ಷೆ ಇದೆ. ಈ ಪರೀಕ್ಷೆಯಿಂದ ಮೂರು ತಿಂಗಳ ಅವಧಿಯಲ್ಲಿ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ತಿಳಿಯುತ್ತದೆ. ಈ ಪರೀಕ್ಷೆ ವರದಿ ಆಧರಿಸಿ ವೈದ್ಯರು ಸೂಚಿಸಿದರೆ ಮಾತ್ರ ಔಷಧಗಳನ್ನು ನಿಲ್ಲಿಸಬಹುದು.
5. ಹಲ್ಲಿನ ಸಮಸ್ಯೆ ಸೇರಿದಂತೆ, ವಯೋಸಹಜ ಆರೋಗ್ಯ ವ್ಯತ್ಯಾಸದಿಂದಾಗಿ ಹಿರಿಯ ನಾಗರಿಕರು ಈಗಾಗಲೇ ಮಿತ ಆಹಾರದತ್ತ ಹೊರಳಿರುತ್ತಾರೆ. ಈಗಾಗಲೇ ದೇಹ ಬಳಲಿರುವುದರಿಂದ ವ್ಯಾಯಾಮವೂ ಕಷ್ಟ. ಹೀಗಿದ್ದಾಗ ಅವರು ಯಾವ ರೀತಿ ವ್ಯಾಯಾಮ ಮಾಡಬೇಕು. ಆಹಾರ ಪದ್ಧತಿ ಅನುಸರಿಸಬೇಕು ?
ಮಧುಮೇಹ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಔಷಧದಷ್ಟೇ, ಆಹಾರ ಕ್ರಮವೂ ಬಹಳ ಮುಖ್ಯ. ಇದು ಮಧುಮೇಹದಿಂದ ಬಳಲುತ್ತಿರುವ ಹಿರಿಯರು – ಕಿರಿಯ ವಯಸ್ಸಿನವರಿಗೆಲ್ಲರಿಗೂ ಅನ್ವಯಿಸುತ್ತದೆ.
ನಾವು ಸೇವಿಸುವ ಆಹಾರ ಪಚನವಾಗುವುದಕ್ಕೆ ಕರುಳಿನಲ್ಲಿ ಉತ್ಪತ್ತಿಯಾಗುವ ಹಾರ್ಮೋನು ನೆರವಾಗುತ್ತದೆ. ಹಿರಿಯ ನಾಗರಿಕರಲ್ಲಿ ಈ ಹಾರ್ಮೋನು ಉತ್ಪತ್ತಿ ಪ್ರಮಾಣ ಕಡಿಮೆ ಇರುತ್ತದೆ. ಜತೆಗೆ ಅನೇಕರಿಗೆ ಹಲ್ಲಿನ ಸಮಸ್ಯೆಯೂ ಕಾಡುತ್ತಿರುತ್ತದೆ. ಗಟ್ಟಿಯಾದ ಆಹಾರ ಜಗಿದು ತಿನ್ನಲಾಗುವುದಿಲ್ಲ. ಇಂಥವರು ಮೆದುವಾದ, ಪೌಷ್ಟಿಕ ಆಹಾರ ಸೇವಿಸಬೇಕು. ಹೆಚ್ಚು ಪ್ರೊಟಿನ್, ವಿಟಮಿನ್ ಇರುವ ದ್ರವರೂಪದ ಆಹಾರ ಸೇವನೆ ಒಳ್ಳೆಯದು.
‘ಸಿ’ ವಿಟಮಿನ್ ಇರುವ ಹಣ್ಣುಗಳು, ಶರ್ಕರ ಪಿಷ್ಠ (ಕಾರ್ಬೊಹೈಡ್ರೇಟ್) ಕಡಿಮೆ ಇರುವ, ನಾರಿನ ಅಂಶ ಹೆಚ್ಚಾಗಿರುವ ತಾಜಾ ತರಕಾರಿ, ತಾಜಾ ಹಣ್ಣುಗಳು, ಬಿಸಿ ಬಿಸಿಯಾದ ಆಹಾರ ಸೇವನೆ ಬಹಳ ಮುಖ್ಯ. ಔಷಧದ ಜತೆಗೆ, ದೇಹದ ಬೇರೆ ಬೇರೆ ಅಂಗಾಂಗಳಿಗೂ ಶಕ್ತಿ ನೀಡುವ ವಿಟಮಿನ್‌ಯುಕ್ತ ಆಹಾರ ಸೇವನೆಯನ್ನು ಮರೆಯಬಾರದು.
ವ್ಯಾಯಾಮ ಎನ್ನುವುದು ಎಲ್ಲ ವಯೋಮಾನಕ್ಕೂ ಕಡ್ಡಾಯ. ಆದರೆ, ಹಿರಿಯ ನಾಗರಿಕರಲ್ಲಿ ಮಂಡಿ ಸವೆತ, ಬೆನ್ನುಮೂಳೆ ಸಮಸ್ಯೆ, ನಡೆಯುವಾಗ ಸಮತೋಲನ ಕಳೆದುಕೊಳ್ಳುವಂತಹ (ತೂರಾಡುವುದು) ಸಮಸ್ಯೆ ಇರುವುದರಿಂದ, ಇಂಥವರಿಗೆ ಕ್ಲಿಷ್ಟಕರ ವ್ಯಾಯಾಮ ಕಷ್ಟ. ಹಾಗಾಗಿ ಕುರ್ಚಿಮೇಲೆ ಕುಳಿತು ವ್ಯಾಯಾಮಗಳನ್ನು ಮಾಡಬಹುದು. ಸೈಕ್ಲಿಂಗ್ ಅಭ್ಯಾಸವಿದ್ದರೆ, ನಿಂತಲ್ಲೇ ಸೈಕಲ್ ತುಳಿಯುವಂತಹ ವ್ಯಾಯಾಮ ಮಾಡಬಹುದು.
6 ಧ್ಯಾನ, ಪ್ರಾಣಾಯಾಮ, ಸಂಗೀತ, ನೃತ್ಯ.. ಇಂಥ ಚಟುವಟಿಕೆಗಳು ‘ಮಧುಮೇಹ’ ನಿಯಂತ್ರಣಕ್ಕೆ ಎಷ್ಟು ಸಹಕಾರವಾಗಬಹುದು ? ಈ ಇಳಿವಸ್ಸಿನಲ್ಲೂ ಇಂಥ ಚಟುವಟಿಕೆಗಳನ್ನು ಆರಂಭಿಸಬಹುದೇ ?
ಮೊದಲೇ ಹೇಳಿದಂತೆ ಮಧುಮೇಹ ಎನ್ನುವುದು ಜೀವನ ಶೈಲಿಯಲ್ಲಾಗುವ ವ್ಯತ್ಯಾಸದಿಂದ ಬರುವ ರೋಗ. ಜೀವನ ಶೈಲಿಯಲ್ಲಿ ಆಹಾರ, ವ್ಯಾಯಾಮದ ಜತೆಗೆ ಮಾನಸಿಕ ಒತ್ತಡವೂ ಸೇರುತ್ತದೆ. ಹೀಗಾಗಿ ’ಮಧುಮೇಹ’ ನಿಯಂತ್ರಣಕ್ಕೆ ಔಷಧದಷ್ಟೇ ಮನಸ್ಸಿನ ಒತ್ತಡ ನಿವಾರಿಸುವಂತಹ ಚಟುವಟಿಕೆಗಳನ್ನು ಅನುಸರಿಸುವುದು ತುಂಬಾ ಸೂಕ್ತ.
ಯೋಗಾಭ್ಯಾಸ ಆರಂಭಿಸಬಹುದು. ಆದರೆ, ಈ ವಯಸ್ಸಿನಲ್ಲಿ ದೇಹವನ್ನು ಅತಿಯಾಗಿ ದಂಡಿಸುವುದು ಒಳ್ಳೆಯ ದಲ್ಲ. ಆದರೆ, ಮನಸ್ಸಿಗೆ ಶಾಂತಿ ನೀಡುವಂತಹ ಧ್ಯಾನ – ಪ್ರಾಣಾಯಾಮ ಶುರು ಮಾಡಬಹುದು. ಇದಕ್ಕೆ ಕಡ್ಡಾಯವಾಗಿ ಪರಿಣತರ ಮಾರ್ಗದರ್ಶನ ಅಗತ್ಯ.
ಪುಸ್ತಕ ಓದುವುದು, ಹಾಡು, ನೃತ್ಯ, ಕೈತೋಟ ನಿರ್ವಹಣೆಯಂತಹ ಇಷ್ಟಪಟ್ಟು ಮಾಡುವ ಯಾವುದೇ ಚಟುವಟಿಕೆಗಳ ಮೇಲೆ ಹೆಚ್ಚು ಗಮನ ನೀಡಿದರೆ, ಪರೋಕ್ಷವಾಗಿ ಮಧುಮೇಹ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ.
7. ಔಷಧ, ಆಹಾರ ಹೊರತುಪಡಿಸಿ ಮಧುಮೇಹದಿಂದ ಬಳಲುವ ಹಿರಿಯ ನಾಗರಿಕರ ಆರೈಕೆ ಹೇಗೆ ?
ಮಧುಮೇಹದಿಂದ ಬಳಲುವ ಹಿರಿಯ ನಾಗರಿಕರಿಗೆ ಕುಟುಂಬದವರ ಆರೈಕೆ ತುಂಬಾ ಅಗತ್ಯ. ವೈದ್ಯರ ಬಳಿ ಚಿಕಿತ್ಸೆಗೆ ಕರೆದುಕೊಂಡು ಹೋಗುವುದರಿಂದ ಹಿಡಿದು, ಮಾತ್ರೆ, ಇನ್ಸುಲಿನ್ ತೆಗೆದುಕೊಳ್ಳುವ ಸಂದರ್ಭದವರೆಗೂ, ಅವರೊಂದಿಗೆ ಒಬ್ಬರು ಸಹಾಯಕರು (ಕೇರ್ ಟೇಕರ್) ಇರಬೇಕು. ಇದನ್ನು ವೈದ್ಯರಾಗಿ ನಾವು ಕಡ್ಡಾಯವಾಗಿ ಹೇಳುತ್ತೇವೆ.
ವಯಸ್ಸಾದವರಿಗೆ ನೆನಪಿನ ಶಕ್ತಿ ಕಡಿಮೆ. ಮನಸ್ಸು ಮತ್ತು ಮಿದಳು ಎರಡೂ ದುರ್ಬಲವಾಗಿರುತ್ತವೆ. ವೈದ್ಯರು ಹೇಳಿದ್ದು ಅರ್ಥವಾಗಿರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ತೆಗೆದುಕೊಳ್ಳುವ ಔಷಧದಲ್ಲಿ ವ್ಯತ್ಯಾಸವಾದರೆ, ದೇಹದ ಮೇಲೆ ವ್ಯತಿರಿಕ್ತಪರಿಣಾಮಗಳಾಗುತ್ತವೆ. ಇನ್ಸುಲಿನ್ ಡೋಸೇಜ್ ವ್ಯತ್ಯಾಸವಾದರೆ, ಮಾತ್ರೆ ತೆಗೆದುಕೊಳ್ಳುವುದರಲ್ಲಿ ವ್ಯತ್ಯಾಸವಾದರೆ.. ದೇಹದಲ್ಲಿ ಸಕ್ಕರೆ ಅಂಶವೂ ವ್ಯತ್ಯಾಸವಾಗಿ, ಆರೋಗ್ಯ ಸ್ಥಿತಿ ಸಂಕೀರ್ಣವಾಗಬಹುದು. ಹಾಗಾಗಿ ಮಧುಮೇಹವಿರುವ ಹಿರಿಯ ನಾಗರಿಕರಿಗೆ ಒಬ್ಬರ ಆಸರೆ ಅಗತ್ಯ.
ಈಗೀಗ ಔಷಧ ಸೇವನೆಯನ್ನು ನೆನಪಿಸುವುದಕ್ಕಾಗಿ ಕೆಲವೊಂದು ಮೊಬೈಲ್ ಅಪ್ಲಿಕೇಷನ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಅಪ್ಲಿಕೇಷನ್ ಮಾತ್ರೆ ತೆಗೆದುಕೊಳ್ಳುವುದನ್ನು ನೆನಪಿಸುತ್ತದೆ. ಎಷ್ಟು ಡೋಸ್ ತೆಗೆದುಕೊಳ್ಳಬೇಕು, ಎಷ್ಟು ಮಾತ್ರೆಗಳನ್ನು ಸೇವಿಸಬೇಕು ಎಂದೆಲ್ಲ ಮಾಹಿತಿ ನೀಡುತ್ತದೆ.
ಸಂಧ್ಯಾಕಾಲದಲ್ಲಿ ತೊಂದರೆಗೆ ಸಿಲುಕಿಸುವ ಮಧುಮೇಹ ನಿಯಂತ್ರಣ ಕುರಿತ ಮಾಹಿತಿಗಾಗಿ ಇಮೇಲ್ ಮೂಲಕ ವೈದ್ಯರನ್ನು ಸಂಪರ್ಕಸಿಬಹುದು– guruprasad6699@gmail.com.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.