ADVERTISEMENT

ಕ್ಷೇಮ–ಕುಶಲ: ಮಧುಮೇಹ ಇರುವವರು ಏನು ತಿನ್ನಬೇಕು?

ಪ್ರಜಾವಾಣಿ ವಿಶೇಷ
Published 14 ಅಕ್ಟೋಬರ್ 2024, 21:16 IST
Last Updated 14 ಅಕ್ಟೋಬರ್ 2024, 21:16 IST
   

ಸಾಮಾನ್ಯವಾಗಿ ಜನ ಮಾತನಾಡುವಾಗ ಶುಗರ್ ಇದೆ ಅಂದಾಕ್ಷಣ ಅನ್ನ ಬಿಟ್ಟು ಬಿಡಿ. ಮುದ್ದೆ ತಿನ್ನಿ ಮಧುಮೇಹ ನಿಯಂತ್ರಣಕ್ಕೆ ಬರುತ್ತೆ ಅಂತ ಹೇಳುವುದನ್ನು ಕೇಳಿರುತ್ತೀರಿ. 

ಮಧುಮೇಹ ಇರುವವರಿಗೆ ಅಕ್ಕಿ ಒಳ್ಳೇಯದಾ, ಗೋಧಿ ಒಳ್ಳೇಯದಾ, ರಾಗಿ ತಿನ್ನಬಹುದಾ? ಯಾಕಂದ್ರೆ ಮಧುಮೇಹ ಬಂದ ಬಹುತೇಕ ಮಂದಿ ಅನ್ನ ಬಿಟ್ಟು, ಚಪಾತಿ ಅಥವಾ ರಾಗಿ ಮುದ್ದೆ ತಿನ್ನಲು ಆರಂಭಿಸುತ್ತಾರೆ. 

ಅಕ್ಕಿ, ರಾಗಿ, ಗೋಧಿ, ಜೋಳ, ಸಿರಿಧಾನ್ಯಗಳು ಎಲ್ಲವೂ ಕಾರ್ಬೋಹೈಡ್ರೇಟ್‌ಗಳೇ. ಅಂದರೆ ಇವುಗಳನ್ನು ಅತಿಯಾಗಿ ಸೇವಿಸಿದರೆ ಮಧುಮೇಹ ಹೆಚ್ಚಳವಾಗುವುದರಲ್ಲಿ ಎರಡು ಮಾತಿಲ್ಲ.

ADVERTISEMENT

ಮಧುಮೇಹ ಬಂದ ಮಂಡ್ಯದ ಮಂದಿಗೆ ಮುದ್ದೆ ತಿನ್ನುವುದನ್ನು ಬಿಡಿ ಎಂದರೆ ಕಷ್ಟ ಆಗಬಹುದು. ಉತ್ತರ ಕರ್ನಾಟಕದ ಮಂದಿಗೆ ಜೋಳದ ರೊಟ್ಟಿ ತಿನ್ನಬೇಡಿ ಎಂದರೆ ತಿನ್ನದೇ ಇರಲು ಆಗದು. ಕಾರ್ಬೋಹೈಡ್ರೇಟ್‌ ಹೇರಳವಾಗಿರುವ ತಿನಿಸುಗಳನ್ನು ಬಿಟ್ಟು ಬಿಡಿ ಎಂದು ಹೇಳಿದರೆ, ‘ತಿನ್ನುವುದು’ ಏನು ಎನ್ನುವ ಪ್ರಶ್ನೆ ಕೇಳುವವರಿದ್ದಾರೆ. 

ಮಧುಮೇಹಿಗಳ ಆಹಾರಕ್ರಮದ ಬಗ್ಗೆ ಹಲವು ಮಿಥ್ಯೆಗಳಿವೆ. ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಮುಖ್ಯ

ಇವತ್ತಿನ ಆಹಾರಕ್ರಮದಲ್ಲಿ ಕಾರ್ಬೋಹೈಡ್ರೇಟ್‌ಭರಿತ ಆಹಾರಪದಾರ್ಥಗಳೇ ಸುಲಭವಾಗಿ ಸಿಗುತ್ತಿದೆ. ಅಕ್ಕಿ, ರಾಗಿ, ಗೋಧಿ, ಜೋಳ ಸೇರಿದಂತೆ ಎಲ್ಲ ಸಿರಿಧಾನ್ಯಗಳಲ್ಲೂ ಕಾರ್ಬೋಹೈಡ್ರೇಟ್‌ ಹೆಚ್ಚಾಗಿರುತ್ತೆ ಮತ್ತು ಪ್ರೊಟೀನ್‌ ಕಡಿಮೆ ಇರುತ್ತದೆ. ಇವನ್ನು ‘ಕಾರ್ಬೊಹೈಡ್ರೇಟ್‌ ರಿಚ್‌ ಫುಡ್ಸ್‌’ ಎಂತಲೂ ಕರೆಯುತ್ತಾರೆ. ಅಲ್ಲದೇ ಇವುಗಳಲ್ಲಿ ಮಧುಮೇಹಕ್ಕೆ ಕಾರಣವಾಗುವ ಗ್ಲೈಸಿಮಿಕ್‌ ಇಂಡೆಕ್ಸ್‌ ಹೆಚ್ಚಿರುತ್ತದೆ. ಇವುಗಳನ್ನು ಎಷ್ಟು ಸಾಧ್ಯವೊ ಅಷ್ಟು ಕಡಿಮೆ ತಿನ್ನುವುದು ಒಳ್ಳೆಯದು. 

ಇದೇ ರೀತಿ ಸಕ್ಕರೆ, ಬೆಲ್ಲದ ಬಗ್ಗೆಯೂ ತಪ್ಪು ತಿಳಿವಳಿಕೆ ಇದೆ. ಬಹಳಷ್ಟು ರೋಗಿಗಳು ಕೇಳುವ ಪ್ರಶ್ನೆ ಸಕ್ಕರೆ ಬದಲು ಬೆಲ್ಲ, ಜೇನುತುಪ್ಪ ಬಳಸಬಹುದೇ? ಎಂದು. ನೆನಪಿರಲಿ; ಸಕ್ಕರೆ, ಬೆಲ್ಲ, ಜೇನುತುಪ್ಪ  ಇವುಗಳಲ್ಲಿ ಬಹಳ ವ್ಯತ್ಯಾಸಗಳೇನೂ ಇಲ್ಲ. ಎಲ್ಲವೂ ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುವ ಆಹಾರಗಳೆ. ಕ್ಯಾಲೊರಿಗಳು ಒಂದೇ ರೀತಿಯಲ್ಲಿ ಜೀರ್ಣಗೊಳ್ಳುತ್ತದೆ. ಬಹಳಷ್ಟು ಸಕ್ಕರೆ ಪದಾರ್ಥಗಳು ಗ್ಲುಕೋಸ್‌ ಮತ್ತು ಫ್ರಕ್ಟೋಸ್‌ನ ಅನುಪಾತದ ಆಧಾರದ ಮೇಲೆ ಸಂಯೋಜಿತಗೊಂಡಿರುತ್ತದೆ. ಉದಾಹರಣೆಗೆ ನಾವು ನಿತ್ಯ ಬಳಸುವ ಸಕ್ಕರೆಯಲ್ಲಿ ಶೇ 50ರಷ್ಟು ಪ್ರಮಾಣದಲ್ಲಿ ಸುಕ್ರೋಸ್‌ ಇದ್ದರೆ, ಫ್ರಕ್ಟೋಸ್‌ ಶೇ 50ರಷ್ಟು ಪ್ರಮಾಣದಲ್ಲಿರುತ್ತದೆ. ಬೆಲ್ಲದಲ್ಲಿ ಶೇ 65ರಿಂದ 85ರಷ್ಟು ಸುಕ್ರೋಸ್‌ ಇದ್ದರೆ, ಶೇ 10ರಿಂದ 15ರಷ್ಟು ಗ್ಲುಕೋಸ್‌ ಮತ್ತು ಫ್ರಕ್ಟೋಸ್‌ ಇರುತ್ತದೆ. ಬೆಲ್ಲದಲ್ಲಿ ಒಂದಷ್ಟು ಪೋಷಕಾಂಶಗಳು ಸಿಗಬಹುದು. ಇನ್ನು ಕೃತಕ ಸಿಹಿಯಲ್ಲಿ ಸಕ್ಕರೆಗಿಂತ 300ರಷ್ಟು ಹೆಚ್ಚಿನ ಸಿಹಿ ಇರುತ್ತದೆ ಮತ್ತು ಯಾವುದೇ ರೀತಿಯ ಪೌಷ್ಟಿಕಾಂಶ ಇರುವುದಿಲ್ಲ. ಇದರ ಬಳಕೆಯಿಂದ ನೇರವಾಗಿ ಮಧುಮೇಹ ಹೆಚ್ಚಳವಾಗದೇ ಇದ್ದರೂ ಸಿಹಿ ತಿನ್ನುವ ಬಯಕೆಯಂತೂ ಹೆಚ್ಚುತ್ತದೆ. ಇದರಿಂದ ಸಿಹಿ ತಿನ್ನಲು ಆರಂಭಿಸುತ್ತಾರೆ. 

ಏನೇನು ತಿನ್ನಬಹುದು? 

 ಮಧುಮೇಹಿಗಳ ಊಟದ ತಟ್ಟೆಯಲ್ಲಿ ಹೆಚ್ಚಾಗಿ ಇರಬೇಕಾದದ್ದು ಕಾಳುಗಳು, ತರಕಾರಿಗಳು, ಮೊಟ್ಟೆ, ಮೀನು, ಮಾಂಸ. ಕಾಳುಗಳಲ್ಲಿ ಹೆಚ್ಚಾಗಿ ನಾರಿನಂಶ ಇರುತ್ತದೆ. ಜತೆಗೆ ಪ್ರೋಟಿನ್‌,  ಕಬ್ಬಿಣ, ಫೋಲೆಟ್‌ ಪೊಟ್ಯಾಸಿಯಂ ಹೇರಳವಾಗಿರುತ್ತದೆ.  ಕೊಬ್ಬು, ಕೊಲೆಸ್ಟ್ರಾಲ್‌ ಸೋಡಿಯಂ, ಗ್ಲೈಸೆಮಿಕ್‌ ಇಂಡೆಕ್ಸ್‌ನ ಪ್ರಮಾಣ ಕಡಿಮೆ ಇದ್ದು, ಗ್ಲುಟೆನ್‌ ಮುಕ್ತವಾಗಿರುತ್ತದೆ. ಜತೆಗೆ ಅಗತ್ಯವಿರುವಷ್ಟು ಕಾರ್ಬೋಹೈಡ್ರೇಟ್‌ ಸಿಗುತ್ತದೆ. 

ಮಾಂಸಾಹಾರಗಳಲ್ಲಿ ಕಾರ್ಬೋಹೈಡ್ರೇಟ್‌ ಇರುವುದಿಲ್ಲ. ಹೆಚ್ಚು ಪ್ರೋಟಿನ್ ಸಿಗುತ್ತದೆ. ಖನಿಜಾಂಶ, ಪೋಷಕಾಂಶಗಳು ಹೆಚ್ಚಾಗಿದ್ದು, ಕೊಬ್ಬಿನಂಶ ಹಾಗೂ ಪ್ರೋಟಿನ್‌ ಕಾರಣದಿಂದ ಪದೇ ಪದೇ ಮಧುಮೇಹ ಹೆಚ್ಚಳವಾಗುವುದಿಲ್ಲ. 

ಲೇಖಕರು: ಕ್ಲಿನಿಕಲ್ ನ್ಯೂಟ್ರಿಷನಿಸ್ಟ್, ಆಕ್ಟಿವ್ ಹೆಲ್ತ್ ಡಯಾಬಿಟಿಸ್ ಸೆಂಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.