ಸರಿಯಾದ ಮುನ್ನೆಚ್ಚರಿಕೆ ಹಾಗೂ ಶಿಸ್ತನ್ನು ಅಳವಡಿಸಿಕೊಂಡರೆ ಕೊರೊನಾ ವೈರಸ್ ಸೋಂಕಿನಿಂದ ಪಾರಾಗಬಹುದು. ಸೋಂಕು ತಗುಲಿದರೂ ಕೂಡ ಅದನ್ನು ಎದುರಿಸಿ ಬದುಕುವ ಸಾಧ್ಯತೆ ಹೆಚ್ಚು. ಆದರೆ ಲಾಕ್‌ಡೌನ್ ಸಡಿಲಿಸಿದ ಈ ಸಂದರ್ಭದಲ್ಲಿ ಜನರ ಮನಸ್ಸಿನಲ್ಲಿ ಕೊರೊನಾ ಸೋಂಕಿನ ಕುರಿತಂತೆ ಬಹಳಷ್ಟು ಆತಂಕಗಳು, ಪ್ರಶ್ನೆಗಳಿವೆ. ಈ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ಇಂಟರ್ನಲ್ ಮೆಡಿಸಿನ್ ಕನ್ಸಲ್ಟೆಂಟ್ ಡಾ.ಮಹೇಶ್ ಕುಮಾರ್.
*ಹೊರಗಡೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡ ಸಂದರ್ಭದಲ್ಲಿ ಯಾವ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು?
ಹೊರಗಡೆ ಹೋದಾಗ ಬೇರೆ ವ್ಯಕ್ತಿಗಳಿಂದ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಳ್ಳಿ. ಬಟ್ಟೆಯ ಮಖಗವಸು ಧರಿಸಿ.ಈ ಮುಖಗವಸನ್ನು ನಿತ್ಯ ಬದಲಿಸಿ. ಬೇರೆ ಜನರ ಜೊತೆ ಬೆರೆಯುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಡಿ.
*ಹೊರಗಡೆ ಹೋದಾಗ ಯಾವುದೇ ವ್ಯಕ್ತಿ ನಮ್ಮ ಸಮೀಪದಲ್ಲೇ ಕೆಲವು ಕ್ಷಣ ಓಡಾಡಿದರೆ ಅಥವಾ ಜಾಗಿಂಗ್ ಮಾಡಿದರೆ ಅಥವಾ ಸೈಕಲ್ ಮೇಲೆ ಬಂದರೆ ವೈರಸ್ ಹರಡುತ್ತದೆಯೆ?
ಹೌದು. ಹೀಗಾಗಿ ನಿಮ್ಮ ಸುತ್ತಲಿನ ವ್ಯಕ್ತಿಗಳ ಜೊತೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಲೇಬೇಕು.
*ಜನರ ಮಧ್ಯೆ ಹೆಚ್ಚು ಅಂತರವಿದ್ದರೆ ಹಾಗೂ ತಾಜಾ ಗಾಳಿಯಿದ್ದರೆ ಅಪಾಯ ಅಷ್ಟಿಲ್ಲವೇ?
ಅಪಾಯವೇನೂ ಇಲ್ಲ. ನಾಲ್ಕು ಗೋಡೆಗಳ ನಡುವೆ, ಹೆಚ್ಚು ಗಾಳಿಯಾಡದ ಜಾಗದಲ್ಲಿ ವೈರಸ್ ತೀವ್ರವಾಗಿ ಹರಡುತ್ತದೆ. ಅದೇ ತೆರೆದ ಸ್ಥಳದಲ್ಲಿ ತಾಜಾ ಗಾಳಿಯಿದ್ದರೆ, ಜನರ ಮಧ್ಯೆ ಹೆಚ್ಚು ಅಂತರವಿದ್ದರೆ ಯಾವುದೇ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಅದರಲ್ಲೂ ಈ ಕೊರೊನಾ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದ್ದು, ವ್ಯಕ್ತಿಗಳ ಮಧ್ಯೆ ಸಂಪರ್ಕವಿದ್ದಾಗ ಬಹು ಬೇಗ ಹರಡುತ್ತದೆ. ಅಂದರೆ ಕೆಮ್ಮಿದಾಗ ಅಥವಾ ಸೀನಿದಾಗ ಬಾಯಿಂದ, ಮೂಗಿನಿಂದ ಚಿಮ್ಮುವ ದ್ರವದ ಹನಿಗಳ ಮೂಲಕ ಹರಡುತ್ತದೆ. ಕೋವಿಡ್–19 ಎಲ್ಲಾ ಪ್ರಕರಣಗಳಲ್ಲೂ ಅಪಾಯಕಾರಿಯೇನಲ್ಲ, ಕೆಲವರಲ್ಲಿ ಫ್ಲೂ ತರಹದ ಲಕ್ಷಣಗಳಿರಬಹುದು. ಕಡಿಮೆ ರೋಗ ನಿರೋಧಕ ಶಕ್ತಿ ಇರುವವರಲ್ಲಿ ಅಪಾಯಕಾರಿಯಾಗಬಹುದು. ವೈರಸ್ ಸೋಂಕಿದ್ದವರು ಗುಣವಾಗುವ ಸಾಧ್ಯತೆ ಇದ್ದರೂ ಕೂಡ ಇತರ ಆರೋಗ್ಯ ಸಮಸ್ಯೆಗಳಿರುವವರಿಗೆ ಅಥವಾ ಕಡಿಮೆ ರೋಗ ನಿರೋಧಕ ಶಕ್ತಿ ಇರುವವರಿಗೆ ಹರಡಬಹುದು. ಹೀಗಾಗಿ ಅಂತರ ಕಾಯ್ದುಕೊಂಡು ಸೋಂಕು ಹರಡುವುದನ್ನು ತಪ್ಪಿಸಿ. ಇದಲ್ಲದೇ ಸೋಂಕು ಹೆಚ್ಚಾದರೆ ಆರೋಗ್ಯ ಸೇವಾ ವ್ಯವಸ್ಥೆಯ ಮೇಲೆ ಹೊರೆ ಬೀಳುತ್ತದೆ. ಆಗ ತೀರಾ ಅಗತ್ಯವಿದ್ದವರಿಗೂ ಕೂಡ ವೈದ್ಯಕೀಯ ಸೇವೆ ಲಭ್ಯವಾಗದಂತಹ ಪರಿಸ್ಥಿತಿ ತಲೆದೋರಬಹುದು.
*ಹೊರಗಡೆ ಸ್ವಲ್ಪ ಗಾಳಿ ಬೀಸಿದರೂ ಸಾಕು, ವೈರಸ್ ಅನ್ನು ದುರ್ಬಲಗೊಳಿಸುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಹೀಗಾಗಿ ಹೊರಗಡೆ ಅಡ್ಡಾಡುವುದು ಸುರಕ್ಷಿತವೇ?
ಇದು ಆ ಪ್ರದೇಶ ಅಥವಾ ನಗರದಲ್ಲಿ ಎಷ್ಟು ಮಂದಿ ಸೋಂಕಿತರಿದ್ದಾರೆ ಎನ್ನುವುದನ್ನು ಅವಲಂಬಿಸಿದೆ. ಹೆಚ್ಚು ಸೋಂಕಿತರಿದ್ದರೆ ಆಗ ಹೊರಗಡೆ ಓಡಾಡುವುದು ಹೆಚ್ಚು ಅಪಾಯಕಾರಿ. ಸ್ವಲ್ಪ ಗಾಳಿ ಬೀಸಿದರೂ ವೈರಸ್ ದುರ್ಬಲವಾಗಿ ಹರಡುವುದು ಕಡಿಮೆಯಾಗುತ್ತದೆ. ಆದರೆ ಸಾರ್ವಜನಿಕ ಪ್ರದೇಶ, ಜನನಿಬಿಡ ಜಾಗಕ್ಕೆ ಹೋಗಬೇಡಿ. ಸಾರ್ವಜನಿಕ ಸಾರಿಗೆ, ಶೌಚಾಲಯ ಬಳಸಬೇಡಿ.
*ಒಂದೇ ಒಂದು ವೈರಸ್ ಕೂಡ ಮನುಷ್ಯನಲ್ಲಿ ಸೋಂಕು ಹರಡಬಹುದೇ?
ಇಲ್ಲ. ಒಬ್ಬ ವ್ಯಕ್ತಿಗೆ ಸೋಂಕು ಹರಡಬೇಕಾದರೆ ಹೆಚ್ಚಿನ ಮಟ್ಟ(ಡೋಸ್)ದ ವೈರಸ್ ಬೇಕಾಗುತ್ತದೆ . ಆದರೆ ಕೋವಿಡ್–19 ಹರಡಲು ಎಷ್ಟು ಡೋಸ್ ಬೇಕು ಎಂಬುದು ಇದುವರೆಗೂ ಗೊತ್ತಾಗಿಲ್ಲ. ಇದರ ಹರಡುವಿಕೆ ತೀವ್ರವಾಗಿರುವುದರಿಂದ ವೈರಸ್ ಕಡಿಮೆ ಸಂಖ್ಯೆಯಲ್ಲಿದ್ದರೂ ಸಾಕು.
*ವೈರಸ್ ಎಷ್ಟು ಕಾಲ ಗಾಳಿಯಲ್ಲಿ ಜೀವಂತವಾಗಿರುತ್ತದೆ. ಸೋಂಕಿತ ವ್ಯಕ್ತಿ ಕೇವಲ ಮಾತನಾಡಿದರೂ ಸಾಕು, ವೈರಸ್‌ಗಳಿರುವ ಸಾವಿರಾರು ಎಂಜಲಿನ ಹನಿಗಳು ಗಾಳಿಯಲ್ಲಿ ತೇಲುತ್ತವೆ ಎನ್ನುತ್ತಾರೆ. ಇದು ನಿಜವೇ?
ವೈರಸ್ ಒಳಗೊಂಡಿರುವ ಸೋಂಕಿತ ವ್ಯಕ್ತಿಯ ಎಂಜಲಿನ ಹನಿ– ಇದು 5 ಮೈಕ್ರೊಮೀಟರ್‌ಗಿಂತ ಕಡಿಮೆ ಇರುತ್ತದೆ, ಗಾಳಿಯಲ್ಲಿ 30 ನಿಮಿಷಗಳ ಕಾಲ ತೇಲುತ್ತಿರುತ್ತದೆ. ನಂತರ ನೆಲದ ಮೇಲೆ ಬಿದ್ದು ದಿನಗಟ್ಟಲೆ ಇರಬಹುದು.
*ಕೊರೊನಾ ವೈರಸ್ ನೀರಿನಲ್ಲಿರುತ್ತದೆಯೇ? ಹಾಗಿದ್ದರೆ ರಸ್ತೆಯ ಮೇಲಿರುವ ಮಳೆ ನೀರಿನಲ್ಲೂ ಇರುತ್ತದೆಯೇ?
ವೈರಸ್ ನೀರಿನಲ್ಲಿರಬೇಕಾದರೆ ಅದರ ಉಷ್ಣಾಂಶ, ಅದರಲ್ಲಿರುವ ಸಾವಯವ ಅಂಶ, ಇತರ ಬ್ಯಾಕ್ಟೀರಿಯಾಗಳನ್ನು ಅವಲಂಬಿಸಿರುತ್ತದೆ. ಬಹು ಮುಖ್ಯ ಅಂಶವೆಂದರೆ ಉಷ್ಣಾಂಶ. ಉಷ್ಣಾಂಶ ಹೆಚ್ಚಾದಂತೆ ವೈರಸ್ ಜೀವಂತವಿರುವ ಸಾಧ್ಯತೆ ಕಡಿಮೆ. ಕೊರೊನಾ ವೈರಸ್ ಕೊಚ್ಚೆ ನೀರಿನಲ್ಲಿ ಬಹುಕಾಲವಿರುತ್ತದೆ. ಹೀಗಾಗಿ ಕಲುಷಿತ ನೀರಿನ ಸಂಪರ್ಕಕ್ಕೆ ಮನುಷ್ಯ ಬಂದರೆ ಅಪಾಯಕಾರಿ. ಮಳೆ ನೀರಿಗಿಂತ ರಸ್ತೆಯ ಮೇಲೆ ನಿಂತಿರುವ ಕೊಚ್ಚೆ ನೀರು ವೈರಸ್ ಅನ್ನು ಹರಡಬಲ್ಲದು.
*ಉಪಾಹಾರಗೃಹದಲ್ಲಿರುವ ಮೆನು, ಪಾರ್ಕ್‌ನ ಬೆಂಚ್ ಅನ್ನು ಸ್ಪರ್ಶಿಸಿಕೊಂಡು ಮುಖವನ್ನು ಮುಟ್ಟಿಕೊಂಡರೆ ವೈರಸ್ ಹರಡುತ್ತದೆಯೇ?
ಹೌದು. ಸೋಂಕಿತ ವ್ಯಕ್ತಿ ಇದನ್ನು ಮುಟ್ಟಿದರೆ ಇತರರಿಗೂ ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ ಇಂಥವುಗಳನ್ನು ಆಕಸ್ಮಿಕವಾಗಿ ಮುಟ್ಟಿದರೆ ಆಲ್ಕೋಹಾಲ್ ಇರುವ ಸ್ಯಾನಿಟೈಜರ್ ಅಥವಾ ಸೋಪ್ ಮತ್ತು ನೀರಿನಿಂದ ಕೈ ತೊಳೆದುಕೊಳ್ಳಿ. ಹಾಗೆಯೇ ತೆರೆದ ಕೆಫೆ ಸುರಕ್ಷಿತವಾಗಿದ್ದರೂ ಕೂಡ ವೈರಸ್ ಟೇಬಲ್, ಕುರ್ಚಿ, ಮೆನುಬುಕ್‌ಗೆ ಅಂಟಿಕೊಂಡಿರುವ ಸಾಧ್ಯತೆ ಇರುತ್ತದೆ.
*ಊಟ– ತಿಂಡಿಯನ್ನು ಹಂಚಿಕೊಂಡು ತಿನ್ನುವುದು, ಒಂದೇ ಸರ್ವಿಂಗ್ ಪಾತ್ರೆ ಬಳಸುವುದರಿಂದ ಸೋಂಕು ಹರಡುವುದೇ?
ಹಲವು ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಲಕ್ಷಣಗಳಿಲ್ಲದಿರುವುದು ಕಂಡುಬಂದಿದೆ. ಹೀಗಾಗಿ ಆಹಾರವನ್ನು ಹಂಚಿಕೊಂಡು ತಿನ್ನುವುದು ಸರಿಯಲ್ಲ. ಹಾಗೆಯೇ ಊಟ ಪೂರೈಸುವವನ ಸೋಂಕಿನ ಕುರಿತು ಗೊತ್ತಿಲ್ಲದೇ ಇರುವುದರಿಂದ ಒಂದೇ ಸರ್ವಿಂಗ್ ಪಾತ್ರೆ ಬಳಸುವುದು ಬೇಡ.
*ಮಳೆ ಬಂದರೆ ಕೊರೊನಾ ಸೋಂಕು ಕಡಿಮೆಯಾಗಬಹುದೆ?
ಭಾರಿ ಮಳೆ ಸುರಿದರೆ ವಾತಾವರಣದಲ್ಲಿರುವ ಹಾಗೂ ವಿವಿಧ ವಸ್ತುಗಳ ಮೇಲ್ಮೈನಲ್ಲಿರುವ ವೈರಸ್ ತೊಳೆದುಹೋಗಬಹುದು. ಅಂದರೆ ಮಳೆಗಾಲದಲ್ಲಿ ವೈರಸ್ ಲೋಡ್ ಕಡಿಮೆಯಾಗಬಹುದು. ಆದರೆ ವೈರಸ್ ಸೋಂಕಿರುವ ವ್ಯಕ್ತಿಗಳಲ್ಲಿ ಅದು ಕ್ರಿಯಾಶೀಲವಾಗಿಯೇ ಇರುತ್ತದೆ. ಇದರರ್ಥ ಇಂತಹ ವ್ಯಕ್ತಿಗಳ ದೇಹ ಹೊರದೂಡುವ ವಿವಿಧ ತ್ಯಾಜ್ಯಗಳಿಂದ ಇನ್ನೊಬ್ಬರಿಗೆ ವೈರಸ್ ಸೋಂಕು ಹರಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.