ADVERTISEMENT

ನಮ್ಮದೇ ದೇಹದ ಬಗ್ಗೆನಾಚಿಕೆಯೇಕೆ?

ಲಾವಣ್ಯಗೌರಿ ವೆಂಕಟೇಶ್
Published 23 ಮೇ 2022, 19:30 IST
Last Updated 23 ಮೇ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ದೇಹೋ ದೇವಾಲಯ ಪ್ರೋಕ್ತೋ ಜೀವೋ ದೇವ ಸನಾತನಃ’– ಅಂದರೆ ಈ ದೇಹವೆಂಬ ದೇವಾಲಯದಲ್ಲಿ ಜೀವಾತ್ಮನ ರೂಪದಲ್ಲಿ ಭಗವಂತ ನೆಲೆಸಿದ್ದಾನೆ ಎಂದು. ಅಂತಿದ್ದ ಮೇಲೆ ಅದನ್ನು ಜರಿಯುವುದೇಕೆ? ಎಷ್ಟೇ ಕರಾರುವಕ್ಕಾದ ದೇಹವಿದ್ದರೂ, ಬಹಳಷ್ಟು ಮಂದಿಗೆ ಅದನ್ನು ಇನ್ನೂ ಸರಿ ಮಾಡುವ ಆಸೆ. ಅನೇಕರಿಗೆ ತಮ್ಮ ದೇಹದ ಬಗ್ಗೆ ಒಂದಲ್ಲಾ ಒಂದು ಕೊರಗು ಇದ್ದೇ ಇರುತ್ತದೆ. ಇದಕ್ಕೆ ಪೂರಕವಾಗಿ ನಮ್ಮ ಸುತ್ತಮುತ್ತಲಿರುವವರ ಕುಮ್ಮಕ್ಕು ಬೇರೆ. ಬೇರೆಯವರ ಮಾತಿನಿಂದಲೇ ಬಹಳಷ್ಟು ಜನರು ತಮ್ಮದೇ ದೇಹದ ಮೇಲೆ ಜಿಗುಪ್ಸೆಯನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರಿಗೂ ಆತ್ಮಾಭಿಮಾನದಂತೆ ದೇಹಾಭಿಮಾನವಿರಬೇಕು. ಈ ದೇಹವೆಂಬ ದೇಗುಲ ಹೇಗೇ ಇದ್ದರೂ ಅದರ ಬಗ್ಗೆ ಹೆಮ್ಮೆ ಇರಬೇಕು. ನಮ್ಮ ದೇಹದ ಕಾಳಜಿ ನಮ್ಮ ಕರ್ತವ್ಯವಲ್ಲವೇ?

ಹಿಂದೆಲ್ಲಾ ರೂಪದರ್ಶಿಯರು, ಸಿನಿಮಾ ನಟ-ನಟಿಯರು ಮಾತ್ರ ದೇಹದ ಬಗ್ಗೆ ವಹಿಸುತ್ತಿದ್ದ ಕಾಳಜಿ ಈಗ ಸಾಮಾನ್ಯ ಜನರಿಂದ ಹಿಡಿದು ಸಣ್ಣ ಮಕ್ಕಳವರೆಗೂ ಹಬ್ಬಿದೆ. ನಮ್ಮ ಪಕ್ಕದ ಮನೆಯ 14ರ ಕಿಶೋರಿ ದೇಹದ ತೂಕವನ್ನು ಕಡಿಮೆ ಮಾಡಲು ಜಿಮ್‌ಗೆ ಹೋಗುತ್ತಾಳೆ. ಇದಕ್ಕೆ ಆಕೆಯ ಪೋಷಕರ ಸಹಮತಿ ಇದೆ ಎನ್ನುವುದು ಮಾತ್ರ ವಿಷಾದನೀಯ! ದೇಹದ ಆಕಾರ, ಬಣ್ಣ, ಗಾತ್ರ ಯಾವುದನ್ನೂ ನಾವು ನಿರ್ಧರಿಸಲಾಗುವುದಿಲ್ಲ. ಆದರೆ ದೇಹವನ್ನು ಆರೋಗ್ಯಕರವಾಗಿಟ್ಟುಕೊಳ್ಳುವ ನಿರ್ಣಯ ಮಾತ್ರ ನಮ್ಮದೇ ಆಗಿರುತ್ತದೆ. ಕೆಲವೊಮ್ಮೆ ದೇಹದಲ್ಲಿ ಆಗುವ ಹಾರ್ಮೋನ್‌ನ ಬದಲಾವಣೆಯಿಂದಲೂ ದೇಹದ ಗಾತ್ರದಲ್ಲಿ ವ್ಯತ್ಯಾಸಗಳಾಗುತ್ತವೆ. ಅನುವಂಶೀಯತೆ, ಅಂದರೆ ಜೀನ್ಸ್ ಸಹ ನಮ್ಮ ದೇಹದ ಸ್ಥಿತಿ–ಗತಿಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಿದ್ದ ಮೇಲೆ ಕಾರಣ ತಿಳಿಯದೆ ದೇಹವನ್ನು ದಂಡಿಸುವುದು ಎಷ್ಟರಮಟ್ಟಿಗೆ ಸರಿ? ಹಾಗಾದರೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?

ದಪ್ಪ, ಸಣ್ಣ, ಎತ್ತರ, ಕುಳ್ಳು, ಬಿಳಿ, ಕಪ್ಪು – ಹೀಗೆ ಏನಾದರೊಂದು ವ್ಯಥೆ ಅನೇಕ ಜನರನ್ನು ಕಾಡುತ್ತಲೇ ಇರುತ್ತದೆ. ಪ್ರತಿಯೊಬ್ಬರ ಬದುಕೂ ನಿಂತ ನೀರಲ್ಲ, ನಿರಂತರವಾಗಿ ಹರಿಯುವ ನದಿಯಂತೆ. ಈ ಪಯಣದಲ್ಲಿ ಅನೇಕ ಅಡೆತಡೆಗಳು ಬರುತ್ತಿರುತ್ತವೆ. ಅದನ್ನು ದಾಟಿ ಅಥವಾ ಕೆಲವೊಮ್ಮೆ ಉಪೇಕ್ಷಿಸಿ ಮುಂದೆ ಹೋಗುವುದೇ ಜೀವನ. ದಿನಗಳೆದಂತೆ ದೇಹದಲ್ಲಿ ಬದಲಾವಣೆ ಸಹಜ. ಹುಟ್ಟಿದ ದಿನದಿಂದ ಸಾಯುವವರೆಗೂ ದೇಹದಲ್ಲಿ ಬದಲಾವಣೆ ನಿರಂತರ. ಅದು ಪ್ರಕೃತಿಯ ನಿಯಮ ಕೂಡ! ನಮ್ಮ ಬಗ್ಗೆ ಹಾಗೂ ನಮ್ಮ ದೇಹದ ಬಗ್ಗೆ ನಮಗೆ ಮೊದಲು ಗೌರವವಿರಬೇಕು. ಬೇರೆಯವರ ಟೀಕೆಗೆ ಕೊನೆ ಮೊದಲೆಂಬುದಿಲ್ಲ. ಜಗತ್ತಿನಲ್ಲಿ ಯಾರನ್ನೂ ಯಾವುದರಿಂದಲೂ ತೃಪ್ತಿ ಪಡಿಸಲು ಸಾಧ್ಯವಿಲ್ಲ. ಅಂದ ಮೇಲೆ ಯಾರದೋ ಮಾತಿಗಾಗಿ ನಮ್ಮ ದೇಹದ ಬಗ್ಗೆ ನಾವೇ ನಾಚಿಕೆಪಟ್ಟುಕೊಳ್ಳುವುದು ನ್ಯಾಯವೇ? ನಮ್ಮ ದೇಹ ಹಾಗೂ ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಮಾತ್ರ ನಮ್ಮ ಕರ್ತವ್ಯ. ‘ಜಂಕ್ ಫುಡ್’ ತಿನ್ನದೆ, ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನಮ್ಮ ದೇಹ ಹಾಗೂ ಮನಸ್ಸು ಎರಡೂ ಕ್ರಿಯಾತ್ಮಕವಾಗಿ ಇರುತ್ತದೆ. ಸಕ್ರಿಯ ಕಾರ್ಯಶೀಲತೆಗಾಗಿ, ಚಟುವಟಿಕೆಯಿಂದಿರಲು ವ್ಯಾಯಾಮ ಅಗತ್ಯ. ಆದರೆ ನಮ್ಮ ದೇಹ ಹೇಗಿದೆಯೋ ಹಾಗೆ ಅದನ್ನು ಒಪ್ಪಿಕೊಳ್ಳಬೇಕು. ಅದಕ್ಕೆ ಮಾನಸಿಕ ಸ್ಥೈರ್ಯ ಬೇಕು. ಮೊದಲು ಮನಸ್ಸಿನ ‘ಫಿಟ್‍ನೆಸ್’ ಬಗ್ಗೆ ಗಮನ ಕೊಡುವುದು ಬಹಳ ಮುಖ್ಯ. ಮನಸ್ಸು ಸ್ಥಿರವಾಗಿ, ದೃಢವಾಗಿದ್ದರೆ, ಅದು ಬೇರೆಯವರ ಟೀಕೆಗೆ ಕಿವಿಗೊಡುವುದಿಲ್ಲ.

ADVERTISEMENT

ಸೌಂದರ್ಯವೆನ್ನುವುದು ದೇಹದ ಆಕಾರ ಗಾತ್ರದಿಂದ ಬರುವುದಿಲ್ಲ. ನಿಜವಾದ ಸೌಂದರ್ಯವಿರುವುದು ಪ್ರತಿಯೊಬ್ಬರ ಮನಸ್ಸಿನಲ್ಲಿ. ಮನಸ್ಸು ನಿರ್ಮಲವಾಗಿ, ಪ್ರೌಢವಾಗಿ, ವಿಶಾಲವಾಗಿ, ಶಾಂತವಾಗಿದ್ದರೆ ದೇಹದ ಮೇಲೆ ಅದರ ಪರಿಣಾಮವನ್ನು ತೋರುತ್ತದೆ. ಮನಸ್ಸಿನ ಆರೋಗ್ಯದ ಕಡೆ ಗಮನ ಕೊಟ್ಟರೆ ದೇಹಾರೋಗ್ಯ ತಾನಾಗೇ ಸುಧಾರಿಸುತ್ತದೆ. ‘ಪರ್‍ಫೆಕ್ಟ್ ಬಾಡಿ’(ಕರಾರುವಕ್ಕಾದ ದೇಹ)ಯ ಕಲ್ಪನೆಗೆ ಸಿಲುಕಿ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು. ಪ್ರತಿಯೊಬ್ಬರೂ ನಮ್ಮನ್ನು ನಾವಿರುವ ಹಾಗೇ ಒಪ್ಪಿಕೊಂಡು ಗೌರವಿಸಿ, ಪ್ರೀತಿಸಿದಾಗಲೇ, ಮತ್ತೊಬ್ಬರನ್ನು ಗೌರವಿಸಲು ಹಾಗೂ ಪ್ರೀತಿಸಲು ಸಾಧ್ಯ! ದೇಹ ಮತ್ತು ಮನಸ್ಸಿನ ‘ಫಿಟ್‍ನೆಸ್’ಗಾಗಿ ನಗುವೆಂಬ ಆಭರಣವೊಂದನ್ನು ಧರಿಸಿದರೆ ಸಾಕು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.