ADVERTISEMENT

ಆರೋಗ್ಯ: ಫ್ಯಾಟಿ ಲಿವರ್‌ ಎಚ್ಚರ ತಪ್ಪದಿರಿ

ಪ್ರಜಾವಾಣಿ ವಿಶೇಷ
Published 20 ಜುಲೈ 2024, 0:34 IST
Last Updated 20 ಜುಲೈ 2024, 0:34 IST
   

ಒಂದು ಗುಟುಕು ಆಲ್ಕೋಹಾಲ್‌ ಕುಡಿಯದೆಯೂ ಯಕೃತ್ತು (ಲಿವರ್‌) ಹಾನಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದನ್ನು ನಾನ್‌ ಆಲ್ಕೊಹಾಲಿಕ್‌ ಫ್ಯಾಟಿ ಲಿವರ್‌ ಡಿಸಿಸ್ ( NAFLD) ಎನ್ನಲಾಗುತ್ತದೆ. ಹೆಚ್ಚಾಗಿ ಬೊಜ್ಜು ಇರುವವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.

ವಿಪರೀತ ಎನ್ನುವಷ್ಟು ಬೊಜ್ಜು ಶೇಖರಣೆಯಾಗುವುದರಿಂದ ಲಿವರ್‌ ಎನ್ನುವ ಅಂಗವು ಕೈಗೊಳ್ಳುವ ಚಟುವಟಿಕೆಗಳ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಇದರಿಂದ ಲಿವರ್‌ನ ಕಾರ್ಯವೈಖರಿಯಲ್ಲಿ ಅಡ್ಡಿ ಉಂಟಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್‌ ಸಮಸ್ಯೆ ಅಧಿಕಗೊಳ್ಳುತ್ತಿದ್ದು, ಜೀವನಶೈಲಿಯೇ ಇದಕ್ಕೆ ಪ್ರಮುಖ ಕಾರಣ. ಕೊಬ್ಬಿದ ಯಕೃತ್ತಿನ ಕಾಯಿಲೆ (NAFLD) ಅಪರೂಪಕ್ಕೆ ಆಲ್ಕೋಹಾಲ್‌ ಸೇವಿಸುವವರಲ್ಲಿಯೂ ಕಾಣಿಸಿಕೊಳ್ಳಬಹುದು.

ADVERTISEMENT

ಜಾಗತಿಕ ಮಟ್ಟದಲ್ಲಿಯೂ ಫ್ಯಾಟಿ ಲಿವರ್‌ ದೊಡ್ಡ ಸಮಸ್ಯೆಯಾಗಿದ್ದೂ ಸಣ್ಣ ಪ್ರಮಾಣದ ಸ್ಟಿಟೋಸಿಸ್‌ನಿಂದ ಹಿಡಿದು ಸ್ಟೀಟೋಹೈಪಟೈಟಿಸ್‌ನವರೆಗೂ ಯಕೃತ್ತಿನ ಸಮಸ್ಯೆ ಗಂಭೀರಗೊಳ್ಳುವ ಸಾಧ್ಯತೆ ಹೆಚ್ಚು. ಮೆಟಬಾಲಿಕ್ ಡಿಸ್‌ಫಂಕ್ಷನ್ಸ್‌-ಅಸೋಸಿಯೇಟೆಡ್ ಸ್ಟೀಟೋಟಿಕ್ ಲಿವರ್ ಡಿಸೀಸ್ (MASLD) ಕ್ರಮೇಣ ಮೆಟಾಬಾಲಿಕ್ ಡಿಸ್ಫಂಕ್ಷನ್-ಅಸೋಸಿಯೇಟೆಡ್ ಸ್ಟೀಟೊಹೆಪಟೈಟಿಸ್ (MASH) ಗಂಭೀರ ಸ್ವರೂಪಕ್ಕೆ ತಿರುಗಬಹುದು. 

ಏನಿದು ಸ್ಟೀಟೋಹೈಪಟೈಟಿಸ್‌?

ಯಕೃತ್ತಿನಲ್ಲಿ ಯಥೇಚ್ಛವಾಗಿ ಕೊಬ್ಬು ಶೇಖರಣೆಯಾಗುತ್ತದೆ.  ಅತಿಯಾದ ಕುಡಿತ ಇರುವವರಲ್ಲಿ ಉಂಟಾಗುವಂತೆಯೇ ಯಕೃತ್ತಿನ ಊರಿಯೂತ, ನಂತರದ ಹಂತವಾಗಿ ಸಿರೋಸಿಸ್‌ ಉಂಟಾಗಬಹುದು. ಕ್ರಮೇಣ ಯಕೃತ್ತಿನಲ್ಲಿ ಕ್ಯಾನ್ಸರ್‌ ಉಂಟಾಗಲು ಕಾರಣವಾಗಬಹುದು. ಹಾಗಾಗಿ ಇದನ್ನು ನಿರ್ಲಕ್ಷ್ಯಿಸುವಂತಿಲ್ಲ.

ಸಾಮಾನ್ಯವಾಗಿ ಎಂಎಎಸ್‌ಎಲ್‌ಡಿ ಲಕ್ಷಣರಹಿತವಾಗಿರುತ್ತದೆ. ತೀವ್ರಗೊಂಡಾಗ ಆಯಾಸ, ಅಸ್ವಸ್ಥತೆ, ಪದೇ ಪದೇ ಜ್ವರ ಬರುವುದು. ಮೇಲಿನ ಬಲ ಭಾಗದ ಹೊಟ್ಟೆಯಲ್ಲಿ ಅತಿಯಾದ ನೋವು ಉಂಟಾಗಬಹುದು. ಎಂಎಎಸ್‌ಎಚ್‌ ಮತ್ತು ಸಿರೋಸಿಸ್‌ ಉಂಟಾದರೆ ಚರ್ಮ ತುರಿಕೆ, ಕಿಬ್ಬೊಟ್ಟೆಯ ಊತ, ಉಸಿರಾಟದ ತೊಂದರೆ, ಕಾಲುಗಳ ಊತ, ಚರ್ಮದಡಿಯಲ್ಲಿ ಜೇಡದಂಥ ರಕ್ತನಾಳಗಳು ಕಾಣಿಸಿಕೊಳ್ಳಬಹುದು. ಅಂಗೈನಲ್ಲಿ ಕೆಂಪು ದದ್ದು ಉಂಟಾಗಬಹುದು. ಚರ್ಮ ಹಾಗೂ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ.

ಕೊಬ್ಬಿನಿಂದ ಕೂಡಿದ ಯಕೃತ್ತುಗಳಿಗೆ ಗಂಭೀರ ಸ್ವರೂಪದ ಎಂಎಎಸ್‌ಎಚ್‌ ಹೇಗೆ ಉಂಟಾಗುತ್ತದೆ ಎಂಬುದಕ್ಕೆ  ನಿಖರ ಕಾರಣ ಇನ್ನೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ವಂಶವಾಹಿನಿ, ಅಧಿಕತೂಕ ಅಥವಾ ಬೊಜ್ಜು, ಇನ್ಸುಲಿನ್‌ ಬಳಕೆ, ಟೈಪ್‌ 2 ಡಯಾಬಿಟಿಸ್‌, ಕೊಬ್ಬಿನ ಮಟ್ಟ ಇವೆಲ್ಲವೂ ಕಾರಣಗಳಾಗಬಹುದು. ಇವುಗಳಲ್ಲದೇ ಕೆಲವು ಕಾರಣಗಳು ಹೀಗಿವೆ...

  • ಅತಿಯಾದ ಫಾಸ್ಟ್‌ಫುಡ್‌ಗಳ ಸೇವನೆ

  • ಹಣ್ಣು ಹಾಗೂ ತರಕಾರಿ ಸೇವನೆ ಕಡಿಮೆ ಮಾಡುವುದು

  • ಅನಾರೋಗ್ಯಕರ ಮತ್ತು ವ್ಯಾಯಾಮರಹಿತ ಜೀವನ

  • ಸುಲಭವಾಗಿ ಸಿಗುವ ಔಷಧಿಗಳ ಸೇವನೆಯಿಂದಲೂ ಯಕೃತ್ತು ಹಾನಿಗೊಳಗಾಗಬಹುದು.

ಗ್ಯಾಸ್ಟ್ರೋಎಂಟ್ರಾಲಜಿ ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥ, ಸಾಕ್ರಾ ವರ್ಲ್ಡ್‌ ಆಸ್ಪತ್ರೆ.]

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.