ADVERTISEMENT

ಕೋಪದ ತಾಪವ ಬಲ್ಲಿರಾ?

ನಮ್ಮೊಳಗಿರುವ ನೋವು, ಭಯ ಹಾಗೂ ಹತಾಶೆಗಳು ಪ್ರಕಟಿಸುವ ಭಾವವೇ ಕೋಪ

ಲಾವಣ್ಯಗೌರಿ ವೆಂಕಟೇಶ್
Published 11 ಸೆಪ್ಟೆಂಬರ್ 2018, 19:30 IST
Last Updated 11 ಸೆಪ್ಟೆಂಬರ್ 2018, 19:30 IST
ಕೋಪ ಭಾವ
ಕೋಪ ಭಾವ   

ಒ ಬ್ಬ ಬಡಗಿಯು ಅಂದಿನ ತನ್ನ ಕೆಲಸ ಮುಗಿಸಿ, ಅಂಗಡಿಯನ್ನು ಮುಚ್ಚಿ ಮನೆಗೆ ಹೊರಟನು. ಅವನು ಹೊರಟ ತರುವಾಯ ಹಾವೊಂದು ಅವನ ಅಂಗಡಿಯನ್ನು ಪ್ರವೇಶಿಸಿತು. ಆಹಾರವನ್ನು ಹುಡುಕುತ್ತಾ ಅಂಗಡಿಯೊಳಗೆ ಅತ್ತಿಂದಿತ್ತ ಸರಿದಾಡತೊಡಗಿತು. ಅಲ್ಲೇ ಬಿದ್ದಿದ್ದ ಗರಗಸವೊಂದರ ಅಂಚಿಗೆ ಹಾವಿನ ಬಾಲ ತಾಕಿ, ಹಾವಿಗೆ ನೋವಾಯಿತು. ಕೋಪಗೊಂಡ ಹಾವು ಗರಗಸವನ್ನು ಬಲವಾಗಿ ಕಚ್ಚಿತು. ಹಾವಿನ ಬಾಯಿ ಹರಿದು ರಕ್ತಮಯವಾಯಿತು. ಇದರಿಂದ ಇನ್ನೂ ಕೋಪಗೊಂಡ ಮೂರ್ಖ ಹಾವು ಗರಗಸವನ್ನು ತನ್ನ ಮೈಯಿಂದ ಸುತ್ತು ಹಾಕಿ, ಸಿಟ್ಟಿನಿಂದ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಾ ಹೋಯಿತು. ಪರಿಣಾಮ ಹಾವಿನ ಮರಣ! ಕೋಪದ ಮತ್ತಿನಲ್ಲಿ ಹಾವು ತನ್ನ ಪ್ರಾಣವನ್ನೂ ಸಹ ಲೆಕ್ಕಿಸದೆ, ಗರಗಸದ ವಿರುದ್ಧ ಸೇಡು ತೀರಿಸಿಕೊಳ್ಳುವ ಛಲದಲ್ಲಿ ತಾನೇ ಬಲಿಯಾಗಿತ್ತು!

ನಾವು ಮಾನವರೂ ಈ ಹಾವಿನಂತೆಯೇ! ಕೋಪ ಬಂದಾಗ ಯಾವುದನ್ನೂ ಯಾರನ್ನೂ ಲೆಕ್ಕಿಸುವುದಿಲ್ಲ. ಈ ಮೇಲಿನ ದೃಷ್ಟಾಂತದಂತೆಯೇ ಸಿಟ್ಟು ಮೊದಲು ಬಾಧಿಸುವುದು ಸಿಟ್ಟುಗೊಂಡವರನ್ನೇ! ಕೋಪ ಬಂದಾಗ ಯಾರಿಗೂ ಇದು ಅರಿವಿಗೆ ಬರುವುದಿಲ್ಲ. ಕೋಪ ಮೊದಲು ಕೋಪಗೊಂಡವರನ್ನು ದಹಿಸಿ, ನಂತರ ಬೇರೆಯವರಿಗೆ ಅದರ ಬಿಸಿಯನ್ನು ತಾಕಿಸುತ್ತದೆ. ಅಗ್ನಿ ಉರಿದರೆ ತಾನೆ ಶಾಖ ಉತ್ಪತ್ತಿ ಆಗುವುದು. ಹಾಗೆಯೇ ಕೋಪವೂ! ಹಾಗಾದರೆ ಈ ‘ಕೋಪ’ ಎಂದರೆ ಏನು? ಇದು ಏಕೆ ಬರುತ್ತದೆ? ಕೋಪ ಎನ್ನುವುದು ಎಲ್ಲಿಂದಲೋ ಬಂದು ನಮ್ಮನ್ನು ಆವರಿಸುವಂಥದ್ದಲ್ಲ. ನಮ್ಮೊಳಗಿರುವ ನೋವು, ಭಯ ಹಾಗೂ ಹತಾಶೆಗಳ ಕಾರಣದಿಂದಾಗಿ ಪ್ರಕಟವಾಗುವ ಭಾವವೇ ‘ಕೋಪ’! ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸದೆ ಸಹನೆಯನ್ನು ಕಳೆದುಕೊಂಡರೆ ಕೋಪ ಬರುತ್ತದೆ. ಸಿಟ್ಟು ಎನ್ನುವುದು ನಮ್ಮೊಳಗೇ ಇರುವ ನಮ್ಮ ಶತ್ರು.

ಕೋಪವೆನ್ನುವುದು ಸಹಜವಾದ ಭಾವ; ಆರೋಗ್ಯಕರವಾದ ಭಾವ ಕೂಡ ಎನ್ನಬಹುದು. ಅಳು, ನಗು, ಭಯ, ಹತಾಶೆಗಳು ಹೇಗೋ ಹಾಗೆಯೇ ಕೋಪವೂ ಒಂದು ಭಾವನೆ. ಈ ಕೋಪವೆಂಬ ಭಾವನೆಯ ಜೊತೆ ನಾವು ಹೇಗೆ ‘ಒಪ್ಪಂದ’ ಮಾಡಿಕೊಳ್ಳುತ್ತೇವೆನ್ನುವುದರ ಮೇಲೆ ನಮ್ಮ ಕೋಪದ ಮಟ್ಟವನ್ನು ಅಳೆಯಬಹುದು. ‘ಅತಿಯಾದರೆ ಅಮೃತವೂ ವಿಷ’ ಎನ್ನುವ ಗಾದೆಮಾತಿನಂತೆ, ಕೋಪವೊಂದೇ ಅಲ್ಲ, ಯಾವ ಭಾವನೆಯೂ ಅತಿಯಾಗಬಾರದು.

ADVERTISEMENT

ಹಿಡಿತವಿಲ್ಲದ ಕೋಪವು ನಮ್ಮ ಆರೋಗ್ಯದ ಮೇಲೂ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಕೋಪದಿಂದ ಸಂಬಂಧಗಳಲ್ಲಿ ಏರ್ಪಡುವ ಬಿರುಕುಗಳು ಎಲ್ಲರಿಗೂ ತಿಳಿದದ್ದೇ. ಕೋಪ ನಮ್ಮ ದೇಹದ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆಂದು ನೋಡೋಣ. ಸಿಟ್ಟು ಬಂದಾಗ ಹೃದಯದ ರಕ್ತನಾಳಗಳಲ್ಲಿ ಬಿಗಿತ ಉಂಟಾಗುತ್ತದೆ. ಹಾರ್ಮೋನುಗಳಲ್ಲಿ ಏರಿಳಿತವಾಗುತ್ತದೆ. ಇದರಿಂದ ಎಡಭಾಗದ ಮೆದುಳು ಹೆಚ್ಚು ಉತ್ತೇಜನಗೊಳ್ಳುತ್ತದೆ. ಈ ಕಾರಣದಿಂದ ದೇಹದಲ್ಲಿ ಅಸಮತೋಲನ ಉಂಟಾಗುತ್ತದೆ. ಕೆಲವೊಮ್ಮೆ ಕೋಪಗೊಂಡಿರುವವರು ನಡುಗುವುದನ್ನು ನೀವು ಗಮನಿಸಿರಬಹುದು. ಕೋಪದ ತೀವ್ರತೆ ನಮ್ಮ ದೇಹವನ್ನೇ ನಿರ್ಬಲಗೊಳಿಸಿಬಿಡುತ್ತದೆ. ಕೇವಲ ಹುಬ್ಬು ಗಂಟಿಕ್ಕಿ ತುಸು ಕೋಪ ತೋರಿದಾಗಲೂ 43 ಮಾಂಸಖಂಡಗಳ ಸಹಾಯ ಬೇಕಾಗುತ್ತದೆ. ಅದೇ ಮುಗುಳ್ನಕ್ಕಾಗ ಕೇವಲ 17 ಮಾಂಸಖಂಡಗಳ ಸಹಾಯ ಬೇಕಾಗುತ್ತದೆ! ಸಣ್ಣ ಮುನಿಸಿಗೇ 43 ಮಾಂಸಖಂಡಗಳ ಸಹಾಯ ಬೇಕಾದಾಗ ಇನ್ನು ಕೋಪದಿಂದ ನಖ–ಶಿಖಾ ಎಂದು ಉರಿದರೆ ಆಗ ಶಕ್ತಿ–ಸಾಮರ್ಥ್ಯಗಳುಎಷ್ಟು ಬೇಕಾಗಬಹುದು ಎಂದು ಒಮ್ಮೆ ಯೋಚಿಸಿ ನೋಡಿ. ಇದೇ ಶಕ್ತಿಯನ್ನು ಬೇರೆಯ ಕಾರ್ಯಕ್ಕೆ ಸಕಾರಾಕ್ಮವಾಗಿ ಉಪಯೋಗಿಸಬಹುದಲ್ಲವೇ?

ಕೋಪ ಬಂದಾಗಿನ ತೀವ್ರತೆ ಹೆಚ್ಚು ಹೊತ್ತು ಉಳಿಯುವುದಿಲ್ಲ. ಒಬ್ಬ ಮನುಷ್ಯ 20 ನಿಮಿಷ ಕೋಪದ ಉತ್ತುಂಗ ಸ್ಥಿತಿಯಲ್ಲಿದ್ದರೆ, ಆತ ಮರಣ ಹೊಂದಬಲ್ಲ! ಆಶ್ಚರ್ಯವಾದರೂ ಇದು ಸತ್ಯ! ಸಿಟ್ಟು ಬಂದಾಗ ನಿಮ್ಮನ್ನೇ ನೀವು ಗಮನಿಸಿ ನೋಡಿ. ಕೋಪದ ತೀವ್ರತೆ ಕೆಲವು ನಿಮಿಷಗಳು ಮಾತ್ರ ಇರುತ್ತದೆ. ಹೆಚ್ಚೆಂದರೆ 2-3 ನಿಮಿಷಗಳು. ಅದರ ನಂತರ ಕೋಪದ ಕಾವು ಕಡಿಮೆಯಾಗುತ್ತದೆ. ಕೋಪ ಇರುತ್ತದೆ, ಆದರೆ ಅದರ ತೀವ್ರತೆ ಕಡಿಮೆಯಾಗುತ್ತದೆ. ಇದು ನಮ್ಮ ದೇಹವೇ ತನ್ನನ್ನು ತಾನು ರಕ್ಷಿಸಿಕೊಳ್ಳಲು ಕಂಡುಕೊಂಡಿರುವ ಉಪಾಯ!

ಹಾಗಾದರೆ ಸ್ವಾಭಾವಿಕವಾದ ಕೋಪವೆನ್ನುವ ಭಾವನೆಯನ್ನು ಅತಿಯಾಗದ ಹಾಗೆ ಸಂಭಾಳಿಸುವುದು ಹೇಗೆ?

ಬಹಳ ಸರಳವಾದ ಹಾಗೂ ಸುಲಭವಾದ ವಿಧಾನವೆಂದರೆ, ಅಂಗೀಕೃತ ಭಾವನೆ. ಯಾವುದೇ ವಿಷಯವಾಗಲೀ ವಸ್ತುವಾಗಲೀ ವ್ಯಕ್ತಿಯಾಗಲೀ ನಾವು ಯೋಚಿಸಿದಂತೆಯೇ ಇರಲಿ ಎನ್ನುವುದು ಪ್ರತಿಯೊಬ್ಬರ ಯೋಚನೆ. ಅದು ಹಾಗಿಲ್ಲದಿದ್ದಾಗ ನಮಗೆ ಸಿಟ್ಟು ಬರುತ್ತದೆ. ಅದರ ಬದಲು ಯಾವುದೇ ವ್ಯಕ್ತಿಯಾಗಲೀ, ವಸ್ತುವಾಗಲೀ ಅಥವಾ ವಿಷಯವಾಗಲೀ ಅವು ಇರುವ ಹಾಗೇ ನಾವು ಒಪ್ಪಿಕೊಂಡರೆ ಸಿಟ್ಟು ಬರುವುದೇ ಇಲ್ಲ. ಪ್ರಯತ್ನಿಸಿ ನೋಡಿ, ನಿಮಗೇ ತಿಳಿಯುತ್ತದೆ. ಉದಾಹರಣೆಗೆ, ದಾರಿಯಲ್ಲಿ ಹೋಗುವಾಗ ಒಬ್ಬ ವ್ಯಕ್ತಿ ನಿಮ್ಮ ವಾಹನವನ್ನು ದಾಟಿ ಮುಂದೆ ಹೋಗುತ್ತಾನೆ. ಕೋಪಗೊಂಡ ನೀವು ಮತ್ತೆ ಅವನನ್ನು ಹಿಂದಿಕ್ಕುವ ಪ್ರಯತ್ನವನ್ನು ಮಾಡುತ್ತೀರಿ. ಅದರ ಬದಲು, ಅವಸರದಲ್ಲಿ ಹೋಗುತ್ತಿರುವ ವ್ಯಕ್ತಿಗೆ ಯಾವುದೋ ಮುಖ್ಯವಾದ ಕೆಲಸವಿರಬೇಕೆಂದು ಭಾವಿಸಿ, ಆತನನ್ನು ಮುಂದೆ ಹೋಗಲು ಬಿಡಿ. ಇಲ್ಲಿ ಕೋಪದಿಂದ ಆತನನನ್ನು ಮುಂದೆ ಹೋಗಲು ಬಿಟ್ಟರೆ ಪ್ರಯೋಜನವಿಲ್ಲ. ಆ ವ್ಯಕ್ತಿಯ ಸ್ಥಿತಿಯನ್ನು ಒಪ್ಪಿಕೊಂಡು ಮುಂದೆ ಹೋಗಲು ಬಿಡಿ; ಆಗ ಕೋಪ ಬರುವುದಿಲ್ಲ. ಹೀಗೆ ನಡೆದುಕೊಳ್ಳುವುದಕ್ಕೆ ಬಹಳ ಸಹನೆಯ ಅವಶ್ಯಕತೆಯಿದೆ. ಇದು ಒಮ್ಮೆಗೇ ಆಗುವ ಜಾದೂ ಅಲ್ಲ. ಆದರೆ ಪ್ರಯತ್ನಪಟ್ಟರೆ ಖಂಡಿತ ಫಲ ಉಂಟು.

ಕೋಪವನ್ನು ನಮ್ಮ ಹದ್ದು ಬಸ್ತಿನಲ್ಲಿಡುವ ಮತ್ತೊಂದು ಉಪಾಯವೆಂದರೆ, ಸಮಸ್ಯೆಗೆ ಸಾಧ್ಯವಾದ ಮಟ್ಟಿಗೆ ಆ ಕ್ಷಣಕ್ಕೆ ಪರಿಹಾರ ಕಂಡುಕೊಳ್ಳುವುದು. ಇದು ಹೇಗೆಂದು ನೋಡೋಣ. ನಿಮ್ಮ ಮಗ ಅಥವಾ ಮಗಳು ತನ್ನ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಂಡಿಲ್ಲ ಎಂದು ಭಾವಿಸೋಣ. ಅವರ ಮೇಲೆ ಕೋಪಗೊಂಡು ಕೂಗಾಡಿ, ಕಿರುಚಾಡುವುದಕ್ಕಿಂತ, ಸದ್ಯಕ್ಕೆ ಅವರ ರೂಮಿನ ಬಾಗಿಲನ್ನು ಮುಚ್ಚಿ ಬೇರೆಡೆಗೆ ಬನ್ನಿ. ಆ ಕ್ಷಣ ಕಳೆದ ನಂತರ ನೀವೇ ವಿಸ್ಮಯ ಪಡುವಂತೆ ನಿಮ್ಮ ಕೋಪ ತಣ್ಣಗಾಗಿರುತ್ತದೆ. ನಂತರ ನಿಮ್ಮ ಮಗ/ಮಗಳನ್ನು ಕರೆದು ಮಾತನಾಡಿ. ಹೀಗೆ ಮಾತನಾಡುವಾಗ ‘ನಾನು’ ಎಂದು ಬಳಸುವುದನ್ನು ಕಡಿಮೆ ಮಾಡಿ. ‘ನೀನು ಕೋಣೆಯನ್ನು ಸ್ವಚ್ಛವಾಗಿಟ್ಟುಕೊಂಡಿಲ್ಲ, ಅದರಿಂದ 'ನನಗೆ' ಅಸಮಾಧಾನವಾಗಿದೆ ಎನ್ನುವುದಕ್ಕಿಂತ, ‘ನಿನ್ನ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಂಡರೆ, ನಿನಗೇ ಒಳ್ಳೆಯದು’ ಎಂದು ಹೇಳಿ. ‘ನಾನು’, ‘ನನಗೆ’, ‘ನನ್ನ’ ಎನ್ನುವ ಅಹಂ ಯಾವಾಗಲೂ ಸಂಬಂಧಗಳಲ್ಲಿ ಬಿರುಕನ್ನುಂಟುಮಾಡುತ್ತದೆ. ಅಹಂನಿಂದಾಗಿ ಇಬ್ಬರ ನಡುವೆ ಒತ್ತಡ ಸೃಷ್ಟಿಯಾಗುತ್ತದೆ; ವೈಮನಸ್ಯಕ್ಕೆ ಕಾರಣವಾಗುತ್ತದೆ.

ಬಂದಿರುವ ಕೋಪವನ್ನು ಅದುಮಿಟ್ಟುಕೊಳ್ಳುವುದಕ್ಕಿಂತ ಹೊರ ಹಾಕುವುದು ಉತ್ತಮ ಎಂದು ಕೆಲವರ ಅಭಿಪ್ರಾಯ. ಆದರೆ ಕೋಪವನ್ನು ಹೊರ ಹಾಕುವಾಗ ಸರಿಯಾದ ಸಮಯ, ಸರಿಯಾದ ವ್ಯಕ್ತಿ, ಸರಿಯಾದ ಕಾರಣ ಹಾಗೂ ಸರಿಯಾದ ವಿಧಾನ ಇಲ್ಲದಿದ್ದರೆ ಬಹಳ ಕೆಡುಕಾಗುತ್ತದೆ ಎನ್ನುವುದನ್ನೂ ಮರೆಯುವಂತಿಲ್ಲ. ಕಾರಣ, ಕೋಪವೆನ್ನುವುದು ಕೆಂಪಗೆ ಕಾದ ಕೆಂಡದಂತೆ. ಅದನ್ನು ಹಿಡಿದಿಟ್ಟರೂ ಕಷ್ಟ, ಹಾಗೆಯೇ ಬೇರೆಯವರ ಮೇಲೆ ಹರಿಬಿಟ್ಟರೂ ಕಷ್ಟ. ಒಂದಂತೂ ನಿಜ; ಅದರ ಬಿಸಿ ಮೊದಲು ತಾಗುವುದು ಕೋಪಗೊಂಡವರಿಗೇ! ಕೆಲವು ವ್ಯಕ್ತಿಗಳು ಕೋಪವನ್ನು ನಿಗ್ರಹ ಮಾಡುತ್ತೇವೆಂದು ಬಹಳ ಕಷ್ಟಪಟ್ಟು ಕೋಪವನ್ನು ತಮ್ಮೊಳಗೇ ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇದು ಬಹಳ ಅಪಾಯಕರ.

ಹೇಗೆಂದರೆ, ತಮ್ಮೊಳಗೇ ವಿಷವನ್ನು ಇಟ್ಟುಕೊಂಡು ಮತ್ತೊಬ್ಬರು ಸಾಯಲಿ ಎಂದು ಬಯಸಿದ ಹಾಗೆ! ಕೋಪ ಬಂದಾಗ, ಮನಸ್ಸು ಯೋಚಿಸುವುದಕ್ಕಿಂತ ಮುಂಚೆಯೇ ಮಾತು ಬಾಯಿಂದ ಹೊರ ಬರುತ್ತದೆ. ಅದು ಸರಿಯೋ ತಪ್ಪೋ ಎನ್ನುವ ವಿವೇಚನೆಯೂ ಇರುವುದಿಲ್ಲ. ಇಲ್ಲಿ ಮನೋವೇಗಕ್ಕಿಂತ ಮಾತಿನ ವೇಗವೇ ಹೆಚ್ಚಾಗಿರುತ್ತದೆ. ಕೋಪಗೊಂಡಾಗ ಮಾಡಿದ ತಪ್ಪುಗಳನ್ನು, ಕೋಪ ಶಮನವಾದ ನಂತರವೂ ಸರಿಪಡಿಸಲು ಸಾಧ್ಯವಿಲ್ಲ. ಅದಕ್ಕೆಂದೇ ಕನ್ನಡದ ನಾಣ್ನುಡಿಯೊಂದು ಹೇಳುವುದು: ‘ಕೋಪದಲ್ಲಿ ಕೊಯ್ದ ಮೂಗು, ಶಾಂತವಾದ ಮೇಲೆ ಬರುವುದಿಲ್ಲ’. ಸಿಟ್ಟಿನಲ್ಲಿ ನಾವಾಡಿದ ಮಾತುಗಳನ್ನು ಬೇರೆಯವರು ಕ್ಷಮಿಸಬಹುದು. ಆದರೆ ಆ ಮಾತುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮಾತನಾಡುವ ಮೊದಲು ಯೋಚಿಸಿ ಮಾತನಾಡಿ. ಕೋಪದ ಕೈಗೆ ನಿಮ್ಮ ನಾಲಿಗೆಯನ್ನು ಎಂದಿಗೂ ಕೊಡಬೇಡಿ. ಮೊದಲೇ ನೋಡಿದಂತೆ, ಕೋಪಗೊಂಡಾಗ ನಾವು ವಿವೇಚನಾರಹಿತರಾಗುತ್ತೇವೆ. ಯೋಚಿಸದೇ ಮಾತುಗಳು ಬಾಯಿಂದ ಹೊರಬೀಳುತ್ತವೆ. ಆಮೇಲೆ ಪಶ್ಚಾತ್ತಾಪಪಟ್ಟರೆ, ಆಡಿದ ಮಾತುಗಳನ್ನು ವಾಪಸ್ಸು ತೆಗೆದುಕೊಳ್ಳಲು ಆಗುವುದಿಲ್ಲ. ಕೆಲವೇ ಕ್ಷಣಗಳು ಸಾಕು ಚಿಂತಿಸಲು. ಆದ್ದರಿಂದ ಒಂದು ಕ್ಷಣವಾದರೂ ಚಿಂತಿಸಿ, ನಂತರ ಮಾತನಾಡಿ. ಆಗ ಕೋಪ ತಹಬಂದಿಗೆ ಬರುತ್ತದೆ.

ಕೋಪಕ್ಕೆ ಮೂಲ ಕಾರಣ ಒತ್ತಡ ಹಾಗೂ ಹತಾಶೆ. ದೈಹಿಕ ವ್ಯಾಯಾಮ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಒತ್ತಡ ಕಡಿಮೆಯಾದ ತಕ್ಷಣ ಕೋಪವೂ ನಿಯಂತ್ರಣಕ್ಕೆ ಬರುತ್ತದೆ. ದೈಹಿಕ ವ್ಯಾಯಾಮವನ್ನು ನಿರಂತರವಾಗಿ ದಿನವೂ ಮಾಡಬೇಕು. ಒಂದು ದಿನದ ವ್ಯಾಯಾಮದಿಂದ ಕೋಪದ ನಿಯಂತ್ರಣವಾಗುವುದಿಲ್ಲ. ಕೋಪ ಬಂದಾಗ ನೀವಿರುವ ಜಾಗವನ್ನು ತಕ್ಷಣ ಬದಲಿಸಿ. ಆ ಜಾಗವನ್ನು ಬಿಟ್ಟು ಹೊರ ಬಂದು ಬಿರುಸಾದ ನಡಿಗೆಯಲ್ಲಿ ತೊಡಗಿ. ನಂತರ ನೋಡಿ – ಕೆಲವೇ ನಿಮಿಷಗಳಲ್ಲಿ ಕೋಪ ಕಡಿಮೆಯಾಗಿರುತ್ತದೆ. ಇಲ್ಲಿ ತಾಳ್ಮೆಯಿಂದ ಇದ್ದ ಜಾಗವನ್ನು ಖಾಲಿ ಮಾಡುವುದೇ ಮುಖ್ಯವಾದ ಕೆಲಸ. ಸಿಟ್ಟಿನ ತಹಬಂದಿಗೆ ಇನ್ನೊಂದು ವ್ಯಾಯಾಮವೆಂದರೆ, ಉಸಿರಾಟದ ವ್ಯಾಯಾಮ! ಹೌದು, ಸಿಟ್ಟು ಬಂದ ಸಮಯದಲ್ಲಿ ಆಳವಾಗಿ ಉಸಿರನ್ನು ಎಳೆದುಕೊಂಡು, ಅಷ್ಟೇ ಆಳದಿಂದ ಉಸಿರನ್ನು ಹೊರಗೆ ಬಿಡಿ. ದೀರ್ಘವಾದ ಉಚ್ಛ್ವಾಸ ಹಾಗೂ ನಿಃಶ್ವಾಸದಿಂದ ಕೋಪದ ನಿಯಂತ್ರಣವು ಕೆಲವೇ ಕೆಲವು ನಿಮಿಷಗಳಲ್ಲಿ ಆಗುತ್ತದೆ.

ಪ್ರಯತ್ನಿಸಿ ನೋಡಿ.

ಸಹನೆಯ ಕೊರತೆಯೇ ಕೋಪಕ್ಕೆ ಕಾರಣ. ತಾಳ್ಮೆಯಿಂದ ವರ್ತಿಸಿದಲ್ಲಿ ಎಂತಹ ಸನ್ನಿವೇಶವನ್ನೂ ನಿರಾಳವಾಗಿ ನಿಭಾಯಿಸಬಹುದು. ತಾಳ್ಮೆ ಕಳೆದುಕೊಂಡಲ್ಲಿ ಚಿಕ್ಕ ಚಿಕ್ಕ ವಿಷಯಗಳಿಗೂ ಸಿಟ್ಟು ಬರುವುದು ಸಹಜ. ಸಹನೆ–ಸಂಯಮದಿಂದ ಎಂತಹ ಸಂದರ್ಭಗಳಲ್ಲೂ ನಗು ನಗುತ್ತಾ ಇದ್ದಲ್ಲಿ ಕೋಪಕ್ಕೆ ಆಸ್ಪದವೇ ಇರುವುದಿಲ್ಲ. ಕೋಪವು ನಿಮ್ಮನ್ನು ವಶಕ್ಕೆ ತೆಗೆದುಕೊಳ್ಳುವ ಮುನ್ನ, ಕೋಪವನ್ನೇ ನಿಮ್ಮ ವಶಕ್ಕೆ ತೆಗೆದುಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.