’ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದ ನಂತರ ಗುಣಮುಖರಾಗಿ ಸಂತಸದಿಂದ ಮರಳುವ ಹಳ್ಳಿ ಜನತೆಯನ್ನು ಕಂಡಾಗ ವೈದ್ಯರ ಮನದಲ್ಲೊಂದು ಸಂತೃಪ್ತ ಭಾವ ಮೂಡುತ್ತದೆ. ಇಂಥ ಸಂತೃಪ್ತಿಯಲ್ಲೇ ಸಾರ್ಥಕತೆ ಕಂಡವರು ನಮ್ಮ ತಂದೆ ತಾಯಿ. ಅವರ ಸೇವಾ ಮನೋಭಾವವೇ ವೈದ್ಯನಾಗುವ ನನ್ನ ಕನಸಿಗೆ ಸ್ಫೂರ್ತಿ ನೀಡಿತು. ಬಡ ಜನರಿಗೆ ಆರೋಗ್ಯ ಸೇವೆ ಒದಗಿಸುವ ಅವಕಾಶ ದೊರೆಯಿತು.....’
ಹೀಗೆ ತಮ್ಮ ಅನುಭವವನ್ನು ಹಂಚಿಕೊಂಡವರು ಬಾಗಲಕೋಟೆ ನಗರದ ಯುವ ವೈದ್ಯ ಡಾ.ಸೋಮಶೇಖರ ಕೆರೂಡಿ.
ಮೂತ್ರಕೋಶ ಹಾಗೂ ಮೂತ್ರಪಿಂಡ ತಜ್ಞರಾಗಿ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಮೂತ್ರನಾಳ, ಮೂತ್ರಕೋಶ ಹಾಗೂ ಮೂತ್ರಪಿಂಡಕ್ಕೆ ಸಂಬಂಧಿಸಿದಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಹೊಸ ಬದುಕನ್ನೂ ನೀಡಿದ್ದಾರೆ.
ಈ ಕ್ಷೇತ್ರದ ಎಲ್ಲ ಹೊಸ ತಂತ್ರಜ್ಞಾನ, ಆಧುನಿಕ ಚಿಕಿತ್ಸೆ ವಿಧಾನಗಳು ಸಾಮಾನ್ಯ ಜನತೆಗೂ ಯೋಗ್ಯ ದರದಲ್ಲಿ ಲಭಿಸಲಿ ಎಂಬ ಕಳಕಳಿಯಿಂದ ಬಾಗಲಕೋಟೆ ನಗರದ ಕೆರೂಡಿ ಆಸ್ಪತ್ರೆಯಲ್ಲಿ ಸುಸಜ್ಜಿತ ಯುರೋಲಾಜಿ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ಇಲ್ಲಿ ಆಧುನಿಕ ಚಿಕಿತ್ಸೆ ದೊರೆಯುತ್ತಿರುವುದು ನಮ್ಮ ಭಾಗ್ಯ ಎಂಬುದು ಸುತ್ತಲಿನ ಹಳ್ಳಿ ಜನತೆ ಅಭಿಪ್ರಾಯವಾಗಿದೆ.
ಸೇವೆಗೆ ಸಂಕಲ್ಪ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಮೆಡಿಕಲ್ ಕಾಲೇಜ್‌ಗೆ ತೆರಳಿದ ಡಾ.ಸೋಮಶೇಖರ, ಅಲ್ಲಿ ಎಂಸಿಎಚ್ ಕೋರ್ಸ್ ಪೂರ್ಣಗೊಳಿಸಿ 2004ರಿಂದ ಬಾಗಲಕೋಟೆ ನಗರದ ಕೆರೂಡಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೇವೆ ಆರಂಭಿಸಿದರು.ಈ ವಿಭಾಗದ ನೇತೃತ್ವ ವಹಿಸುತ್ತಿದ್ದಂತೆ ಪ್ರತ್ಯೇಕ ಶಸ್ತ್ರಚಿಕಿತ್ಸೆ ವಿಭಾಗ, ದೊಡ್ಡ ನಗರಗಳಲ್ಲಿ ಸಿಗುವ ಹೊಸ ಸೌಲಭ್ಯಗಳು ಹಂತ ಹಂತವಾಗಿ ಬಾಗಲಕೋಟೆಯಲ್ಲೂ ದೊರೆಯುವಂತಾಯಿತು.
ಸಕಲ ಸೌಲಭ್ಯಸದ್ಯ ಕೆರೂಡಿ ಆಸ್ಪತ್ರೆಯಲ್ಲಿ ಯುರೋಲಾಜಿಗೆ ಸಂಬಂಧಿಸಿದಂತೆ ತೆರೆದ ಶಸ್ತ್ರಚಿಕಿತ್ಸೆ, ಎಂಡೊಸ್ಕೋಪಿ ಶಸ್ತ್ರಚಿಕಿತ್ಸೆ, ಲೇಸರ್ ಶಸ್ತ್ರಚಿಕಿತ್ಸೆ, ಎಂಡ್ರಾಲಾಜಿ, ಲ್ಯಾಪ್ರೊಸ್ಕೋಪಿ ಶಸ್ತ್ರಚಿಕಿತ್ಸೆ ಹಾಗೂ ಇತರ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ವಿಧಾನಗಳು ಇಲ್ಲಿ ದೊರೆಯುತ್ತಿದೆ. ಈ ಆಸ್ಪತ್ರೆಯಲ್ಲಿ ಲಭ್ಯವಿರುವ ಮಿನಿ ಪಿಸಿಎನ್‌ಎಲ್ ಎಂಬ ಅತ್ಯಾಧುನಿಕ ಯಂತ್ರದಿಂದ ಮಾನವನ ದೇಹದಲ್ಲಿನ ದೊಡ್ಡ ಗಾತ್ರದ ಹರಳುಗಳನ್ನು ಕೂಡ ಅತೀ ಸಣ್ಣ ಅಂದರೆ ಕೇವಲ 5ಮಿಲಿ ಮೀಟರ್‌ನಷ್ಟೇ ಗಾಯ ಮಾಡಿ ಹೊರತೆಗೆಯಬಹುದಾಗಿದೆ.
ಒಂದು ವರ್ಷದಿಂದ ಹಾಲ್ಮಿಯಮ್ ಲೇಸರ್ ತಂತ್ರಜ್ಞಾನವೂ ಈ ಆಸ್ಪತ್ರೆಯಲ್ಲಿ ಲಭ್ಯವಿದೆ.
ನಿಖರ ಶಸ್ತ್ರಚಿಕಿತ್ಸೆ ಮೂಲಕ ದೇಹದೊಳಗಿನ ಹರಳುಗಳನ್ನು ತೆಗೆಯುವ ಈ ತಂತ್ರಜ್ಞಾನ ಉತ್ತರ ಕರ್ನಾಟಕದ ಕೆಲವೇ ಆಸ್ಪತ್ರೆಗಳಲ್ಲಿದೆ ಎಂಬುದು ಗಮನಾರ್ಹ. ಕೀ ಹೋಲ್ ಸರ್ಜರಿ ಹಾಗೂ ಡೇ ಕೇರ್ ಸರ್ಜರಿ ಸೌಲಭ್ಯವೂ ಇಲ್ಲಿದ್ದು, ಕೆಲವು ಸಮಸ್ಯೆಗಳಿಗೆ ರೋಗಿಗಳು ಬೆಳಗ್ಗೆ ಆಸ್ಪತ್ರೆಗೆ ಬಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಸಂಜೆ ಮನೆಗೆ ತೆರಳಬಹುದಾಗಿದೆ.
ನಿರಂತರ ಸ್ಪಂದನೆ ಮೂತ್ರ ಕೋಶದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಈ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 80ರಿಂದ100 ಗಂಭೀರ ಸಮಸ್ಯೆಗಳಿರುವ ಹಾಗೂ 80ಕ್ಕೂ ಹೆಚ್ಚು ಸಣ್ಣಪುಟ್ಟ ಸಮಸ್ಯೆಗಳಿರುವ ರೋಗಿಗಳ ತಪಾಸಣೆ ನಡೆಸಲಾಗುತ್ತದೆ.
ಕುಷ್ಟಗಿ, ಲಿಂಗಸ್ಗೂರು, ಯಾದಗಿರಿ, ಸಿಂಧನೂರು ಹೀಗೆ ಉತ್ತರ ಕರ್ನಾಟಕದ ನಾನಾ ಪ್ರದೇಶಗಳಿಂದ ಜನ ಇಲ್ಲಿ ಚಿಕಿತ್ಸೆಗೆ ಆಗಮಿಸುತ್ತಾರೆ. ಆರೋಗ್ಯಕ್ಕೆ ಸಂಬಂಧಿಸಿದ ಸರಕಾರದ ಎಲ್ಲ ಯೋಜನೆಗಳಡಿ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ದೊರೆಯುವ ಸೌಲಭ್ಯಗಳಿಂದ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯುವ ಜೊತೆಗೆ ಆರ್ಥಿಕ ಹೊರೆಯೂ ತಪ್ಪಿದಂತಾಗಿದೆ ಎಂಬುದು ಇಲ್ಲಿ ಚಿಕಿತ್ಸೆ ಪಡೆದವರ ಅಭಿಪ್ರಾಯವಾಗಿದೆ.
ಇನ್ನಷ್ಟು ಸೌಲಭ್ಯ
ಯುರೋಲಾಜಿ ವಿಭಾಗಕ್ಕೆ ಸಂಬಂಧಿಸಿದ ಎಲ್ಲ ಆಧುನಿಕ ಸೌಲಭ್ಯಗಳು ನಮ್ಮ ಆಸ್ಪತ್ರೆಯಲ್ಲಿ ಇರುವುದರಿಂದ ಶೇ.೯೫ಕ್ಕೂ ಹೆಚ್ಚು ಯಶಸ್ಸಿನೊಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಇಲ್ಲಿಗೆ ಬರುವ ರೋಗಿಗಳು ಚಿಕಿತ್ಸೆ ಪಡೆದ ನಂತರ ನೂರರಷ್ಟು ಸಂತೃಪ್ತಿಯೊಂದಿಗೆ ಮರಳುತ್ತಿದ್ದಾರೆ.ಸಿಮೆನ್ ಕಂಪನಿಯ ಅತ್ಯಾಧುನಿಕ ಇಎಸ್‌ಡಬ್ಲುಎಲ್ ಯಂತ್ರ ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಚಿಕ್ಕ ಹಾಗೂ ಮೃದುವಾದ ಹರಳುಗಳನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಅಲ್ಟ್ರಾ ತರಂಗಗಳ ಮೂಲಕ ಹೊರತೆಗೆಯಲಾಗುತ್ತಿದೆ.
ಮಿನಿ ಪಿಸಿಡಬ್ಲು, ಮೈಕ್ರೋ ಪಿಸಿಡಬ್ಲು, ಪಿಸಿಡಬ್ಲು, ಫ್ಲೆಕ್ಸಿಬಲ್ ಯುರೆಟ್ರೋ ಸ್ಕೋಪ್ (ಇದು ಅತ್ಯಂತ ನೂತನ ಯಂತ್ರ), ಪಿಡಿಯಾಟ್ರಿಕ್ ಯುರೋಸ್ಕೋಪ್‌ನಂಥ ಸೌಲಭ್ಯಗಳು ಇರುವುದರಿಂದ ಎಲ್ಲ ರೀತಿಯ ಶಸ್ತ್ರಚಿಕಿತ್ಸೆಗಳು ನಿಖರ ಮತ್ತು ಸುಲಭ ಸಾಧ್ಯವಾಗಿವೆ. ಕೆಲವೇ ದಿನಗಳಲ್ಲಿ ನಮ್ಮ ಆಸ್ಪತ್ರೆಯಲ್ಲೇ ಬಾಗಲಕೋಟೆ ಕಿಡ್ನಿ ಫೌಂಡೇಷನ್ ಆರಂಭಿಸುವ ಚಿಂತನೆಯಿದೆ. ಈ ಫೌಂಡೇಷನ್ ಅಡಿ ಕಿಡ್ನಿ ಕಸಿ ಸೌಲಭ್ಯವನ್ನೂ ಈ ಭಾಗದ ಜನತೆಗೆ ಒದಗಿಸುವ ಚಿಂತನೆ ಇದೆ. ಇದಕ್ಕೆ ಬೇಕಾಗುವ ಎಲ್ಲ ತಂತ್ರಜ್ಞಾನವೂ ನಮ್ಮಲ್ಲಿ ಲಭ್ಯವಿದೆ. ಇದರ ಜೊತೆಗೆ ಯುರೋಗೈನಾಕ್, ಪುರುಷರ ನಪುಂಸಕತ್ವ ಹಾಗೂ ಎಂಡ್ರಾಲಾಜಿಗೆ ಚಿಕಿತ್ಸೆ ನೀಡುವ ಯೋಜನೆಯೂ ಇದೆ. ಎಂಡ್ರಾಲಾಜಿಗೆ ಸಂಬಂಧಿಸಿದಂತೆ ರಿಜಿ ಸ್ಕ್ಯಾನ್ ಯಂತ್ರ ಅಳವಡಿಸಲಾಗುತ್ತಿದ್ದು, ಈ ಸೌಲಭ್ಯ ಉತ್ತರ ಕರ್ನಾಟಕದಲ್ಲೇ ಮೊದಲ ಬಾರಿಗೆ ಲಭ್ಯವಾಗುತ್ತಿದೆ ಎನ್ನುತ್ತಾರೆ ಡಾ.ಸೋಮಶೇಖರ.
ಸೇವೆಗೆ ಸಾಥ್
ಕೆರೂಡಿ ಆಸ್ಪತ್ರೆಯ ಯುರೋಲಾಜಿ ವಿಭಾಗಕ್ಕೆ ಕೆಲವು ತಿಂಗಳಿಂದ ಇನ್ನೊಬ್ಬ ತಜ್ಞವೈದ್ಯ ಡಾ.ದೇವೇಂದ್ರ ಜಲ್ದೆ ಕೂಡ ಸಾಥ್ ನೀಡುತ್ತಿದ್ದಾರೆ. ಭಾರತದ ಅತ್ಯಂತ ಶ್ರೇಷ್ಠ ಯುರೋಲಾಜಿ ಕಾಲೇಜ್ ಎನಿಸಿದ ಅಹಮದಾಬಾದ್‌ನ ಬಿಜೆ ಮೆಡಿಕಲ್ ಕಾಲೇಜ್ ಮತ್ತು ಸಿವಿಲ್ ಆಸ್ಪತ್ರೆಯಲ್ಲಿ ಎಂಸಿಎಚ್ ಪದವಿ ಪೂರ್ಣಗೊಳಿಸಿದ ಇವರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ನಂತರ ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಯುರೋ ಅಂಕಾಲಾಜಿ (ಮೂತ್ರರೋಗ ಮತ್ತು ಮೂತ್ರಕೋಶ ಕ್ಯಾನ್ಸರ್‌ಗೆ ಸಂಬಂಧಿಸಿದ) ಯಲ್ಲಿ ಫೆಲೋಷಿಪ್ ಪಡೆದಿದ್ದಾರೆ. ಈ ಫೆಲೋಷಿಪ್ ಪಡೆದ ಉತ್ತರ ಕರ್ನಾಟಕದ ಏಕೈಕ ವೈದ್ಯ ಎಂಬ ಕೀರ್ತಿಗೂ ಡಾ.ದೇವೇಂದ್ರ ಭಾಜನರಾಗಿದ್ದಾರೆ. ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾದಲ್ಲಿ ಕಿಡ್ನಿ ಸ್ಟೋನ್ಸ್‌ಗಳ ಮೇಲೆ ಉಪನ್ಯಾಸ ನೀಡುವ ಜೊತೆಗೆಅನೇಕ ಕಾರ್ಯಾಗಾರಗಳಲ್ಲಿ ಭಾಗವಹಿಸಿರುವ ಇವರು ಡಾ.ಸೋಮಶೇಖರ ಅವರ ಜೊತೆ ಕೆರೂಡಿ ಆಸ್ಪತ್ರೆಯಲ್ಲೇ ಸೇವೆಗೆ ಲಭ್ಯವಿದ್ದಾರೆ. ಡಾ.ದೇವೇಂದ್ರ ಅವರ ಪತ್ನಿಡಾ.ಸಂತೋಷಿ ಜಲ್ದೆ ಕೂಡ ಪೆಥಾಲಾಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಮುಂದೆ ಕೆರೂಡಿ ಆಸ್ಪತ್ರೆಯಲ್ಲಿ ಸೇವೆಗೆ ಲಭ್ಯವಾಗಲಿದ್ದಾರೆ.
**
ಕೆರೂಡಿ ಆಸ್ಪತ್ರೆಯಲ್ಲಿ ಸಿಟಿ, ಎಂಆರ್‌ಐ ತಪಾಸಣೆಯಂಥ ಸೌಲಭ್ಯಗಳು, ವಿವಿಧ ವಿಭಾಗಗಳ ತಜ್ಞರು ಒಂದೇ ಸೂರಿನ ಲಭ್ಯವಿರುತ್ತಾರೆ. ಇಲ್ಲಿ ಸುಸಜ್ಜಿತ ಪ್ರಯೋಗಾಲಯವೂ ಇದೆ. ಇದರಿಂದ ಎಂಥ ಗಂಭೀರ ಸಮಸ್ಯೆ ಇರುವ ರೋಗಿಗೂ ಇಲ್ಲಿಯೇ ಶಸ್ತ್ರಚಿಕಿತ್ಸೆ ನಡೆಸುವ ಮುನ್ನ ಸೂಕ್ತ ತಪಾಸಣೆ ನಡೆಸಿ ಯಾವುದೇ ತೊಂದರೆ ಕಂಡುಬಂದರೂ ಕೂಡಲೇ ಅದನ್ನು ಸರಿಪಡಿಸಿ ನಂತರ ಶಸ್ತ್ರಚಿಕಿತ್ಸೆ ನಡೆಸಬಹುದಾಗಿದೆ. ಇದರಿಂದ ರೋಗಿಗೆ ಯೋಗ್ಯ ದರದಲ್ಲಿ ಹಾಗೂ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತದೆ.
-ಡಾ.ದೇವೇಂದ್ರ ಜಲ್ದೆ, ಮೂತ್ರಕೋಶ ತಜ್ಞ ಹಾಗೂ ಮೂತ್ರಕೋಶ ಕ್ಯಾನ್ಸರ್ ಶಸ್ತ್ರಚಿಕಿತ್ಸಕರು
*
ಬಾಗಲಕೋಟೆ ಜಿಲ್ಲೆಯಲ್ಲಿ ಕಿಡ್ನಿ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಈ ಭಾಗದಲ್ಲಿ ರೈತರು, ಶ್ರಮಜೀವಿಗಳು ಹೆಚ್ಚಾಗಿರುವುದರಿಂದ ಇಂಥವರಿಗೆಲ್ಲ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಕಿಡ್ನಿ ಹರಳುಗಳು ಆಗುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ಜಾಗೃತಿ ಮೂಡಿಸಲು ನಾವು ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ಈಗಾಗಲೇ ಕರಪತ್ರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಕಿಡ್ನಿ ಹರಳುಗಳ ಸಮಸ್ಯೆ ಹೆಚ್ಚಾಗಿ ಕಂಡುಬರುವ ಇಳಕಲ್,ಬಾದಾಮಿ ಹಾಗೂ ಬಾಗಲಕೋಟೆ ತಾಲೂಕುಗಳ ಕೆಲವೆಡೆ ತಪಾಸಣೆ ನಡೆಸುವ ಚಿಂತನೆಯೂ ಇದೆ.
-ಡಾ.ಸೋಮಶೇಖರ ಕೆರೂಡಿ, ಮೂತ್ರರೋಗ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.