ಇತ್ತೀಚೆಗೆ ಜನರನ್ನು ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ನಿದ್ದೆಯ ಸಮಸ್ಯೆಯೂ ಒಂದು. ಒತ್ತಡ, ಭಯ, ಆತಂಕಗಳ ನಡುವೆ ಸರಿಯಾಗಿ ನಿದ್ದೆ ಬರುವುದೂ ಕಷ್ಟವಾಗಿದೆ. ಪರಿಪೂರ್ಣ ನಿದ್ದೆ ಎನ್ನುವುದು ಮರೀಚಿಕೆಯಾಗಿದೆ. ಅದರಲ್ಲೂ ಕೊರೊನಾ ದಿನಗಳು ಆರಂಭವಾದ ಮೇಲೆ ಶೇ 63 ರಷ್ಟು ಜನರಲ್ಲಿ ನಿದ್ದೆಯ ಕೊರತೆ ಕಾಡುತ್ತಿದೆ ಎನ್ನುತ್ತದೆ ಲಂಡನ್‌ನ ಕಿಂಗ್ಸ್ ಕಾಲೇಜ್‌ನ ಅಧ್ಯಯನ. ನಿದ್ದೆಯ ಕೊರತೆಯು ಜನರ ಮನಸ್ಸಿನಲ್ಲಿ ಋಣಾತ್ಮಕ ಪರಿಣಾಮ ಬೀರುವಂತೆ ಮಾಡಿದೆ. ಪರಿಪೂರ್ಣ ನಿದ್ದೆಗೆ ಕೆಲವೊಂದು ಅಂಶಗಳು ಅಡ್ಡಿಪಡಿಸುತ್ತವೆ. ಆ ಅಂಶಗಳು ಯಾವುವು, ಅವು ನಿದ್ದೆಗೆ ಹೇಗೆ ತೊಂದರೆ ಮಾಡುತ್ತವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಮದ್ಯ ಸೇವನೆ
ಮದ್ಯಪಾನ ಸೇವನೆಯಿಂದ ನಿದ್ದೆ ಚೆನ್ನಾಗಿ ಬರುತ್ತದೆ ಎಂಬುದು ಹಲವರ ಅಭಿಪ್ರಾಯ, ಆದರೆ ಇದರಿಂದ ಪರಿಪೂರ್ಣ ನಿದ್ದೆಗೆ ಭಂಗ ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು. ಮದ್ಯಪಾನ ಮಾಡಿದಾಗ ಪ್ರಜ್ಞೆ ಇಲ್ಲದಂತೆ ಮಲಗಿದರೂ ಸುಪ್ತ ಮನಸ್ಸಿನಲ್ಲಿ ನಿದ್ದೆ ಆವರಿಸಿರುವುದಿಲ್ಲ. ಆ ಕಾರಣಕ್ಕೆ ನಿದ್ದೆಯ ಕೊರತೆ ಕಾಡಬಹುದು ಎನ್ನುವುದು ತಜ್ಞರ ಮಾತು. ಒಂದು ವೇಳೆ ಮದ್ಯಪಾನ ಮಾಡುವ ಇಚ್ಛೆಯಾದರೆ ಮಧ್ಯಾಹ್ನ ಅಥವಾ ಸಂಜೆ ವೇಳೆ ಮಾಡಬಹುದು.
ದೇಹಕ್ಕೆ ಸೇರುವ ಕೆಫಿನ್ ಅಂಶ ದೇಹದಲ್ಲಿ ಐದರಿಂದ ಏಳು ಗಂಟೆಗಳವರೆಗೆ ಹಾಗೇ ಇರುತ್ತದೆ. ಹಾಗಾಗಿ ಸಂಜೆ 4 ರಿಂದ 5 ಗಂಟೆ ಹೊತ್ತಿಗೆ ಕಾಫಿ, ಟೀ ಕುಡಿದರೆ ಮಲಗಲು ಕಷ್ಟವಾಗುತ್ತದೆ. ಅಲ್ಲದೇ ಇದರಿಂದ ರಾತ್ರಿ ವೇಳೆ ನಿದ್ದೆ ಇಲ್ಲದೇ ವಿಶ್ರಾಂತಿ ಇಲ್ಲದಂತಾಗಬಹುದು. ಇದರಲ್ಲಿರುವ ರಾಸಾಯನಿಕ ಅಂಶವು ನಿದ್ದೆಗೆ ತೊಂದರೆ ಮಾಡುತ್ತದೆ. ಹಾಗಾಗಿ ಟೀ ಕಾಫಿ ಸೇವನೆ ಒಳ್ಳೆಯದಲ್ಲ.
ಕಾರ್ಬೋಹೈಡ್ರೇಟ್ ಅಂಶವಿರುವ ಆಹಾರ ಸೇವನೆ ಬೇಡ
ಹೆಚ್ಚು ಕಾರ್ಬೋಹೈಡ್ರೇಟ್ ಅಂಶ ಇರುವ ಊಟ ಅಥವಾ ಆಹಾರ ಸೇವನೆಯೂ ಆಲ್ಕೋಹಾಲ್‌ನಷ್ಟೆ ಅಪಾಯಕಾರಿ. ಈ ಅಂಶ ಹೆಚ್ಚಿರುವ ಆಹಾರದಿಂದ ಆಲಸ್ಯ ಮೂಡುವುದಲ್ಲದೇ ನಿದ್ದೆ ಬಂದಂತಾಗುತ್ತದೆ, ಆದರೆ ಪರಿಪೂರ್ಣ ನಿದ್ದೆ ಬಂದಿರುವುದಿಲ್ಲ. ಅಲ್ಲದೇ ಮಧ್ಯರಾತ್ರಿಯಲ್ಲಿ ಹಸಿವಾಗಿ ಎಚ್ಚರವಾಗುತ್ತದೆ. ಅಲ್ಲದೇ ಮತ್ತೆ ಹಸಿವಾದಂತಾಗಿ ಮಧ್ಯರಾತ್ರಿಯಲ್ಲಿ ಸ್ನ್ಯಾಕ್ಸ್ ತಿನ್ನಬೇಕು ಎನ್ನಿಸಬಹುದು.
ಮಲಗುವ ಮೊದಲು ಸೇವಿಸುವ ಆಹಾರ ಚಯಾಪಚಯ ಕ್ರಿಯೆಗೆ ನೆರವಾಗುವಂತಿರಬೇಕು. ಇದರಿಂದ ಚೆನ್ನಾಗಿ ನಿದ್ದೆ ಬರುತ್ತದೆ. ಹಾಗಾಗಿ ಗೋಧಿಹಿಟ್ಟು, ಬೀನ್ಸ್ ಹಾಗೂ ಹಸಿರು–ತರಕಾರಿಗಳ ಸೇವನೆ ಉತ್ತಮ. ಮಗಲುವ ಮೂರ್ನ್ಕಾಲು ಗಂಟೆಗಳ ಮೊದಲೇ ಊಟ ಮಾಡುವುದು ಉತ್ತಮ.
ಸೋಫಾ ಮೇಲೆ ಮಲಗುವುದು
ಸಾಮಾನ್ಯವಾಗಿ ಹಲವರಿಗೆ ಸೋಫಾ ಮೇಲೆ ಕಿರುನಿದ್ದೆ ಮಾಡುವ ಅಭ್ಯಾಸ. ಸುಸ್ತಾದಾಗ ಸೋಫಾ ಮೇಲೆ ಒರಗುತ್ತಾರೆ. ಆದರೆ ಸೋಫಾ ಮೇಲೆ ಮಲಗುವ ಅಭ್ಯಾಸದಿಂದಲೂ ನಿದ್ದೆಯಲ್ಲಿ ವ್ಯತ್ಯಾಸವಾಗುತ್ತದೆ. ಆ ಕಾರಣಕ್ಕೆ ಯಾವುದೇ ಸಮಯದಲ್ಲಾಗಲಿ, ಪರಿಸ್ಥಿತಿ ಹೇಗೆ ಇರಲಿ ನಿದ್ದೆ ಬಂದ ಕೂಡಲೇ ಹಾಸಿಗೆಯ ಮೇಲೆ ಮಲಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಸೋಫಾ ಮೇಲೆ ಕಿರು ನಿದ್ದೆ ಮಾಡಿ ಮತ್ತೆ ಹಾಸಿಗೆ ಮೇಲೆ ಮಲಗುವುದು ಸರಿಯಲ್ಲ.
ಟಿವಿ ನೋಡಿಕೊಂಡು ಮಲಗುವುದು
ಹಲವರು ಟಿವಿ ನೋಡುತ್ತಾ ನೋಡುತ್ತಾ ಅಲ್ಲೇ ನಿದ್ದೆ ಹೋಗುತ್ತಾರೆ. ಇದು ತುಂಬಾ ಕೆಟ್ಟ ಅಭ್ಯಾಸ ಎನ್ನುತ್ತಾರೆ ತಜ್ಞರು. ಟಿವಿ ನೋಡುತ್ತಾ ಮಲಗಿದಾಗ ಒಮ್ಮೊಮ್ಮೆ ಶಬ್ದಕ್ಕೆ ಇದಕ್ಕಿದ್ದ ಹಾಗೇ ಎಚ್ಚರವಾಗುತ್ತದೆ. ಇದರಿಂದ ನಿದ್ದೆಯಲ್ಲಿ ವ್ಯತ್ಯಾಸವಾಗುತ್ತದೆ. ಅಲ್ಲದೇ ಟಿವಿ, ಮೊಬೈಲ್‌ನ ಬೆಳಕು ಕಣ್ಣ ಮೇಲೆ ಬಿದ್ದು ನಿದ್ದೆಗೆ ತೊಂದರೆ ಉಂಟಾಗುತ್ತದೆ. ಆ ಕಾರಣಕ್ಕೆ ಮಲಗುವ ಮೊದಲು ಟಿವಿ ಹಾಗೂ ಇನ್ನಿತರ ಮಾಧ್ಯಮಗಳಿಂದ ದೂರವಿರುವುದು ಅವಶ್ಯ.
ವಿದ್ಯುತ್ ದೀಪ ಆರಿಸಿ
ರಾತ್ರಿ ವೇಳೆ ಮನೆಯ ಒಳಗೆ ಎಲ್ಲಾ ಕಡೆ ಎಲೆಕ್ಟ್ರಿಕ್ ದೀಪಗಳು ಹರಡಿಕೊಂಡಿರುತ್ತವೆ. ಇವು ಎಲೆಕ್ಟ್ರೋ ಸ್ಮಾಗ್ ಅನ್ನು ಹೊರ ಹಾಕುತ್ತವೆ. ಇದರಿಂದ ಕೋಣೆಯಲ್ಲಿ ತಾಪವೂ ಹೆಚ್ಚಾಗಿರುತ್ತದೆ. ಹಾಗಾಗಿ ನಿದ್ದೆ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ ಮಲಗಲು ಸ್ವಲ್ಪ ಹೊತ್ತಿನ ಮೊದಲು ಎಲ್ಲಾ ಕಿಟಕಿಗಳನ್ನು ತೆರೆದು ನೈಸರ್ಗಿಕ ಗಾಳಿ ಒಳಗೆ ಬರುವಂತೆ ನೋಡಿಕೊಳ್ಳಿ. ಇದರಿಂದ ನೆಮ್ಮದಿಯಾಗಿ ನಿದ್ದೆ ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.