ಹುಟ್ಟುವ ಮಗುವಿನಲ್ಲಿಜನನ ದೋಷ ಕಾಣಿಸಿಕೊಳ್ಳುವ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಪ್ರತಿ20 ಗರ್ಭಧಾರಣೆಗಳಲ್ಲಿ ಒಂದು ಮಗು ಜನನ ದೋಷಗಳಿಂದ ಹುಟ್ಟುತ್ತದೆ ಎನ್ನುವ ಅಂದಾಜಿದೆ. ಕೆಲವು ಸಣ್ಣ ಅಂಗರಚನಾ ವೈಪರೀತ್ಯಗಳಿರಬಹುದು, ಇನ್ನೂ ಕೆಲವು ವ್ಯಾಪಕವಾದ ಆನುವಂಶಿಕ ಅಸ್ವಸ್ಥತೆಗಳು ಅಥವಾ ಮಾನಸಿಕ ನ್ಯೂನತೆಗಳಿರಬಹುದು. ಯಾವುದೇ ಸಮಸ್ಯೆಗೂ ವೈದ್ಯಕೀಯ ಪರಿಹಾರವಂತೂ ಇದ್ದೇ ಇದೆ. ದಂಪತಿಗಳು ಅಗತ್ಯ ಬಿದ್ದಾಗ ಅವುಗಳ ನೆರವು ಪಡೆಯಬೇಕಷ್ಟೆ.
ಕೆಲವು ದಂಪತಿಗಳಲ್ಲಿ ಮಗು ಜನನ ದೋಷಗಳೊಂದಿಗೆ ಹುಟ್ಟುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ಸಂದರ್ಭಗಳಲ್ಲಿ ಅಪಾಯಗಳ ಸಾಧ್ಯತೆಗಳನ್ನು ನಿರ್ಧರಿಸಲು ಮತ್ತು ಆನುವಂಶಿಕ ಅಸ್ವಸ್ಥತೆಗಳನ್ನು ತಡೆಯಲು ಕೆಲವು ನಿರ್ದಿಷ್ಟ ಪರೀಕ್ಷೆಗಳನ್ನು ಸೂಚಿಸಲಾಗುತ್ತದೆ. ಅವುಗಳಲ್ಲಿ ಜೆನೆಟಿಕ್ ಸ್ಕ್ರೀನಿಂಗ್ ಮತ್ತು ಜೆನೆಟಿಕ್ ಟೆಸ್ಟ್ ಮುಖ್ಯವಾದುವು.
ವಯಸ್ಸಿಗೆ ಸಂಬಂಧಿಸಿದಅಸ್ವಸ್ಥತೆಗಳು ಅಥವಾ ಕೌಟುಂಬಿಕ ಇತಿಹಾಸ/ಆನುವಂಶಿಕ ಅಸ್ವಸ್ಥತೆಗಳು ಮತ್ತು ಜನ್ಮ ದೋಷಗಳ ಅಪಾಯವನ್ನು ಹೊಂದಿರುವ ದಂಪತಿಗಳಿಗೆಜೆನೆಟಿಕ್ ಸ್ಕ್ರೀನಿಂಗ್(ಆನುವಂಶಿಕ ತಪಾಸಣೆ) ಸಹಾಯ ಮಾಡುತ್ತದೆ. ಆದರೆಯಾವುದೇ ಒಂದು ಪರೀಕ್ಷೆಯು ಮಗುವಿನ ಎಲ್ಲಾ ಜನನ ದೋಷಗಳ ಅಪಾಯವನ್ನು ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಿಲ್ಲ. ಪರಿಸರ ಮತ್ತು ವಿಷಕಾರಿ ವಾತಾವರಣಕ್ಕೆ ಸಂಬಂಧಿಸಿದ ಮತ್ತು ವಿವರಿಸಲಾಗದ ಕಾರಣಗಳಿಂದ ಬರುವ ಅನೇಕ ದೋಷಗಳನ್ನು ತಿಳಿಯಲು ಇದರಿಂದ ಸಾಧ್ಯವಾಗುವುದಿಲ್ಲ.
ಹುಟ್ಟುವ ಮಕ್ಕಳಮೇಲೆ ಪರಿಣಾಮ ಬೀರಬಹುದಾದ ಆನುವಂಶಿಕ ಕಾಯಿಲೆಗಳ ತಪಾಸಣೆಯು ದಂಪತಿಗಳ ಜನಾಂಗೀಯ ಹಿನ್ನೆಲೆ, ಅವರ ಕುಟುಂಬ, ವೈದ್ಯಕೀಯ ಇತಿಹಾಸ ಮತ್ತು ಸಂಬಂಧಿತ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ಜನಾಂಗೀಯ ಗುಂಪುಗಳಲ್ಲಿ ನಿರ್ದಿಷ್ಟ ಪ್ರಕಾರದ ರೋಗಗಳು ಸಾಮಾನ್ಯವಾಗಿರುತ್ತವೆ,ಈ ಹಿನ್ನೆಲೆಗಳಿರುವ ದಂಪತಿ ಕೆಲವು ತಪಾಸಣೆಗೆ ಒಳಗಾಗಬೇಕು.ನಿರ್ದಿಷ್ಟ ಅಸ್ವಸ್ಥತೆ ಇರುವ ಕುಟುಂಬದ ಇತಿಹಾಸವಿದೆಯೇ ಅಥವಾ ನಿರ್ದಿಷ್ಟ ಅಪಾಯವಿರುವ ಜನಾಂಗಕ್ಕೆ ಸೇರಿದವರೇ ಎನ್ನುವುದನ್ನು ಕಂಡುಕೊಳ್ಳಲು ದಂಪತಿಗಳ ವಾಹಕ ಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ.
ಆನುವಂಶಿಕವಾಗಿ ಬರುವಂತಹ ವಾಹಕದ ಸ್ಥಿತಿಯನ್ನು (carrier status) ಪರಿಶೀಲಿಸಲು ಸ್ಕ್ರೀನಿಂಗ್ ಮಾಡುವುದರ ಜೊತೆಗೆ, ಮಗುವಿಗೆ ಡೌನ್ ಸಿಂಡ್ರೋಮ್ ನಂತಹ ಗಂಭೀರ ವರ್ಣತಂತು ಅಸಹಜತೆ ಅಥವಾ ಬೆನ್ನುಹುರಿಯ ಬೈಫಿಡಾದಂತಹ ಬೆನ್ನುಹುರಿಯ ಅಸಹಜತೆಯನ್ನು ನಿರ್ಧರಿಸಲು ಗರ್ಭಾವಸ್ಥೆಯಲ್ಲಿಯೇ ಪ್ರಸವಪೂರ್ವ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ಸ್ಕ್ರೀನಿಂಗ್ ಪರೀಕ್ಷೆಯು ಹೆಚ್ಚಿನ ಅಪಾಯವನ್ನು ಸೂಚಿಸಿದಲ್ಲಿ, ಅಲ್ಟ್ರಾಸೌಂಡ್ ಪರೀಕ್ಷೆಗಳು ಮತ್ತು ಸ್ಪಿನಾ ಬೈಫಿಡಾದ ಆಮ್ನಿಯೋಸೆಂಟಿಸಿಸ್‌ನಂತಹ ನಿರ್ದಿಷ್ಟ ರೋಗನಿರ್ಣಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.
ಮಹಿಳೆಯ ವಯಸ್ಸು ಗರ್ಭಧಾರಣೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಅದರಲ್ಲೂ 35 ಅಥವಾ ಹೆಚ್ಚು ವಯಸ್ಸಿನವರಾಗಿದ್ದರೆ, ಅಂತಹ ಮಹಿಳೆಯರಿಗೆ ಜನಿಸುವ ಮಕ್ಕಳಲ್ಲಿ ಕ್ರೋಮೋಸೋಮ್ (ವರ್ಣತಂತು) ಸಮಸ್ಯೆಗಳ ಅಪಾಯವೂ ಹೆಚ್ಚು. ಆದರೆ ಗರ್ಭಾವಸ್ಥೆಗೆ ಮುನ್ನ ಅಥವಾ ಗರ್ಭಧರಿಸಿದ ನಂತರ ಈ ಸ್ಥಿತಿಗಳು ಕಂಡುಬಂದರೆ ಕಂಗಾಲಾಗುವ ಅಗತ್ಯವೇನೂ ಇಲ್ಲ. ಸುಧಾರಿತ ವೈದ್ಯಕೀಯ ಚಿಕಿತ್ಸೆಗಳು ಲಭ್ಯ ಇವೆ. ಕೆಲವು ದೋಷಗಳನ್ನು ಗರ್ಭಾವಸ್ಥೆಯಲ್ಲಿಯೇ ಗುರುತಿಸಬಹುದು. ಇನ್ನೂ ಕೆಲವನ್ನು ಜನನದ ಅವಧಿಯಲ್ಲಿ ಅಥವಾ ಜನನದ ನಂತರ ಕಂಡುಕೊಳ್ಳಬಹುದು. ಕೆಲವು ದೋಷಗಳು ಕಣ್ಣಿಗೆ ಕಾಣುವಂತಿರುತ್ತವೆ, ಇನ್ನೂ ಕೆಲವು ಮೇಲ್ನೋಟಕ್ಕೆ ಕಾಣುವುದಿಲ್ಲ.
ಸಮಸ್ಯೆ ಇರುವುದು ಕಂಡುಬಂದ ಮೇಲೆ ಪರಿಹಾರ ಸುಲಭ. ಆಮ್ನಿಯೋಸೆಂಟಿಸಿಸ್ ಮತ್ತು ಕೊರಿಯೊನಿಕ್ ವಿಲ್ಲಸ್ ಸ್ಯಾಂಪ್ಲಿಂಗ್‌ನಂತಹ ಪ್ರಸವಪೂರ್ವ ಪರೀಕ್ಷೆಗಳು ಹೆಚ್ಚು ಸಹಾಯಕ. ರಕ್ತ ಪರೀಕ್ಷೆ ಮತ್ತು ಅಲ್ಟ್ರಾಸೌಂಡ್ ಮೂಲಕವೂ ಕೆಲವು ಜನ್ಮ ದೋಷಗಳನ್ನು ಗುರುತಿಸಬಹುದು. ಗರ್ಭಧಾರಣೆಗೂ ಮುನ್ನ ನಿಮ್ಮ ವಯಸ್ಸು, ವೈದ್ಯಕೀಯ ಇತಿಹಾಸ, ಕುಟುಂಬದ ಇತಿಹಾಸ ಮುಂತಾದ ಸಂಗತಿಗಳ ಬಗ್ಗೆ ತಿಳಿದುಕೊಂಡು, ವೈದ್ಯರೊಂದಿಗೆ ಚರ್ಚಿಸಿ, ನಿರಂತರ ತಪಾಸಣೆ, ಮೇಲ್ವಿಚಾರಣೆ ಮತ್ತು ಪರೀಕ್ಷೆಗಳನ್ನು ಅನುಸರಿಸಿದರೆ ಯಾವುದೇ ಸ್ಥಿತಿಯಲ್ಲಿರುವವರಿಗೂ ಸುರಕ್ಷಿತ ಗರ್ಭಧಾರಣೆ ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.