ADVERTISEMENT

PV Web Exclusive| ಗ್ಯಾಸ್ಟ್ರಿಕ್‌ ಕ್ಯಾನ್ಸರ್ ಕಡೆಗಣಿಸಿದರೆ ಜೀವಕ್ಕೇ ಕುತ್ತು!

ಆ್ಯಸಿಡಿಟಿಗೆ ಸ್ವಯಂ ವೈದ್ಯರಾಗಬೇಡಿ...

ಸುಶೀಲಾ ಡೋಣೂರ
Published 17 ಫೆಬ್ರುವರಿ 2021, 12:57 IST
Last Updated 17 ಫೆಬ್ರುವರಿ 2021, 12:57 IST
   

ಹೊಟ್ಟೆಯುರಿ, ಉಬ್ಬರ, ಅಜೀರ್ಣ, ಎದೆಯುರಿ, ವಾಕರಿಕೆ, ರಕ್ತಹೀನತೆ, ಆಯಾಸ... ‘ಅಬ್ಭಾ... ಗ್ಯಾಸ್ಟ್ರಿಕ್!’ ಎನ್ನುತ್ತ ಮಾತ್ರೆ ನುಂಗಿದ್ದೇ ಬಂತು. ಸಂಪೂರ್ಣ ಗುಣವಾಗುವ ಲಕ್ಷಣವೇ ಕಾಣಲಿಲ್ಲ. ಅನುಮಾನಗೊಂಡ ವೈದ್ಯರು ಪರೀಕ್ಷೆ ನಡೆಸಿದಾಗಲೇ ಅದು ಕ್ಯಾನ್ಸರ್‌ಗೆ ತಿರುಗಿದ ಆಘಾತ ಎದುರಾದುದು. ಗ್ಯಾಸ್ಟ್ರಿಕ್‌ ಕ್ಯಾನ್ಸರ್‌ ಅಥವಾ ಹೊಟ್ಟೆಯ ಕ್ಯಾನ್ಸರ್‌ ಮುಸುಕುಧಾರಿ ಆಗಂತುಕನಂತೆ ನುಸುಳಿ ಬಂದಿದ್ದೂ ತಿಳಿಯದು, ತಳ ಊರಿದ್ದೂ ಗೊತ್ತಾಗದು...

ಡಾ. ಸಂದೀಪ್ ನಾಯಕ್

ಮೇಲ್ನೋಟಕ್ಕೆ ಸಾಮಾನ್ಯ ಗ್ಯಾಸ್ಟ್ರಿಕ್‌ಗೂ, ಗ್ಯಾಸ್ಟ್ರಿಕ್‌ ಕ್ಯಾನ್ಸರ್‌ಗೂ ಹೆಚ್ಚಿನ ವ್ಯತ್ಯಾಸ ತಿಳಿಯದು. ಎರಡೂ ಸಮಸ್ಯೆಗಳ ಲಕ್ಷಣಗಳು ಹೆಚ್ಚೂ–ಕಡಿಮೆ ಒಂದೇ ಆಗಿರುತ್ತವೆ. ಹೀಗಾಗಿ ಹೆಚ್ಚಿನ ಸಂದರ್ಭಗಳಲ್ಲಿ ಗ್ಯಾಸ್ಟ್ರಿಕ್‌ ಕ್ಯಾನ್ಸರ್‌ ಬೆಳಕಿಗೆ ಬರುವುದು ವಿಳಂಬವಾಗುತ್ತದೆ. ರೋಗನಿರ್ಣಯ ತಡವಾದಲ್ಲಿ ಚಿಕಿತ್ಸೆ ಕಠಿಣವಾಗುತ್ತದೆ. ಗುಣಮುಖವಾಗುವ ಸಾಧ್ಯತೆಯೂ ಕಡಿಮೆಯಾಗುತ್ತ ಹೋಗುತ್ತದೆ.

ಹೊಟ್ಟೆಯ ಸಾಮಾನ್ಯ ತೊಂದರೆ ಹಾಗೂ ಕ್ಯಾನ್ಸರ್‌ನಂತಹ ಮಾರಕ ರೋಗದ ನಡುವಿನ ಸಣ್ಣ ವ್ಯತ್ಯಾಸವನ್ನು ಗುರುತಿಸುವುದು ಹೇಗೆ? ಹೊಟ್ಟೆಯ ಈ ಸೂಕ್ಷ್ಮ ಸಂಗತಿಯನ್ನು ಅರಿತುಕೊಳ್ಳುವ ಬಗೆ ಹೇಗೆ? ಯಾವುದಕ್ಕೆ ಎದೆಗುಂದಬಾರದು, ಯಾವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು? ಈ ಕ್ಯಾನ್ಸರ್‌ನ ಶೀಘ್ರ ಪತ್ತೆ ಹೇಗೆ, ಲಭ್ಯವಿರುವ ಚಿಕಿತ್ಸೆಗಳಾವವು... ಈ ಬಗ್ಗೆ ಮಾಹಿತಿ ನೀಡಿದ್ದಾರೆ ಫೋರ್ಟಿಸ್‌ ಆಸ್ಪತ್ರೆಯ ಆಂಕೊಸರ್ಜನ್ ಡಾ. ಸಂದೀಪ್ ನಾಯಕ್.

ADVERTISEMENT

***

ಗ್ಯಾಸ್ಟ್ರಿಕ್ ಕ್ಯಾನ್ಸರ್ ತಡವಾಗಿ ಬೆಳಕಿಗೆ ಬರುವ, ಆದರೆ ಒಳೊಳಗೇ ಜೀವ ಹಿಂಡುವ ಕ್ಯಾನ್ಸರ್‌ ಪ್ರಕಾರ. ಇದು ಗುಣವಾದಂತೆ ಕಂಡರೂ ಗುಣವಾಗದ, ಒಂದು ಭಾಗದಿಂದ ಇತರ ಭಾಗಗಳಿಗೂ ಹರಡುವ ಸಾಮರ್ಥ್ಯ ಹೊಂದಿದ್ದು, ಈ ಹರಡುವಿಕೆಯನ್ನು ತಡೆಯಲು ಶಸ್ತ್ರಚಿಕಿತ್ಸೆ, ರೇಡಿಯೊಥೆರಪಿ ಮತ್ತು ಕೀಮೋಥೆರಪಿ ಸೇರಿದಂತೆ ಬಹುಮಾಧ್ಯಮ ಚಿಕಿತ್ಸೆಯ ಅಗತ್ಯವಿರುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಕಾರ, ಹೊಟ್ಟೆಯ ಕ್ಯಾನ್ಸರ್ ವಿಶ್ವದಾದ್ಯಂತ 783,000 ಸಾವಿಗೆ ಕಾರಣವಾಗಿದೆ (2018). ಇದು ವಿಶ್ವದಾದ್ಯಂತ ಆರನೇ ಸಾಮಾನ್ಯ ಕ್ಯಾನ್ಸರ್ ಆಗಿದ್ದು, ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಮೂರನೇ ಪ್ರಮುಖ ಕಾರಣವಾಗಿದೆ.

ಕಡೆಗಣಿಸಿದರೆ ಜೀವಕ್ಕೇ ಕುತ್ತಾಗುವ ಈ ಕ್ಯಾನ್ಸರ್‌ ದೇಹ ಸೇರಲು ಇರುವ ಕಾರಣಗಳಾದರೂ ಯಾವವು? ಇಂಥದ್ದೇ ಕಾರಣ ಎಂದು ಹೇಳಲಾಗದು. ಆದಾಗ್ಯೂ ತಜ್ಞವೈದ್ಯರು ಗುರುತಿಸಿರುವ ಕೆಲವು ಮುಖ್ಯ ಕಾರಣಗಳಲ್ಲಿ ನಾವು ಸೇವಿಸುವ ಆಹಾರವೂ ಒಂದು. ನಿಜ, ಅನಿವಾರ್ಯವೋ, ಸೋಮಾರಿತನವೋ, ಬಾಯಿರುಚಿಗೊ, ಫ್ಯಾಶನ್‌ಗೊ ಒಟ್ಟಾರೆ ಸೇವಿಸುವ ಆಹಾರ ಗ್ಯಾಸ್ಟ್ರಿಕ್ ಕ್ಯಾನ್ಸರ್‌ ಅನ್ನು ಆಹ್ವಾನಿಸಬಹುದು. ಸಂರಕ್ಷಿತ ಆಹಾರವನ್ನು ಹೆಚ್ಚಾಗಿ ಸೇವಿಸುವ ಮೂಲಕ ನಾವೇ ಇದನ್ನು ನಮ್ಮ ದೇಹ ಸೇರಲು ಅನುಮತಿಸುತ್ತೇವೆ.

ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಕೆಲವು ಅಂಶಗಳೆಂದರೆ

·ವೈದ್ಯಕೀಯ ಸ್ಥಿತಿಗಳು (ಹೊಟ್ಟೆಯಲ್ಲಿ ಹೆಚ್. ಪೈಲೋರಿ ಸೋಂಕು, ಕರುಳಿನ ಮೆಟಾಪ್ಲಾಸಿಯಾ, ಪೆಪ್ಟಿಕ್ ಹೊಟ್ಟೆಯ ಹುಣ್ಣು, ಹಾನಿಕಾರಕ ರಕ್ತಹೀನತೆ (ಇದು ವಿಟಮಿನ್ ಬಿ 12 ಕೊರತೆಯಿಂದಾಗಿ ಬೆಳೆಯಬಹುದು), ಹೊಟ್ಟೆಯ ಪಾಲಿಪ್ಸ್ ಇತ್ಯಾದಿ)

·ಧೂಮಪಾನ, ಮದ್ಯಪಾನ

·ಕೌಟುಂಬಿಕ ಇತಿಹಾಸ

·ಅನಾರೋಗ್ಯಕರ ಆಹಾರ ಪದ್ಧತಿ (ಹಣ್ಣುಗಳು ಮತ್ತು ತರಕಾರಿಗಳ ಕಡಿಮೆ ಸೇವನೆ, ಹೆಚ್ಚಿನ ಪ್ರಮಾಣದಲ್ಲಿ ಸಂರಕ್ಷಿತ ಮಾಂಸವನ್ನು ತಿನ್ನುವುದು ಇತ್ಯಾದಿ)

·ವಯೋಮಾನ (50 ವರ್ಷ ಮೇಲ್ಪಟ್ಟ ವಯೋಮಾನದವರಲ್ಲಿ ಹೆಚ್ಚು)

·ಕೆಲವು ಶಸ್ತ್ರಚಿಕಿತ್ಸಾ ವಿಧಾನಗಳು

·ಲಿಂಗ (ಮಹಿಳೆಯರಿಗಿಂತ ಪುರುಷರು ಹೊಟ್ಟೆಯ ಕ್ಯಾನ್ಸರ್‌ಗೆ ಗುರಿಯಾಗುವ ಸಾಧ್ಯತೆ ಹೆಚ್ಚು)

·ಅಧಿಕ ತೂಕ ಅಥವಾ ಬೊಜ್ಜು

ಗ್ಯಾಸ್ಟ್ರಿಕ್‌ ಕ್ಯಾನ್ಸರ್‌ ಅನ್ನು ತಡೆಯುವುದು ಎಲ್ಲಾ ಸಂದರ್ಭದಲ್ಲೂ ಸಾಧ್ಯವಾಗದೇ ಹೋಗಬಹುದು. ಆದರೆ ಜೀವನಶೈಲಿಯಲ್ಲಿ ಗಮನಾರ್ಹ ಬದಲಾವಣೆಯನ್ನು ತಂದುಕೊಳ್ಳುವ ಮೂಲಕ ಕೆಲ ಸಂದರ್ಭಗಳಲ್ಲಿ ಅದನ್ನು ತಡೆಯುವ ಸಾಧ್ಯತೆ ನಮ್ಮ ಕೈಯಲ್ಲೇ ಇರುತ್ತದೆ. ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು, ದೈಹಿಕ ಚಟುವಟಿಕೆಯನ್ನು ರೂಢಿಸಿಕೊಳ್ಳುವುದು, ಧೂಮಪಾನ, ಮದ್ಯಪಾನವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇರುವ, ನಾವು ನಿಯಂತ್ರಿಸಬಹುದಾದ ಕೆಲವು ಮಾರ್ಗಗಳು.

ಹೊಟ್ಟೆಯ ಕ್ಯಾನ್ಸರ್ ಸಾಮಾನ್ಯವಾಗಿ ಯಾವುದೇ ನಿರ್ದಿಷ್ಟ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಇದರ ರೋಗಲಕ್ಷಣಗಳು ಜಠರದುರಿತ ಅಥವಾ ಅಜೀರ್ಣದಂತಹ ಸಾಮಾನ್ಯ ಅಸ್ವಸ್ಥತೆಗಳ ಲಕ್ಷಣಗಳಂತೆಯೇ ಇರುತ್ತವೆ. ಈ ಕಾರಣಕ್ಕಾಗಿ ಅವು ತಡವಾಗಿ ಗಮನಕ್ಕೆ ಬರುತ್ತವೆ ಅಥವಾ ನಿರ್ಲಕ್ಷ್ಯಕ್ಕೆ ಒಳಪಡುತ್ತವೆ. ಜಪಾನ್‌ನಂತಹ ದೇಶಗಳು ಗ್ಯಾಸ್ಟ್ರಿಕ್ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚುವ ಪರೀಕ್ಷೆಗಳನ್ನು ಪ್ರಾರಂಭಿಸಿವೆ ಮತ್ತು ಇದರಿಂದಾಗಿ ಅಲ್ಲಿ ಸಾವುಗಳ ಪ್ರಮಾಣವೂ ಕಡಿಮೆ ಮಾಡಲು ಸಾಧ್ಯವಾಗುತ್ತಿದೆ.

ಕೆಲವು ಆರಂಭಿಕ ಹಂತದ ಲಕ್ಷಣಗಳು

·ಹಸಿವಿನ ಕೊರತೆ

·ಅಜೀರ್ಣ / ಎದೆಯುರಿ / ಹೊಟ್ಟೆ ಉಬ್ಬರ

·ಹೊಟ್ಟೆ ನೋವು

·ವಾಕರಿಕೆ / ವಾಂತಿ

·ದಿಢೀರ್‌ ತೂಕ ನಷ್ಟ

·ಕೆಂಪು ರಕ್ತ ಕಣಗಳ ಎಣಿಕೆಯಲ್ಲಿ ಕುಸಿತ (ರಕ್ತಹೀನತೆ)

·ಆಯಾಸ / ದೌರ್ಬಲ್ಯ

·ರಕ್ತಸಿಕ್ತ ಅಥವಾ ಕಪ್ಪು ಬಣ್ಣದ ಮಲ

ಇವೆಲ್ಲವೂ ಕ್ಯಾನ್ಸರ್‌ನ ಲಕ್ಷಣಗಳೆಂದು ನಿಖರವಾಗಿ ಹೇಳಲಾಗದು. ಕೆಲವೊಮ್ಮೆ ಗಂಭೀರವಲ್ಲದ ಸಾಮಾನ್ಯ ಅಸ್ವಸ್ಥತೆಯಲ್ಲಿಯೂ ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳಬಹುದು. ಆದರೆ ಈ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

ರೋಗನಿರ್ಣಯ

ರೋಗಲಕ್ಷಣಗಳು, ಕುಟುಂಬದ ಇತಿಹಾಸ ಮತ್ತು ವೈದ್ಯಕೀಯ ಇತಿಹಾಸದ ಜೊತೆಗೆ ಜೀವನಶೈಲಿಯ ಆಯ್ಕೆಗಳನ್ನು (ಅವರು ಏನು ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ ಮತ್ತು ಅವರು ಧೂಮಪಾನ.ಮದ್ಯಪಾನ ಮಾಡುತ್ತಾರೆಯೇ) ಆಧರಿಸಿ ರೋಗನಿರ್ಣಯ ಮಾಡಲಾಗುತ್ತದೆ. ನಂತರ ರೋಗವನ್ನು ಖಚಿತಪಡಿಸಲು ಕೆಲ ದೈಹಿಕ ಪರೀಕ್ಷೆಗಳನ್ನು ಮತ್ತು ರಕ್ತ ಪರೀಕ್ಷೆಗಳನ್ನು ಸಹ ನಡೆಸಲಾಗುತ್ತದೆ.

ಒಮ್ಮೆ ರೋಗ ಖಚಿತವಾದಲ್ಲಿ ಅದರ ಹಂತ ಇತ್ಯಾದಿ ಮಾಹಿತಿಗಾಗಿ ಎಂಡೋಸ್ಕೋಪ್ ಬಳಸಲಾಗುತ್ತದೆ. ಮುಂದಿನ ಹಂತವಾಗಿ ಅಂಗಾಂಶದ ಮಾದರಿಗಳನ್ನು ಸಂಗ್ರಹಿಸಲು ಬಯಾಪ್ಸಿ ಮಾಡಲಾಗುತ್ತದೆ. ಎಂಡೋಸ್ಕೋಪಿ ಮತ್ತು ಬಯಾಪ್ಸಿ ಮುಗಿದ ಬಳಿಕರೋಗದ ಬಗ್ಗೆ ಹೆಚ್ಚಿನ ನಿಖರತೆಯನ್ನು ಪಡೆಯಲು ಸಿಟಿ ಸ್ಕ್ಯಾನ್‌ ಮಾಡಲಾಗುತ್ತದೆ. ಇದರಲ್ಲಿ ದೇಹದೊಳಗಿನ ಪ್ರದೇಶಗಳ ವಿವರವಾದ, ಬಹು-ಕೋನ ಚಿತ್ರಗಳನ್ನು ಪಡೆಯಲು ಸಹಾಯವಾಗುತ್ತದೆ.

ಚಿಕಿತ್ಸೆ

ಹೊಟ್ಟೆಯ ಕ್ಯಾನ್ಸರ್ ಚಿಕಿತ್ಸೆಯು ಕ್ಯಾನ್ಸರ್‌ನ ತೀವ್ರತೆ ಮತ್ತು ವ್ಯಕ್ತಿಯ ಒಟ್ಟಾರೆ ಆರೋಗ್ಯ ಮತ್ತು ಆದ್ಯತೆಗಳನ್ನು ಒಳಗೊಂಡಂತೆ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ:

ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ವಿಕಿರಣ ಚಿಕಿತ್ಸೆ, ಔಷಧಿಗಳು ಮತ್ತು ಕ್ಲಿನಿಕಲ್ ಪ್ರಯೋಗಗಳಲ್ಲಿ ಯಾವುದಾದರೂ ಒಂದು ಅಥವಾ ಹಲವು ಚಿಕಿತ್ಸೆಗಳ ಸಂಯೋಜನೆಯನ್ನು ರೋಗಿ ಹಾಗೂ ರೋಗದ ಹಂತಕ್ಕೆ ಅನುಗುಣವಾಗಿ ಪ್ರಯೋಗಿಸಲಾಗುತ್ತದೆ.

ಶಸ್ತ್ರಚಿಕಿತ್ಸೆ

ಇಲ್ಲಿ ಕ್ಯಾನ್ಸರ್‌ನ ಕೋಶಗಳ ಜೊತೆಗೆ ಆರೋಗ್ಯಕರ ಕೋಶಗಳ ಅಂಚನ್ನು ಸಹ ತೆಗೆದುಹಾಕಬೇಕಾಗುತ್ತದೆ. ಅಂದರೆ ಹೊಟ್ಟೆಯ ಕ್ಯಾನ್ಸರ್ ಪೀಡಿತ ಭಾಗದಜೊತೆಗೆಕೆಲವು ಸಾಮಾನ್ಯ ಅಂಗಾಂಶಗಳನ್ನು ತೆಗೆದುಹಾಕುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಕ್ಯಾನ್ಸರ್‌ನ ಯಾವುದೇ ಕೋಶಗಳು ಅದರ ಹಿಂದೆ ಉಳಿದುಕೊಂಡಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವನ್ನು ಅನುಸರಿಸಲಾಗುತ್ತದೆ. ಶಸ್ತ್ರಚಿಕಿತ್ಸೆ ಮುಖ್ಯ ಚಿಕಿತ್ಸೆಯಾಗಿದ್ದರೂ, ಕೆಲವೊಮ್ಮೆ ಕೀಮೋಥೆರಪಿ ಮತ್ತು ವಿಕಿರಣಚಿಕಿತ್ಸೆಯನ್ನು ಸಹ ಇದರೊಂದಿಗೆ ಅನುಸರಿಸಬೇಕಾಗುತ್ತದೆ.

ವಿಕಿರಣ ಚಿಕಿತ್ಸೆ

ವಿಕಿರಣ ಚಿಕಿತ್ಸೆಯಲ್ಲಿ, ಕ್ಯಾನ್ಸರ್ ಕೋಶಗಳನ್ನು ಗುರುತಿಸಲು ಮತ್ತು ನಾಶಪಡಿಸಲು ವಿಕಿರಣಶೀಲ ಕಿರಣಗಳನ್ನು ಬಳಸಲಾಗುತ್ತದೆ. ಆದರೆ ಗಂಭೀರ ಪ್ರಕರಣಗಳಲ್ಲಿ ಮಾತ್ರ ಈ ಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತದೆ, ಏಕೆಂದರೆ ಈ ರೀತಿಯ ಚಿಕಿತ್ಸೆಯು ಸಾಮಾನ್ಯವಲ್ಲ. ಹತ್ತಿರದ ಅಂಗಗಳಿಗೆ ಹಾನಿಯಾಗುವ ಅಪಾಯವಿರುತ್ತದೆ.ಕ್ಯಾನ್ಸರ್ ಮುಂದುವರಿದ ಹಂತದಲ್ಲಿದ್ದರೆ ಅಥವಾ ರಕ್ತಸ್ರಾವ ಅಥವಾ ತೀವ್ರವಾದ ನೋವಿನಂತಹ ರೋಗಲಕ್ಷಣಗಳನ್ನು ಉಂಟುಮಾಡಿದರೆ ಮಾತ್ರ ವಿಕಿರಣ ಚಿಕಿತ್ಸೆಯನ್ನು ಸೂಚಿಸಲಾಗುತ್ತದೆ.

ಗೆಡ್ಡೆಗಳನ್ನು ಕುಗ್ಗಿಸಲು ಶಸ್ತ್ರಚಿಕಿತ್ಸೆಯ ಮೊದಲು ಕೀಮೋಥೆರಪಿಯೊಂದಿಗೆ ವಿಕಿರಣ ಚಿಕಿತ್ಸೆಯನ್ನು ಸಂಯೋಜಿಸಬಹುದು. ಇದು ಶಸ್ತ್ರಚಿಕಿತ್ಸೆಯನ್ನು ಸುಲಭವಾಗಿಸಲು ಅನುವು ಮಾಡಿಕೊಡುತ್ತದೆ. ಹೊಟ್ಟೆಯ ಸುತ್ತ ಉಳಿದಿರುವ ಯಾವುದೇ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಶಸ್ತ್ರಚಿಕಿತ್ಸೆಯ ನಂತರ ವಿಕಿರಣ ಚಿಕಿತ್ಸೆಯನ್ನು ಸಹ ಬಳಸಬಹುದು.ವಿಕಿರಣ ಚಿಕಿತ್ಸೆಗೆ ಒಳಗಾಗುವ ರೋಗಗಳು ಅಜೀರ್ಣ, ವಾಕರಿಕೆ, ವಾಂತಿ ಮತ್ತು ಅತಿಸಾರದಂತಹ ತಾತ್ಕಾಲಿಕ ಆರೋಗ್ಯ ವ್ಯತ್ಯಯಗಳನ್ನು ಅನುಭವಿಸಬಹುದು.

ಕೀಮೋಥೆರಪಿ

ವೇಗವಾಗಿ ಬೆಳೆಯುತ್ತಿರುವ ಕ್ಯಾನ್ಸರ್ ಕೋಶಗಳ ವಿಭಜನೆ ಮತ್ತು ಹರಡುವಿಕೆಯನ್ನು ತಡೆಯಲು ಇದನ್ನು ಬಳಸಲಾಗುತ್ತದೆ. ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಅನುಕೂಲವಾಗುವಂತೆ ಕ್ಯಾನ್ಸರ್‌ ಗೆಡ್ಡೆಯನ್ನು ಕುಗ್ಗಿಸಲು ಕೀಮೋಥೆರಪಿಯನ್ನು ಬಳಸಲಾಗುತ್ತದೆ. ಕೀಮೋಥೆರಪಿಯಲ್ಲಿ ಬಳಸಲಾಗುವ ಔಷಧಿಯು ವ್ಯಕ್ತಿಯ ದೇಹದಾದ್ಯಂತ ಸಂಚರಿಸುತ್ತದೆ ಮತ್ತು ಕ್ಯಾನ್ಸರ್‌ನ ಪ್ರಾಥಮಿಕ ಸ್ಥಳದಲ್ಲಿ ಮತ್ತು ಅದು ಹರಡಿದ ಯಾವುದೇ ಪ್ರದೇಶಗಳಲ್ಲಿ ಇರಬಹುದಾದ ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.