ADVERTISEMENT

ಒಣಕಣ್ಣು ಸಿಂಡ್ರೋಮ್: ಪರಿಹಾರ ಹೇಗೆ?

ಮಂಜುಶ್ರೀ ಎಂ.ಕಡಕೋಳ
Published 20 ಡಿಸೆಂಬರ್ 2019, 19:30 IST
Last Updated 20 ಡಿಸೆಂಬರ್ 2019, 19:30 IST
   

ಕಣ್ಣಿನಲ್ಲಿ ಮರಳಿನ ಕಣ ಬಿದ್ದಂತಾಗುವುದು, ಪದೇಪದೇ ಕಣ್ಣಿನಲ್ಲಿ ನೀರು ಸೋರುವುದು ಬಹುತೇಕರಿಗೆ ಅನುಭವಕ್ಕೆ ಬಂದೇ ಇರುತ್ತದೆ. ಆದರೆ, ಇದು ‘ಒಣಕಣ್ಣಿ’ನ ಲಕ್ಷಣ ಅನ್ನುವುದು ಹಲವರಿಗೆ ತಿಳಿದಿರುವುದಿಲ್ಲ. ಈ ಸಮಸ್ಯೆಗೆ ಸಕಾಲಕ್ಕೆ ಚಿಕಿತ್ಸೆ ಪಡೆಯದಿದ್ದರೆ ದೃಷ್ಟಿಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು. ಒಣಕಣ್ಣು ಸಮಸ್ಯೆ (ಡ್ರೈ ಐಸ್ ಸಿಂಡ್ರೋಮ್) ಬಗ್ಗೆ ಡಾ.ಅಗರ್‌ವಾಲ್ಸ್‌ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮಂಜುನಾಥ್ ಎಂ.ಸಿ. ಅವರ ಜತೆ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ.

ಏನಿದು ಒಣಕಣ್ಣು ಸಿಂಡ್ರೋಮ್?
ಆರೋಗ್ಯವಂತ ಕಣ್ಣು ತನ್ನೊಳಗೆ ಗುಣಮಟ್ಟದ ಕಣ್ಣೀರನ್ನು ಉತ್ಪತ್ತಿ ಮಾಡುತ್ತಿರುತ್ತದೆ. ಈ ನೀರು ಕಣ್ಣಿನಲ್ಲಿರುವ ಕಲ್ಮಶವನ್ನು ಶುಚಿಗೊಳಿಸಲು ಸಹಕಾರಿಯಾಗಿರುತ್ತದೆ. ಪ್ರತಿ ಬಾರಿ ರೆಪ್ಪೆ ಮುಚ್ಚಿ ತೆರೆದಾಗಲೂ ಕಣ್ಣು ತನ್ನ ಸುತ್ತಲೂ ಅಲ್ಪಪ್ರಮಾಣದಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳುತ್ತದೆ. ಕಣ್ಣಿಗೆ ಸೋಂಕು ಆಗದಿರುವಂತೆ ಕಾಪಾಡಲೂ ಇದು ಅಗತ್ಯ. ತೇವಾಂಶದ ಕೊರತೆ ಮತ್ತು ಗುಣಮಟ್ಟದ ಕಣ್ಣೀರಿನ ಉತ್ಪಾದನೆ ಆಗದಿರುವಿಕೆಯೇ ಒಣಕಣ್ಣು (ಡ್ರೈ ಐಸ್ ಸಿಂಡ್ರೋಮ್‌) ಸಮಸ್ಯೆ.

ಯಾರಿಗೆ ಬರುತ್ತದೆ? ಯಾಕೆ ಬರುತ್ತದೆ?
ಒಣಕಣ್ಣು ಸಮಸ್ಯೆಗೆ ವಯಸ್ಸಿನ ಭೇದವಿಲ್ಲ. ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೆ ಇದು ಕಾಣಿಸಿಕೊಳ್ಳಬಹುದು. ಹೆಣ್ಣುಮಕ್ಕಳಲ್ಲಿ ವಿಶೇಷವಾಗಿ ಋತುಸ್ರಾವದ ಮುಕ್ತಾಯ (ಮೆನೊಪಾಸ್‌) ಹಂತದಲ್ಲಿರುವವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಹಂತದಲ್ಲಿ ಮಹಿಳೆಯರಲ್ಲಿ ಹಾರ್ಮೋನ್‌ಗಳ ಏರುಪೇರು ಮತ್ತು ದೇಹದಲ್ಲಿನ ದ್ರವಾಂಶದ ಕೊರತೆಯೇ ಒಣಕಣ್ಣು ಸಮಸ್ಯೆ ಉದ್ಭವಿಸಲು ಕಾರಣ.

ADVERTISEMENT

ಹವಾಮಾನದಲ್ಲಿನ ಬದಲಾವಣೆ, ಏರ್‌ ಕಂಡೀಷನ್‌ಗಳ ಬಳಕೆ, ಕಂಪ್ಯೂಟರ್‌ ಮತ್ತು ಮೊಬೈಲ್ ಬಳಕೆ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯೂ ಒಣಕಣ್ಣಿಗೆ ಕಾರಣವಾಗಬಲ್ಲದು. ಹವಾಮಾನ ಬದಲಾವಣೆಯಿಂದ ಕೆಲವರಲ್ಲಿ ಒಣಕಣ್ಣು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ನವೆಂಬರ್‌ನಿಂದ ಜನವರಿಯಲ್ಲಿ ಪರಿಸರದಲ್ಲಿ ತೇವಾಂಶದ ಕೊರತೆ ಇರುತ್ತದೆ. ಆಗ ಬಹುತೇಕರು ಹೆಚ್ಚು ನೀರು ಸೇವಿಸುವುದಿಲ್ಲ. ಆಗ ದೇಹದಲ್ಲಿ ದ್ರವಾಂಶ ಕಡಿಮೆಯಾಗಿ ಅದು ಕಣ್ಣಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಕಂಡುಹಿಡಿಯುವುದು?
ಕಣ್ಣಿನ ಸುತ್ತಲಿನ ಚರ್ಮ ದಪ್ಪವಾಗುವುದು, ಕಾರ್ನಿಯಾ ಒಣಗಿದಂತಾಗುವುದು, ಕಣ್ಣಿನಲ್ಲಿ ಗಾಯವಾಗುವುದು, ಕಣ್ಣಲ್ಲಿ ಮರಳಿನ ಕಣ ಬಿದ್ದಂತೆ ಒತ್ತುವುದು, ವಿನಾ ಕಾರಣ ನೀರು ಸುರಿಯುವುದು ಮತ್ತು ಕೆಲವರಿಗೆ ಈರುಳ್ಳಿ ಹೆಚ್ಚಿದಾಗಲೂ ಕಣ್ಣೀರು ಬರಲಿಲ್ಲವೆಂದರೆ ಅವರು ಒಣಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದರ್ಥ. ಕೆಲವರಿಗೆ ದೃಷ್ಟಿ ಮಂದವಾಗುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಭೇಟಿಮಾಡುವುದು ಒಳಿತು.

ಪರೀಕ್ಷೆ ಏನು; ಎತ್ತ?
ಒಣಕಣ್ಣನ್ನು ಎರಡು ರೀತಿಯಲ್ಲಿ ಪರೀಕ್ಷಿಸಲಾಗುತ್ತದೆ. ಶಿಮ್ಮರ್ ಪರೀಕ್ಷೆ ಮತ್ತೊಂದು ಟಿಯರ್ ಫಿಲಂ ಬ್ರೇಕಪ್ ಟೈಮ್ ಪರೀಕ್ಷೆ (ಟಿಬಿಯುಟಿ). ಈ ಪರೀಕ್ಷೆಗಳಲ್ಲಿ ಒಣಕಣ್ಣಿನ ಸಮಸ್ಯೆ ಯಾವ ಹಂತದಲ್ಲಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ.

ಚಿಕಿತ್ಸೆ:‌ ಒಣಕಣ್ಣಿನ ತೀವ್ರತೆ ಮತ್ತು ವಿವಿಧ ಹಂತಗಳನ್ನು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ. ಸಮಸ್ಯೆ ಸಾಧಾರಣ ಮಟ್ಟದಲ್ಲಿದ್ದರೆ ಅಂಥವರಿಗೆ ಕಣ್ಣಿನ ಡ್ರಾಪ್ಸ್ ನೀಡಲಾಗುತ್ತದೆ. ಸಮಸ್ಯೆ ತೀವ್ರವಾಗಿದ್ದರೆ ಶಸ್ತ್ರಚಿಕಿತ್ಸೆಯ ಅಗತ್ಯ ಬೀಳುತ್ತದೆ. ಆದರೆ, ಇದಕ್ಕೆ ಸೂಕ್ತ ತಪಾಸಣೆ ಅಗತ್ಯ.

ಪರಿಹಾರ
ಕೃತಕ ಕಣ್ಣೀರಿನ ಹನಿಗಳು ಮತ್ತು ಆಯಿಂಟ್‌ಮೆಂಟ್‌ ಬಳಸಬಹುದು. (ವೈದ್ಯರ ಸಲಹೆ ಮೇರೆಗೆ). ಆರೋಗ್ಯವಂತ ಜೀವನಶೈಲಿ ರೂಢಿಸಿಕೊಳ್ಳುವುದು. ಟಿ.ವಿ, ಮೊಬೈಲ್, ಕೃತಕ ಬೆಳಕಿನಿಂದ ಆದಷ್ಟು ದೂರವಿರುವುದು. ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಆಹಾರ ಸೇವನೆ ಮತ್ತು ಮುಖ್ಯವಾಗಿ ದೇಹದಲ್ಲಿ ದ್ರವಾಂಶವನ್ನು ಕಾಪಾಡಿಕೊಳ್ಳುವುದು.

ಕಾಂಟ್ಯಾಕ್ಟ್ ಲೆನ್ಸ್‌ನಿಂದ ದೂರವಿರಿ
ಸಾಧ್ಯವಾದಷ್ಟೂ ಕಾಂಟ್ಯಾಕ್ಟ್‌ ಲೆನ್ಸ್‌ನಿಂದ ದೂರವಿರುವುದು ಒಳ್ಳೆಯದು. ಕಾಂಟ್ಯಾಕ್ಟ್ ಲೆನ್ಸ್ ಫಾರಿನ್ ಮೆಟಿರೀಯಲ್ ಆಗಿರುವುದರಿಂದ ಕಣ್ಣಿಗೆ ಸಹಜವಾಗಿಯೇ ಅಲರ್ಜಿಯಾಗುವ ಸಾಧ್ಯತೆ ಇರುತ್ತದೆ. ಇದನ್ನು ದೀರ್ಘಕಾಲದವರೆಗೆ ಬಳಸುವುದೂ ಅಪಾಯಕಾರಿ. ಈ ಲೆನ್ಸ್‌ಗಳ ಬಳಕೆ ಕಣ್ಣಿನಲ್ಲಿ ತೇವಾಂಶವನ್ನು ಹೀರುವ ಸಾಧ್ಯತೆಯೂ ಇರುತ್ತದೆ. ಅಪರೂಪಕ್ಕೊಮ್ಮೆ ಕಾಂಟ್ಯಾಕ್ಟ್‌ ಲೆನ್ಸ್‌ ಬಳಸಿದರೆ ಉತ್ತಮ.

ಡಾ. ಮಂಜುನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.