ADVERTISEMENT

ಬಿಸಿಲ ಧಗೆಯಲ್ಲಿ ದೇಹ-ಮನಸ್ಸು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 19:30 IST
Last Updated 28 ಮಾರ್ಚ್ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

‘ಬಂದಿತಿದಿಗೋ ಬೇಸಿಗೆ, ಸಂದ ಸಮಯದ ಕೊರಗ ಕಳೆಯುತ ಮಂದಿಯೆಲ್ಲರ ಲೇಸಿಗೆ’ ಎಂದು ಕವಿವಾಣಿ ಬೇಸಿಗೆಯ ಸಂತಸವನ್ನು ನೆನೆದು ಹೇಳಿರಬಹುದು. ಆದರೆ ಬೇಸಿಗೆಯ ಬಿಸಿಲ ಧಗೆಯಲ್ಲಿ ಹಲವು ಆರೋಗ್ಯದ ಸಮಸ್ಯೆಗಳು ಎದುರಾಗುತ್ತವೆ. ದೇಹ-ಮನಸ್ಸುಗಳು ಬೇಯುವಂತೆ ಮಾಡುತ್ತವೆ. ಪ್ರತಿ ವರ್ಷ ಬೇಸಿಗೆ ಬಂದೇ ತೀರುತ್ತದಷ್ಟೆ. ಹೀಗಾಗಿ ಆರೋಗ್ಯಸಮಸ್ಯೆಗಳನ್ನು ಆ ಸಮಯದಲ್ಲಿ ನಿಭಾಯಿಸುವ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದೇ ಸೂಕ್ತ.

ಯಾವುದೇ ಕಾಲದಲ್ಲಿ ಆರೋಗ್ಯಸಮಸ್ಯೆಗಳು ಏಕೆ ಉಂಟಾಗುತ್ತವೆ ಎನ್ನುವುದಕ್ಕೆ ವೈಜ್ಞಾನಿಕ ಕಾರಣಗಳಿವೆ. ಆ ವೈಜ್ಞಾನಿಕ ಕಾರಣಗಳನ್ನು ಅರ್ಥ ಮಾಡಿಕೊಂಡು ಸರಳವಾದ, ಸುಲಭವಾದ ಕ್ರಮಗಳನ್ನು ಅನುಸರಿಸಿದರೆ ಬಿರುಬಿರು ಬೇಸಿಗೆಯಲ್ಲಿಯೂ ಆರೋಗ್ಯದ ಆನಂದ ಅನುಭವಿಸಲು ಸಾಧ್ಯವಿದೆ. ಬೇಸಿಗೆಯನ್ನು ಎದುರು ನೋಡಲೂ ಸಾಧ್ಯವಿದೆ!

ನಮ್ಮ ದೇಹದ ಒಳಗೊಂದು ಜೈವಿಕ ಗಡಿಯಾರವಿದೆ. ಹಾರ್ಮೋನುಗಳ ಉತ್ಪತ್ತಿ, ರಕ್ತದೊತ್ತಡ, ಜೀರ್ಣಕ್ರಿಯೆ, ನಿದ್ರೆ-ಎಚ್ಚರಗಳ ಚಕ್ರವನ್ನು ನಿಯಂತ್ರಿಸುವುದು, ಇದರ ಕೆಲಸ. ಇದಕ್ಕೆ ಕೀಲಿ ಕೊಟ್ಟು ಆಗಾಗ್ಗೆ ಹೊಂದಿಸಲು ಹಲವು ಅಂಶಗಳು ಕಾರಣವಾಗುತ್ತವೆ. ಅವುಗಳಲ್ಲಿ ಪ್ರಮುಖವಾದವೆಂದರೆ ಹೊರಗಿನ ವಾತಾವರಣದ ಉಷ್ಣಾಂಶ ಮತ್ತು ಸೂರ್ಯನ ಬೆಳಕಿನ ಪ್ರಮಾಣ. ಹಾಗಾಗಿಯೇ ನಮ್ಮ ಇಡೀ ದೇಹದಲ್ಲಿ ಪ್ರತಿಯೊಂದು ಜೀವಕೋಶದಲ್ಲಿರುವ ಇಂಥ ಅಸಂಖ್ಯಾತ ‘ಮಿನಿ ಗಡಿಯಾರ’ಗಳು ಬೇಸಿಗೆಯಲ್ಲಿ ಜಾಗೃತಗೊಳ್ಳುತ್ತವೆ. ದೇಹ ಸರಿಯಾದ ಸ್ಥಿತಿಯಲ್ಲಿರಲು ಹಗಲು–ರಾತ್ರಿ ದುಡಿಯುತ್ತವೆ. ನಾವೂ ಅವುಗಳೊಂದಿಗೆ ಕೈ ಜೋಡಿಸಿದರೆ, ಯಾವ ಕಾಯಿಲೆಯೂ ಬರದೆ ಬೇಸಿಗೆಯನ್ನು ಕಳೆದು ಮುಂದುವರಿಯಬಹುದು. ಇಲ್ಲವಾದರೆ ವಿವಿಧ ಜ್ವರಗಳು, ವಾಂತಿ, ಭೇದಿ, ಮಲಬದ್ಧತೆ, ಮೂತ್ರದ ಸೋಂಕು, ಚರ್ಮದ ವಿವಿಧ ಕಡಿತ-ಗುಳ್ಳೆ ಮುಂತಾದ ಆರೋಗ್ಯಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಇವೆಲ್ಲವೂ ಮನಸ್ಸಿಗೂ ಸಾಕಷ್ಟು ಕಿರಿಕಿರಿಯುಂಟು ಮಾಡಿ, ಸೋಂಕು-ಚರ್ಮ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸುತ್ತವೆ. ರೋಗನಿರೋಧಕ ಶಕ್ತಿ ಕಡಿಮೆಯಾಗುವಂತೆ ಮಾಡುತ್ತದೆ. ‘ಬೇಸಿಗೆ ಬೇಡವಪ್ಪಾ’ ಎಂದು ಹೆದರುವಂತೆ ಮಾಡುತ್ತದೆ.

ADVERTISEMENT

ಬೇಸಿಗೆಯ ಬಹಳಷ್ಟು ಆರೋಗ್ಯಸಮಸ್ಯೆಗಳಿಗೆ, ಮೆದುಳಿನ ಅನಾರೋಗ್ಯಕ್ಕೆ ಕಾರಣವಾಗುವಂತಹದ್ದು ನೀರಿನ ಪ್ರಮಾಣ ದೇಹಕ್ಕೆ ಸಾಕಾಗದಿರುವುದು. ನಮ್ಮೆಲ್ಲರ ಬಿಡುವಿಲ್ಲದ ಧಾವಂತದ ಬದುಕಿನಲ್ಲಿ ನಮಗಿಂದು ‘ನೀರು ಕುಡಿಯಲು ಪುರುಸೊತ್ತಿಲ್ಲ’! ತತ್‍ಕ್ಷಣ ಇದರಿಂದ ಉದ್ಭವಿಸುವ ಸಮಸ್ಯೆ ‘ಮಲಬದ್ಧತೆ’. ‘ಚಳಿಗಾಲ ಕಳೆದು ಬೇಸಿಗೆ ಬಂದಿದೆ’ ಎಂದು ನಮಗೆ ತಿಳಿಯಲು ಬೆಳಗಿನ ಶೌಚಕ್ಕೆ ಹೋಗಿ ಕುಳಿತರೆ ಸಾಕು, ತಿಳಿದುಬಿಡುವಷ್ಟು
ಇದು ಎಲ್ಲರಲ್ಲಿ ಸಾಮಾನ್ಯ. ಬೇಸಿಗೆಯಲ್ಲಿ ಬೆವರು ಹೆಚ್ಚಷ್ಟೆ. ಬಾಯಾರಿ ನೀರು ಕುಡಿದರೂ, ಅದು ಬೆವರಾಗಿ ಹರಿಯುವ ಕಾರಣ ದೊಡ್ಡಕರುಳಿಗೆ ಬೇಕಾಗುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಪರಿಣಾಮ ಮಲಬದ್ಧತೆ.

ರಜಾದಿನಗಳೆಂದು ಪ್ರವಾಸ-ಪಿಕ್‍ನಿಕ್ ಹೊರಟಾಗ ಬಿಸಿಲಲ್ಲಿ ಸುತ್ತಾಡುತ್ತೇವೆ. ಟಾಯ್ಲೆಟ್ ಸರಿಯಿಲ್ಲವೆಂದು ಮಾಡಬೇಕಾದಾಗ ಮೂತ್ರ ಮಾಡದೆ ಕಟ್ಟಿಕೊಂಡು ಹೇಗೋ ನಿಭಾಯಿಸುತ್ತೇವೆ. ಆಮೇಲೆ ‘ತರಾತುರಿ’, ‘ಅರ್ಜೆಂಟ್’ ಎಂದಾಗ ಶೌಚಾಲಯ ಹೇಗಿದ್ದರೂ ಮಾಡಿ, ಸೋಂಕು ತಗಲುತ್ತದೆ. ‘ಮೂತ್ರ ಬಂದರೆ’ ಎಂಬ ಭಯದಿಂದ ಕಡಿಮೆ ನೀರು ಸೇವಿಸುತ್ತಿದ್ದೇವೆ. ಹೀಗಾಗಿ ದೇಹದಲ್ಲಿ ಸರಿಯಾಗಿ ಕ್ರಿಯೆಗಳು ನಡೆಯಲು ಇರುವ ನೀರಿನ ಪ್ರಮಾಣ ಕಡಿಮೆ ಬೇರೆ. ಈ ಎಲ್ಲವೂ ಸೇರಿ ಬೇಸಿಗೆಯಲ್ಲಿ ಬಹುಮಂದಿ ಎದುರಿಸುವ ಸಾಮಾನ್ಯ ಸಮಸ್ಯೆಯೆಂದರೆ ಪ್ರವಾಸ ಮುಗಿಸಿ ಬಂದ ನಂತರ, ಪ್ರವಾಸ ಮಾಡುವಾಗ ಮೂತ್ರದ ಸೋಂಕು. ತಲೆನೋವು-ವಾಂತಿಯಾಗುವಿಕೆ-ಭೇದಿ - ಇವುಗಳಿಗೂ ನಾವು ಸೇವಿಸುವ ನೀರಿಗೂ ಸಂಬಂಧವಿದೆ. ಇವೆಲ್ಲವೂ ಬೇಸಿಗೆಯಲ್ಲಿ ಹೆಚ್ಚೇ. ಸ್ವಚ್ಛವಾದ ಸಾಕಷ್ಟು ಪ್ರಮಾಣದ ನೀರಿನಿಂದ ಬಹಳಷ್ಟನ್ನು ತಡೆಗಟ್ಟಬಹುದು. ಅದೇ ಅಶುಚಿಯಾದ ನೀರು ಸೋಂಕುಕಾಯಿಲೆಗಳನ್ನು ಹರಡುವ ಸಶಕ್ತ ‘ಏಜೆಂಟ್’! ಆದ್ದರಿಂದ ಸ್ವಚ್ಛವಾದ, ಕನಿಷ್ಠ 7-8 ದೊಡ್ಡ ಲೋಟ (ಅಂದಾಜು 3-3.5 ಲೀ.ಗಳಷ್ಟು) ನೀರಿನ ಸೇವನೆಯನ್ನು, ಆಗಾಗ್ಗೆ ಮಾಡುವುದು, ಹಸಿರುಸೊಪ್ಪು, ಹಸಿ ತರಕಾರಿ, ನಾರಿರುವ ತರಕಾರಿಗಳು, ಆದಷ್ಟು ಬೇಯಿಸದೆ ಮಾಡಬಹುದಾದ ಹಲವು ರುಚಿಕರ ಖಾದ್ಯಗಳು, ನಮ್ಮ ಸಾಂಪ್ರದಾಯಿಕ ಅಡುಗೆಯ ಕ್ರಮಗಳಲ್ಲಿ ಬರುವಂತಹ ಪಚಡಿ, ಗೊಜ್ಜು, ತಂಬುಳಿ, ಮಜ್ಜಿಗೆ-ಮೊಸರು ಬೆರೆಸಿ ಮಾಡಬಹುದಾದ ಹಲವು ಪದಾರ್ಥಗಳನ್ನು ಆನಂದಿಸಿ, ಸೇವಿಸುವುದು, ನಾಲಿಗೆಗೂ ರುಚಿ, ದೇಹಕ್ಕೂ ಹಿತ. ಬಿಸಿಲಿನ ಝಳ ತಡೆಯುವ ಕ್ಯಾಪ್/ಟೊಪ್ಪಿ/ಪುಟ್ಟ ಛತ್ರಿ, ಒದ್ದೆಯಾದ ಟಿಷ್ಯೂ, ಒಂದು ಪುಟ್ಟ ಬಾಟಲಿ ನೀರು – ಇವು ಹೊರಗೆ ಹೋಗುವಾಗ ನಮ್ಮ ಸಂಗಾತಿಯಾಗಲೇ ಬೇಕು.

ಚರ್ಮದ ಸಮಸ್ಯೆಗಳಿಗೆ ಒಂದಿಷ್ಟು ಆರೈಕೆಯೂ ನೀರು-ಹಸಿ ತರಕಾರಿಗಳೊಂದಿಗೆ ಅಗತ್ಯವಿದೆ. ಪ್ರತಿದಿನ ಎರಡು ಬಾರಿ ಸ್ನಾನ ಮಾಡುವುದು, ಕನಿಷ್ಠ ಒಂದು ಬಾರಿ ತಣ್ಣೀರಿನ ಸ್ನಾನ, ಜೊತೆಗೇ ಬೆವರುಸಾಲೆಯನ್ನು ತಡೆಯುವ ಆ್ಯಂಟಿಫಂಗಲ್ ಪೌಡರ್‌ ಅನ್ನು ಉಪಯೋಗಿಸುವುದು ಸೂಕ್ತ. ವಿಶೇಷವಾಗಿ ಮಹಿಳೆಯರಲ್ಲಿ ಒಳ ಉಡುಪುಗಳು ದೇಹದ ಸಂಧಿಗಳಲ್ಲಿ (ತೊಡೆ ಸಂದು / ಕಂಕುಳು) ದೇಹಕ್ಕೆ ಬೆವರಿನಿಂದ ಅಂಟಿ, ಚರ್ಮ ಕೊಯ್ದಂತಾಗುವುದು; ಅದರಿಂದ ಉಂಟಾಗುವ ಅಪಾರ ನೋವು-ಕಿರಿಕಿರಿಗಳನ್ನು ಪೌಡರ್ ಸೂಸುವ, ಸ್ನಾನ ಮಾಡುವ ಅಭ್ಯಾಸ ತಡೆಯುತ್ತದೆ. ಪುರುಷರಲ್ಲಿ ಮೈಯ್ಯ ದುರ್ನಾತದ ಸಮಸ್ಯೆಯನ್ನು ಸ್ನಾನ - ಆ್ಯಂಟಿಫಂಗಲ್ ಪೌಡರ್‌ಗಳ ಅಭ್ಯಾಸಗಳು ತಡೆಯುತ್ತವೆ.

ಇವಲ್ಲದೆ ಮಾನಸಿಕ ಸಮಸ್ಯೆಗಳು ಹೆಚ್ಚಲೂ ಬೇಸಿಗೆ ಕಾರಣವಾಗಬಹುದು. ಮಕ್ಕಳು ರಜೆ ಎಂಬ ಕಾರಣಕ್ಕೆ ಮನೆಯಲ್ಲಿರುವುದು, ಅವರನ್ನು ನಿರ್ವಹಿಸುವುದು, ಹೆಚ್ಚುವ ಕೆಲಸದ ಒತ್ತಡ – ಇವು ವಿಶೇಷವಾಗಿ ತಾಯಂದಿರಲ್ಲಿ ಆತಂಕ-ಕಿರಿಕಿರಿ ಹೆಚ್ಚಿಸಬಹುದು. ನಿಯಮಿತವಾಗಿ ಅನುಸರಿಸುತ್ತಿರುವ ದಿನಚರಿ ಬದಲಾಗುವುದೂ ಇದಕ್ಕೊಂದು ಕಾರಣ. ನಿದ್ರೆಯಲ್ಲಿ ಬೇಸಿಗೆಯ ಕಣ್ಣು ಬಿಡಲಾಗದ ‘ಅಂಟು’ನಿದ್ರೆ, ಎಷ್ಟು ನಿದ್ರೆ ಮಾಡಿದರೂ ‘ತಾಜಾ’ ಅನುಭವ ಸಾಧ್ಯವಾಗಿಸದ ನಿದ್ರೆ – ಇವು ಎಲ್ಲರಲ್ಲಿ ಸಹಜವಾಗಿ ಕಂಡುಬರುತ್ತದೆ. ಇವೆಲ್ಲಕ್ಕೂ ಹೀಗಾಗುವ ಬಗ್ಗೆ ಅರಿವು, ಅವು ಸಹಜ, ಎಲ್ಲರಿಗೂ ಬೇಸಿಗೆಯೊಂದಿಗೆ ಎದುರಾಗುವಂತದ್ದು ಎಂಬ ಜ್ಞಾನ ಮತ್ತು ಜೀವನಶೈಲಿಯ ಸ್ವಲ್ಪ ಮಾರ್ಪಾಡು ಇವು ಸಹಾಯಕ.

ಬೇಸಿಗೆಯ ಬಹು ಮುಖ್ಯ ಉಪಯುಕ್ತತೆಯೆಂದರೆ ವ್ಯಾಯಾಮಕ್ಕೆಂದು ಬೆಳಿಗ್ಗೆ ಏಳಲಾರದವರಿಗೆ! ಬೇಸಿಗೆ ಸುಲಭವಾಗಿ ಬೆಳಿಗ್ಗೆ ಬೇಗ ಎದ್ದು ವ್ಯಾಯಾಮದ ಅಭ್ಯಾಸ ಮಾಡಿಕೊಳ್ಳಲು ಸಕಾಲ. ಎಳೆಯ ಬಿಸಿಲು ‘ವಿಟಮಿನ್ ಡಿ’ಗೂ ಒಳ್ಳೆಯ ಮೂಲ. ಮಕ್ಕಳಲ್ಲಿ ಬೆಳವಣಿಗೆಯ ಗತಿ ಬೇಸಿಗೆಯಲ್ಲಿ ಏರುವುದರಿಂದ, ವಿವಿಧ ದೈಹಿಕ ಆಟಗಳನ್ನು ಬೆಳಿಗ್ಗೆ ಆಡಿಸುವುದು ಉಪಯುಕ್ತ. ಹೀಗೆ ವಿವಿಧ ಚಟುವಟಿಕೆಗಳು, ಸಾಕಷ್ಟು ಪ್ರಮಾಣದ ಶುಚಿಯಾದ ನೀರು ಮತ್ತು ಸೂಕ್ತ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಆಗಾಗ್ಗೆ ತಿನ್ನುವುದು ಬೇಸಿಗೆಯ ಧಗೆಯಲ್ಲಿಯೂ ಮೈ-ಮನಗಳು ಹಗುರಾಗಿ, ಆರಾಮದಿಂದಿರುವಂತೆ ಮಾಡಬಲ್ಲವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.