ADVERTISEMENT

ಕ್ಷೇಮ–ಕುಶಲ: ಆಹಾರ ಸೇವನೆಗೂ ಇರಲಿ ಶಿಸ್ತು.. ಏನು ಮಾಡಬೇಕು?

ಡಾ.ವಿಜಯಲಕ್ಷ್ಮಿ ಪಿ ಅವರ ಲೇಖನ

ಡಾ.ವಿಜಯಲಕ್ಷ್ಮಿ ಪಿ.
Published 5 ನವೆಂಬರ್ 2024, 1:06 IST
Last Updated 5 ನವೆಂಬರ್ 2024, 1:06 IST
<div class="paragraphs"><p>ಕ್ಷೇಮ–ಕುಶಲ: ಆಹಾರಸೇವನೆಗೂ ಇರಲಿ ಶಿಸ್ತು.. ಏನು ಮಾಡಬೇಕು?</p></div>

ಕ್ಷೇಮ–ಕುಶಲ: ಆಹಾರಸೇವನೆಗೂ ಇರಲಿ ಶಿಸ್ತು.. ಏನು ಮಾಡಬೇಕು?

   

ಯಾವ ಆಹಾರವನ್ನು ‘ಎಷ್ಟು’, ‘ಯಾವಾಗ’ ಸೇವಿಸಬೇಕು ಎನ್ನುವುದನ್ನು ಸಾಮಾನ್ಯವಾಗಿ ಚರ್ಚಿಸುತ್ತೇವೆ. ಪೌಷ್ಚಿಕವಾದ ಆಹಾರವನ್ನು ಸೇವಿಸಿದ ಮಾತ್ರದಿಂದ ಪೌಷ್ಚಿಕತೆ ಉಂಟಾಗುವುದಿಲ್ಲ. ಸೇವಿಸುವ ಕ್ರಮದಲ್ಲಿ ಸೇವಿಸಿದಾಗ ಮಾತ್ರ ಸೇವಿಸಿದ ಆಹಾರವು ಸೂಕ್ತವಾದ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಆಹಾರಸೇವನಾ ಕ್ರಮದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

ಸೇವಿಸುವ ಆಹಾರದಲ್ಲಿರುವ ಪೌಷ್ಟಿಕಾಂಶದ ಅಳತೆಗಿಂತಲೂ, ಸೇವಿಸುವ ವ್ಯಕ್ತಿಯ ಪ್ರಕೃತಿಗೆ ಸೂಕ್ತವಾದದ್ದೋ ಅಲ್ಲವೋ ಎಂಬ ವಿವೇಚನೆ ಬಹಳ ಮುಖ್ಯ. ಎಷ್ಟೇ ಪೌಷ್ಟಿಕಾಂಶ ಇರುವ ಪದಾರ್ಥವಾದರೂ ತಯಾರಿಕಾ ಸಮಯದಲ್ಲಿ ಅದರೊಡನೆ ಬೆರೆಸುವ ಇತರೆ ಪದಾರ್ಥಗಳ ವಿವೇಚನೆ ಮತ್ತು ತಯಾರಿಕಾ ವಿಧಾನಕ್ಕೆ  ಅನುಗುಣವಾಗಿ ದೇಹದ ಮೇಲಿನ ಪರಿಣಾಮವೂ ವ್ಯತ್ಯಾಸವಾಗುತ್ತದೆ.

ADVERTISEMENT

ಮೊದಲು ಆಹಾರವನ್ನು ತಯಾರಿಸುವ ಮತ್ತು ಸೇವಿಸುವ ಪ್ರದೇಶ, ಪಾತ್ರೆಗಳು, ಸೇವಿಸುವ ಪ್ರದೇಶ ಶುಚಿಯಾಗಿರಬೇಕು. ಅವರವರ ಪ್ರದೇಶದಲ್ಲಿ ಬೆಳೆಯುವ ಆಹಾರ, ಆಯಾ ಕಾಲದಲ್ಲಿ ಬೆಳೆಯುವ ಆಹಾರವನ್ನು ಸೇವಿಸುವುದು ಹೆಚ್ಚು ಪೌಷ್ಚಿಕತೆಯನ್ನು ನೀಡುತ್ತದೆ. ಉದಾಹರಣೆಗೆ, ಕರ್ನಾಟಕದಲ್ಲಿ ಕಡಲೆಕಾಯಿ ಎಣ್ಣೆ , ಕೇರಳದಲ್ಲಿ ಕೊಬ್ಬರಿ ಎಣ್ಣೆ, ಉತ್ತರಭಾರತದಲ್ಲಿ ಸಾಸಿವೆ ಎಣ್ಣೆ, ಹೀಗೆ. ಯಾವುದೋ ಪ್ರದೇಶದಲ್ಲಿ ಬೆಳೆದ ಹಣ್ಣು–ತರಕಾರಿಗಳನ್ನು, ಮತ್ತಾವುದೋ ಪ್ರದೇಶದಲ್ಲಿ ಮತ್ತಾವುದೋ ಕಾಲದಲ್ಲಿ ಸೇವಿಸುವುದು ಕೆಲವೊಮ್ಮೆ ಆರೋಗ್ಯಕ್ಕೆ ಮಾರಕವಾಗಲೂಬಹುದು. ಹಾಗೆಯೇ ಆಯಾ ಕಾಲದಲ್ಲಿ ಬೆಳೆದ ಹಣ್ಣು–ತರಕಾರಿಗಳು ಆಯಾ ಕಾಲದಲ್ಲಿ ಪೌಷ್ಟಿಕತೆಯನ್ನು ನೀಡುತ್ತವೆ. ನಮ್ಮ ಪ್ರತಿಯೊಂದು ಹಬ್ಬಗಳಲ್ಲಿ ತಯಾರಿಸಬೇಕಾದ ಆಹಾರಪದಾರ್ಥಗಳಿಗೆ ಹೆಚ್ಚು ಒತ್ತನ್ನು ಕೊಟ್ಟು ಆಹಾರಸೇವನೆಯ ವಿಧಿ–ನಿಷೇಧಗಳನ್ನು ತಿಳಿಸಿದ್ದಾರೆ.

ಆಹಾರಸೇವನೆಯ ಪ್ರಮಾಣವು ನಮ್ಮ ಜೀರ್ಣಶಕ್ತಿಗೆ ಅನುಗುಣವಾಗಿ ಇರಬೇಕು. ಇಂದಿನ ಆಹಾರ ಜೀರ್ಣವಾದ ನಂತರವೇ ಮತ್ತೆ ಆಹಾರವನ್ನು ಸೇವಿಸಬೇಕು. ಅಕಾಲಭೋಜನ, ಅತೀತಕಾಲ ಭೋಜನಗಳು ಮನಸ್ಸಿಗೆ ಆಪ್ತವಾಗುವ ಕಾಲದಲ್ಲಿ, ಪ್ರದೇಶದಲ್ಲಿ ಕುಳಿತು ಸೇವಿಸು ಆಹಾರವು ಪೌಷ್ಟಿಕವೇ ಆದರೂ ಸೂಕ್ತ ಪರಿಣಾವನ್ನು ಬೀರುವುದಿಲ್ಲ. ಇದರೊಡನೆ ಆಹಾರದ ಪ್ರಮಾಣವೂ ಅವರವರ ಜೀರ್ಣಶಕ್ತಿಯನ್ನು ಅನುಸುರಿಸಿ ಇರಬೇಕು. ಅತಿಹೆಚ್ಚಾಗಿ, ಅತಿ ಅಲ್ಪ ಪ್ರಮಾಣದಲ್ಲಿ ಸೇವಿಸುವ ಆಹಾರವೂ ಸೂಕ್ತವಾದ ಪರಿಣಾಮವನ್ನು ಬೀರುವುದಿಲ್ಲ.

ಆಹಾರಸೇವನೆಯ ಸಂದರ್ಭದಲ್ಲಿಯೂ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಆಹಾರವು ಸೂಕ್ತ ಪರಿಣಾಮವನ್ನು ಬೀರಲು ಸಾಧ್ಯವಾಗುತ್ತದೆ.

ಆಹಾರವನ್ನು ಸೇವಿಸುವಾಗ ವಿಪರೀತ ಮಾತನಾಡುವುದು, ಜೋರಾಗಿ ನಗುವುದು, ಸುಖವಾಗಿ ಕೂರದೆ, ಸೊಟ್ಟಗೆ ಕುಳಿತು ಆಹಾರ ಸೇವಿಸುವುದು ಆದು ಆಹಾರ ಅನ್ನನಾಳವನ್ನು ಪ್ರವೇಶಿಸದೆ ಶ್ವಾಸನಾಳವನ್ನು ಪ್ರವೇಶಿಸಿ ತೊಂದರೆಗೆ ಕಾರಣವಾಗುತ್ತದೆ.

ಆಹಾರವನ್ನು ಅನ್ಯಮನಸ್ಕರಾಗಿ ಸೇವಿಸಬಾರದು. ಗಮನ ಆಹಾರದ ಕಡೆಗೇ ಇರಬೇಕು. ಟಿ.ವಿ. ಮೊಬೈಲ್‌ಗಳನ್ನು  ನೋಡುತ್ತಾ, ಪುಸ್ತಕವನ್ನು ಓದುತ್ತಾ ಅಥವಾ ಬೇರೇ ಬೇರೆ ವಿಚಾರಗಳನ್ನು ಚಿಂತಿಸುತ್ತಾ ಸೇವಿಸುವ ಆಹಾರವು ದೇಹದ ಮೇಲೆ ಸೂಕ್ತವಾದ ಪರಿಣಾಮವನ್ನು ಬೀರುವುದಿಲ್ಲ.

ಆಹಾರದ ಕಡೆ ಗಮನವಿರದೇ ಸೇವಿಸಿದ ಆಹಾರಕ್ಕೆ ಬೇಕಾದ ಜೀರ್ಣಪ್ರಕ್ರಿಯೆಗಳ ಸಂದೇಶ ಸರಿಯಾಗಿ ಬರದೆ ಪಾಕವಾಗದೆ ಅರೆಬಂದ ಸ್ಥಿತಿಯಲ್ಲೋ, ಸುಟ್ಟು ಕರಕಲಾದ ಸ್ಥಿತಿಯಲ್ಲೋ ದೇಹವನ್ನು ಸೇರಬೇಕಾಗುತ್ತದೆ. ವಿಹಿತವಲ್ಲದ ಆಹಾರ ದೇಹದಲ್ಲಿ ಅದೇ ರೂಪದಲ್ಲಿ ಶೇಖರಣೆಯಾಗುತ್ತದೆ. ಇದನ್ನೇ ಅಪಕ್ವ ಆಹಾರವನ್ನು ಎಂದು, ಅದು ನಾನಾ ರೋಗಗಳಿಗೆ ಕಾರಣವೆಂದು ಆಯುರ್ವೇದ ತಿಳಿಸುತ್ತದೆ.

ಅತಿ ನಿಧಾನವಾಗಿಯೂ ಅತಿ ವೇಗವಾಗಿಯೂ ಆಹಾರವನ್ನು ಸೇವಿಸಬಾರದು. ಯಾವುದೋ ಕಾರ್ಯನಿಮಿತ್ತ ತಡವಾಗುವುದೆಂದು ವಾಹನವನ್ನು ಚಲಾಯಿಸುತ್ತಲೋ, ನಡೆಯುತ್ತಲೋ ಆಹಾರವನ್ನು ಸೇವಿಸಬಾರದು. ಒಂದೆಡೆ ಕುಳಿತುಕೊಂಡು, ಮನಸ್ಸಿಟ್ಟು, ರುಚಿಯನ್ನು ಗಮನಿಸಿಕೊಂಡು ಸೇವಿಸುವ ಆಹಾರವು ದೇಹಕ್ಕೆ ಬಲವರ್ಧನೆ ನೀಡುತ್ತದೆ. 

ಗಮನವಿರಿಸದೇ ಕಸದ ಬುಟ್ಟಿಯೋ ಎಂಬಂತೆ ಹೊಟ್ಟೆಗೆ ತುಂಬಿಸುವ ಅನೇಕ ಮಾನಸಿಕ ಮತ್ತು ನರಕ್ಕೆ ಸಂಬಂಧಿಸಿದ ರೋಗಗಳ ಮೂಲವಾಗಿದೆ. ಹಾಗೆಯೇ ಅತಿ ನಿಧಾನವಾಗಿ ಸೇವಿಸಿದಾಗ ಮೊದಲು ಸೇವಿಸಿದ ಆಹಾರದ ಜೀರ್ಣಕ್ರಿಯೆ ಪ್ರಾರಂಭವಾದರೂ ಆಹಾರಸೇವನೆ ಮುಂದುವರೆದರೆ, ಹೊಟ್ಟೆ ಮತ್ತು ಕರುಳಿನಲ್ಲಿ ಆಹಾರವನ್ನು ಹಿಡಿದಿಟ್ಟುಕೊಳ್ಳುವ ಅಂಗಾಗಗಳ ಕಾರ್ಯದಲ್ಲಿ ಅಡಚಣೆಯಾಗಿ ಅವು ಸರಿಯಾಗಿ ಕಾರ್ಯ ನಿರ್ವಹಿಸದೆ, ಅತಿಸಾರ, ಮಲಬದ್ಧತೆ, ಮಲಪ್ರವೃತ್ತಿಯಾದರೂ ಸಂಪೂರ್ಣವಾಗಿ ಆಗಿಲ್ಲ ಎನ್ನುವ ಭಾವನೆ, ಹೊಟ್ಟೆ ಉಬ್ಬರ, ಅಮ್ಲಪಿತ್ತ ಮೊದಲಾದ ರೋಗಗಳಿಗೆ ಕಾರಣವಾಗುತ್ತದೆ.

ಊಟ ಮಾಡುವಾಗ, ಅಳುವುದು, ಸಿಟ್ಟನ್ನು ಮಾಡಿಕೊಳ್ದುವುದು, ಅಸಹ್ಯ ಪಟ್ಟುಕೊಂಡು ಆಹಾರವನ್ನು ಸೇವಿಸುವುದು, ಆಹಿತವಾಗುವ ವಾತಾವರಣದಲ್ಲಿ, ಆಹಿತವಾದ ಜನರೊಡನೆ ಆಹಾರ ಸೇವಿಸುವುದು ಅನಾರೋಗ್ಯಕರ ಪ್ರವೃತ್ತಿ. ಇದು ರಜೋಗುಣವನ್ನು ವರ್ಧಿಸಿ, ಮನಸ್ಸಿನ ಭಾವಗಳೊಡನೆ, ಶಾರೀರಿಕ ಭಾವಗಳನ್ನೂ ವ್ಯತ್ಯಾಸಗೊಳಿಸಿ, ಶರೀರಮಾನಸಿಕ ಸಮ್ಮಿಳಿತ ರೋಗಗಳನ್ನು ಉತ್ಪತ್ತಿ ಮಾಡುತ್ತದೆ. ಕೆಲವೊಮ್ಮೆ ಇಂತಹ ಪ್ರವೃತ್ತಿಗಳು, ಅಪಸ್ಮಾರ, ಚರ್ಮರೋಗದಂತಹ ಮಹಾವ್ಯಾಧಿಗಳಿಗೂ ಕಾರಣವಾಗಬಹುದು.

ಮುಖ್ಯವಾಗಿ ತನ್ನ ದೇಹಸ್ಥಿತಿಯನ್ನು ಗಮನಿಸಿಕೊಂಡು ಆಹಾರ ಸೇವಿಸಬೇಕು. ಯಾವ ಆಹರ ಹಿತ, ಯಾವುದು ಅಹಿತ ಎನ್ನುವುದನ್ನು ಅರಿತು ಸೇವಿಸಬೇಕು. ಯಾರದೋ ಬಲವಂತಕ್ಕಾಗಿಯಾಗಲೀ, ಯಾವುದೋ ಚಪಲಕ್ಕಾಗಿಯಾಗಲೀ ಆಹಾರವನ್ನು ಸೇವಿಸಬಾರದು. ಹಿತವಾಗಿ, ಮಿತವಾಗಿ, ಕಾಲಕ್ಕನುಗುಣವಾಗಿ ಆಹಾರವನ್ನು ಸೇವಿಸಿ ಆರೋಗ್ಯವಂತರಾಗೋಣ.

****

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.