ADVERTISEMENT

ಎಕ್ಟಾಪಿಕ್‌: ಏನಿದು ಗರ್ಭನಾಳದಲ್ಲಿ ಗರ್ಭಧಾರಣೆ?

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 22:56 IST
Last Updated 30 ಆಗಸ್ಟ್ 2024, 22:56 IST
<div class="paragraphs"><p>ಎಕ್ಟಾಪಿಕ್‌: ಏನಿದು ಗರ್ಭನಾಳದಲ್ಲಿ ಗರ್ಭಧಾರಣೆ?</p></div>

ಎಕ್ಟಾಪಿಕ್‌: ಏನಿದು ಗರ್ಭನಾಳದಲ್ಲಿ ಗರ್ಭಧಾರಣೆ?

   

ತಾಯ್ತನವೆನ್ನುವುದು ಸೃಷ್ಟಿಯ ಅಪೂರ್ವ ಕೊಡುಗೆ. ಗರ್ಭ ಧರಿಸಿದ ಕ್ಷಣದಿಂದಲೂ ಹಲವು ಹಂತಗಳನ್ನು, ಕ್ಲಿಷ್ಟಕರ ಮಜಲುಗಳನ್ನು ದಾಟಿಯೇ ತಾಯ್ತನದ ಅತ್ಯಪೂರ್ವ ಘಟ್ಟ ತಲುಪುವುದರಿಂದ ತಾಯ್ತನಕ್ಕೆ ವಿಶಿಷ್ಟವಾದ ಸ್ಥಾನವೊಂದು ದಕ್ಕಿದೆ. ತಾಯಿ–ಮಗುವಿನ ಬಾಂಧವ್ಯ, ಮಮತೆಯನ್ನು ಅಕ್ಷರಗಳಲ್ಲಿ ಹಿಡಿದಿಡುವುದು ತುಸು ಕಷ್ಟವೇ. ಇರಲಿ; ಗರ್ಭ ಧರಿಸುವುದು ಪ್ರಕೃತಿಯಷ್ಟೆ ಸಹಜವಾಗಿದ್ದರೂ, ಹೆಣ್ಣಿನ ದೇಹದಲ್ಲಿ ನಾನಾ ತರಹದ ಬದಲಾವಣೆಗಳು ಆಗುತ್ತವೆ. ಆ ಬದಲಾವಣೆಗೆ ದೇಹ ಒಗ್ಗಿಕೊಳ್ಳದೇ ಹಲವು ತೊಂದರೆಗಳನ್ನು ಗರ್ಭಿಣಿ ಎದುರಿಸುವ ಸಾಧ್ಯತೆಗಳು ಇರುತ್ತವೆ.

ಗರ್ಭ ಧರಿಸುವ ಹಂತದಲ್ಲಿಯೇ ಹಲವು ಕ್ಲಿಷ್ಟಕರ ಸಮಸ್ಯೆಗಳು ಎದುರಾಗಬಹುದು. ಅದರಲ್ಲಿ ಎಕ್ಟಾಪಿಕ್‌ ಗರ್ಭಧಾರಣೆಯೂ ಒಂದು. ವೀರ್ಯದೊಂದಿಗೆ ಸಂಯೋಜನೆಗೊಂಡ ಅಂಡಾಣು ಸಮರ್ಪಕವಾಗಿ ಗರ್ಭದಲ್ಲಿಯೇ ನಿಲ್ಲಬೇಕು. ಆದರೆ, ಅದು ಅಪಸ್ಥಾನಗೊಂಡು ಫಾಲೋಪಿಯನ್‌ ಟ್ಯೂಬ್‌ನಲ್ಲಿಯೇ ಬೆಳೆಯಲು ಶುರುವಾಗುತ್ತದೆ.ಈ ಸ್ಥಿತಿಯನ್ನು ಎಕ್ಟಾಪಿಕ್‌ (ಅಪಸ್ಥಾನೀಯ) ಗರ್ಭಧಾರಣೆ ಎಂದು ಕರೆಯಲಾಗುತ್ತದೆ.

ADVERTISEMENT

ಭ್ರೂಣ ಬೆಳೆಯುವ ರೀತಿಯಲ್ಲಿ ಫಾಲೋಪಿಯನ್‌ ಟ್ಯೂಬ್‌ ವಿನ್ಯಾಸಗೊಂಡಿರುವುದಿಲ್ಲ. ಹಾಗಾಗಿ. ಭ್ರೂಣ ಬೆಳೆದಂತೆ ಆಂತರಿಕ ರಕ್ತಸ್ರಾವ ಹಾಗೂ ತೀವ್ರ ಸೋಂಕು ಉಂಟಾಗಿ ಗರ್ಭಿಣಿಯ ಪ್ರಾಣಕ್ಕೆ ಸಂಚಕಾರ ಬರಬಹುದು. ಸಾಮಾನ್ಯವಾಗಿ ಶೇ 2ರಷ್ಟು ಇಂಥ ಎಕ್ಟಾಪಿಕ್‌ ಗರ್ಭಧಾರಣೆ ಪ್ರಕರಣಗಳನ್ನು ನೋಡಬಹುದು. ಇಂಥ ಗರ್ಭಧಾರಣೆಯಲ್ಲಿ ಭ್ರೂಣ ಬೆಳೆಯಲು ಸಾಧ್ಯವಿಲ್ಲ.

ಲಕ್ಷಣಗಳೇನು?

ಅಪಸ್ಥಾನೀಯ ಗರ್ಭಧಾರಣೆಯ ಆರಂಭಿಕ ಲಕ್ಷಣಗಳು ಹೀಗಿರುತ್ತವೆ. ರಕ್ತಸ್ರಾವ, ಕೆಳ ಹೊಟ್ಟೆ ನೋವು, ಬೆನ್ನು ನೋವು. ತಲೆಸುತ್ತುವಿಕೆ. ಒಂದೊಮ್ಮೆ ಭ್ರೂಣ ಬೆಳೆದು ಫಾಲೋಪಿಯನ್‌ ಟ್ಯೂಬ್‌ ಛಿದ್ರಗೊಂಡರೆ ಭುಜದ ನೋವು, ಮೂರ್ಛೆ, ತೀವ್ರ ಹೊಟ್ಟೆ ನೋವು ಹಾಗೂ ಗುದನಾಳದ ಒತ್ತಡದಂಥ ನೋವು ಕಾಣಿಸಿಕೊಳ್ಳಬಹುದು. ಇಂಥ ಲಕ್ಷಣ ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಕಾರಣಗಳೇನು?
ಕಾರಣ ನಿಖರವಾಗಿ ಹೇಳುವುದು ಕಷ್ಟ. ಆದರೆ, ಫಾಲೋಪಿಯನ್‌ ಟ್ಯೂಬ್‌ಗಳಲ್ಲಿ ತೊಂದರೆ, ಊರಿಯೂತ, ಹಾರ್ಮೋನ್‌ಗಳ ಅಸಮತೋಲನ, ಆನುವಂಶೀಕ ಕಾರಣಗಳು, ಸಂತಾನ್ಪೋತ್ಪತ್ತಿ ಅಂಗಗಳಲ್ಲಿ ಅಸಹಜ ರಚನೆಗಳೂ ಕಾರಣವಾಗಿರಬಹುದು. ಇದರ ಜತೆಗೆ 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಗರ್ಭಧರಿಸಿದರೆ, ಅಂಥವರಲ್ಲಿ ಈ ಸಮಸ್ಯೆ ಹೆಚ್ಚು. ಧೂಮಪಾನ, ಮದ್ಯಪಾನ, ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದರೆ, ಲೈಂಗಿಕ ಕಾಯಿಲೆಗಳು, ಫಲವತ್ತತೆಯ ಚಿಕಿತ್ಸೆಯಲ್ಲಿನ ವ್ಯತ್ಯಯದಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.

ಪರಿಹಾರವೇನು?
ಎಕ್ಟೋಪಿಕ್‌ ಗರ್ಭಧಾರಣೆಯು ಫಲಿತಾಂಶ ನೀಡದ ಗರ್ಭಧಾರಣೆಯಾಗಿರುವುದರಿಂದ ತಾಯಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಲ್ಲದೇ ಭವಿಷ್ಯದಲ್ಲಿ ಫಲವತ್ತತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸೆ ಈ ಹಂತದಲ್ಲಿ ಅತ್ಯಗತ್ಯವಾಗಿರುತ್ತದೆ.

ಗರ್ಭಧಾರಣೆಯಾದ ಹಂತದ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ. ಆರಂಭಿಕ ಸ್ಥಿತಿಯಲ್ಲಿದ್ದರೆ ಮೆಥೊಟ್ರೆಕ್ಸೇಟ್‌ನಂಥ ಔಷಧಿಗಳಿಂದ ಫಾಲೋಪಿಯನ್‌ ಟ್ಯೂಬ್‌ನಲ್ಲಿರುವ ಭ್ರೂಣ ಬೆಳೆಯದಂತೆ ತಡೆಯಬಹುದು. ಜತೆಗೆ ಫಾಲೋಪಿಯನ್‌ ಟ್ಯೂಬ್‌ ಒಡೆಯದಂತೆ ತಡೆಯಲು ಸಾಧ್ಯವಿದೆ. ಹೀಗೆ ಮೊದಲೇ ವೈದ್ಯಕೀಯ ಕ್ರಮ ತೆಗೆದುಕೊಳ್ಳುವುದರಿಂದ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಬಹುದು.
ಒಂದೊಮ್ಮೆ ಭ್ರೂಣ ಬೆಳೆದು, ಫಾಲೋಪಿಯನ್ ಟ್ಯೂಬ್‌ ಒಡೆದು ಹೋಗಿದ್ದರೆ, ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯ. ಛಿದ್ರಗೊಂಡ ಟ್ಯೂಬ್‌ನ ಭಾಗವನ್ನು ತೆಗೆದುಹಾಕಿ, ಲ್ಯಾಪರೋಸ್ಕೋಪಿಯನ್ನು ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆ ನಂತರ ಸೂಕ್ತ ಆರೈಕೆಯಲ್ಲಿರಬೇಕು. ಮತ್ತೆ ಸೋಂಕು ಆಗದಂತೆ ಜಾಗ್ರತೆ ವಹಿಸಬೇಕು. ಯಾವುದೇ ಭಾರವನ್ನು ಎತ್ತುವುದು, ಶ್ರಮದಾಯಕ ಚಟುವಟಿಕೆಗಳನ್ನು ನಡೆಸಬಾರದು. ಮೂರು ತಿಂಗಳ ಕಾಲ ಗರ್ಭಧರಿಸದಂತೆ ಎಚ್ಚರಿಕೆ ಕ್ರಮ ವಹಿಸಬೇಕು.

ಮುಂಜಾಗ್ರತಾ ಕ್ರಮ ಹೇಗೆ?
ತಂಬಾಕು, ಮದ್ಯಪಾನದಿಂದ ದೂರವಿರಬೇಕು. ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳಬೇಕು. ನಿಯಮಿತ ಆರೋಗ್ಯ ತಪಾಸಣೆ ನಡೆಸಬೇಕು. ಲೈಂಗಿಕ ಚಟುವಟಿಕೆಗಳಿಂದ ಸೋಂಕು ಆಗುತ್ತಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಸುರಕ್ಷಿತ ಲೈಂಗಿಕ ಚಟುವಟಿಕೆಗಳನ್ನು ಅನುಸರಿಸಬೇಕು.ಈ ಮೊದಲು ಲೈಂಗಿಕ ಕಾಯಿಲೆಗೆ ತುತ್ತಾಗಿದ್ದರೆ, ಗರ್ಭ ಧರಿಸುವ ಮೊದಲು ವೈದ್ಯರೊಂದಿಗೆ ಚರ್ಚೆ ನಡೆಸಿ.
ಎಕ್ಟೋಪಿಕ್‌ ಗರ್ಭಧಾರಣೆಯನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ, ಆರಂಭಿಕ ಪತ್ತೆ ಹಾಗೂ ಸೂಕ್ತ ಚಿಕಿತ್ಸೆಯಿಂದ ಇಂಥ ಗರ್ಭಧಾರಣೆಯಿಂದ ಆಗುವ ತೀವ್ರತರದ ಹಾನಿಯನ್ನು ತಪ್ಪಿಸಬಹುದು. ಮತ್ತು ತಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಒಂದು ಬಾರಿ ಎಕ್ಟೋಪಿಕ್‌ ಗರ್ಭಧಾರಣೆಯಾಗಿದ್ದರೆ, ಚಿಂತೆ ಮಾಡಬೇಕಾಗಿಲ್ಲ.ಜನ್ಮತಃ ಸಂತಾನೋತ್ಪತ್ತಿ ಅಂಗಗಳು ಮತ್ತು ಅವುಗಳ ರಚನೆಯಲ್ಲಿ ದೋಷವಿಲ್ಲದೇ ಇದ್ದರೆ, ಸೂಕ್ತ ಮುಂಜಾಗ್ರತಾ ಕ್ರಮ ವಹಿಸಿದರೆ ಮತ್ತೊಮ್ಮೆ ಸರಿಯಾದ ರೀತಿಯಲ್ಲಿ ಗರ್ಭಧಾರಣೆಯಾಗಬಹುದು. ಇಂಥ ತಾಯಂದಿರಿಗೆ ಕೌಟುಂಬಿಕವಾಗಿ ಸಿಗುವ ಬೆಂಬಲ ಹಾಗೂ ಪತಿಯಿಂದ ಸಿಗುವ ಸಹಕಾರವೂ ಬಹಳ ಮುಖ್ಯವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.