ವೃತ್ತಿನಿರತ ಮಹಿಳೆಯರು ಅಂಡಾಣು ಸಂರಕ್ಷಣೆಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಇ ತಾಯಂದಿರಾಗುವ ಅಥವಾ ತಾಯ್ತನವನ್ನು ವಿಳಂಬಗೊಳಿಸಲು ಬಯಸುವವರು ಈ ಎಗ್ ಫ್ರೀಜಿಂಗ್ ಕಡೆಗೆ ಒಲವು ತೋರಿಸುತ್ತಿದ್ದಾರೆ. ಎಗ್ ಫ್ರೀಜಿಂಗ್ ಏನು? ಏಕೆ ಜನಪ್ರಿಯಗೊಳ್ಳುತ್ತಿದೆ? ಈ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರಗಳು.
ಎಗ್ ಫ್ರೀಜಿಂಗ್ ಎಂದರೆ ಏನು?
ಎಗ್ ಫ್ರೀಜಿಂಗ್ ಗೆ ವೈದ್ಯಕೀಯ ಪರಿಭಾಷೆಯಲ್ಲಿ ಓಸೈಟ್ ಕ್ರಯೋಪ್ರಿಸರ್ವೇಶನ್ ಎನ್ನುತ್ತಾರೆ. ಮಹಿಳೆಯಿಂದ ಅಂಡಾಣು ಹೊರ ತೆಗೆದು ಫ್ರೀಜ್ ಮಾಡುವುದು ಮತ್ತು ಭವಿಷ್ಯದ ಬಳಕೆಗಾಗಿ ಸಂಗ್ರಹಿಸಿಡುವ ಪ್ರಕ್ರಿಯೆ ಆಗಿದೆ. ಈ ಅಂಡಾಣುಗಳನ್ನು, ವೀರ್ಯದೊಂದಿಗೆ ಸೇರಿಸಿ ಫಲವತ್ತಾಗಿಸಬಹುದು ಮತ್ತು ಗರ್ಭಾಶಯದೊಳಗೆ ಸೇರಿಸಿ ಗರ್ಭಧಾರಣೆಯನ್ನೂ ಮಾಡಬಹುದಾಗಿದೆ.
ಈ ಎಗ್ ಫ್ರೀಜಿಂಗ್ ನ ತಂತ್ರಜ್ಞಾನವು ಕಳೆದ ಒಂದು ದಶಕದಲ್ಲಿ ಗಮನಾರ್ಹವಾದ ರೀತಿಯಲ್ಲಿ ಸುಧಾರಣೆ ಕಂಡಿದೆ. ಫ್ರೀಜಿಂಗ್ ಮಾಡುವ ತಂತ್ರ ಅಥವಾ ಪ್ರಕ್ರಿಯೆಗಳಲ್ಲಿನ ಪ್ರಗತಿಗಳು, ವಿಶೇಷವಾಗಿ ವಿಟ್ರಿಫಿಕೇಶನ್ ಎಂಬ ಕಾರ್ಯವಿಧಾನದ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸಿದೆ. ಇದು ಮಹಿಳೆಯರಿಗೆ ಅತ್ಯಂತ ಹೆಚ್ಚು ವಿಶ್ವಾಸಾರ್ಹವಾದ ಆಯ್ಕೆಯಾಗಿದೆ.
ಎಗ್ ಫ್ರೀಜಿಂಗ್ ಪ್ರಮಾಣ ಹೆಚ್ಚಾಗಲು ಕಾರಣಗಳು
ವೃತ್ತಿ ಮತ್ತು ಶಿಕ್ಷಣ: ಇಂದು ಅನೇಕ ಮಹಿಳೆಯರು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ವೃತ್ತಿನಿರತರಾಗಿದ್ದಾರೆ. ಈ ಕಾರಣಗಳನ್ನು ಮುಂದಿಟ್ಟು ಕುಟುಂಬವನ್ನು ಹೊಂದಲು ಅಂದರೆ ಮಗುವನ್ನು ಹೊಂದಲು ವಿಳಂಬ ಮಾಡುತ್ತಿದ್ದಾರೆ.ಎಗ್ ಫ್ರೀಜಿಂಗ್ ಇಂತಹ ಮಹಿಳೆಯರು ತಮ್ಮ ಜೈವಿಕ ಬೆಳವಣಿಗೆ ಬಗ್ಗೆ ಚಿಂತಿಸದೇ ತಮ್ಮ ವೃತ್ತಿಪರ ಗುರಿಗಳನ್ನು ಸಾಧಿಸುವತ್ತ ಗಮನಹರಿಸಲು ಅನುವು ಮಾಡಿಕೊಡುತ್ತದೆ.
ವೈಯಕ್ತಿಕ ಗುರಿಗಳು ಮತ್ತು ಸಂಬಂಧಗಳು: ಕೆಲವು ಮಹಿಳೆಯರು ತಮ್ಮ 20 ನಂತರ ಅಥವಾ 30 ವರ್ಷಕ್ಕಿಂತ ಮುನ್ನ ಮಕ್ಕಳನ್ನು ಹೊಂದಲು ಸಿದ್ಧರಿರುವುದಿಲ್ಲ. ಸೂಕ್ತವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವವರೆಗೆ ಅಥವಾ ಪೋಷಕತ್ವಕ್ಕೆ ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಸಿದ್ಧರಾಗುವವರೆಗೆ ಈ ಎಗ್ ಫ್ರೀಜಿಂಗ್ ಅವಕಾಶವನ್ನು ನೀಡುತ್ತದೆ.
ಆರೋಗ್ಯ ಕಾರಣಗಳು: ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯುತ್ತಿರುವ ಮಹಿಳೆಯರಿಗೆ ಸಂತಾನೋತ್ಪತ್ತಿಗೆ ತೊಡಕಾಗುತ್ತದೆ. ಉದಾಹರಣೆಗೆ ಕಿಮೋಥೆರಪಿಯಂತಹ ಚಿಕಿತ್ಸೆ ಪಡೆಯುತ್ತಿರುವವರಿಗೆ ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಜೈವಿಕ ಮಕ್ಕಳನ್ನು ಪಡೆಯಲು ಅನುಕೂಲವಾಗುವ ರೀತಿಯಲ್ಲಿ ಅವರು ತಮ್ಮ ಅಂಡಾನುಗಳನ್ನು ಸಂಗ್ರಹಿಸಿಡಬಹುದಾಗಿದೆ.
ನೆಮ್ಮದಿಯ ಪರಿಸ್ಥಿತಿ: ಅನೇಕರಿಗೆ ಈ ಎಗ್ ಫ್ರೀಜಿಂಗ್ ವಿಧಾನವು ನೆಮ್ಮದಿ ತಂದಿದೆ. ಇದು ತಕ್ಷಣದ ನಿರ್ಧಾರ ತೆಗೆದುಕೊಳ್ಳಲೇಬೇಕೆಂಬ ಯಾವುದೇ ಒತ್ತಡವಿಲ್ಲದೇ, ಭವಿಷ್ಯದ ಕುಟುಂಬ ಯೋಜನೆಗೆ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ಸೂಕ್ತ ಮಾರ್ಗವಾಗಿದೆ.
ಹಲವು ಹಂತಗಳು
ಕನ್ಸಲ್ಟೇಶನ್ ಮತ್ತು ಪರೀಕ್ಷೆ: ಮೊದಲ ಹಂತವೆಂದರೆ ಫರ್ಟಿಲಿಟಿ ವಿಶೇಷ ತಜ್ಞರೊಂದಿಗೆ ಸಲಹೆ ಪಡೆಯುವುದು. ಆ ತಜ್ಞರು ರಕ್ತ ಪರೀಕ್ಷೆಗಳು ಮತ್ತು ಅಲ್ಟ್ರಾಸೌಂಡ್ ಮೂಲಕ ಮಹಿಳೆಯ ಆರೋಗ್ಯ ಮತ್ತು ಸಂತಾನೋತ್ಪತ್ತಿ ಸ್ಥಿತಿಗತಿಯನ್ನು ಅವಲೋಕಿಸುತ್ತಾರೆ.
ಅಂಡಾಶಯದ ಪ್ರಚೋದನೆ: ಬಹಳಷ್ಟು ಅಂಡಾಣುಗಳನ್ನು ಉತ್ಪಾದಿಸುವ ಸಲುವಾಗಿ ಮಹಿಳೆಯನ್ನು ಓವರಿಯನ್ ಸ್ಟಿಮ್ಯುಲೇಶನ್ ಅಂದರೆ ಅಂಡಾಶಯದ ಪ್ರಚೋದನೆ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಈ ಹಂತದಲ್ಲಿ ಮಹಿಳೆಗೆ 10 ರಿಂದ 14 ದಿನಗಳವರೆಗೆ ಹಾರ್ಮೋನ್ ಚುಚ್ಚುಮದ್ದು ಅಂದರೆ ಇಂಜಕ್ಷನ್ ಅನ್ನು ನೀಡಲಾಗುತ್ತದೆ. ಈ ಹಾರ್ಮೋನ್‌ಗಳು ಅಂಡಾಶಯಗಳು ಒಂದೇ ಚಕ್ರದಲ್ಲಿ ಸಾಮಾನ್ಯವಾಗಿ ಹೆಚ್ಚು ಅಂಡಾಣುಗಳನ್ನು ಉತ್ಪಾದಿಸಲು ಪ್ರೋತ್ಸಾಹಿಸುತ್ತದೆ.
ಅಂಡಾಣು ಹಿಂಪಡೆಯುವಿಕೆ ವಿಧಾನ: ಅಂಡಾಣುಗಳು ಸಿದ್ಧವಾದ ನಂತರ ಒಂದು ಸಣ್ಣ ಶಸ್ತ್ರಚಿಕಿತ್ಸೆ ನಡೆಸಿ ಅಂಡಾಶಯದಿಂದ ಅವುಗಳನ್ನು ಹಿಂಪಡೆಯಲಾಗುತ್ತದೆ. ಈ ಕಾರ್ಯವಿಧಾನಕ್ಕೆ ಒಳಗಾಗುವ ಮಹಿಳೆಯರು ತ್ವರಿತವಾಗಿ ಚೇತರಿಸಿಕೊಳ್ಳುತ್ತಾರೆ.
ಫ್ರೀಜಿಂಗ್ ಮತ್ತು ಸಂರಕ್ಷಣೆ: ಹೀಗೆ ಪಡೆದ ಅಂಡಾಣುಗಳನ್ನು ವಿಟ್ರಿಫಿಕೇಶನ್ ಬಳಸಿ ಫ್ರೀಜಿಂಗ್ ಮಾಡಲಾಗುತ್ತದೆ ಮತ್ತು ಮಹಿಳೆಯು ಅವುಗಳನ್ನು ಬಳಸಲು ನಿರ್ಧಾರ ತೆಗೆದುಕೊಳ್ಳುವವರೆಗೆ ವಿಶೇಷ ರೀತಿಯಲ್ಲಿ ಸಂರಕ್ಷಿಸಿಡಲಾಗುತ್ತದೆ.
ಯಾರೆಲ್ಲ ಅಂಡಾಣು ಫ್ರೀಜ್ ಮಾಡಬಹುದು?
ಎಗ್ ಫ್ರೀಜಿಂಗ್ ಅನೇಕ ಪ್ರಯೋಜನಗಳನ್ನು ನೀಡುತ್ತದೆ, ಇದೇ ಸಂದರ್ಭದಲ್ಲಿ ಇದು ಖಚಿತವಾದ ಪರಿಹಾರವಲ್ಲ ಎಂಬುದನ್ನೂ ಅರ್ಥ ಮಾಡಿಕೊಳ್ಳುವುದು ಬಹು ಮುಖ್ಯವಾಗಿರುತ್ತದೆ. ಎಗ್ ಫ್ರೀಜಿಂಗ್ ನ ಯಶಸ್ಸು ಫ್ರೀಜಿಂಗ್ ಮಾಡುವ ಸಂದರ್ಭದಲ್ಲಿ ಮಹಿಳೆಯ ವಯಸ್ಸು, ಹಿಂಪಡೆಯಲಾದ ಅಂಡಾಣುಗಳ ಸಂಖ್ಯೆ ಮತ್ತು ಒಟ್ಟಾರೆ ಆರೋಗ್ಯದಂತಹ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
ಯುವ ಮಹಿಳೆಯರಲ್ಲಿ ಸಾಮಾನ್ಯವಾಗಿ ಯಶಸ್ಸಿನ ಪ್ರಮಾಣ ಹೆಚ್ಚಿರುತ್ತದೆ. ಏಕೆಂದರೆ, ಅಂಡಾಣುಗಳು ಆರೋಗ್ಯವಂತವಾಗಿರುತ್ತವೆ. ಆದರೆ, ಪ್ರತಿಯೊಬ್ಬ ವ್ಯಕ್ತಿಯ ಪರಿಸ್ಥಿತಿಯು ವಿಭಿನ್ನವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಎಗ್ ಫ್ರೀಜಿಂಗ್ ಬಗ್ಗೆ ಒಂದು ಉತ್ತಮ ನಿರ್ಧಾರ ತೆಗೆದುಕೊಳ್ಳಲು ಮತ್ತು ವಾಸ್ತವಿಕತೆಯ ನಿರೀಕ್ಷೆಗಳನ್ನು ಹೊಂದಲು ಫರ್ಟಿಲಿಟಿ ಪರಿಣಿತರೊಂದಿಗೆ ಸಮಾಲೋಚನೆ ನಡೆಸುವುದು ಅಗತ್ಯವಾಗಿದೆ.
ಎಗ್ ಫ್ರೀಜಿಂಗ್ ಭವಿಷ್ಯ
ಎಗ್ ಫ್ರೀಜಿಂಗ್ ಬಗ್ಗೆ ಜಾಗೃತಿ ಹೆಚ್ಚಾದಂತೆ ಹೆಚ್ಚಿನ ಮಹಿಳೆಯರು ಅದನ್ನು ತಮ್ಮ ಸಂತಾನೋತ್ಪತ್ತಿ ಯೋಜನೆಯ ಭಾಗವಾಗಿ ಪರಿಗಣಿಸುವ ಸಾಧ್ಯತೆಗಳಿವೆ. ತಂತ್ರಜ್ಞಾನದಲ್ಲಿ ಆಗುತ್ತಿರುವ ಬೆಳವಣಿಗೆಗಳು ಮತ್ತು ವಿಳಂಬವಾಗಿ ತಾಯ್ತನದ ಬಗ್ಗೆ ಇರುವ ಸಾಮಾಜಿಕ ಮನಸ್ಥಿತಿಗಳಲ್ಲಿ ಬದಲಾವಣೆಯು ಈ ಆಯ್ಕೆಯನ್ನು ಇನ್ನಷ್ಟು ಸುಲಭ ಮತ್ತು ಸ್ವೀಕಾರಾರ್ಹವಾಗಿಸುತ್ತದೆ.
ಈ ಎಗ್ ಫ್ರೀಜಿಂಗ್ ಸೌಲಭ್ಯವು ಮಹಿಳೆಯರಿಗೆ ತಮ್ಮ ಸಂತಾನೋತ್ಪತ್ತಿಯ ಫಲವತ್ತತೆಯನ್ನು ನಿಯಂತ್ರಿಸುವ ಅಧಿಕಾರವನ್ನು ನೀಡುತ್ತದೆ. ಅವರ ಭವಿಷ್ಯದ ಕುಟುಂಬ ಯೋಜನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ತಮ್ಮ ಜೀವನದ ಗುರಿಗಳನ್ನು ಸಾಧಿಸಲು ಅವಕಾಶವನ್ನು ನೀಡುತ್ತದೆ. ಇದು ಎಲ್ಲರಿಗೂ ಸೂಕ್ತವಾದ ಆಯ್ಕೆಯಲ್ಲದಿದ್ದರೂ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಮಹಿಳೆಯರ ಹಕ್ಕುಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.
ಎಗ್ ಫ್ರೀಜಿಂಗ್ ಅನ್ನು ಪರಿಗಣಿಸುವವರಿಗೆ, ಮಾಹಿತಿಯನ್ನು ಸಂಗ್ರಹಿಸುವುದು, ಆರೋಗ್ಯ ಸೇವೆ ಒದಗಿಸುವವರೊಂದಿಗೆ ಸಮಾಲೋಚನೆ ನಡೆಸುವುದು ಮತ್ತು ವೈಯಕ್ತಿಕ ಸಂದರ್ಭಗಳ ಆಧಾರದ ಮೇಲೆ ಸಾಧಕ-ಬಾಧಕಗಳನ್ನು ಚರ್ಚಿಸುವುದು ಉತ್ತಮ ವಿಧಾನವಾಗಿದೆ.
ಲೇಖಕರು: ವೈದ್ಯಕೀಯ ನಿರ್ದೇಶಕರು, ರಾಧಾಕೃಷ್ಣ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್, ಬೆಂಗಳೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.