ADVERTISEMENT

ಒಂದು ಮೊಟ್ಟೆಯ ಕಥೆ

ಸುಶೀಲಾ ಡೋಣೂರ
Published 7 ಜನವರಿ 2019, 19:45 IST
Last Updated 7 ಜನವರಿ 2019, 19:45 IST
Colorful 3d Illustration of a in-vitro fertilization of an egg cellArtificial Fertilisation
Colorful 3d Illustration of a in-vitro fertilization of an egg cellArtificial Fertilisation   

‘ನನಗೇನು ಮಹಾ ವಯಸ್ಸು ಈಗ ತಾನೆ ಮೂವತ್ತು’ ಎನ್ನುತ್ತ ಮೋಹಕ ನಗೆ ಬೀರಿ ತಂತಮ್ಮ ಭವಿಷ್ಯತ್ತಿನ ಮತ್ತೊಂದು ಮೆಟ್ಟಿಲು ಹತ್ತುವ ಜಾಣೆಯರ ಕಾಲವಿದು. ಹೌದು ಅವರಿಗಿನ್ನೂ ಮೂವತ್ತರ ಆಸು–ಪಾಸು. ಆದರಿನ್ನೂ ಈಗ ತಾನೆ ಇಪ್ಪತ್ತು ದಾಟಿದವರಂತೆಯೇ ಕಂಗೊಳಿಸುತ್ತಾರೆ. ಮೈಮಾಟ–ತ್ವಜೆಯ ತಾಜಾತನವನ್ನೂ ಹಾಗೆಯೇ ಕಾಯ್ದುಕೊಳ್ಳುವ ಸೂಕ್ಷ್ಮಮತಿಯರಿವರು. ವೃತ್ತಿಯೇ ಇವರ ಮೊದಲ ಆದ್ಯತೆ. ಮೊದ ಮೊದಲು ‘ಓದು ಮುಗಿಯಲಿ’ ಅನ್ನುತ್ತಿದ್ದವರು ನಂತರ ‘ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಬೇಕು’ ಎನ್ನತೊಡಗಿದರು. ಅದೂ ಆಯಿತು. ‘ವೃತ್ತಿಯಲ್ಲಿ ನಾನಿನ್ನೂ ಗಟ್ಟಿಯಾಗಿ ನೆಲೆಯೂರಬೇಕು’ ಎನ್ನುವ ಮಂತ್ರ ಪಠಿಸುತ್ತಿದ್ದಾರೆ ಈಗೀಗ. ಅದಂತೂ ಎಂದೂ ಮುಗಿಯದ ಅಧ್ಯಾಯವೇ.

ಇದೇ ಕಾರಣಕ್ಕೆ ಮೆಟ್ರೊ ನಗರದ ಹೆಣ್ಣುಮಕ್ಕಳು ಮದುವೆ ಮತ್ತು ತಾಯ್ತನದ ಕನಸನ್ನು ಮುಂದೂಡುತ್ತಲೇ ಹೋಗುತ್ತಿದ್ದಾರೆ. ದಶಕದ ಹಿಂದೆ ಇಂತಹ ನಿರ್ಧಾರಕ್ಕೂ ಮುನ್ನ ಮತ್ತೊಮ್ಮೆ ಯೋಚಿಸಿ ಎಂಬ ಸಂದೇಶ ಸಾರಿತು ವೈದ್ಯಕೀಯ ವಲಯ. 30–35ರ ವಯೋಮಾನದ ಒಳಗೇ ಮಗು ಮಾಡಿಕೊಳ್ಳುವಂತೆ ಸಾಕಷ್ಟು ಎಚ್ಚರಿಕೆಯ ಗಂಟೆಗಳು ಮೊಳಗಿದವು. ಆದರೆ ಇದೀಗ ಮೆಟ್ರೊ ನಗರಗಳಲ್ಲಿ ಮತ್ತೊಂದು ಹೊಸ ಪ್ರವೃತ್ತಿ ವೈದ್ಯಕೀಯ ವಲಯದಲ್ಲಿ ದನಿ ಮಾಡುತ್ತಿದೆ. ಅಂಡಾಣುವನ್ನು ಕಾಯ್ದಿರಿಸುವ ತಂತ್ರಜ್ಞಾನ ಸ್ವತಂತ್ರ ಮಹಿಳೆಯರ ಕನಸುಗಳಿಗೆ ರೆಕ್ಕೆ ಹಚ್ಚುವ ಕೆಲಸ ಮಾಡುತ್ತಿದೆ.

ಏನಿದು ಅಂಡಾಣು ಕಾಯ್ದಿರಿಸುವಿಕೆ

ADVERTISEMENT

ಮಹಿಳೆಯ ಫಲವತ್ತಾದ ಅಂಡಾಣುಗಳನ್ನು ಸುರಕ್ಷಿತವಾಗಿ ವೈದ್ಯಕೀಯ ಪ್ರಯೋಗಾಲಯದಲ್ಲಿ ಕಾಯ್ದಿರಿಸುವ ಈ ವಿಧಾನವನ್ನು ವೈದ್ಯಕೀಯ ಭಾಷೆಯಲ್ಲಿ ‘ಎಗ್ ಫ್ರೀಜಿಂಗ್’ ಎನ್ನುತ್ತಾರೆ. 20–25ರ ವಯಸ್ಸಿನಲ್ಲಿ ಮಹಿಳೆ ತನ್ನ ಅಂಡಾಣುಗಳನ್ನು ಕಾಪಿಡುವ ವೈದ್ಯಕೀಯ ಪ್ರಕ್ರಿಯೆಗೆ ಒಳಗಾಗಬಹುದು. ಮುಂದೆ ತಾನು ನಿರಾಯಾಸವಾಗಿ ತನ್ನ ಬದುಕು–ಭವಿಷ್ಯ–ವೃತ್ತಿ–ಪ್ರವೃತ್ತಿಗಳಲ್ಲಿ ತೊಡಗಿಕೊಳ್ಳಬಹುದು. ಮತ್ತೆ ಅವಳು ತಾಯಿಯಾಗಬೇಕು ಎಂದು ಹಂಬಲಿಸಿದಾಗ ಯಾವುದೇ ರೀತಿಯ ತೊಡಕುಗಳು ಎದುರಾದಲ್ಲಿ, ಅಂದರೆ ಒಂದು ವೇಳೆ ಅವಳಲ್ಲಿ ಬಂಜೆತನದ ತೊಂದರೆ ಅಥವಾ ಗರ್ಭಾಶಯ ಸಂಬಂಧಿ ಕಾಯಿಲೆಗಳು ಎದುರಾದಾಗ ಈ ಅಂಡಾಣು ಅವಳ ತಾಯ್ತನದ ಕನಸಿಗೆ ಬೆಂಬಲವಾಗಿ ನಿಲ್ಲಬಲ್ಲದು.

ವಯಸ್ಸಾದಂತೆ ಅಂಡಾಣು ಉತ್ಪತ್ತಿ ಸಾಮರ್ಥ್ಯ ಕಡಿಮೆಯಾಗುತ್ತದೆ. ಆಧುನಿಕ ಜೀವನಶೈಲಿ ಪರಿಣಾಮ ಬಂಜೆತನವೂ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಗರ್ಭಾಶಯ ಸಂಬಂಧಿ ಕಾಯಿಲೆಗಳು, ಎಂಡೋಮೆಟ್ರಿಯಾಸಿಸ್ ಅಥವಾ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳು ಎದುರಾದಾಗ ಹಿಂದೆ ತಾನು ಕಾಯ್ದಿಟ್ಟ ಅಂಡಾಣುಗಳ ಮೊರೆ ಹೋಗಬಹುದು.

ಆದರೆ ಅಂಡಾಣುವನ್ನು ಕಾಯ್ದಿರಿಸಿದ್ದಾರೆ ಎಂಬ ಕಾರಣಕ್ಕೆ ಮುಂದೆ ಕಾಯ್ದಿರಿಸಿದ ಅಂಡಾಣುವನ್ನೇ ಬಳಸಿ ಮಗುವನ್ನು ಪಡೆಯಬೇಕು ಎಂದೇನೂ ಇಲ್ಲ. ಉದ್ಯೋಗದ ಕಾರಣದಿಂದ ಮಗುವನ್ನು ಮುಂದೂಡಿದ 25ರ ಯುವತಿ ಮುಂದೆ 20 ವರ್ಷಗಳ ಬಳಿಕ ಕಾಯ್ದಿರಿಸಿದ ಅಂಡಾಣುವನ್ನು ಬಳಸದೇ ನೈಜವಾಗಿ ಗರ್ಭಿಣಿ ಆಗಬಹುದು. ಆಗ ತನ್ನ ಅಂಡಾಣುಗಳನ್ನು ಸಮಸ್ಯೆಯಲ್ಲಿರುವ ಬೇರೆ ಮಹಿಳೆಗೆ ದಾನ ಮಾಡಬಹುದು.

ದುಡಿಯುವ ಮಹಿಳೆಯರೇ ಹೆಚ್ಚು

ಸಾಮಾನ್ಯವಾಗಿ ಎಗ್ ಫ್ರೀಜಿಂಗ್ ಮಾಡಬೇಕು ಎಂದು ಬಯಸುವವರು ಉದ್ಯೋಗಸ್ಥ ಮಹಿಳೆಯರು ಮತ್ತು ಭವಿಷ್ಯದ ಬಗ್ಗೆ ತಮ್ಮದೇ ಆದ ದೃಷ್ಟಿಕೋನವಿಟ್ಟುಕೊಂಡವರು. ಕೆಲವು ವೈದ್ಯಕೀಯ ಸ್ಥಿತಿಗಳಲ್ಲಿ ಇರುವವರಿಗೆ ಆ ಚಿಕಿತ್ಸೆಗೂ ಮುನ್ನ ಅಂಡಾಣು ಕಾಪಿಡುವ ಆಯ್ಕೆಗೆ ಹೋಗುವಂತೆ ವೈದ್ಯರೇ ಸೂಚಿಸುತ್ತಾರೆ. ಅಂದರೆ, ಎಂಡೊಮೆಟ್ರಿಯಾಸೀಸ್, ಕ್ಯಾನ್ಸರ್‌ನಂತಹ ಕಾಯಿಲೆಗೆ ತುತ್ತಾದವರು, ಈಗ (ಚಿಕ್ಕ ವಯಸ್ಸಿನಲ್ಲಿ) ಮಗು ಬೇಡ, ಮುಂದೊಂದು ದಿನ ನೋಡೋಣ ಎಂದು ಕಾದು ನೋಡುವ ತಂತ್ರದವರಿಗೆ ಈ ವಿಧಾನ ಸೂಕ್ತವಾಗಿದೆ ಎನ್ನುತ್ತಾರೆ ತಜ್ಞರು.

20ರಿಂದ 30ವರ್ಷಗಳ ಅವಧಿಯನ್ನು ಇಂದಿನ ಮಹಿಳೆ ಭವಿಷ್ಯದ ದೃಷ್ಟಿಯಲ್ಲಿ ಬಹಳ ಮಹತ್ವದ ಅವಧಿ ಎಂದು ಪರಿಗಣಿಸುತ್ತಾಳೆ. ಈ ಅವಧಿಯಲ್ಲಿ ವಿವಾಹ, ಗರ್ಭಧಾರಣೆ, ಬಾಣಂತಿ ರಜೆಗಳು ತೊಡಕನ್ನುಂಟು ಮಾಡಬಹುದು ಎನ್ನುವ ಆತಂಕ ಅವಳದು. ಆದರೆ ಹೆಣ್ಣಾದವಳಿಗೆ ಫಲವತ್ತತೆಯ ದೃಷ್ಟಿಯಿಂದಲೂ ಇದು ಮಹತ್ವದ ಅವಧಿಯೇ. ಮುಂದೆ ಅವಳು ಬಯಸಿದಾಗ ಈ ಫಲವಂತಿಕೆ ಉಳಿಯದೇ ಹೋಗಬಹುದು. ಇಂಥವರಿಗೆ ಎಗ್‌ ಫ್ರೀಜಿಂಗ್‌ ಉತ್ತಮ ಆಯ್ಕೆ. ವಿಳಂಬಿತ ವಿವಾಹ, ಕಾಯಿಲೆಗಳು, ಒತ್ತಡ, ಸಾಮಾಜಿಕ ಬದಲಾವಣೆ, ಆಸೆ ಆಕಾಂಕ್ಷೆಗಳಲ್ಲಾದ ಬದಲಾವಣೆಗಳು ಈ ಸೇವೆಗೆ ಹೊಸ ಅರ್ಥವನ್ನೇ ತಂದಿವೆ. ನಾಳೆಯ ತಾಯ್ತನದ ಕನಸಿಗೆ ಈ ತಂತ್ರಜ್ಞಾನ ರೆಕ್ಕೆ–ಪುಕ್ಕ ಕೊಟ್ಟಿದೆ.

‌‌‌‌‌‌* ಪ್ರಾರಂಭದಲ್ಲಿ ಅಂಡಾಣುವನ್ನು ಕಾಪಿಡುವಿಕೆ ಬಗ್ಗೆ ಮಹಿಳೆಯರಲ್ಲಿ ಅಷ್ಟಾಗಿ ಜಾಗೃತಿಯಿರಲಿಲ್ಲ. ಆದರೆ ಈಗ ಹೆಚ್ಚಿನ ಮಹಿಳೆಯರು ಇದರ ಅಗತ್ಯದ ಬಗ್ಗೆ ಅರ್ಥೈಸಿಕೊಂಡಿದ್ದಾರೆ. ನಮ್ಮ ಆಸ್ಪತ್ರೆಯೊಂದರಲ್ಲೇ ಕಳೆದ 7 ವರ್ಷಗಳಲ್ಲಿ ಅಂದಾಜು 1000ಕ್ಕೂ ಅಧಿಕ ಮಹಿಳೆಯರು ತಮ್ಮ ಅಂಡಾಣುವನ್ನು ಕಾಯ್ದಿರಿಸಿದ್ದಾರೆ. ನಮ್ಮಲ್ಲಿ ಕ್ಯಾನ್ಸರ್ ರೋಗಿಗಳು ತಮ್ಮ ಅಂಡಾಣುವನ್ನು ಉಚಿತವಾಗಿ ಕಾಯ್ದಿರಿಸುವ ವ್ಯವಸ್ಥೆಯೂ ಇದೆ.
–ಡಾ. ದೇವಿಕಾ ಗುಣಶೀಲ, ಸಂತಾನಫಲ ತಜ್ಞೆ

ದೂರವಾಣಿ 080-41312600

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.