ADVERTISEMENT

ಪ್ರಾಸ್ಟೇಟ್‌ ಹಿಗ್ಗುವಿಕೆ: ತಪಾಸಣೆಯೇ ಮುನ್ನೆಚ್ಚರಿಕೆ

ಡಾ.ಕಾರಂಜ್‌ ಎಸ್‌.ವಿ.
Published 19 ಜುಲೈ 2019, 19:30 IST
Last Updated 19 ಜುಲೈ 2019, 19:30 IST
   

ಪುರುಷರಲ್ಲಿ ಮೂತ್ರಪಿಂಡದ ಕೆಳಗಡೆ ಇರುವ ಈ ಪ್ರಾಸ್ಟೇಟ್‌ ಗ್ರಂಥಿ ಗಾತ್ರದಲ್ಲಿ ವಾಲ್‌ನಟ್‌ನಷ್ಟು ಇರುತ್ತದೆ. ವೀರ್ಯಾಣುವಿಗೆ ಪೌಷ್ಟಿಕಾಂಶ ಒದಗಿಸುವ ವೀರ್ಯದ್ರವವನ್ನು ಸಂಗ್ರಹಿಸುವುದು ಇದರ ಮುಖ್ಯ ಕೆಲಸ. ವಯಸ್ಸಾಗುತ್ತ ಹೋದಂತೆ ಈ ಗ್ರಂಥಿ ಹಿಗ್ಗುತ್ತ ಹೋಗುತ್ತದೆ. ಆಗ ಮೂತ್ರನಾಳದಿಂದ ಮೂತ್ರ ವಿಸರ್ಜನೆಯಾಗುವಾಗ ಉರಿ ಕಾಣಿಸಿಕೊಳ್ಳಬಹುದು. ಮೂತ್ರ ವಿಸರ್ಜನೆಗೆ ಅವಸರವಾಗುವುದು, ಪದೇ ಪದೇ ಹೋಗುವುದು, ಮೂತ್ರಕೋಶದಿಂದ ಪೂರ್ಣ ಪ್ರಮಾಣದಲ್ಲಿ ಮೂತ್ರ ಹೊರ ಹೋಗುತ್ತಿಲ್ಲ ಎಂದೆನಿಸುವುದು.. ಇವೆಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ಇದು ಜೀವನಶೈಲಿಯ ಗುಣಮಟ್ಟದ ಮೇಲೆಯೂ ಪರಿಣಾಮ ಬೀರುತ್ತದೆ. ಕೆಲವರಲ್ಲಿ ಮೂತ್ರದ ಹರಿವಿಗೆ ಪೂರ್ಣ ಪ್ರಮಾಣದಲ್ಲಿ ಅಡೆತಡೆ ಉಂಟಾಗಿ ಬಿಡಬಹುದು. ಇದಕ್ಕೆ ಸಾಮಾನ್ಯ ಕಾರಣಗಳೆಂದರೆ ಪ್ರಾಸ್ಟೇಟ್‌ ಗ್ರಂಥಿಯ ಉರಿಯೂತ (ಪ್ರಾಸ್ಟ್ಯಾಟಿಸ್‌), ಪ್ರಾಸ್ಟೇಟ್‌ ಗ್ರಂಥಿಯ ಹಿಗ್ಗುವಿಕೆ (ಬೆನಿನ್‌ ಪ್ರಾಸ್ಟ್ಯಾಟಿಕ್‌ ಹೈಪರ್‌ಟ್ರೋಫಿ) ಹಾಗೂ ಪ್ರಾಸ್ಟೇಟ್‌ ಕ್ಯಾನ್ಸರ್‌.

ಸುಧಾರಿತ ತಪಾಸಣೆ

ಈ ಸ್ಥಿತಿಯಲ್ಲಿ ರೋಗವನ್ನು ಪತ್ತೆ ಮಾಡಲು ವೈದ್ಯಕೀಯ ವಿಧಾನಗಳನ್ನು ಬಳಸಬೇಕಾಗುತ್ತದೆ. ವ್ಯಕ್ತಿಯ ಆರೋಗ್ಯದ ಬಗ್ಗೆ ಸಂಪೂರ್ಣ ವಿವರ, ಡಿಜಿಟಲ್‌ ಗುದ ಪರೀಕ್ಷೆ ಹಾಗೂ ಐಪಿಎಸ್‌ಎಸ್‌ (International Prostate Symptom Score– ಪ್ರಾಸ್ಟೇಟ್‌ ಸಮಸ್ಯೆ ಕುರಿತು ಎಂಟು ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಸಮಸ್ಯೆಯ ಆಳದ ಬಗ್ಗೆ ವಿವರ ಲಭ್ಯವಾಗುತ್ತದೆ) ಮಾಡಬೇಕು. ಮೂತ್ರದ ಸಂಪೂರ್ಣ ಪರೀಕ್ಷೆ (ಅನಾಲಿಸಿಸ್‌ ಮತ್ತು ಕಲ್ಚರ್‌), ಮೂತ್ರ ವಿಸರ್ಜನ ವ್ಯೂಹದ ಕಾರ್ಯನಿರ್ವಹಣೆ ಕುರಿತು ಪರೀಕ್ಷೆ (ಪಿವಿಆರ್‌ಯು), ಯೂರೊಫ್ಲೋಮೆಟ್ರಿ (ಮೂತ್ರ ಸಂಗ್ರಹ, ವಿಸರ್ಜನೆಯ ವೇಗ, ವಿಸರ್ಜನೆಗೆ ತೆಗೆದುಕೊಂಡ ಸಮಯ) ಹಾಗೂ ಪಿಎಸ್‌ಎ (ಪ್ರಾಸ್ಟೇಟ್‌ ಸ್ಪೆಸಿಪಿಕ್‌ ಆ್ಯಂಟಿಜೆನ್‌) ಮಟ್ಟವನ್ನು ಅಳೆಯುವ ಪರೀಕ್ಷೆಗಳನ್ನು ಮಾಡಿಸುವುದು ಅಗತ್ಯ.

ADVERTISEMENT

ಪರೀಕ್ಷೆಯ ಸಂದರ್ಭ ಪ್ರಾಸ್ಟೇಟ್‌ ಗ್ರಂಥಿಯ ಮೇಲೆ ಅಸಾಮಾನ್ಯ ಜೀವಕೋಶಗಳು ಅದರಲ್ಲೂ ಗಟ್ಟಿಯಾದವು ಕಂಡು ಬಂದರೆ ಹಾಗೂ ಪಿಎಸ್‌ಎ ಮಟ್ಟ ಸಾಮಾನ್ಯಕ್ಕಿಂತ ಹೆಚ್ಚಿದ್ದರೆ ಹೆಚ್ಚಿನ ಪರೀಕ್ಷೆಗೆ ವೈದ್ಯರು ಸಲಹೆ ಮಾಡಬಹುದು. ಪ್ರಾಸ್ಟೇಟ್‌ ಕ್ಯಾನ್ಸರ್‌ ಇದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಲು ಅಲ್ಟ್ರಾಸೌಂಡ್‌ ನಿರ್ದೇಶಿತ ಬಯಾಪ್ಸಿಗೆ ಸೂಚಿಸಬಹುದು.

ಅಪಾಯಕಾರಿಯಲ್ಲದ ಪ್ರಾಸ್ಟೇಟ್‌ ಹೈಪರ್‌ಪ್ಲೇಸಿಯ (ಬಿಪಿಎಚ್‌) ಅಥವಾ ಪ್ರಾಸ್ಟೇಟ್‌ ಗ್ರಂಥಿ ಹಿಗ್ಗುವಿಕೆ ಸಾಮಾನ್ಯ ಸಮಸ್ಯೆಯಾಗಿದ್ದು, ಈ ಮೇಲೆ ಹೇಳಿದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. 60 ವರ್ಷ ವಯಸ್ಸಿಗಿಂತ ಹೆಚ್ಚಿರುವ ಪುರುಷರಲ್ಲಿ ಶೇ 50ರಷ್ಟು ಮಂದಿ ಹಾಗೂ 80ಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ಶೇ 90ರಷ್ಟು ಮಂದಿ ಈ ಸಮಸ್ಯೆಯಿಂದ ಬಳಲುತ್ತಾರೆ. ಭಾರತೀಯ ಪುರುಷರಲ್ಲಿ ಹೆಚ್ಚಿರುವ ಜೀವಿತಾವಧಿ ಹಾಗೂ ಸುಧಾರಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ ವಿಧಾನಗಳಿಂದಾಗಿ ಈ ಸಮಸ್ಯೆಯನ್ನು ಪತ್ತೆ ಮಾಡುವುದು ಸುಲಭವಾಗಿದ್ದು, ಸಹಜವಾಗಿಯೇ ಪೀಡಿತರ ಸಂಖ್ಯೆ ಹೆಚ್ಚಾಗಲು ಕಾರಣ.

ಆಧುನಿಕ ಚಿಕಿತ್ಸೆಗಳು

ಚಿಕಿತ್ಸೆಯ ಮೊದಲ ಹಂತವೆಂದರೆ ಔಷಧಗಳ ಸೇವನೆ. ಕಡಿಮೆ ಅಡ್ಡ ಪರಿಣಾಮಗಳಿರುವ ಹೆಚ್ಚು ಪರಿಣಾಮಕಾರಿ ಔಷಧಗಳು ಲಭ್ಯವಿದ್ದು, ದೀರ್ಘಕಾಲದವರೆಗೆ ತೆಗೆದುಕೊಳ್ಳಬಹುದು. ಔಷಧಗಳಿಗೆ ಬಗ್ಗದ ಅಥವಾ ಅತ್ಯಂತ ದೊಡ್ಡದಾದ ಪ್ರಾಸ್ಟೇಟ್‌ ಗ್ರಂಥಿಯಿರುವ ರೋಗಿಗಳಿಗೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಬಹುದು. ಆಧುನಿಕ ಶಸ್ತ್ರಚಿಕಿತ್ಸಾ ವಿಧಾನವಾದ ಎಂಡೊಸ್ಕೋಪಿಯಿಂದ ಪ್ರಾಸ್ಟೇಟ್‌ ಗ್ರಂಥಿಯ ಚಿಕಿತ್ಸೆ (ಟಿಯುಆರ್‌ಪಿ) ಮಾಡಬಹುದು ಮತ್ತು ಲೇಸರ್‌ ವಿಧಾನ(ಎಚ್‌ಒಎಲ್‌ಇಪಿ) ದಿಂದ ಮೂತ್ರದ ಹರಿವಿನ ಅಡೆತಡೆಯನ್ನು ತೆಗೆದು ಹಾಕಬಹುದು. ಈ ಚಿಕಿತ್ಸೆಗಳನ್ನು ಶಿಶ್ನ ಹಾಗೂ ಮೂತ್ರನಾಳದ ಮೂಲಕ ಉಪಕರಣ ತೂರಿಸಿ ಮಾಡುವುದರಿಂದ ತೀರಾ ಕಡಿಮೆ ರಕ್ತಸ್ರಾವ ಇರುತ್ತದೆ, ಮಾತ್ರವಲ್ಲ, ಶಸ್ತ್ರಚಿಕಿತ್ಸೆ ಕಲೆಯೂ ಇರುವುದಿಲ್ಲ. ಇಂತಹ ಪ್ರಕರಣಗಳಲ್ಲಿ ವಯಸ್ಸಾದವರ ಮೇಲೇ ಈ ಶಸ್ತ್ರಚಿಕಿತ್ಸೆಗಳನ್ನು ಮಾಡುವುದರಿಂದ ಅವರ ಸುರಕ್ಷಿತತೆಯೇ ಮುಖ್ಯವಾಗಿದ್ದು, ಅತ್ಯಂತ ಸುರಕ್ಷಿತವೂ ಹೌದು.

ಪ್ರಾಸ್ಟೇಟ್‌ ಹಿಗ್ಗುವಿಕೆಯ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸಿ, ವೃದ್ಧರಲ್ಲಿ ಆಗಾಗ ತಪಾಸಣೆ ಮಾಡಿಸುತ್ತಿದ್ದರೆ ಪತ್ತೆ ಹಚ್ಚುವುದು ಸುಲಭ. ಇದರಿಂದ ಜೀವನಮಟ್ಟವನ್ನು ಹಾಗೂ ಸಾಮಾನ್ಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಪ್ರಾಸ್ಟೇಟ್‌ ಕ್ಯಾನ್ಸರ್‌

ಪ್ರಾಸ್ಟೇಟ್‌ ಕ್ಯಾನ್ಸರ್‌ ಪುರುಷರಲ್ಲಿ ಪತ್ತೆಯಾಗುವ ಕ್ಯಾನ್ಸರ್‌ನಲ್ಲಿ ಎರಡನೆಯ ಸ್ಥಾನದಲ್ಲಿದೆ. ಸುಧಾರಿತ ತಪಾಸಣಾ ವಿಧಾನಗಳಾದ ಕ್ಲಿನಿಕಲ್‌ ಪರೀಕ್ಷೆ, ಪಿಎಸ್‌ಎ ಹಾಗೂ ಅಲ್ಟ್ರಾಸೌಂಡ್‌ ನಿರ್ದೇಶಿತ ಬಯಾಪ್ಸಿಯಿಂದಾಗಿ ಪತ್ತೆಯಾಗುವ ಪ್ರಕರಣಗಳು ಜಾಸ್ತಿಯಾಗಿವೆ ಎನ್ನುತ್ತದೆ ಭಾರತೀಯ ಕ್ಯಾನ್ಸರ್‌ ರಿಜಿಸ್ಟ್ರಿ. 2015ರಲ್ಲಿ 30 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಕ್ಯಾನ್ಸರ್‌ ಬೆಳವಣಿಗೆ ನಿಧಾನಗತಿಯಲ್ಲಿರುವುದರಿಂದ ಐದು ವರ್ಷಗಳವರೆಗೆ ರೋಗಿ ಬದುಕುವ ಸಾಧ್ಯತೆ ಶೇ 64ರಷ್ಟು. ಪ್ರಾಥಮಿಕ ಹಂತದಲ್ಲಿ ರೊಬೊಟಿಕ್‌ ನೆರವಿನ ಲ್ಯಾಪ್ರೊಸ್ಕೋಪಿಕ್‌ ಶಸ್ತ್ರಚಿಕಿತ್ಸೆಯ ಮೂಲಕ ಪ್ರಾಸ್ಟೇಟ್‌ ಗ್ರಂಥಿಯನ್ನು ತೆಗೆದು ಹಾಕಬಹುದು. ಇದು ಅತ್ಯುತ್ತಮ ಚಿಕಿತ್ಸೆ ಎಂದೇ ಪರಿಗಣಿಸಲ್ಪಟ್ಟಿದೆ.

ಆ್ಯಂಡ್ರೋಜೆನ್‌ ಕಡಿಮೆ ಮಾಡುವ ಹಾರ್ಮೋನ್‌ ಚಿಕಿತ್ಸೆಯನ್ನು ಕಡಿಮೆ ಗ್ರೇಡ್‌ ಕ್ಯಾನ್ಸರ್‌ ಇರುವ ರೋಗಿಗಳಿಗೆ ಅಥವಾ ಶಸ್ತ್ರಚಿಕಿತ್ಸೆಗೆ ಸೂಕ್ತವಲ್ಲದ ರೋಗಿಗಳಿಗೆ ನೀಡಲಾಗುವುದು. ಪ್ರಾಥಮಿಕ ಹಂತದಲ್ಲೇ ಪತ್ತೆಯಾದರೆ, ಅಂದರೆ ಬೇರೆ ಅಂಗಾಂಗಗಳಿಗೆ ವ್ಯಾಪಿಸದೇ, ಪ್ರಾಸ್ಟೇಟ್‌ಗೆ ಮಾತ್ರ ಸೀಮಿತವಾಗಿದ್ದರೆ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದು.

(ಲೇಖಕರು ಅಪೋಲೊ ಕ್ಲಿನಿಕ್‌ನಲ್ಲಿ ಯೂರೋಲಜಿ ವೈದ್ಯ)​

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.