ADVERTISEMENT

ಸಶಕ್ತ ಸಂತಾನಕ್ಕೆ ಸಾಕಷ್ಟು ದಾರಿ

ಡಾ.ಎಸ್.ಎಸ್.ವಾಸನ್
Published 30 ಆಗಸ್ಟ್ 2019, 19:30 IST
Last Updated 30 ಆಗಸ್ಟ್ 2019, 19:30 IST
   

ಕೃತಕ ಗರ್ಭಧಾರಣೆಯಲ್ಲಿ (ಐವಿಎಫ್‌) ಎದುರಾಗುವ ಬಹುದೊಡ್ಡ ಸವಾಲು ಎಂದರೆ ಸಶಕ್ತವಾದ ಅಂಡಾಣು ಮತ್ತು ವೀರ್ಯಾಣುವಿನ ಆಯ್ಕೆ. ಪ್ರಸ್ತುತ ಲಭ್ಯವಿರುವಪ್ರಿ ಇಂಪ್ಲಾಂಟೇಶನ್ ಜೆನೆಟಿಕ್ ಟೆಸ್ಟಿಂಗ್ (ಪಿಜಿಟಿ) ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದರಿಂದ ಫಲೀಕರಿಸುವ ಮುನ್ನವೇ ಅಂಡಾಣು ಮತ್ತು ವೀರ್ಯಾಣುವಿನ ಗುಣಮಟ್ಟ ಮತ್ತು ವರ್ಣತಂತುಗಳ ಸಮಸ್ಯೆಯನ್ನು ಖಚಿತಪಡಿಸಲಾಗುತ್ತದೆ.

ಏನಿದು ಪ್ರಿ ಇಂಪ್ಲಾಂಟೇಶನ್ ಜೆನೆಟಿಕ್ ಟೆಸ್ಟಿಂಗ್

ಐವಿಎಫ್ ಪ್ರಯೋಗಾಲಯದಲ್ಲಿ ಭ್ರೂಣವು ಬೆಳೆಯುತ್ತಿರುವಾಗಲೇ ಅದರ ಒಂದು ಅಥವಾ ಹೆಚ್ಚಿನ ಕೋಶಗಳನ್ನು ತೆಗೆದುಕೊಂಡು ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಅಲ್ಲಿ ವಿಭಿನ್ನ ತಂತ್ರಗಳನ್ನು ಬಳಸಿಕೊಂಡು ವಿವಿಧ ಹಂತಗಳಲ್ಲಿ ಪರೀಕ್ಷೆಯನ್ನು ಮಾಡಲಾಗುತ್ತದೆ.ಫ್ಲೊರೊಸೆಂಟ್‌ ಇನ್‌ ಸಿಟು ಹೈಬ್ರಿಡೈಸೇಶನ್‌ (ಫಿಶ್), ಮೈಕ್ರೋಅರೇ ಮತ್ತು ಸಿಂಗಲ್-ನ್ಯೂಕ್ಲಿಯೋಟೈಡ್ ಪಾಲಿಮಾರ್ಫಿಸಮ್ (ಎಸ್‌ಎನ್‌ಪಿ) ಮುಖ್ಯ ಪ್ರಕಾರಗಳಾಗಿವೆ.

ADVERTISEMENT

ಇಂತಹ ತಂತ್ರಗಳು ನಿರಂತರವಾಗಿ ವಿಕಸನಗೊಳ್ಳುತ್ತಿವೆ ಮತ್ತು ಹೆಚ್ಚು ನಿಖರವೂ, ಸುಲಭವೂ ಮತ್ತು ಹೆಚ್ಚು ಕರಾರುವಕ್ಕಾಗಿಯೂ ಆಗುತ್ತ ಹೋಗುತ್ತವೆ. ಮೈಕ್ರೋಅರೇ ಮತ್ತು ಜೀನೋಮ್ ಸೀಕ್ವೆನ್ಸಿಂಗ್ ಅನ್ನು ಒಳಗೊಂಡಿರುವ ಹೊಸ ತಂತ್ರಗಳು ವಂಶವಾಹಿ ಪರೀಕ್ಷೆಯ ಇತ್ತೀಚಿನ ಮತ್ತು ಹೆಚ್ಚು ನಂಬಿಕಾರ್ಹ ವಿಧಾನಗಳಾಗಿವೆ.

ಪಿಜಿಟಿ ಯಾಕೆ ಬೇಕು?

ಅನೇಕ ಆನುವಂಶಿಕ ಕೌಟುಂಬಿಕ ಕಾಯಿಲೆಗಳನ್ನು ಹೊಂದಿರುವವರು ತಮ್ಮ ಭ್ರೂಣಗಳನ್ನು ಆ ಆನುವಂಶಿಕ ಸಮಸ್ಯೆಗಳಿಂದ ವಿಮುಕ್ತಿಗೊಳಿಸಲು ಈ ಪರೀಕ್ಷೆ ನೆರವಾಗುತ್ತದೆ. ಮುಖ್ಯವಾಗಿ ಲೈಂಗಿಕತೆಗೆ ಸಂಬಂಧಿಸಿದ ಸಮಸ್ಯೆಗಳು, ಅಂದರೆ –ಹಿಮೋಫಿಲಿಯಾ, ಫ್ರಗೈಲ್ ಎಕ್ಸ್ ಸಿಂಡ್ರೋಮ್, ನ್ಯೂರೋಮಾಸ್ಕ್ಯುಲರ್ ಡಿಸ್ಟ್ರೋಫಿ, ರೆಟ್ ಸಿಂಡ್ರೋಮ್, ನರವ್ಯೂಹ, ಕೂದಲು, ಚರ್ಮ, ಉಗುರು, ಹಲ್ಲುಗಳಿಗೆ ಸಮಸ್ಯೆ ತರುವ - ಇನ್ಕಾಂಟಿನೆಂಷಿಯ ಪಿಗ್ಮೆಂಟಿ, ಸ್ಯೂಡೊ ಹೈಪರ್ಪ್ಯಾರಾಥೈರಾಯ್ಡಿಸಂಮತ್ತು ಏಕಧಾತು (ಸಿಂಗಲ್‌ ಜೀನ್) ದೋಷಗಳು, ಅಂದರೆ–ಪ್ಯಾಂಕ್ರಿಯಾಟಿಕ್ ನಾಳಗಳಲ್ಲಿ, ಕರುಳಿನಲ್ಲಿ ಹಾಗೂ ಉಸಿರಾಟದಲ್ಲಿ ತೊಂದರೆಯನ್ನುಂಟು ಮಾಡುವ ಸಿಸ್ಟಿಕ್ ಫ್ರಿಬ್ರೋಸಿಸ್, ಮೆಟಬಾಲಿಕ್ ಸಮಸ್ಯೆಯಾದ ಟೇ-ಸಾಶ್ ಡಿಸೀಸ್, ಸಿಕಲ್ ಸೆಲ್ ಅನೀಮಿಯಾ, ಮೆದುಳಿನ ಸಮಸ್ಯೆಯಾದ ಹಂಟಿಂಗ್ಟನ್ ಸಮಸ್ಯೆಗಳನ್ನು ನಿರ್ಧರಿಸಲು ಮತ್ತು ಸೂಕ್ತ ಚಿಕಿತ್ಸೆಗಳಿಗೆ ಮುಂದಾಗಲು ಈ ಪರೀಕ್ಷೆ ಸಹಾಯಕ.

ಇದಲ್ಲದೆ, ಮೂಳೆ ಮಜ್ಜೆಯ ದಾನಿಯನ್ನು ಹುಡುಕುವ ದಂಪತಿಗಳು ಸಹ ಮಗುವಿಗೆ ಜನ್ಮ ನೀಡಲು ಪಿಜಿಟಿಯನ್ನು ಬಳಸಿಕೊಳ್ಳಬಹುದು, ಅದು ಆ ಮಗುವಿಗೆ ಒಡಹುಟ್ಟಿದವರ ಹೊಂದಾಣಿಕೆಯ ಕಾಂಡಕೋಶಗಳನ್ನು ಒದಗಿಸುತ್ತದೆ.
ಮಹಿಳೆಯ ವಯಸ್ಸು ಅಧಿಕವಾದಂತೆ ಕ್ರೋಮೊಸೋಮ್‌ನಲ್ಲಿನ ಅಸಹಜತೆಯ ಪ್ರಮಾಣವು ಹೆಚ್ಚಾಗುತ್ತದೆ. ಆದ್ದರಿಂದ ಅವಧಿ ದಾಟಿದ ಗರ್ಭಧಾರಣೆಯಲ್ಲಿ (35 ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾದ ಮಹಿಳೆಯರು) ಈ ಪರೀಕ್ಷೆಯ ಅಗತ್ಯ ಹೆಚ್ಚು. ಅಲ್ಲದೆ, ಪದೆಪದೆ ಗರ್ಭಪಾತ, ಕೃತಕ ಗರ್ಭಧಾರಣೆಯಲ್ಲಿ ವಿಫಲತೆ, ಪುರುಷಸಂಬಂಧಿ ಫಲವಂತಿಕೆಯ ಗಂಭೀರ ಸಮಸ್ಯೆ ಇರುವವರಿಗೆ ಈ ಪರೀಕ್ಷೆಯನ್ನು ಶಿಫಾರಸು ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.