ತಮ್ಮನಿಗೆ ಟೈಫಾಯ್ಡ್ ಆದ ಕಾರಣ ಆಸ್ಪತ್ರೆಗೆ ಸೇರಿಸಿದ್ದೆವು. ಅವನ ಪಕ್ಕದ ಬೆಡ್‌ನಲ್ಲಿ ಎಂಟೊ-ಒಂಬತ್ತೊ ಕ್ಲಾಸಿನ ಹುಡುಗ ಮಲಗಿದ್ದ. ಅವನಿಗೆ ಇಂತದ್ದೇ ಕಾಯಿಲೆ ಇದೆ ಎಂದು ವೈದ್ಯರಿಗೂ ಹೇಳಲು ಆಗಿರಲಿಲ್ಲ. ಯಾವುದೋ ಆಘಾತದಿಂದ ನಿಸ್ತೇಜ ಆಗಿರಬೇಕು ಎಂದಿದ್ದರಂತೆ. ಉತ್ಸಾಹದ ಚಿಲುಮೆಯಂತಿದ್ದ ಮಗ, ಮುದುರಿಕೊಂಡು ಹಾಸಿಗೆ ಹಿಡಿದಿದ್ದು ಅರಗಿಸಿಕೊಳ್ಳಲು ತಂದೆ-ತಾಯಿಗೂ ಕಷ್ಟವಾಗಿತ್ತು. ವಿಷಯ ತಿಳಿದು ಆಸ್ಪತ್ರೆಗೆ ಬಂದ ಶಿಕ್ಷಕಿಯನ್ನು ಕಂಡಿದ್ದೆ ತಡ, ‘ಟೀಚರ್ ಕ್ಷಮಿಸಿ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ನನಗೆ ಗೆಲ್ಲಲು ಆಗಲಿಲ್ಲ’ ಎಂದು ಕಣ್ಣೀರು ಹಾಕಿದೆ. ಆಗ ಆತನ ಬಗ್ಗೆ ಸಣ್ಣ ಸುಳಿವು ಸಿಕ್ಕಿತು. ಆಟ–ಪಾಠದಲ್ಲಿ ಸದಾ ಮುಂದಿದ್ದ ಆತನಿಗೆ ಒಂದು ಸೋಲು ಆಘಾತಗೊಳಿಸಿತ್ತು. ಗೆಲ್ಲುವುದನ್ನು ಕಲಿಸಿದ್ದ ಶಿಕ್ಷಕರು ಮತ್ತು ಪಾಲಕರು, ಸೋಲನ್ನು ಸ್ವೀಕರಿಸುವುದು ಹೇಗೆ ಎಂಬುದನ್ನು ಅವನಿಗೆ ಕಲಿಸುವುದನ್ನು ಮರೆತಿದ್ದರು.
‘ಓದಬೇಕು, ರ‍್ಯಾಂಕ್ ಬರಬೇಕು, ಸ್ಪರ್ಧೆಗಳಲ್ಲಿ ಗೆಲ್ಲಬೇಕು, ಓದಿನ ಜೊತೆಗೆ ನೃತ್ಯ, ಚಿತ್ರಕಲೆ, ಸಂಗೀತ, ತಂತ್ರಜ್ಞಾನ – ಎಲ್ಲವನ್ನೂ ಕಲಿಯಬೇಕು. ಚೆನ್ನಾಗಿ ಓದಿದರೆ ಮಾತ್ರ ಒಂದು ಒಳ್ಳೆಯ ಕೆಲಸ. ಚೆನ್ನಾದ ಕೆಲಸವನ್ನು ಗಿಟ್ಟಿಸಿಕೊಂಡರೇ ಮಾತ್ರ ಒಂದು ಒಳ್ಳೆಯ ಬದುಕು. ಸ್ಪರ್ಧಾತ್ಮಕ ಜಗತ್ತಿದು... ಓಡಲೇಬೇಕು... ಗೆಲ್ಲಲೇಬೇಕು...’ – ಎನ್ನುವುದನ್ನೇ ಸತತವಾಗಿ ಮಕ್ಕಳ ತಲೆಯಲ್ಲಿ ತುರುಕುತ್ತಿದ್ದೇವೆ. ಈ ರೀತಿಯ ನಡೆ, ಒತ್ತಡ ಕೇವಲ ಪಾಲಕರದ್ದಲ್ಲ; ನಮ್ಮ ವ್ಯವಸ್ಥೆಯೇ ಹಾಗಾಗಿದೆ. ಓಡುತ್ತಿರುವ ಜಗತ್ತು ಓಡುವುದಕ್ಕೆ ಮಾತ್ರವೇ ಉತ್ತೇಜಿಸುತ್ತದೆ. ಅದು ತಪ್ಪೂ ಅಲ್ಲ. ಆದರೆ ಓಡುವಾಗ ಎಡವಿ ಬೀಳುವುದು, ಗಾಯಗೊಳ್ಳುವುದು ಸಹಜ ಎನ್ನುವುದನ್ನು, ಆ ಗಾಯವನ್ನು ಸಹಿಸಿಕೊಳ್ಳುವುದನ್ನು, ಮತ್ತೆ ಮೈಕೊಡವಿ ಎಳುವುದನ್ನು, ಎದ್ದು ಓಡುವುದನ್ನು, ತಮ್ಮೊಂದಿಗೆ ಓಡುತ್ತಿರುವವರು ಎಡುವಿದಾಗ ಕೈಚಾಚುವ ಔದಾರ್ಯವನ್ನು ಕಲಿಸುವುದನ್ನು ಮರೆಯುತ್ತಿದ್ದೇವೆ ಎಂದು ಅನ್ನಿಸುವುದಿಲ್ಲವೇ?!
‘ಗುರುಗಳು ಬೈದರು, ಪರೀಕ್ಷೆಯಲ್ಲಿ ಫೇಲಾದೆ, ಕೆಲಸ ಸಿಗಲಿಲ್ಲ, ಸಾಲ ತೀರಿಸೋಕೆ ಆಗ್ಲಿಲ್ಲ, ಅವಮಾನ ಆಯ್ತು, ನಂಬಿದವರು ಬಿಟ್ಟುಹೋದರು, ಮೋಸಕ್ಕೊಳಗಾದೆ’ ಎನ್ನುವ ಅನೇಕ ಕಾರಣಗಳಿಗೆ ಆತ್ಮಹತ್ಯೆಯನ್ನು ಮಾಡಿಕೊಳ್ಳುವವರ ಸುದ್ದಿಗಳು ಇಂದು ಅಷ್ಟೇನು ಆಘಾತ ಹುಟ್ಟಿಸದಷ್ಟು ಸಾಮಾನ್ಯವಾಗಿ ಬಿಟ್ಟಿವೆಯಲ್ಲವೆ? ಶ್ರೀಮಂತ ಮನೆತನದ ಯುವತಿಯೊಬ್ಬಳು ತನ್ನ ಚೆಂದದ ಮುಖದ ಮೇಲಾದ ಮೊಡವೆಗಳಿಗೆ ಬೇಸತ್ತು, ಖಿನ್ನತೆಗೆ ಒಳಗಾಗಿ, ಆತ್ಮಹತ್ಯೆಯನ್ನು ಮಾಡಿಕೊಂಡಳು ಎಂಬ ವಿಷಯ ತೀರಾ ಘಾಸಿಗೊಳಿಸಿತ್ತು. ವಿಶ್ವವಿದ್ಯಾಲಯಗಳಲ್ಲಿ ಪದವಿ ಗಿಟ್ಟಿಸಿಕೊಂಡ ವಿದ್ಯಾವಂತವರೂ ಹೀಗೆ ಸಣ್ಣ ಪುಟ್ಟ ನೋವು, ನಿರಾಸೆ, ಅವಮಾನಗಳಿಗೆ ಹೆದರಿ ಜೀವವನ್ನೇ ಅಂತ್ಯಗೊಳಿಸಿಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ ಎಂದರೆ ಆ ಶಿಕ್ಷಣ ಕಲಿಸಿದ್ದಾದರೂ ಏನು?
ಇನ್ನೊಬ್ಬರೊಂದಿಗೆ ಮಾಡುವ/ಮಾಡಿಕೊಳ್ಳುವ ಹೋಲಿಕೆ ಮನುಷ್ಯನ ಬಹುದೊಡ್ಡ ವೈರಿ. ಅದು ಕೆಲವೊಮ್ಮೆ ನಮ್ಮ ಖುಷಿ, ಸಂತೃಪ್ತಿಗಳನ್ನೇ ನುಂಗಿಬಿಡುತ್ತದೆ. ಕೆಲವೊಮ್ಮೆ ಅದು ನಮ್ಮ ಜೀವನದ ದಾರಿಯನ್ನೇ ಬದಲಿಸುವ ಅಪಾಯವೂ ಇದೆ. ಹಾರುವ ಹಕ್ಕಿಯನ್ನು ಈಜುವ ಮೀನಿಗೆ ಹೋಲಿಸಿ, ನೀರಿಗೆ ಬಿಡುವುದು ಏಷ್ಟು ಮೂರ್ಖವೋ, ಎಲ್ಲ ಮಕ್ಕಳಿಗೂ ಓದುವ, ರ್‍ಯಾಂಕ್ ಬರಲೇಬೇಕೆಂದು ಒತ್ತಡ ಹೇರುವುದೂ ಅಷ್ಟೇ ಮೂರ್ಖತನ. ಮತ್ತೊಬ್ಬರಿಗೆ ಹೋಲಿಕೆಯನ್ನು ಮಾಡಿ ಜರಿಯುವುದು ಖಿನ್ನತೆಗೆ, ಕೀಳರಿಮೆಗೆ ಕಾರಣವಾಗಬಹುದು.
ಮನೆಯೇ ಮೊದಲ ಪಾಠಶಾಲೆ. ಅದು ನಮಗೆ ಜಗತ್ತನ್ನು ತೋರಿಸುವ ಮೊದಲ ಕಿಟಕಿ. ಗೆಲ್ಲುವ, ಸೋಲುವ ಪಾಠಗಳೂ ಅಲ್ಲಿಂದಲೇ ನಮ್ಮ ಮಕ್ಕಳಿಗೆ ಶುರುವಾಗಬೇಕು. ಮಕ್ಕಳನ್ನು ಅತಿ ಮುದ್ದು ಮಾಡುವ ಭರದಲ್ಲಿ ಪಾಲಕರು ವಾಸ್ತವವನ್ನು ಮುಚ್ಚಿಡುತ್ತಾರೆ. ತಮ್ಮ ಕಷ್ಟ–ಸೆಣಸಾಟಗಳನ್ನು ಅವರಿಂದ ಮರೆಮಾಚಿ ಜೀವನ ಎಂದರೆ ಹೂವನ್ನು ಹಾಸಿದ ದಾರಿ ಎಂದು ನಂಬಿಸಿದರೆ ಮುಂದೊಮ್ಮೆ ಕಲ್ಲು–ಮುಳ್ಳುಗಳ ದಾರಿ ಎದುರಾದಾಗ ನಡಿಗೆ ಕಷ್ಟವಾಗಿಬಿಡಬಹುದು. ಕೊನೆಗೆ ನಡೆಯುವುದನ್ನೇ ನಿಲ್ಲಿಸಿಬಿಡುವ ಅಪಾಯವೂ ಇದೆ.
ಸೋಲು, ತಿರಸ್ಕಾರ, ಅವಮಾನಗಳೆಲ್ಲ ಬದುಕಿನಲ್ಲಿ ಸಹಜ ಎಂಬುದನ್ನು ಮಕ್ಕಳ ಮನಸ್ಸಲ್ಲಿ ಗಟ್ಟಿಯಾಗಿ ಬಿತ್ತಬೇಕಿದೆ. ಅವುಗಳು ಎದುರಾಗುವುದು ಬದುಕನ್ನು ಮತ್ತಷ್ಟು ಗಟ್ಟಿಗೊಳಿಸುವುದಕ್ಕಾಗಿಯೇ ಹೊರತು ಬದುಕನ್ನು ಮುಗಿಸಲು ಅಲ್ಲ. ಸೋಲು, ತಿರಸ್ಕಾರವನ್ನು ಎದುರಿಸಲಾಗದವರು ಖಿನ್ನತೆಗೆ ಜಾರುವ ಅಥವಾ ತನಗೆ ಸಿಗದದ್ದು ಮತ್ತೆ ಯಾರಿಗೂ ಸಿಗದಿರಲಿ ಎನ್ನುವ ಪ್ರತಿಕಾರದ ಮನಃಸ್ಥಿತಿಗೆ ಹೋಗುವ ಸಾಧ್ಯತೆ ಹೆಚ್ಚು. ಎಲ್ಲರ ಮನಃಸ್ಥಿತಿಯೂ ಒಂದೇ ರೀತಿಯಲ್ಲಿರುವುದಿಲ್ಲ. ನನಗೆ ಇಷ್ಟವಾದದ್ದು ಇತರರಿಗೂ ಇಷ್ಟವಾಗಲೇ ಬೇಕೆಂದಿಲ್ಲ. ಎಲ್ಲರ ಅಭಿಪ್ರಾಯಗಳನ್ನೂ ಗೌರವಿಸುವುದನ್ನು ನಮ್ಮ ನಡತೆಯಿಂದಲೇ ಮಕ್ಕಳಿಗೆ ಕಲಿಸಬೇಕು.
ಮಕ್ಕಳಿಗೆ ನಾವು ಕೊಡಬಹುದಾದ ದೊಡ್ಡ ಉಡುಗೊರೆ ಎಂದರೆ ಅವರಿಗಾಗಿ ನಾವು ನೀಡುವ ಸಮಯ. ಅವರೊಂದಿಗೆ ನಿತ್ಯದ ಆಗು–ಹೋಗುಗಳನ್ನು ಮಾತನಾಡುವುದು, ಅವರು ಮಾಡುವ ತಪ್ಪು–ಒಪ್ಪುಗಳನ್ನೆಲ್ಲ ನಮ್ಮಲ್ಲಿ ಹೇಳಿಕೊಳ್ಳುವಷ್ಟು ನಮ್ಮ ಬಗ್ಗೆ ವಿಶ್ವಾಸವನ್ನು ಬೆಳೆಸಿಕೊಳ್ಳುವುಂತೆ ಮಾಡುವುದು ಅಗತ್ಯ. ತನ್ನ ಹೊರ ಜಗತ್ತಿನ ಲೋಕರೂಢಿಗಳ ಜತೆಗೆ ಒಳ ಜಗತ್ತಿನ ತಳಮಳವನ್ನೂ ಮನಬಿಚ್ಚಿ ನಮ್ಮಲ್ಲಿ ಅವರು ಹೇಳಿಕೊಳ್ಳುವಷ್ಟು ನಾವು ಅವರಿಗೆ ಒಳ್ಳೆಯ ಸ್ನೇಹಿತರಾದರೇ ಸಾಕು. ಎಂಥದೇ ಕಷ್ಟ ಕಾಲದಲ್ಲೂ ಅವರಿಗೆ ಒಂಟಿತನ ಕಾಡದು.
ಬದುಕಿನ ಉದ್ದೇಶ ಗೆಲ್ಲುವುದಲ್ಲ; ಸೋಲುವುದೂ ಅಲ್ಲ. ಕುವೆಂಪು ಹೇಳಿದಂತೆ ‘ಬದುಕಿನ ಉದ್ದೇಶ ಬದುಕುವುದು’. ನಾವು ಮಕ್ಕಳನ್ನು ಗೆಲುವಿಗಾಗಿ ಅಲ್ಲ, ಬದುಕಿಗಾಗಿ ಸಜ್ಜುಗೊಳಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.