ADVERTISEMENT

ಏನಾದ್ರೂ ಕೇಳ್ಬೋದು: ನಂಬಿಕೆ ದಾಂಪತ್ಯದ ಅಡಿಗಲ್ಲು

ನಡಹಳ್ಳಿ ವಂಸತ್‌
Published 8 ಅಕ್ಟೋಬರ್ 2021, 16:59 IST
Last Updated 8 ಅಕ್ಟೋಬರ್ 2021, 16:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

26 ವರ್ಷದ ಪೊಲೀಸ್‌ ಅಧಿಕಾರಿ. 4 ವರ್ಷದ ಮಗಳಿರುವ 28 ವರ್ಷ ವಯಸ್ಸಿನ ವಿಚ್ಛೇದಿತೆಯನ್ನು ತುಂಬಾ ಪ್ರೀತಿಸುತ್ತಿದ್ದೇನೆ. ನನ್ನನ್ನು ತುಂಬಾ ಕಾಳಜಿ ಮಾಡುತ್ತಾಳೆ. ವಿಚ್ಛೇದನಕ್ಕೆ ಕಾರಣ ಕೇಳಿದಾಗ ತನ್ನದೇನೂ ತಪ್ಪಿರಲಿಲ್ಲ ಎನ್ನುತ್ತಾಳೆ. ಸ್ತ್ರೀ ಮತ್ತು ಪುರುಷ ಸ್ನೇಹಿತರೊಡನೆ ಫೋನ್‌ನಲ್ಲಿ ತುಂಬಾ ಮಾತನಾಡುತ್ತಿರುತ್ತಾಳೆ. ಹೀಗಾಗಿ ಅನುಮಾನ ಕಾಡುತ್ತಿದೆ. ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ.

ನಂಬಿಕೆ ಆತ್ಮೀಯ ಸಂಬಂಧಗಳ ಅಡಿಗಲ್ಲು. ನಂಬಿಕೆಯಿಲ್ಲದಿರುವಲ್ಲಿ ಪ್ರೀತಿಯಿರುವುದು ಸಾಧ್ಯವಿಲ್ಲದಿದ್ದರೂ ಆಕರ್ಷಣೆ ಇರುವುದು ಸಾಧ್ಯ. ಈಗ ಯೋಚಿಸಿ ನಿಮಗಿರುವುದು ಪ್ರೀತಿಯೋ? ಆಕರ್ಷಣೆಯೋ? ಈ ಆಕರ್ಷಣೆಯನ್ನು ಪ್ರೀತಿಗೆ ಬದಲಾಯಿಸಲು ಇಬ್ಬರೂ ಮುಕ್ತವಾಗಿ ಚರ್ಚೆಮಾಡುವ ಅಗತ್ಯವಿರುತ್ತದೆ. ನಿಮ್ಮ ಅನುಮಾನಗಳು ಮತ್ತು ಅದರಿಂದ ನಿಮಗೆ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿರುವ ಕಷ್ಟಗಳನ್ನು ಅವರಿಗೆ ವಿವರಿಸಿ. ದೂಷಣೆ, ಆರೋಪ, ವಾಗ್ವಾದಗಳಿಗೆ ಅವಕಾಶ ಕೊಡಬೇಡಿ. ಸಂಪೂರ್ಣ ನಂಬಿಕೆಯುಂಟಾದರೆ ಮಾತ್ರ ಮುಂದುವರೆಯಿರಿ. ಅನುಮಾನಗಳಿಂದ ಪ್ರಾರಂಭವಾಗುವ ಸಂಬಂಧಗಳಲ್ಲಿ ಅನ್ಯೋನ್ಯತೆ ಕಷ್ಟಸಾಧ್ಯ.

ADVERTISEMENT

28 ವರ್ಷದ ಮಹಿಳೆ. 2017ರಲ್ಲಿ ಮದುವೆಯಾಗಿದೆ. ಅತ್ತೆ ಮಾವ ನನ್ನ ಬಗೆಗೆ ಸಂಬಂಧಿಕರಲ್ಲಿ ದೂರುತ್ತಿರುತ್ತಾರೆ. ಪತಿ ಒಬ್ಬರೇ ಇದ್ದಾಗ ನನ್ನ ಜೊತೆ ಚೆನ್ನಾಗಿದ್ದರೂ ಹೊರಗಡೆ ಪೋಷಕರನ್ನೇ ಬೆಂಬಲಿಸುತ್ತಾರೆ. ಅವರಿಗೆ ಮಗು ಬೇಡವಾಗಿದೆ. ಮಾನಸಿಕ ನೋವು ಮತ್ತು ಒತ್ತಡದಿಂದ ಬಳಲುತ್ತಿದ್ದೇನೆ. ಪತಿಯ ಜೊತೆಗೆ ಜೀವನ ಮುಂದುವರೆಸಲೇ? ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ.

ಪತಿ ನಿಮ್ಮ ಬೆಂಬಲಕ್ಕೆ ಬರಬೇಕೆಂದು ನಿರೀಕ್ಷಿಸುವುದು ಸಹಜವಾದರೂ ಅದು ಸಾಧ್ಯವಾಗದಿದ್ದಾಗ ನಿಮ್ಮ ಹತಾಶೆ ಹೆಚ್ಚುತ್ತದೆ. ನೀವೇಕೆ ಅತ್ತೆ–ಮಾವಂದಿರ ಅವಮಾನವನ್ನು ಸಹಿಸಿಕೊಳ್ಳುತ್ತಿದ್ದೀರಿ? ಅವಮಾನದ ವಿರುದ್ಧ ನಿಮ್ಮ ಸಿಟ್ಟನ್ನು ಹೊರಹಾಕಿ. ‘ನೀವು ರಕ್ಷಣೆಗೆ ಬರದಿದ್ದಾಗ ನನ್ನನ್ನು ನಾನು ರಕ್ಷಿಸಿಕೊಳ್ಳುವುದು ಅನಿವಾರ್ಯ’ ಎಂದು ಪತಿಗೆ ತಿಳಿಸಿ. ತಕ್ಷಣಕ್ಕೆ ಮಕ್ಕಳು ನಿಮಗೆ ಬೇಕೆನ್ನಿಸದಿದ್ದರೆ ಗರ್ಭನಿರೋಧಕಗಳನ್ನು ಬಳಸುವ ನಿಮ್ಮ ಸ್ವಾತಂತ್ರ್ಯವನ್ನು ಬಳಸಿ. ಸಂಬಂಧಗಳು ಸ್ಥಿರವಾದಾಗ ಮತ್ತು ಮಕ್ಕಳನ್ನು ಬೆಳೆಸಲು ನೀವು ಮಾನಸಿಕವಾಗಿ ಸಿದ್ಧರಾದಾಗ ಮಾತ್ರ ಮಕ್ಕಳನ್ನು ಪಡೆಯಿರಿ. ಅಸ್ಥಿರ ಸಂಬಂಧಗಳಲ್ಲಿ ಮಕ್ಕಳು ಬಲಿಪಶುವಾಗುತ್ತಾರೆ.

30ರ ಯುವಕ. ಮದುವೆಯಾಗಿ 2 ತಿಂಗಳಾಗಿದೆ. ನನಗೆ ಶೀಘ್ರಸ್ಖಲನ (ಎರಡು ನಿಮಿಷದಲ್ಲಿ) ಆಗುತ್ತದೆ. ಇದರಿಂದ ಪತ್ನಿಗೆ ತೃಪ್ತಿಯಾಗುತ್ತಿಲ್ಲ. ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ.

ಶೀಘ್ರಸ್ಖಲನಕ್ಕೆ ನೀವೊಬ್ಬರೇ ಜವಾಬ್ದಾರರು ಎಂದುಕೊಳ್ಳುವ ಅಗತ್ಯವಿಲ್ಲ. ನಿಮ್ಮ ಸಂಬಂಧ ಇನ್ನೂ ಆರಂಭದ ಹಂತದಲ್ಲಿದೆ. ಇಬ್ಬರಲ್ಲೂ ಹೆಚ್ಚಿನ ಲೈಂಗಿಕ ಸಲಿಗೆ ಮತ್ತು ಆತ್ಮೀಯತೆ ಮೂಡಬೇಕಾಗಿದೆ. ಪತ್ನಿಯ ಜೊತೆ ಅವರ ಲೈಂಗಿಕ ಅಗತ್ಯಗಳು, ಕಲ್ಪನೆಗಳು ಎಲ್ಲದರ ಕುರಿತು ಮುಕ್ತವಾಗಿ ಮಾತನಾಡಲು ಪ್ರಾರಂಭಿಸಿ. ಇಬ್ಬರೂ ಒಟ್ಟಾಗಿ ಹೆಚ್ಚಿನ ಸುಖ ಹಂಚಿಕೊಳ್ಳುವುದು ಹೇಗೆಂದು ಯೋಚಿಸಿ. ಅಗತ್ಯವಿದ್ದರೆ ತಜ್ಞ ಲೈಂಗಿಕ ಚಿಕಿತ್ಸಕರ ಸಹಾಯ ಪಡೆಯಿರಿ. ಯಾವುದೇ ಔಷಧಿಗಳನ್ನು ಬಳಸಿ ಮೋಸಹೋಗಬೇಡಿ.

28ರ ಯುವಕ. ಸಾಕಷ್ಟು ವರ್ಷಗಳಿಂದ ಹಸ್ತಮೈಥುನ ಮಾಡುತ್ತಿದ್ದೇನೆ. ಪ್ರತಿದಿನ ಮಾಡದಿದ್ದರೆ ಸಮಾಧಾನವಿರುವುದಿಲ್ಲ. ಈಗ ಮನೆಯಲ್ಲಿ ಹೆಣ್ಣು ಹುಡುಕುತ್ತಿದ್ದಾರೆ. ನಾನು ದೈಹಿಕವಾಗಿ ಚಿಕ್ಕವನಂತೆ ಕಾಣುತ್ತೇನೆ. ಬೆಳಿಗ್ಗೆ ಎದ್ದ ತಕ್ಷಣ ಸುಸ್ತಾಗಿ ತಲೆ ತಿರುಗಿದಂತಾಗುತ್ತದೆ. ಹಸ್ತಮೈಥುನದಿಂದ ರೋಗನಿರೋಧಕ ಶಕ್ತಿ ಕುಗ್ಗುತ್ತದೆಯೇ? ದಾಂಪತ್ಯಜೀವನಕ್ಕೆ ತೊಂದರೆಯಿದೆಯೇ? ಒಬ್ಬನೇ ಮಗ. ಪ್ರಾಣಕ್ಕೆ ಅಪಾಯ ಮಾಡಿಕೊಂಡರೆ ಪೋಷಕರ ಪರಿಸ್ಥಿತಿ ಯೋಚಿಸಲು ಸಾಧ್ಯವಿಲ್ಲ. ಸಹಾಯಮಾಡಿ.

ಹೆಸರು, ಊರು ತಿಳಿಸಿಲ್ಲ.

ನೀವು ತೀವ್ರವಾದ ಆತಂಕದಲ್ಲಿದ್ದೀರಿ. ಇದರ ಮೂಲ ಕಾರಣ ಹಸ್ತಮೈಥುನದ ಕುರಿತಾದ ತಪ್ಪುತಿಳಿವಳಿಕೆಗಳು. 30/ 01/ 2021ರ ಸಂಚಿಕೆಯ ಇದೇ ಅಂಕಣದಲ್ಲಿ ಇದರ ಬಗೆಗೆ ವಿವರವಾಗಿ ಬರೆಯಲಾಗಿದೆ. ಹಸ್ತಮೈಥುನ ಸಂಪೂರ್ಣ ಸುರಕ್ಷಿತ ಲೈಂಗಿಕ ಪ್ರವೃತ್ತಿ. ಇದರಿಂದ ಯಾವುದೇ ದೈಹಿಕ ತೊಂದರೆಗಳಾಗುವುದಿಲ್ಲ. ದೈಹಿಕ ಆರೋಗ್ಯವನ್ನು ಒಮ್ಮೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ. ರೂಪ, ಆಕಾರಗಳು ಹೆಚ್ಚಾಗಿ ಆನುವಂಶಿಕವಾದದ್ದು. ಇದನ್ನು ಬದಲಾಯಿಸುವುದು ಸಾಧ್ಯವಿಲ್ಲ. ಆದರೆ ಒಳ್ಳೆಯ ಆಹಾರ ಮತ್ತು ವ್ಯಾಯಾಮದಿಂದ ದೇಹವನ್ನು ಬಲಪಡಿಸಿ. ನಿಮಗೆ ಇಷ್ಟವಾಗುವ ಸಂಗಾತಿಯನ್ನು ಹುಡುಕಿ ಮದುವೆಯಾಗಿ. ಅನಗತ್ಯ ಔಷಧಿ ಮಾತ್ರೆಗಳನ್ನು ಬಳಸಬೇಡಿ.

30ರ ಅವಿವಾಹಿತ ಯುವಕ. 4 ವರ್ಷದ ಹಿಂದೆ ಹುಡುಗಿಯೊಬ್ಬಳನ್ನು ಪ್ರೀತಿಸಿದ್ದು, ಮನೆಯಲ್ಲಿ ಒಪ್ಪದ ಕಾರಣ ಮದುವೆಯಾಗಲಿಲ್ಲ. ಈಗ ಅವಳಿಗೆ ವಿವಾಹವಾಗಿದೆ. ಒಮ್ಮೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಅವಳನ್ನು ಆಲಂಗಿಸಿ ಮುತ್ತಿಟ್ಟೆ. ಅವಳು ಒತ್ತಾಯಿಸಿದರೂ ಭಯದಿಂದ ಸಂಭೋಗಕ್ಕೆ ನಿರಾಕರಿಸಿದೆ. ಈಗ ಅವಳ ನೆನಪಾಗಿ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಆಗ ಶೀಘ್ರಸ್ಖಲನವಾಗುತ್ತದೆ. ಅಂದು ನಾನು ತೆಗೆದುಕೊಂಡ ನಿರ್ಧಾರ ಮತ್ತು ಹಸ್ತಮೈಥುನದಿಂದ ವೈವಾಹಿಕ ಜೀವನಕ್ಕೆ ತೊಂದರೆಯಾಗುತ್ತದೆಯೇ?

ಹೆಸರು, ಊರು ತಿಳಿಸಿಲ್ಲ.

ಹಳೆಯ ಪ್ರೇಮಿಯನ್ನು ನೋಡಿ ಒಮ್ಮೆ ಭಾವಾವೇಶಕ್ಕೆ ಒಳಗಾದರೂ ಅವಳ ಒತ್ತಾಯಕ್ಕೆ ಮಣಿಯದೆ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದೀರಿ. ಹಸ್ತಮೈಥುನಕ್ಕೆ ಅವಳ ಬಗೆಗಿನ ಕಲ್ಪನೆಗಳನ್ನು ಬಳಸುವುದು ಸಹಜ. ಇಂತಹ ಕಲ್ಪನೆಗಳ ಆಕರ್ಷಣೆ ಮತ್ತು ಅವುಗಳ ಕುರಿತಾದ ಪಾಪಪ್ರಜ್ಞೆ ನಿಮ್ಮ ಶೀಘ್ರಸ್ಖಲಕ್ಕೆ ಕಾರಣವಾಗುತ್ತಿದೆ. ಹಳೆಯ ಪ್ರೇಮಿಯನ್ನು ಒಮ್ಮೆಲೆ ನಿಮ್ಮ ಕಲ್ಪನೆಗಳಿಂದ ತೆಗೆಯುವುದು ಸಾಧ್ಯವಾಗದಿದ್ದರೆ ನಿಧಾನವಾಗಿ ಅವಳ ಜಾಗದಲ್ಲಿ ನಿಮ್ಮ ಭಾವೀ ಸಂಗಾತಿಯನ್ನು ಊಹಿಸಿಕೊಳ್ಳುತ್ತಾ ಹೋಗಿ. ನಿಧಾನವಾಗಿ ಅವಳು ನಿಮ್ಮ ಮನಸ್ಸಿನ ಪರಿಧಿಯಿಂದ ದೂರವಾಗುತ್ತಳೆ.

ಏನಾದ್ರೂ ಕೇಳ್ಬೋದು

ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಉತ್ತರಿಸಲಿದ್ದಾರೆ. bhoomika@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.