ನವದೆಹಲಿ: ತಂದೆಯಾಗ ಬಯಸುವವರ ಆಹಾರ ಕ್ರಮವು ಹುಟ್ಟುವ ಮಕ್ಕಳಲ್ಲಿ ಭಿನ್ನ ರೀತಿಯ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾ ವಿಜ್ಞಾನಿಗಳ ಸಂಶೋಧನೆಯೊಂದು ಹೇಳಿದೆ.
ತಂದೆಯ ಆಹಾರ ಪದ್ಧತಿ ಉತ್ತಮವಾಗಿರದಿದ್ದಲ್ಲಿ ಹುಟ್ಟುವ ಮಗನಿಗೆ ಭವಿಷ್ಯದಲ್ಲಿ ಆತಂಕಗೊಳ್ಳುವ ಸಮಸ್ಯೆ ಎದುರಾಗಲಿದೆ. ಹಾಗೆಯೇ ಮಗಳು ಹುಟ್ಟಿದರೆ ಆಕೆಗೆ ಚಯಾಪಚಯ ಸಮಸ್ಯೆ ಎದುರಾಗಲಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.
ತಂದೆಯಾಗುವವರು ಸೇವಿಸುವ ಪ್ರೊಟೀನ್, ಕೊಬ್ಬು ಹಾಗೂ ಕಾರ್ಬೊಹೈಡ್ರೇಟ್‌ಗಳು ಹುಟ್ಟುವ ಮಕ್ಕಳ ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬುದರ ಕುರಿತು ವಿಜ್ಞಾನಿಗಳು ಸಂಶೋಧನೆ ನಡೆಸಿದ್ದರು. ಇಲಿಗಳ ಮೇಲೆ ನಡೆಸಿದ ಈ ಸಂಶೋಧನೆಯ ವರದಿಯನ್ನು ವಿಜ್ಞಾನಿಗಳ ತಂಡ ಪ್ರಕಟಿಸಿದೆ.
‘ಗಂಡು ಇಲಿಗೆ ಕಡಿಮೆ ಪ್ರೊಟೀನ್ ಹಾಗೂ ಹೆಚ್ಚಿನ ಕಾರ್ಬೊಹೈಡ್ರೇಟ್ ಒಳಗೊಂಡ 10 ಬಗೆಯ ಆಹಾರ ಕ್ರಮವನ್ನು ನೀಡಲಾಯಿತು. ಅದನ್ನು ಹೆಣ್ಣು ಇಲಿಯೊಂದಿಗೆ ಬಿಡಲಾಯಿತು. ನಂತರ ಅದು ಗಂಡು ಮರಿಯ ತಂದೆಯಾಯಿತು. ಆದರೆ ಅದಕ್ಕೆ ಆತಂಕದ ಸಮಸ್ಯೆ ಅಧಿಕವಾಗಿತ್ತು. ಮತ್ತೊಂದು ಗಂಡು ಇಲಿಗೆ ಹೆಚ್ಚಿನ ಕೊಬ್ಬುಯುಕ್ತ ಆಹಾರವನ್ನು ನೀಡಲಾಯಿತು. ನಂತರ ಅದು ಹೆಣ್ಣು ಮರಿಯ ತಂದೆಯಾಯಿತು. ಆ ಮರಿಗೆ ಚಯಾಪಚಯ ಸಮಸ್ಯೆ ಕಂಡುಬಂತು. ಇದರಿಂದಾಗಿ ಮಕ್ಕಳ ಆರೋಗ್ಯವು ತಂದೆಯಾದವರ ಉತ್ತಮ ಆಹಾರ ಸೇವನೆಯನ್ನು ಅವಲಂಬಿಸಿದೆ’ ಎಂದು ನೇಚರ್ ಜರ್ನಲ್‌ನಲ್ಲಿ ಲೇಖನ ಪ್ರಕಟಿಸಲಾಗಿದೆ.
‘ನಾವು ಸೇವಿಸುವ ಪ್ರೊಟೀನ್, ಫ್ಯಾಟ್ ಹಾಗೂ ಕಾರ್ಬೊಹೈಡ್ರೇಟ್‌ಗಳ ಸೇವನೆ ಹಾಗೂ ಸೇವಿಸುವ ಅದರ ಪ್ರಮಾಣವು, ಮಕ್ಕಳ ಆರೋಗ್ಯ ಹಾಗೂ ವರ್ತನೆ ಮೇಲೆ ಪರಿಣಾಮ ಬೀರಲಿದೆ. ಇದರ ಹಿಂದೆ ಮುಖ್ಯವಾದ ಜೈವಿಕ ಕ್ರಿಯೆ ಅಡಗಿರುತ್ತದೆ. ಸಂಶೋಧನೆಯಲ್ಲೂ ಹುಟ್ಟಿದ ಮರಿಗಳ ದೈಹಿಕ ಮತ್ತು ಮಾನಸಿಕ ವರ್ತನೆಯನ್ನು ಗಮನಿಸಲಾಯಿತು’ ಎಂದು ಹೇಳಲಾಗಿದೆ.
‘ಈ ಅಧ್ಯಯನವು ಅತಿ ಹೆಚ್ಚು ಅಥವಾ ಅತಿ ಕಡಿಮೆ ಆಹಾರ ಸೇವನೆ ಕುರಿತು ಹೇಳುತ್ತಿಲ್ಲ. ಬದಲಿಗೆ ಸೇವಿಸುವ ಆಹಾರದಲ್ಲಿ ಇರುವ ಪೋಶಕಾಂಶಗಳ ಪ್ರಮಾಣವು ಹುಟ್ಟುವ ಮಕ್ಕಳ ಆರೋಗ್ಯದ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತಾಗಿದೆ’ ಎಂದು ಇದರ ಸಹ ಲೇಖಕ ಡೆನ್ಮಾರ್ಕ್‌ನ ಕೋಪನ್‌ಹೆಗನ್ ವಿಶ್ವವಿದ್ಯಾಲಯದ ರೊಮೈನ್ ಬ್ಯಾರೀಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.