ADVERTISEMENT

ಮಹಿಳಾ ಆರೋಗ್ಯ | ಸ್ತನದಲ್ಲಿ ಗಡ್ಡೆ ನಿರುಪದ್ರವಿಯೇ?

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 5:05 IST
Last Updated 26 ಅಕ್ಟೋಬರ್ 2024, 5:05 IST
   

ಸ್ತನದಲ್ಲಿ ಸಣ್ಣ ಗಡ್ಡೆ ಕಾಣಿಸಿಕೊಂಡರೂ ಆತಂಕಗೊಳ್ಳುವುದು ಸಹಜ. ಆದರೆ, ಕೆಲವು ಗಡ್ಡೆಗಳು ಹಾನಿಕಾರಕವಲ್ಲ. ಆದರೆ ನಿಯಮಿತವಾಗಿ ತಪಾಸಣೆಗೆ ಒಳಗಾಗುವುದಂತೂ ಮುಖ್ಯವಾಗಿರುತ್ತದೆ. ಅಂಥ ಹಾನಿಕಾರಕವಲ್ಲದ ಗಡ್ಡೆಗಳಲ್ಲಿ ಫೈಬ್ರೊಡೆನೊಮಾಗಳು ಒಂದು. ಈ ಗಡ್ಡೆಗಳು ನಿರುಪದ್ರವಿಯಾಗಿದ್ದರೂ, ಅವುಗಳ ಇರುವಿಕೆಯಿಂದ ಪದೇ ಪದೇ ಇದು ಕ್ಯಾನ್ಸರ್‌ ಗಡ್ಡೆಯಾಗಿದ್ದಿರಬಹುದಾ? ಎಂಬ ಆತಂಕವಂತೂ ಸೃಷ್ಟಿಯಾಗುತ್ತದೆ.

ಹೇಗಿರುತ್ತವೆ?

ನಯವಾಗಿದ್ದು, ಮುಟ್ಟಿದ ಕೂಡಲೇ ಓಡಾಡಿದಂತೆ ಭಾಸವಾಗುವ ದುಂಡಗಿನ ಆಕಾರದ ಗಡ್ಡೆಗಳಾಗಿರುತ್ತವೆ. ಇವು ನೋವುರಹಿತವಾಗಿರುತ್ತವೆ. ಋತುಚಕ್ರದ ಅವಧಿಯಲ್ಲಿ ಹಾರ್ಮೋನ್‌ನಲ್ಲಿ ಉಂಟಾಗುವ ಏರುಪೇರಿನಿಂದ ಇವುಗಳ ಗಾತ್ರದಲ್ಲಿ ಸ್ವಲ್ಪಮಟ್ಟದ ಬದಲಾವಣೆ ಕಾಣಿಸಿಕೊಳ್ಳಬಹುದು.

ADVERTISEMENT

20ರಿಂದ 50 ವರ್ಷ ವಯಸ್ಸಿನ ಮಹಿಳೆಯಲ್ಲಿ ಇಂಥ ಗಡ್ಡೆಗಳು ಕಾಣಿಸಿಕೊಳ್ಳಬಹುದು. ಶೇ 50ರಷ್ಟು ಮಂದಿಯಲ್ಲಿ ಇಂಥ ಗಡ್ಡೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಫೈಬ್ರೊಸಿಸ್ಟಿಕ್‌ ಗಡ್ಡೆಗಳು ಕಂಕುಳಿಂದ ಕಾಣಿಸಿಕೊಳ್ಳುತ್ತದೆ. ಬಹಳ ಮೃದುವಾಗಿದ್ದು, ಅಲ್ಲಲ್ಲಿ ಚದುರಿದಂತೆ ಇರುತ್ತದೆ. ಅಪರೂಪಕ್ಕೆ ನೋವಿನಿಂದ ಕೂಡಿರುತ್ತದೆ. ಸ್ವಯಂ ಪರೀಕ್ಷೆ ಮಾಡಿಕೊಳ್ಳುವಾಗ ಹೆಚ್ಚು ಅನುಭವಕ್ಕೆ ಬರುತ್ತದೆ. ನಿರುಪದ್ರವಿಯಾಗಿದ್ದರೂ ಈ ಗಡ್ಡೆಗಳ ಗಾತ್ರ, ಆಕಾರ ಹಾಗೂ ವಿನ್ಯಾಸದಲ್ಲಿ ಬದಲಾವಣೆಗಳನ್ನು ಆಗಾಗ್ಗೆ ಗಮನಿಸುತ್ತಿರಬೇಕು.

ಕಾರಣವೇನು?

ಈಸ್ಟ್ರೋಜೆನ್‌ ಹಾರ್ಮೋನ್‌ಗಳಲ್ಲಿ ಏರುಪೇರಿನಿಂದಾಗೀಯೂ ಫೈಬ್ರೊಡೆನೊಮಾಗಳು ರೂಪುಗೊಳ್ಳುತ್ತವೆ. ಹೀಗಿದ್ದೂ ಇವುಗಳ ಉಂಟಾಗಲು ನಿಖರವಾದ ಕಾರಣ ತಿಳಿದುಬಂದಿಲ್ಲ. ಕೆಲವು ಸಂಶೋಧನೆಗಳ ಪ್ರಕಾರ ಮದ್ಯ ಸೇವನೆಯಿಂದಾಗಿಯೂ ಫೈಬ್ರೊಸಿಸ್ಟಿಕ್‌ನಲ್ಲಿ ಬದಲಾವಣೆಗಳು ಉಂಟಾಗಿವೆ. ಕೆಫಿನ್‌ ಬಳಕೆಯು ರೋಗಲಕ್ಷಣಗಳನ್ನು ಉಲ್ಬಣಿಸುವ ಸಾಧ್ಯತೆಯಿದೆ.

ಏನು ಮಾಡಬಹುದು?

ಇಂಥ ಗಡ್ಡೆಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ನೋಡಿ. ಮೆಮೆಗ್ರಾಮ್‌ ಮತ್ತು ಅಲ್ಟ್ರಾಸೌಂಡ್‌ಗಳ ಮೂಲಕ ಇವು ಎಂಥ ಗಡ್ಡೆಗಳು ಎಂಬುದನ್ನು ಪತ್ತೆ ಹಚ್ಚಬಹುದು.

ಆಗಾಗ್ಗೆ ಗಡ್ಡೆಯ ಆಕಾರ, ಗಾತ್ರದಲ್ಲಿ ಬದಲಾವಣೆಯಾಗುವುದು ಗಮನಿಸಿ.

ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಕಾಫಿ ಅಥವಾ ಕೆಫಿನ್‌ ಅಂಶವಿರುವ ಇತರೆ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡಿ. ಅದರ ಬದಲು ಹಣ್ಣು, ತರಕಾರಿ, ಪ್ರೊಟೀನ್‌ ಭರಿತ ಆಹಾರವನ್ನು ಸೇವಿಸಿ.

ನಿಯಮಿತವಾಗಿ ವ್ಯಾಯಾಮ ಮಾಡಿ. ಇದರಿಂದ ನೋವು ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

ತೀವ್ರ ನೋವಿದ್ದರೆ ನೋವು ನಿವಾರಕಗಳು ಇರುತ್ತವೆ.

ಈ ಗಡ್ಡೆ ಬೆಳದರೆ ಅಥವಾ ನೋವಿನ ಲಕ್ಷಣಗಳನ್ನು ಉಂಟು ಮಾಡಿದರೆ ಲಂಪೆಕ್ಟಮಿ ಅಥವಾ ಹೊರರೋಗಿಯಾಗಿದ್ದುಕೊಂಡೇ ಸಣ್ಣ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಬಹುದು.

ಹೊಸ ಗಡ್ಡೆ ಕಾಣಿಸಿಕೊಂಡರೆ, ಅಸ್ವಸ್ಥತೆ ಉಂಟು ಮಾಡಿದರೆ, ಗಾತ್ರದಲ್ಲಿ ಬದಲಾವಣೆಯಾದರೆ , ಸ್ತನ ಕ್ಯಾನ್ಸರ್‌ನಂಥ ಅಪಾಯಕಾರಿ ಸೂಚನೆಗಳು ಕಾಣಿಸಿಕೊಂಡರೆ ತಡ ಮಾಡದೇ ವೈದ್ಯರನ್ನು ನೋಡಿ. ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಕಾಯಿಲೆ ಹರಡದಂತೆ ತಡೆಗಟ್ಟಲು ಸಾಧ್ಯವಿದೆ.

ಲೇಖಕರು: ಡಾ ರುಬೀನಾ ಜೈನಾಬ್‌, ಮಿಲನ್‌ ಫರ್ಟಿಲಿಟಿ ಸೆಂಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.