ಒ ತ್ತಡ, ಇತ್ತೀಚೆಗೆ ನಮ್ಮ ಜೀವನಶೈಲಿಯ ಭಾಗವಾಗಿದೆ.ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ವಿವಿಧ ರೀತಿಯ ಒತ್ತಡಗಳನ್ನು ಎದುರಿಸುತ್ತಿರುತ್ತೇವೆ. ಅದರಲ್ಲೂ ಮಾನಸಿಕ ಒತ್ತಡದಿಂದ ಬಳಲುವವರ ಸಂಖ್ಯೆ ತುಸು ಹೆಚ್ಚೇ ಇದೆ. ಈ ಮಾನಸಿಕ ಒತ್ತಡಗಳು ಮನಸ್ಸಿನ ಸ್ವಾಸ್ಥ್ಯ ಕೆಡಿಸುತ್ತವೆ.
ಆದರೆ ‘ಮೆಂಟಲ್ ಹೈಜಿನ್’ ಅಥವಾ ಮನಸ್ಸು ಆರೋಗ್ಯವಾಗಿದ್ದರೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಪ್ರತಿದಿನ ಮನಸ್ಸನ್ನು ಸ್ವಾಸ್ಥ್ಯವಾಗಿಟ್ಟುಕೊಳ್ಳಲು ದೀರ್ಘ ಸಮಯಬೇಕಿಲ್ಲ. ಬೆಳಗಿನ 15 ನಿಮಿಷ ಸಮಯವನ್ನು ಮೀಸಲಿಟ್ಟರೆ ಸಾಕು. ಇಡೀ ದಿನವನ್ನು ಖುಷಿಯಿಂದ ಕಳೆಯಬಹುದು. ಹಾಗಾದರೆ 15 ನಿಮಿಷಗಳ ಸಮಯದಿಂದ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ?
ಹೊಸ ಚಟುವಟಿಕೆಗಳನ್ನು ಕಲಿಯಿರಿ
ಮಾನಸಿಕ ಆರೋಗ್ಯ ಸ್ವಾಸ್ಥವಾಗಿರಬೇಕೆಂದರೆ ಮನಸ್ಸು ಹಾಗೂ ದೇಹವನ್ನು ಬೇರೆ ಬೇರೆ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು.
ಉದಾಹರಣೆಗೆ; ಮುಂಜಾನೆ ಎದ್ದ ಕೂಡಲೇ, ಲಘುವಾದ ವಾಕಿಂಗ್ ಮುಗಿಸಿ, ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ ಮಾಡಿ. ನಂತರ ಶಾಂತ ಮನಸ್ಸಿನಿಂದ ನಿಧಾನಕ್ಕೆ ಉಸಿರು ತೆಗೆದುಕೊಂಡು ಕಾಫಿ ಹೀರಿ ಅಥವಾ ಹಿತವಾದ ಸಂಗೀತ ಕೇಳುತ್ತಾ ಕಾಫಿ ಕುಡಿಯಲು ಅಭ್ಯಾಸ ಮಾಡಿ.
ಮನೆಯ ಹೂದೋಟದಲ್ಲಿ ಕುಳಿತು ತಂಗಾಳಿಯನ್ನು ಆಸ್ವಾದಿಸಿ. ಇದರಿಂದ ಮನಸ್ಸಿಗೆ ಖುಷಿ ಸಿಗುತ್ತದೆ. ಇದೇ ರೀತಿ ನಿಮ್ಮ ಮನಸ್ಸಿಗೆ ಖುಷಿ ನೀಡುವ, ಒತ್ತಡ ನಿವಾರಿಸುವ, ಮನಸ್ಸನ್ನು ಶುದ್ಧ ಮಾಡುವ ಹೊಸ ಚಟುವಟಿಕೆಗಳನ್ನು ನಿತ್ಯ ಕಲಿಯುತ್ತಲೇ ಇರಿ.
ನಿಮ್ಮ ಅನುಭವವನ್ನು ಬರೆದಿಡಿ
ಈ ರೀತಿ 15 ನಿಮಿಷಗಳ ಹೊಸ ಚಟುವಟಿಕೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡ ಮೇಲೆ ನಿಮಗಾದ ಅನುಭವವನ್ನು ಪ್ರತಿನಿತ್ಯ ಒಂದು ಪುಸ್ತಕದಲ್ಲಿ ದಾಖಲಿಸುತ್ತಿರಿ.
ನೀವು ಅಳವಡಿಸಿಕೊಂಡಿದ್ದ ಯಾವ ಹೊಸ ಚಟುವಟಿಕೆ ನಿಮ್ಮ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರಿತು ಎಂಬುದನ್ನು ಬರೆದಿಡಿ. ಈ ಚಟುವಟಿಕೆಯ ನಂತರ ನಿಮ್ಮ ಮನಸ್ಸು ಶಾಂತವಾಗಿತ್ತೆ? ದಿನವಿಡೀ ಚೈತನ್ಯದಿಂದ ಕೂಡಿತ್ತೆ? ಒತ್ತಡವನ್ನು ನಿಭಾಯಿಸಲು ನಿಮ್ಮಿಂದ ಸಾಧ್ಯವಾಯಿತೇ? ನಿಮ್ಮಲ್ಲಿ ಯಾವೆಲ್ಲಾ ರೀತಿಯ ಬದಲಾವಣೆಗಳಾಗಿದ್ದವು ಎಂಬ ಸಣ್ಣ ಸಣ್ಣ ಅಂಶವನ್ನೂ ಬರೆದಿಡಿ.
ಇವುಗಳಲ್ಲಿ ನಿಮ್ಮ ಮನಸ್ಸಿಗೆ ಹೆಚ್ಚು ಖುಷಿ ನೀಡಿದ ಚಟುವಟಿಕೆಯ ಮೇಲೆ ಹೆಚ್ಚು ಗಮನ ಹರಿಸಿ. ಇದರಿಂದ ತಕ್ಷಣಕ್ಕೆ ನಿಮ್ಮಲ್ಲಾದ ಬದಲಾವಣೆಯ ಬಗ್ಗೆ ನಿಮಗೆ ಅರಿವಿಗೆ ಬಾರದಿದ್ದರೂ ನಿಧಾನಕ್ಕೆ ನಿಮ್ಮ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಅರಿವು ಮೂಡುತ್ತದೆ.
ಧ್ಯಾನವೂ ಇರಲಿ
ಕೆಲವೊಮ್ಮೆ ನೀವು ಕಲಿತ ಹೊಸ ಚುಟವಟಿಕೆ ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡದೇ ಇರಬಹುದು. ಯಾಕೆಂದರೆ ಎಲ್ಲವೂ ಎಲ್ಲಾ ಸಮಯದಲ್ಲೂ ಕೆಲಸ ಮಾಡುವುದಿಲ್ಲ. ಅಂತ ಸಮಯದಲ್ಲಿ, ನೀವು ಮಾಡುತ್ತಿರುವ ಕೆಲಸದಿಂದ ಐದಾರು ನಿಮಿಷ ಬಿಡುವ ಪಡೆದು, ಅದೇ ಬಿಡುವಿನ ಐದು ನಿಮಿಷಗಳ ಕಾಲ ಕುಳಿತಲ್ಲೇ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿ.
ಕೆಲವೊಮ್ಮೆ ಪ್ರತಿನಿತ್ಯ 15 ನಿಮಿಷಗಳ ಕಾಲ ಮಾಡುವ ಚಟುವಟಿಕೆ ಮನಸ್ಸಿಗೆ ಹಿತ ನೀಡದಿರಬಹುದು. ಅಂತಹ ಸಮಯದಲ್ಲಿ ವಾರಕ್ಕೊಮ್ಮೆ ದೂರದವರೆಗೆ ನಡೆದಾಡಿ(ಲಾಂಗ್‌ವಾಕ್). ಯೋಗ ಮಾಡಿ. ಸೈಕ್ಲಿಂಗ್ ಮಾಡಿ. ಒಂದು ಲಾಂಗ್ ಬೈಕ್ ರೈಡಿಂಗ್ ಮಾಡಿಬನ್ನಿ. ಈ ಚಟುವಟಿಕೆಗಳು ಖಂಡಿತಾ ಮನಸ್ಸಿಗೆ ಖುಷಿ ನೀಡುತ್ತವೆ.
ಕನಿಷ್ಠ ವಾರದಲ್ಲಿ ಒಮ್ಮೆ ಡಿಜಿಟಲ್ ಪರಿಕರಗಳಿಂದ ದೂರವಿರುವುದನ್ನು ಅಭ್ಯಾಸ ಮಾಡಿ. ಆಫೀಸ್ ಇ–ಮೇಲ್, ಗ್ರೂಪ್ ಮೆಸೇಜ್, ಟಿವಿ ವೀಕ್ಷಣೆ, ಮೊಬೈಲ್ ಬಳಕೆ.. ಇಂಥವುಗಳಿಂದ ದೂರವಿರುವುದನ್ನು ಅಭ್ಯಾಸ ಮಾಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.