ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಬದುಕಿನ ಚಿತ್ರಣವೇ ಸಂಪೂರ್ಣ ಬದಲಾಗಿಬಿಟ್ಟಿದೆ. ಸ್ವಚ್ಛತೆ, ಆಗಾಗ ಸ್ಯಾನಿಟೈಜರ್ ಅಥವಾ ಸೋಪ್ ಬಳಸಿ ಕೈ ತೊಳೆದುಕೊಳ್ಳುವುದು, ಮುಖಗವಸು ಧರಿಸಿ ಅವಶ್ಯಕತೆ ಇದ್ದಾಗ ಮಾತ್ರ ಹೊರಗೆ ಓಡಾಡುವುದು, ಅಂತರ ಕಾಪಾಡಿಕೊಳ್ಳುವುದು ಇವೆಲ್ಲ ಜೀವನಶೈಲಿಯಲ್ಲಿ ಹಾಸುಹೊಕ್ಕಾಗಿವೆ.
ಕಳೆದ ಎರಡು ತಿಂಗಳಿಂದ ಬಹುತೇಕ ಉದ್ಯೋಗಿಗಳಿಗೆ ಮನೆಯಿಂದಲೇ ಕಚೇರಿ ಕೆಲಸ ಮಾಡುವುದು ಅನಿವಾರ್ಯವಾಗಿತ್ತು. ಆದರೆ ಈಗ ಲಾಕ್‌ಡೌನ್ ಸಡಿಲಗೊಳಿಸಿದ ನಂತರ ನಗರಗಳಲ್ಲಿ ಉದ್ಯೋಗಿಗಳು ನಿಧಾನವಾಗಿ ಕಚೇರಿಯತ್ತ ಮುಖ ಮಾಡತೊಡಗಿದ್ದಾರೆ. ಆದರೆ ಮನಸ್ಸಿನಲ್ಲಿ ಭಯವಂತೂ ಇದ್ದೇ ಇದೆ. ಕಚೇರಿಯಲ್ಲಿ ಎಲ್ಲಾ ಕಡೆ ಸ್ಯಾನಿಟೈಜ್ ಮಾಡುವುದು, ಉದ್ಯೋಗಿಗಳ ಉಷ್ಣಾಂಶ ನೋಡುವುದು.. ಇವೆಲ್ಲ ಕಚೇರಿಯು ಮೇಲ್ವಿಚಾರಣೆ ಮಾಡುತ್ತದೆ, ನಿಜ. ಆದರೆ ಕಚೇರಿಯಲ್ಲಿ ಬಾಗಿಲಿನ ಹಿಡಿಕೆಯಿಂದ ಹಿಡಿದು ಟೇಬಲ್, ಕಂಪ್ಯೂಟರ್‌ನ ಕೀ ಬೋರ್ಡ್ ಮತ್ತು ಮೌಸ್, ಲ್ಯಾಂಡ್‌ಫೋನ್, ಶೌಚಾಲಯದ ಬಾಗಿಲು, ನಲ್ಲಿ, ಅಕ್ವಾಗಾರ್ಡ್‌ನ ತಿರುಪಿನವರೆಗೆ ಬಹುತೇಕ ಕಡೆ ಹಲವು ಬಾರಿ ಕೈಗಳಿಂದ ಸ್ಪರ್ಶಿಸಬೇಕಾಗುತ್ತದೆ. ಸಹೋದ್ಯೋಗಿಗಳ ಜೊತೆ ಮಾತನಾಡಬೇಕಾಗುತ್ತದೆ, ಮೀಟಿಂಗ್‌ನಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಇವನ್ನೆಲ್ಲ ನಿಭಾಯಿಸುವುದು ಹೇಗೆ? ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಹೇಗೆ ಎಂಬ ಆತಂಕಗಳು ಇರುತ್ತವೆ. ಇಂತಹ ವೈಯಕ್ತಿಕ ಜಾಗರೂಕತೆಗೆ ಇಲ್ಲಿದೆ ಕೈಪಿಡಿ.
* ಬಟ್ಟೆಯ ಮುಖಗವಸು ಧರಿಸಿ ಓಡಾಡುವುದನ್ನು ಮರೆಯದೇ ಪಾಲಿಸಿ. ಕಚೇರಿಯಲ್ಲಿ ಕೂಡ ಇದನ್ನು ಯಾವುದೇ ಕಾರಣಕ್ಕೂ ತೆಗೆಯಬೇಡಿ. ಮನೆಗೆ ಮರಳಿದ ಮೇಲೆ ಈ ಮುಖಗವಸನ್ನು ಬಿಸಿ ನೀರು ಹಾಗೂ ಸೋಪ್ ಪೌಡರ್ ಬಳಸಿ ಚೆನ್ನಾಗಿ ತೊಳೆಯುವುದನ್ನು ರೂಢಿಸಿಕೊಳ್ಳಿ.
* ಕಚೇರಿಯಲ್ಲಿ ಓಡಾಡುವಾಗ ಬಾಗಿಲಿನ ಹಿಡಿಯನ್ನು ಪದೇ ಪದೇ ಬಳಸುವ ಸಂಭವವಿರುತ್ತದೆ. ಬಾಗಿಲಿನ ಹಿಡಿಯನ್ನು ಕೂಡ ಸ್ಯಾನಿಟೈಜರ್ ಅಥವಾ ಸೋಂಕು ನಿವಾರಕ ದ್ರಾವಣ ಬಳಸಿ ಸ್ವಚ್ಛಗೊಳಿಸಬೇಕಾಗುತ್ತದೆ. ಇದರ ಬದಲಾಗಿ ಬಾಗಿಲನ್ನು ತೆರೆದೇ ಇಡುವ ವ್ಯವಸ್ಥೆ ಒಳಿತು.
* ಡೆಸ್ಕ್‌ಟಾಪ್ ಕಂಪ್ಯೂಟರ್ ಅನ್ನು ನೀವೊಬ್ಬರೇ ಬಳಸುವುದಾದರೆ ಚಿಂತೆ ಬೇಡ. ಆದರೆ ಶಿಫ್ಟ್ ಇದ್ದರೆ ನಿಮಗಿಂತ ಮುನ್ನ ಅದನ್ನು ಸಹೋದ್ಯೋಗಿ ಬಳಸಿದರೆ ಕೀಬೋರ್ಡ್, ಮೌಸ್ ಸಮೇತ ಸೋಂಕು ನಿವಾರಕ ದ್ರಾವಣ ಬಳಸಿ ಸ್ವಚ್ಛಗೊಳಿಸಬೇಕಾಗುತ್ತದೆ. ಇದೇ ರೀತಿ ಪ್ರಿಂಟರ್, ಫೋನ್ ಎಲ್ಲವನ್ನೂ ಸ್ಯಾನಿಟೈಜ್ ಮಾಡಬೇಕು.
* ಕಚೇರಿಯಲ್ಲಿ ಅಕ್ವಾಗಾರ್ಡ್ ತಿರುಪು ಮುಟ್ಟಿದರೂ ಕೂಡ ನಿಮ್ಮ ಕೈಗಳನ್ನು ಆಲ್ಕೋಹಾಲ್ ಇರುವ ಉತ್ತಮ ಸ್ಯಾನಿಟೈಜರ್ ಬಳಸಿ ಸ್ವಚ್ಛಗೊಳಿಸಿಕೊಳ್ಳಿ.
* ಕಚೇರಿಯಲ್ಲಿ ಎಲ್ಲರೂ ಬಳಸುವ ಸ್ಯಾನಿಟೈಜರ್‌ಗಿಂತ ನಿಮ್ಮದೇ ಆದ ಸ್ಯಾನಿಟೈಜರ್ ಬಳಸುವುದು ಉತ್ತಮ. ಏಕೆಂದರೆ ಸ್ಯಾನಿಟೈಜರ್ ಬಾಟಲ್ ಮೇಲೆ ಬೆರಳಿನಿಂದ ಅಥವಾ ಅಂಗೈನಿಂದ ಒತ್ತಬೇಕಾಗುತ್ತದೆ.
* ಶೌಚಾಲಯ ಬಳಸುವಾಗಲೂ ಅಷ್ಟೆ. ಬಾಗಿಲಿನ ಹಿಡಿ, ನಲ್ಲಿಯನ್ನು ಮುಟ್ಟಿದ ನಂತರ ಸೋಪ್ ದ್ರಾವಕ ಬಳಸಿ ಕೈ ಸ್ವಚ್ಛಗೊಳಿಸಿಕೊಳ್ಳಿ. ಟಿಶ್ಯೂ ಪೇಪರ್ ಬಳಸಿ ಕೈ ಒರೆಸಿಕೊಂಡು ಡ್ರೈಯರ್ ಇದ್ದರೆ ಒಣಗಿಸಿಕೊಳ್ಳಿ. ಆದಷ್ಟು ಭಾರತೀಯ ಶೈಲಿಯ ಶೌಚಾಲಯ ಬಳಸುವುದು ಒಳಿತು. ಅದಿಲ್ಲದಿದ್ದರೆ ಕಮೋಡ್ ಮೇಲೆ ಕೂರುವಾಗ ಟಿಶ್ಯೂ ಪೇಪರ್ ಹರಡಿಕೊಳ್ಳಿ. ಆಗಾಗ ಅದನ್ನು ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಛಗೊಳಿಸಿರುವುದನ್ನು ಖಾತ್ರಿಪಡಿಸಿಕೊಳ್ಳಿ.
* ಸಹೋದ್ಯೋಗಿಗಳು, ಮುಖ್ಯಸ್ಥರ ಜೊತೆ ಮಾತನಾಡುವಾಗ ಆರಡಿ ಅಂತರವಿರುವಂತೆ ಖಾತ್ರಿಪಡಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಮುಖಗವಸು ತೆಗೆಯಬೇಡಿ. ಟೇಬಲ್ ಮುಂದೆ ಕೂರುವಾಗಲೂ ನಿಮ್ಮ ಸಹೋದ್ಯೋಗಿಯಿಂದ ಆರು ಅಡಿ ದೂರ ಇರುವಂತೆ ನೋಡಿಕೊಳ್ಳಿ.
* ಕಚೇರಿಯ ಕ್ಯಾಂಟೀನ್ ಬಳಸುವುದರ ಬದಲು ಮನೆಯಿಂದಲೇ ಊಟದ ಡಬ್ಬಿ ತೆಗೆದುಕೊಂಡು ಹೋಗಿ. ಇದರಿಂದ ಅಲ್ಲಿಯ ಟೇಬಲ್, ಕುರ್ಚಿ ಮುಟ್ಟುವುದು, ಅಂತರ ಕಾಯ್ದುಕೊಳ್ಳುವ ತಾಪತ್ರಯದಿಂದ ಪಾರಾಗಬಹುದು. ಹಾಗೆಯೇ ಅನಗತ್ಯ ಮಾತನಾಡುವುದೂ ತಪ್ಪುತ್ತದೆ. ಮಾತನಾಡುವಾಗ ಬಾಯಿಂದ ಎಂಜಲಿನ ಹನಿ ಸಿಡಿಯುವುದರಿಂದ ತಪ್ಪಿಸಿಕೊಳ್ಳುವುದು ಇದರ ಹಿಂದಿನ ಉದ್ದೇಶ. ಊಟ ಮಾಡುವ ಮುನ್ನ ಕೈಗಳನ್ನು ಸೋಪ್ ಬಳಸಿ 20 ಸೆಕೆಂಡ್‌ಗಳ ಕಾಲ ಉಜ್ಜಿ ತೊಳೆದುಕೊಳ್ಳಿ.
* ಮನೆಗೆ ಹಿಂದಿರುಗಿದ ನಂತರ ಧರಿಸಿದ ಉಡುಪನ್ನು ತೊಳೆದು, ನೀವೂ ಸ್ನಾನ ಮಾಡುವುದು ಒಳ್ಳೆಯದು. ಧರಿಸಿದ್ದ ಶೂಗಳನ್ನು ಕೈಗಳಿಂದ ಮುಟ್ಟದೆ ಮನೆಯ ಹೊರ ಆವರಣದಲ್ಲಿ ಇರಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.