ನವದೆಹಲಿ: ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ 39 ವರ್ಷದ ರೋಗಿಯೊಬ್ಬರಿಗೆ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ರೊಬೊ ಬಳಸಿ ಯಶಸ್ವಿಯಾಗಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ವೈದ್ಯರು ನಡೆಸಿದ್ದಾರೆ.
ದಾನಿಗಳ ನಿರೀಕ್ಷೆಯಲ್ಲಿದ್ದ ಉತ್ತರ ಪ್ರದೇಶದ ಫರೂಕಾಬಾದ್ ಗ್ರಾಮದ ವ್ಯಕ್ತಿಗೆ ಅವರ ಪತ್ನಿ ಮೂತ್ರಪಿಂಡ ದಾನ ಮಾಡಿದ್ದಾರೆ. ಡಯಾಲಿಸಿಸ್‌ನಲ್ಲಿದ್ದ ಈ ವ್ಯಕ್ತಿಗೆ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ಡಾ. ಅನೂಪ್ ಕುಮಾರ್ ನೇತೃತ್ವ ಸಫ್ದರ್‌ಜಂಗ್ ಆಸ್ಪತ್ರೆ ಮತ್ತು ವಿಎಂಎಂಸಿ ವೈದ್ಯರ ತಂಡ ನಡೆಸಿದೆ. ಈ ತಂಡದಲ್ಲಿ ಮೂತ್ರಕೋಶ, ರೊಬೊಟಿಕ್ಸ್ ಹಾಗೂ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸಕ ತಜ್ಞರು ಇದ್ದರು.
ದೇಶದಲ್ಲಿ ಕೇಂದ್ರ ಸರ್ಕಾರದ ಆಡಳಿತಕ್ಕೆ ಒಳಪಡುವ ಸರ್ಕಾರಿ ಆಸ್ಪತ್ರೆಯಲ್ಲಿ ರೊಬೊ ಬಳಸಿ ನಡೆಸಿದ 2ನೇ ಶಸ್ತ್ರಚಿಕಿತ್ಸೆ ಇದು ಎಂದು ಅಲ್ಲಿನ ವೈದ್ಯರು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
‘ಮೂತ್ರಪಿಂಡ ಚಿಕಿತ್ಸಾ ವಿಭಾಗದ ಡಾ. ಹಿಮಾಂಶು ವರ್ಮಾ, ಅರಿವಳಿಕೆ ತಜ್ಞ ಡಾ. ಮಧು ದಯಾಳ್, ವಿಎಂಎಂಸಿ ಪ್ರಾಧ್ಯಾಪಕ ಡಾ. ಬಿ.ಎಲ್.ಶೆರ್ವಾಲ್ ಅವರು ಇದರಲ್ಲಿ ಪಾಲ್ಗೊಂಡಿದ್ದರು’ ಎಂದು ಡಾ. ಅನೂಪ್ ತಿಳಿಸಿದ್ದಾರೆ.
‘ರೋಗಿಯು ಕಳೆದ ಕೆಲ ವರ್ಷಗಳಿಂದ ದಾನಿಗಳ ನಿರೀಕ್ಷೆಯಲ್ಲಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಷ್ಟು ಆರ್ಥಿಕ ಬೆಂಬಲ ಅವರಿಗೆ ಇರಲಿಲ್ಲ. ರೋಗಿಯ ಪತ್ನಿಯೇ ತಮ್ಮ ಒಂದು ಮೂತ್ರಪಿಂಡ ದಾನ ಮಾಡಲು ಮುಂದಾದರು. ಶಸ್ತ್ರಚಿಕಿತ್ಸೆ ನಂತರ ಇಬ್ಬರೂ ಆರೋಗ್ಯವಾಗಿದ್ದಾರೆ. ಸಫ್ದರ್‌ಜಂಗ್ ಆಸ್ಪತ್ರೆಯ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲಾಗಿದೆ’ ಎಂದಿದ್ದಾರೆ.
‘ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯಲ್ಲಿ ರೊಬೊ ಬಳಕೆ ತಾಂತ್ರಿಕವಾಗಿ ಅತ್ಯಂತ ಕ್ಲಿಷ್ಟಕರ ಮತ್ತು ಸವಾಲಿನ ಕೆಲಸ. ಇದಕ್ಕೆ ತಜ್ಞ ವೈದ್ಯರ ಅಗತ್ಯವಿದೆ. ವೈದ್ಯರು ಕನ್ಸೋಲ್‌ನಲ್ಲಿ ಕೂರುತ್ತಾರೆ. ಅವರ ಕೈಗಳು ಕೆಲಸ ಮಾಡಿದಂತೆ ರೊಬೊ ಕೈಗಳೂ ಕೆಲಸ ಮಾಡಲಿವೆ. ಇದಕ್ಕೆ ಫೈಬರ್ ಕೇಬಲ್‌ಗಳನ್ನು ಅಳವಡಿಸಲಾಗಿರುತ್ತದೆ. ಮೂತ್ರಪಿಂಡದ ಅಪಧಮನಿ, ಮೂತ್ರಪಿಂಡದ ಅಭಿಧಮನಿ ಮತ್ತು ಮೂತ್ರನಾಳವನ್ನು ಜೋಡಿಸುವ ಕೆಲಸವನ್ನು ರೊಬೊ ಮಾಡುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆಗೆ ಸುಮಾರು ₹7 ಲಕ್ಷ ಖರ್ಚಾಗಲಿದೆ’ ಎಂದು ಡಾ. ಅನೂಪ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.