ADVERTISEMENT

ಇದು ‘ಯೋಧ’ರ ಸಮರ ಶಾಲೆ...

ಚಂದ್ರಹಾಸ ಕೋಟೆಕಾರ್
Published 14 ಜುಲೈ 2019, 19:30 IST
Last Updated 14 ಜುಲೈ 2019, 19:30 IST
ರಾಮನಗರ ಹೆಣ್ಣು ಮಕ್ಕಳ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ತರಬೇತಿ ಕೊಡುತ್ತಿರುವ ರಾಕೇಶ್‌ ಯಾದವ್‌
ರಾಮನಗರ ಹೆಣ್ಣು ಮಕ್ಕಳ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ತರಬೇತಿ ಕೊಡುತ್ತಿರುವ ರಾಕೇಶ್‌ ಯಾದವ್‌   

ದೇಹ–ಮನಸ್ಸಿನ ಆರೋಗ್ಯದ ಜೊತೆ ಆತ್ಮರಕ್ಷಣೆಯ ಕಲೆ ಕಲಿಸಲು ಮುಂದಾಗಿದೆ, ಯೋಧ ಸ್ಕೂಲ್‌ ಆಫ್‌ ಮಾರ್ಷಲ್‌ ಆರ್ಟ್ಸ್‌. ಕರಾಟೆ, ಕುಸ್ತಿ, ಜಿಮ್ನಾಟಿಕ್ಸ್‌, ಮುಯ್‌ ತಾಯ್‌, ಕಿಕ್‌ ಬಾಕ್ಸಿಂಗ್‌ ಮೊದಲಾದ ಸ್ವರಕ್ಷಣೆಯ ಸಮರ ಕಲೆಗಳನ್ನು ಇಲ್ಲಿ ಕಲಿಸಲಾಗುತ್ತದೆ. ಪ್ರಸ್ತುತ ಹೆಣ್ಣುಮಕ್ಕಳಿಗೆ ಇಂಥ ಸಾಹಸಕಲೆಗಳ ತರಬೇತಿಯ ಅಗತ್ಯವಿದೆ. ಅನ್ಯರನ್ನು ಆಪತ್ತಿನಿಂದ ರಕ್ಷಿಸುವುದರ ಜತೆಗೆ ದೇಹವನ್ನು ಸದೃಢರನ್ನಾಗಿ ಅವರನ್ನು ತಯಾರು ಮಾಡಲು ಆದ್ಯತೆ ನೀಡಿದೆ ಈ ಸಂಸ್ಥೆ.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿ 14 ವರ್ಷಗಳ ಹಿಂದೆ ಆರಂಭಗೊಂಡ ‘ಯೋಧ’ ಸಂಸ್ಥೆಯಲ್ಲಿ ಇದುವರೆಗೆ ಸಾವಿರಾರು ಮಂದಿ ತರಬೇತಿ ಪಡೆದಿದ್ದಾರೆ. ಅವರ ಪೈಕಿ ಭರಣಿ ಸಿ.ಗೌಡ, ರೂಪಾ, ಲೀಲಾವತಿ ಮೊದಲಾದವರ ಜೊತೆ ಅನೇಕ ಮಂದಿ ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಇಂಥ ಸಂಸ್ಥೆಯ ಹಿಂದಿರುವ ಶಕ್ತಿ ರಾಕೇಶ್‌ ಯಾದವ್‌. ದೈಹಿಕ ಕ್ಷಮತೆ, ಆರೋಗ್ಯಕರ ಬದುಕು ಕಟ್ಟಿಕೊಡುವ ಕನಸು ಹೊಂದಿದ ಯಾದವ್‌ ಕೈತುಂಬಾ ಸಂಬಳ ಕೊಡುತ್ತಿದ್ದ ಐಟಿ ಕಂಪನಿಯ ವೃತ್ತಿ ತೊರೆದು ಈ ಸಂಸ್ಥೆ ಕಟ್ಟಿದರು. ತರಬೇತಿ ಕೊಡಲು ಆರಂಭಿಸಿದರು. ಅಲ್ಲಿಗೇ ಮುಗಿಯಲಿಲ್ಲ. ಬೆಂಗಳೂರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಹೋಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉಚಿತವಾಗಿ ಸಮರಕಲೆಯ ತರಬೇತಿ ನೀಡುತ್ತಿದ್ದಾರೆ.

ಯಾರು ರಾಕೇಶ್‌ ಯಾದವ್‌?

ADVERTISEMENT

18ನೆ ವಯಸ್ಸಿನಿಂದ ಸಮರ ಕಲೆ ಕಲಿತು ತರಬೇತಿ ನೀಡುತ್ತಿದ್ದಾರೆ ಯಾದವ್‌. ಮೊಯ್‌ ತಾಯ್‌, ಕಿಕ್‌ ಬಾಕ್ಸಿಂಗ್‌, ಜೂಯಿ ಜಿಸು, ಜಿಮ್ನಾಟಿಕ್ಸ್‌, ಬುಲ್‌ವರ್ಕ್ ಕೌಶಲಗಳಲ್ಲಿ ಪರಿಣತರು. ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಪ್ರಶಸ್ತಿಗಳು ಅವರಿಗೆ ಸಿಕ್ಕಿವೆ. ಮುಯ್‌ ತಾಯ್‌ ಪೈಟರ್‌, ಬೆಂಗಳೂರು ಬೆಸ್ಟ್‌ ಫಿಟ್‌ನೆಸ್‌ ಮಾಸ್ಟರ್‌ ಎಂಬ ಹೆಗ್ಗಳಿಕೆ ಅವರದ್ದು. ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದ ‘ಹಳ್ಳಿ ಹೈದ ಬೇಟೆಗೆ ಬಂದ’ ಧಾರಾವಾಹಿಯಲ್ಲಿ ಹೊಸ ಕಲಾವಿದರಿಗೆ ಸಮರ ಕಲೆಯ ತರಬೇತಿ ನೀಡಿದ್ದಾರೆ. ಸ್ವತಃ ಕಲಾವಿದರಾಗಿ ಭಾಗವಹಿಸಿದ್ದಾರೆ. ಕಲರ್ಸ್‌ ಕನ್ನಡದಲ್ಲಿ ‘ನವ ಶಕ್ತಿ ನವ ಗೃಹ’ ಧಾರಾವಾಹಿಯಲ್ಲಿ ಭೀಮಾ ಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹೀಗೆ ಬೇರೆ ಬೇರೆ ವಾಹಿನಿಗಳಲ್ಲಿ ವಿವಿಧ ನಮೂನೆಯ ಸಮರ ಕಲೆಗಳನ್ನು ಪ್ರದರ್ಶನ ಮಾಡಿ ಜನ ಮನ್ನಣೆ ಗಳಿಸಿದ್ದಾರೆ.
ಎಂಎಸ್‌ಸಿ, ಎಂಬಿಎ ಹಾಗೂ ಎಲ್‌ಎಲ್‌ಬಿ ಪದವೀಧರ. ಐಟಿ ಕ್ಷೇತ್ರದಲ್ಲಿ ಎಂಟು ವರ್ಷ ಕೆಲಸ ಮಾಡಿದ್ದಾರೆ. ಮನಸ್ಸು ಮಾತ್ರ ಸಮರ ಕಲೆಯತ್ತ ಇಣುಕುತ್ತಿತ್ತು. ದೈಹಿಕ ಕ್ಷಮತೆ, ಆರೋಗ್ಯಕರ ಬದುಕಿಗಾಗಿ ಐಟಿ ಉದ್ಯೋಗ ಬಿಟ್ಟು ಫಿಟ್‌ನೆಸ್‌ ಮತ್ತು ಸಮರ ಕಲೆ ತರಬೇತಿಯಲ್ಲಿ ಪೂರ್ಣಕಾಲಿಕವಾಗಿ ತೊಡಗಿಕೊಂಡರು. ‘ದೇಹವನ್ನು ಉಲ್ಲಾಸದಿಂದಿಡಲು ವ್ಯಾಯಾಮ ಅಗತ್ಯ. ವ್ಯಾಯಾಮದಿಂದ ಮಾತ್ರ ನಾವು ಪೂರ್ಣ ಫಿಟ್‌ ಆಗಿರುತ್ತೆವೆ. ದೇಹಕ್ಕೆ ಆಯಾಸ ಬಾಧಿಸುವುದಿಲ್ಲ.

ನಾನು ಮಾಡುವ ಕಾರ್ಯ ನಾಲ್ಕು ಮಂದಿಗೆ ಉಪಯೋಗವಾದರೆ ಅದಕ್ಕಿಂತ ಮಿಗಿಲಾದ ಆತ್ಮತೃಪ್ತಿ ಇನ್ನೊಂದು ಇಲ್ಲ’ ಅನ್ನುವುದು ರಾಕೇಶ್‌ ಯಾದವ್‌ ಅವರ ನಿಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.