ADVERTISEMENT

ವಂಶವಾಹಿ ಪರೀಕ್ಷೆ ಯಾರಿಗೆ-ಯಾಕೆ?

ಡಾ.ಎಸ್.ಎಸ್.ವಾಸನ್
Published 16 ಆಗಸ್ಟ್ 2019, 19:30 IST
Last Updated 16 ಆಗಸ್ಟ್ 2019, 19:30 IST
   

ಗರ್ಭಧಾರಣೆಯ ಯಾವುದೇ ಹಂತದಲ್ಲಿ ಅಥವಾ ಜನನದ ನಂತರ ಮಗುವಿನಲ್ಲಿ ಜನನ ದೋಷಗಳು ಕಾಣಿಸಿಕೊಳ್ಳಬಹುದು. ಕೆಲವು ಗರ್ಭಧಾರಣೆಯ ಮೊದಲ ಮೂರು ತಿಂಗಳ ಅವಧಿಯಲ್ಲಿ ಕಂಡುಬಂದರೆ, ಕೆಲವು ದೋಷಗಳು ಗರ್ಭಧಾರಣೆಯ ಕೊನೆಯ ಹಂತದಲ್ಲಿ ತಿಳಿಯುತ್ತವೆ. ಇನ್ನೂ ಕೆಲವು ಮಗು ಹುಟ್ಟಿದ ಮೇಲೆ ಅಥವಾ ಮಗುವಿನ ಬೆಳವಣಿಗೆಯ ಹಂತದಲ್ಲಿ ಗೋಚರಿಸಲು ಆರಂಭಿಸುತ್ತವೆ. ಅಂತೆಯೇ ಕೆಲವು ತಪಾಸಣೆಗಳನ್ನು ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿಯೂ, ಕೆಲವನ್ನು ಗರ್ಭಾವಸ್ಥೆಯ ಕೊನೆಯ ಅವಧಿಯಲ್ಲಿಯೂ ಮಾಡಲಾಗುತ್ತದೆ. ಇನ್ನೂ ಕೆಲವು ಪರೀಕ್ಷೆಗಳನ್ನು ಮಗು ಹುಟ್ಟಿದ ಮೇಲೆ ಕೈಗೊಳ್ಳಲಾಗುತ್ತದೆ.

ಪ್ರಿಇಂಪ್ಲಾಂಟೇಷನ್ ಜೆನೆಟಿಕ್ ಸ್ಕ್ರೀನಿಂಗ್ (ಪಿಜಿಎಸ್) ವಂಶವಾಹಿ ಪರೀಕ್ಷೆ: ಕೃತಕ ಗರ್ಭಧಾರಣೆಯಲ್ಲಿ (ಐವಿಎಫ್) ಈ ತಪಾಸಣೆಯನ್ನು ನಡೆಸಲಾಗುತ್ತದೆ. ಭ್ರೂಣವನ್ನು ಗರ್ಭಕೋಶಕ್ಕೆ ಸೇರಿಸುವ ಮುನ್ನವೇ ವಂಶವಾಹಿ ಸಂಬಂಧಿ ಪರೀಕ್ಷೆ ನಡೆಸಲಾಗುತ್ತದೆ. ಈ ಸಮಯದಲ್ಲಿ ಭ್ರೂಣದ ಗುಣಮಟ್ಟವನ್ನು ಸ್ಕ್ರೀನಿಂಗ್ ನಡೆಸಿ ಪರೀಕ್ಷಿಸಲಾಗುತ್ತದೆ. ವಂಶವಾಹಿಗಳಲ್ಲಿ ಸಮಸ್ಯೆಯಿದ್ದರೆ ಉದಾಹರಣೆಗೆ, ಭ್ರೂಣದಲ್ಲಿನ ವರ್ಣತಂತುಗಳ ಸಂಖ್ಯೆಯಲ್ಲಿ ವ್ಯತ್ಯಾಸ, ನಕಲು ವರ್ಣತಂತು, ವರ್ಣತಂತುಗಳು ಸರಿಯಾದ ಕ್ರಮದಲ್ಲಿ ಜೋಡಣೆಯಾಗದೆ ಇರುವುದು, ಕಂಡುಬಂದಾಗ ಅದನ್ನು ಗರ್ಭಕೋಶಕ್ಕೆ ಸೇರಿಸುವುದಿಲ್ಲ.

ಈ ಸ್ಕ್ರೀನಿಂಗ್ ಮೂಲಕ ಅಸಹಜ ಭ್ರೂಣ ಗರ್ಭಕೋಶ ಸೇರುವುದನ್ನು ತಪ್ಪಿಸಬಹುದು. ನಿರ್ದಿಷ್ಟ ಆನುವಂಶಿಯ ಕಾಯಿಲೆಗಳು ಭ್ರೂಣಕ್ಕೆ ವರ್ಗವಾಗುವುದನ್ನೂ ಇದು ತಡೆಯುತ್ತದೆ. ಈ ಸ್ಕ್ರೀನಿಂಗ್‍ನ ಪ್ರಕ್ರಿಯೆಯು ಪ್ರಿಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನಸಿಸ್‍ನಂತೆಯೇ ಇದೆ. ಪಿಜಿಎಸ್ ಪ್ರಕ್ರಿಯೆಯಲ್ಲಿ ತಜ್ಞರು ಭ್ರೂಣದಲ್ಲಿನ ಕ್ರೋಮೋಸೋಮ್‍ಗಳ ಪರೀಕ್ಷೆ ನಡೆಸುತ್ತಾರೆ. ಪಿಜಿಡಿಯಲ್ಲಿ ನಿರ್ದಿಷ್ಟ ವಂಶವಾಹಿ ಸಮಸ್ಯೆ ಅಥವಾ ಕ್ರೋಮೋಸೋಮ್‍ಗಳಲ್ಲಿನ ಅಸಹಜತೆಯನ್ನು ಕಂಡುಕೊಳ್ಳಲಾಗುತ್ತದೆ.

ADVERTISEMENT

ಗರ್ಭಪಾತದ ಇತಿಹಾಸ, ಮಾನಸಿಕ ಹಾಗೂ ದೈಹಿಕ ಸಮಸ್ಯೆಗೆ ಕಾರಣವಾಗುವ ಕ್ರೋಮೋಸೋಮಿನ ವಿಭಜನೆ ಸಮಸ್ಯೆ, ಮಧುಮೇಹ ಇರುವವರು ಈ ಪ್ರಕ್ರಿಯೆಗೆ ಒಳಗಾಗುವುದು ಸೂಕ್ತ. ಮುಖ್ಯವಾಗಿ 35 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಇದನ್ನು ಸೂಚಿಸಲಾಗುತ್ತದೆ.

ಗರ್ಭಧಾರಣೆಯ ಮೊದಲ ತ್ರೈಮಾಸಿಕ ಅಥವಾ ಎರಡನೇ ತ್ರೈಮಾಸಿಕದಲ್ಲಿ ಆಕ್ರಮಣಶೀಲವಲ್ಲದ ಸ್ಕ್ರೀನಿಂಗ್ ಅನ್ನು ನಡೆಸಬಹುದು.ಸಾಮಾನ್ಯ ಸ್ಕ್ರೀನಿಂಗ್ ಪರೀಕ್ಷೆ ಎಂದರೆ ವರ್ಣತಂತುವಿನ ಅಸಹಜತೆಯ ಅಪಾಯವು ಕಡಿಮೆಯಾಗಿದೆ ಎಂದರ್ಥ, ಆದರೆ ಇದು ಇಲ್ಲವೇ ಇಲ್ಲ ಎಂದಲ್ಲ.ಸಮಸ್ಯೆ ಪತ್ತೆಯಾದ ಮೇಲೆ ಆಮ್ನಿಯೋಸೆಂಟಿಸಿಸ್ ಮತ್ತು ಕೊರಿಯೊನಿಕ್ ವಿಲ್ಲಸ್ ಸ್ಯಾಂಪ್ಲಿಂಗ್‌ನಂತಹ ಪ್ರಸವಪೂರ್ವ ಪರೀಕ್ಷೆಗಳಿಗೆ ಒಳಗಾಗುವ ಮೂಲಕಕ್ರೋಮೋಸೋಮಲ್ ಅಸಹಜತೆಯ ರೋಗನಿರ್ಣಯವನ್ನು ದೃಢೀಕರಿಸಿಕೊಳ್ಳಬಹುದು.ಈ ಎರಡೂ ಪರೀಕ್ಷೆಗಳು ಗರ್ಭಪಾತದ ಸಣ್ಣ ಅಪಾಯವನ್ನು ಹೊಂದಿರುತ್ತವೆ.

ಪಿಜಿಎಸ್ ತಂತ್ರಜ್ಞಾನ ಬಳಸದೆ ನೀಡುವ ಐವಿಎಫ್ ಚಿಕಿತ್ಸೆಯಲ್ಲಿ ಭ್ರೂಣಗಳನ್ನು ಕೇವಲ ಅವುಗಳ ಮೇಲ್ನೋಟದ ಗುಣಮಟ್ಟ ಹಾಗೂ ಮಾರ್ಫಾಲಜಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹೀಗೆ ಮಾಡಿದಾಗ ವಂಶವಾಹಿ ಸಮಸ್ಯೆಗಳಿರುವ ಭ್ರೂಣ ಹಾಗೂ ವಂಶವಾಹಿ ಸಮಸ್ಯೆಗಳಿಲ್ಲದ ಭ್ರೂಣವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಅಂದರೆ ಸಹಜ ಭ್ರೂಣ ಯಾವುದು ಮತ್ತು ಅಸಹಜ ಭ್ರೂಣ ಯಾವುದು ಎಂಬುದು ಗೊತ್ತಾಗುವುದಿಲ್ಲ. ಆದರೆ, ಪಿಜಿಎಸ್ ಆಧಾರಿತ ಐವಿಎಫ್ ಚಿಕಿತ್ಸೆಯಲ್ಲಿ ಭ್ರೂಣಗಳನ್ನು ಅವುಗಳಲ್ಲಿರುವ ವಂಶವಾಹಿಗಳ ಗುಣಮಟ್ಟದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.