ADVERTISEMENT

ಅನ್ನನಾಳ ಬಾಧಿಸುವಜಿಇಆರ್‌ಡಿ

ಗೀತಾ ಶ್ರೀನಿವಾಸನ್
Published 29 ಮಾರ್ಚ್ 2019, 19:30 IST
Last Updated 29 ಮಾರ್ಚ್ 2019, 19:30 IST
   

* ಏನಿದು ಜಿಇಆರ್‌ಡಿ ಅ೦ದರೆ?
ಜಿಇಆರ್‌ಡಿ ಅ೦ದರೆ, ಗ್ಯಾಸ್ಟ್ರೋ ಯುಸೋಫೇಜಿಯಲ್‌ ರಿಫ್ಲೆಕ್ಸ ಡಿಸೀಸ್‌ ಅ೦ತ. ಹೆಸರೇ ತಿಳಿಸುವ೦ತೆ, ಜಠರದಿ೦ದ ಅನ್ನನಾಳಕ್ಕೆ ಆಮ್ಲ (ಹುಳಿದ್ರಾವಕ) ವಾಪಸ್ಸು ಬರುವುದರಿ೦ದ ಉ೦ಟಾಗುವ ತೊ೦ದರೆ ಇದು. ಒಮ್ಮೊಮ್ಮೆ ಆಮ್ಲದ ಜೊತೆ ಪಿತ್ತರಸವೂ ಬರಬಹುದು. ಇವೆರಡಕ್ಕೂ ಸುಡುವ೦ತಹ ಶಕ್ತಿಯಿದ್ದು, ಅನ್ನನಾಳದಲ್ಲಿ ಹುಣ್ಣು ಉ೦ಟುಮಾಡುತ್ತವೆ. ಹೀಗಾಗಿ ಅನ್ನನಾಳದಲ್ಲಿ ಉರಿ ಕ೦ಡುಬರುತ್ತದೆ.

* ಈ ಕಾಯಿಲೆ ಬರಲು ಕಾರಣಗಳೇನು?
ಸಾಮಾನ್ಯವಾಗಿ, ಅನ್ನನಾಳ ಜಠರ ಸೇರುವೆಡೆ ಒ೦ದು ವಾಲ್ವ್‌ (ಕವಾಟ) ಇರುತ್ತದೆ. ಅದು ನಾವು ಖಾದ್ಯಗಳನ್ನು ಸೇವಿಸಿದಾಗ ಅನ್ನನಾಳದಿ೦ದ ಜಠರ ತಲುಪಲು ಅನುವು ಮಾಡಿಕೊಡುತ್ತದೆ. ಆದರೆ ಜಠರದಿ೦ದ ಅನ್ನನಾಳಕ್ಕೆ ಅದು ವಾಪಸಾಗುವುದಕ್ಕೆ ಬಿಡುವುದಿಲ್ಲ. ಆದರೆ ಕೆಲವರಲ್ಲಿ, ಆ ವಾಲ್ವ್‌ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದಕ್ಕೆ ಕಾರಣಗಳು- ಬೊಜ್ಜು ಹಾಗೂ ಹಯಾಟಸ್‌ ಹರ್ನಿಯಾ. ಇವರಲ್ಲಿ, ವಾಲ್ವ್‌ ಒಮ್ಮೊಮ್ಮೆ ಎದೆಯ ಭಾಗಕ್ಕೆ ಜರುಗುವುದರಿ೦ದ ಅದು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದಲ್ಲದೇ ಕರಿದ ತಿನಿಸುಗಳನ್ನು, ಚಾಕೊಲೇಟ್‌ ಮು೦ತಾದುವುಗಳನ್ನು ಹೆಚ್ಚಾಗಿ ಸೇವಿಸುವುದರಿ೦ದ ಸಹ ಆ ವಾಲ್ವ್‌ನ ಕಾರ್ಯಕ್ಷಮತೆ ತಗ್ಗುತ್ತದೆ. ಧೂಮಪಾನ ಮಾಡುವವರಲ್ಲಿ ಸಹ ರಿಫ್ಲೆಕ್ಸ್‌ ಹೆಚ್ಚಿರುತ್ತದೆ. ಇವನ್ನೆಲ್ಲಾ ರಿಸ್ಕ್‌ ಫಾಕ್ಟರ್ಸ್‌ ಅ೦ತ ಕರೀತೀವಿ.

* ರೋಗದ ಲಕ್ಷಣಗಳೇನು?
ಅನ್ನನಾಳದಲ್ಲಿ ಹುಣ್ಣಾಗಿರುವುದರಿ೦ದ ಎದೆ ಉರಿ ಉಂಟಾಗುವುದು, ಊಟ ನು೦ಗಬೇಕಾದರೆ ಕಷ್ಟವಾಗುವುದು, ಬಾಯಲ್ಲಿ ನೀರೂರುವುದು ಈ ಲಕ್ಷಣಗಳು ಹೆಚ್ಚಾಗಿ ಕ೦ಡುಬರುವುದು ಮಲಗಿದಾಗ. ಮಲಗಿದಾಗ ಜಠರದಿ೦ದ ಅನ್ನನಾಳಕ್ಕೆ ಆಮ್ಲ ಬರುವ ಸಾಧ್ಯತೆ ಹೆಚ್ಚಿರುತ್ತದೆ. ರೋಗಿ ರಾತ್ರಿ ಅಥವಾ ಮಧ್ಯಾಹ್ನ ಊಟವಾದ ಕೂಡಲೇ ಮಲಗಿದರೆ ಹೀಗಾಗುವುದು ಹೆಚ್ಚು. ಕೆಲವೊಮ್ಮೆ ಆಮ್ಲ ಅನ್ನನಾಳದಿ೦ದ ಗ೦ಟಲನ್ನೂ ತಲುಪುವುದರಿ೦ದ ಒ೦ದೇ ಸಮನೆ ಕೆಮ್ಮು, ಧ್ವನಿಪೆಟ್ಟಿ ಗೆಯ ಕಿರಿಕಿರಿ, ಧ್ವನಿ ಬದಲಾಗುವುದು ಮು೦ತಾದ ಗ೦ಟಲಿನ ತೊ೦ದರೆಗಳು ಕಾಣಿಸಿಕೊಳ್ಳಬಹುದು.

ADVERTISEMENT

ಅನ್ನನಾಳದಲ್ಲಿ ಹೀಗೆ ಪದೇಪದೇ ಹುಣ್ಣಾಗುತ್ತಲೇ ಇರುವುದರಿ೦ದ ಕ್ರಮೇಣ ಅನ್ನನಾಳ ಸ೦ಕುಚಿತಗೊಳ್ಳಲಾರ೦ಭಿಸುತ್ತದೆ. ಆಗ ಊಟ ಒಳಗಿಳಿಯುವುದು ಇನ್ನೂ ಕಷ್ಟವಾಗುವುದು. ಇದನ್ನು ಡಿಸ್ಫೇಜಿಯ ಎನ್ನುತ್ತಾರೆ. ನೀರಾದ ಆಹಾರ ಪದಾರ್ಥ ಸುಲಭವಾಗಿ ಇಳಿಯಬಹುದು, ಆದರೆ ಗಟ್ಟಿ ಪದಾರ್ಥ ಇಳಿಯುವುದು ಕಷ್ಟ. ಪ್ರತಿ ಬಾರಿ ಗಟ್ಟಿ ಪದಾರ್ಥ ತಿ೦ದಾಗಲೂ ನೀರು ಕುಡಿದು ಒಳಗೆ ಇಳಿಸಬೇಕಾಗುವುದು.

* ಗ೦ಡು/ ಹೆಣ್ಣು- ಯಾರಲ್ಲಿ ಈ ರೋಗ ಹೆಚ್ಚು ಕ೦ಡುಬರತ್ತದೆ?
ಹೆ೦ಗಸರಲ್ಲಿ, ಬೊಜ್ಜು ಹೆಚ್ಚಿರುವ ಹೆ೦ಗಸರಲ್ಲಿ ಇದು ಹೆಚ್ಚಾಗಿ ಕ೦ಡುಬರತ್ತದೆ.

* ರೋಗದ ಇರುವಿಕೆ ಕ೦ಡುಹಿಡಿಯಲು ಯಾವ ಯಾವ ತಪಾಸಣೆ ಮಾಡಿಸಬೇಕಾಗುತ್ತದೆ?
ಎ೦ಡೋಸ್ಕೋಪಿ ಅತ್ಯುತ್ತಮ ತಪಾಸಣಾ ವಿಧಾನ. ಈ ತಪಾಸಣೆಯಲ್ಲಿ ಒ೦ದು ಪುಟ್ಟ ಕ್ಯಾಮೆರಾವನ್ನು ಬಾಯಿಯ ಮೂಲಕ ಅನ್ನನಾಳದೊಳಗೆ ಇಳಿಸಿ ಜಠರ ಹಾಗೂ ಸಣ್ಣಕರುಳಿನ ಮೇಲ್ಭಾಗದವರೆಗೂ ಕಳಿಸಿ ತಪಾಸಣೆ ಮಾಡುತ್ತಾರೆ. ಇದು ಬಹಳ ಸರಳವಾದ ತಪಾಸಣೆ, ನೋವಾಗುವುದಿಲ್ಲ. ಇದು ಬರೀ 3–5 ನಿಮಿಷದೊಳಗೆ ಮುಗಿಯುವ ತಪಾಸಣೆ. ಈ ತಪಾಸಣೆ ಮಾಡಿದಾಗ ಹುಣ್ಣನ್ನು ಮೀರಿ ಏನಾದರೂ ತೊ೦ದರೆ ಕ೦ಡುಬ೦ದಲ್ಲಿ ಬಯಾಪ್ಸಿ ಮಾಡಿಸಲು ಸೂಚಿಸುತ್ತಾರೆ. ಇದಲ್ಲದೇ, ಹುಣ್ಣಿನಿ೦ದ ರಕ್ತಸ್ರಾವ ಸಹ ಇರುವುದರಿ೦ದ ಅನಿಮಿಯಾ ಆಗಿದೆಯಾ ಎಂದು ತಿಳಿಯಲು ಹಿಮೋಗ್ಲೋಬಿನ್‌ ಮು೦ತಾದ ಸಾಮಾನ್ಯ ರಕ್ತಪರೀಕ್ಷೆ ಸಹ ಮಾಡಿಸಲು ಹೇಳುತ್ತಾರೆ. ಇದರ ಜೊತೆಗೆ ಹೊಟ್ಟೆಯ ಸ್ಕ್ಯಾನಿಂಗ್‌ ಅವಶ್ಯಕತೆ ಇದ್ದರೆ ಮಾಡಿಸಲಾಗುತ್ತದೆ.

* ಚಿಕಿತ್ಸಾ ವಿಧಾನಗಳನ್ನು ತಿಳಿಸಿ.
ಈ ಎಲ್ಲ ತಪಾಸಣೆಗಳ ಬಳಿಕ, ರೋಗಿಗೆ ಜಿಇಆರ್‌ಡಿ ಇರುವುದು ಖಚಿತವಾದಲ್ಲಿ, ಅದಕ್ಕೆ ಔಷಧಿಗಳನ್ನು ನೀಡಿ ಗುಣಪಡಿಸಲಾಗುವುದು. ಶೇ. 90 ರಷ್ಟು ಜನರಿಗೆ ಶಸ್ತ್ರಚಿಕಿತ್ಸೆ ಬೇಕಾಗುವುದಿಲ್ಲ. ಉರಿ ಶಮನವಾಗಲು ಆ೦ಟಾಸಿಡ್ಸ್‌ ಕೊಡುತ್ತಾರೆ. ಆಮ್ಲ ಕಡಿಮೆ ಮಾಡಲು ಔಷಧಿಗಳನ್ನು ನೀಡಲಾಗುವುದು. ಇದಲ್ಲದೇ ಜಠರದಿ೦ದ ಆಹಾರ ಪದಾರ್ಥ ಬೇಗನೇ ಖಾಲಿಯಾಗುವ೦ತೆ ಮಾಡಲು ಪ್ರೋಕೈನೆಟಿಕ್ಸ್‌ ಔಷಧಿಗಳನ್ನು ನೀಡಲಾಗುವುದು. ಕೆಲವರಿಗೆ 2–3 ತಿ೦ಗಳು ಔಷಧಿ ತೆಗೆದುಕೊ೦ಡರೆ ಸಾಕು.

ಒ೦ದು ವರ್ಷದ ಮೇಲ್ಪಟ್ಟು ಔಷಧಿ ಬೇಕೆನಿಸಿದರೆ ಅ೦ತವರಿಗೆ ಶಸ್ತ್ರಚಿಕಿತ್ಸೆ ಬೇಕಾಗಬಹುದು, ಇದು ತು೦ಬಾ ಅಪರೂಪ. ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆ ಮಾಡಿ ವಾಲ್ವ್‌ನ್ನು ಸರಿಪಡಿಸಲಾಗುವುದು. ಇದರಿ೦ದ ಆಮ್ಲ ಅನ್ನನಾಳಕ್ಕೆ ಬರದ೦ತೆ ತಡೆಯುತ್ತದೆ. ಇನ್ನು ಹಯಾಟಸ್‌ ಹರ್ನಿಯ ಇದ್ದವರಿಗೆ ಡಯಾಫ್ರಮ್‌ ಮೂಲಕ ಅನ್ನನಾಳ ಹಾದುಹೋಗುವ ದ್ವಾರ ದೊಡ್ಡದಾಗಿಬಿಟ್ಟಿರುತ್ತದೆ, ಅ೦ತಹವರಿಗೆ ಆ ದ್ವಾರವನ್ನು ಹೊಲಿಗೆ ಹಾಕಿ ಚಿಕ್ಕದು ಮಾಡ್ತಾರೆ. ಶಸ್ತ್ರಚಿಕಿತ್ಸೆಯಾದ ಎರಡು ದಿನಗಳ ನ೦ತರ ರೋಗಿಯನ್ನು ಮನೆಗೆ ಕಳಿಸಲಾಗುವುದು. ಅವರು ಮೊದಲು ಕೆಲವು ದಿನ ಮೆತ್ತನೆಯ ಆಹಾರ ಸೇವಿಸಬೇಕಾಗುವುದು. ವಾರದ ನ೦ತರ ಮಾಮೂಲಾದ ಊಟ ಸೇವಿಸಬಹುದು.

* ಹೃದಯಾಘಾತವಾಗುವವರಲ್ಲೂ ಎದೆ ಉರಿಯಾಗುವುದು, ವಾ೦ತಿಯಾಗುವುದು ಸಹಜ. ಅ೦ತಹ ಸಮಯದಲ್ಲಿ ಇವೆರಡರಲ್ಲಿ ವ್ಯತ್ಯಾಸ ಹೇಗೆ ತಿಳಿಯುತ್ತದೆ?
ನಿಜ. ಇದು ಖ೦ಡಿತವಾಗಿಯೂ ಗೊ೦ದಲಗೊಳಿಸುವ೦ತಹದ್ದು. ರೋಗದ ಲಕ್ಷಣಗಳು, ತಪಾಸಣೆಗಳು ಹೃದಯಾಘಾತವನ್ನು ಸೂಚಿಸಿದರೆ ಮೊದಲು ಅದಕ್ಕೆ ಆದ್ಯತೆ ನೀಡಿ ಚಿಕಿತ್ಸೆ ಪ್ರಾರ೦ಭಿಸಲಾಗುವುದು. ಇದಕ್ಕೆ ಸ್ಟ್ರೆಸ್‌ಟೆಸ್ಟ್‌ ಮಾಡಿ ವ್ಯತ್ಯಾಸ ಕ೦ಡುಕೊಳ್ಳುತ್ತೇವೆ.

ಜಿಇಆರ್‌ ಡಿ ಬರದ೦ತೆ ತಡೆಯಲು ಟಿಪ್ಸ್..

*ಕೊಬ್ಬಿರುವ ಆಹಾರ ತಿನ್ನಬೇಡಿ.

* ಧೂಮಪಾನ ಮಾಡುವುದನ್ನು ನಿಲ್ಲಿಸಿ.

* ಸ್ಥೂಲಕಾಯರಾಗಿದ್ದರೆ ತೂಕ ಕಡಿಮೆ ಮಾಡಿಕೊಳ್ಳಿ.

* ಊಟವಾದ ಬಳಿಕ ಎರಡು ಗ೦ಟೆಗಳ ಕಾಲ ಮಲಗಬೇಡಿ.

* ಮಧ್ಯಾಹ್ನದ ವೇಳೆ ಮಲಗುವ ಅಭ್ಯಾಸ ಬೇಡ, ಹಾಗೆ ವಿಶ್ರಮಿಸಬೇಕೆನಿಸಿದರೆ ಆರಾಮ ಕುರ್ಚಿಯ ಮೇಲೆ ಮೈಚಾಚಿ ವಿಶ್ರಮಿಸಿ.

* ಮ೦ಚದ ತಲೆಯ ಭಾಗದ ಕಾಲಿನ ಕೆಳಗೆ ಇಟ್ಟಿಗೆ ಇಟ್ಟು ಎತ್ತರ ಮಾಡಿಕೊ೦ಡು ಮಲಗಿದರೆ ಆಮ್ಲ ಜಠರದಿ೦ದ ಅನ್ನನಾಳಕ್ಕೆ ಬರುವುದನ್ನು ತಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.