ಗ್ಲಕೊಮಾ ಎಂಬುದು ಜಗತ್ತಿನಲ್ಲಿ ಅಂಧತ್ವಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆದರೆ, ಈ ಮಾರಕ ರೋಗದ ಕುರಿತು ಕೇವಲ ಶೇ.10 ರಷ್ಟು ಜನರಿಗೆ ಮಾತ್ರ ಅರಿವು ಇರುವುದು ದುರದೃಷ್ಟಕರ.
ಕಾರಣವೇನು?
ಕಣ್ಣಿನಿಂದ ಮೆದುಳನ್ನು ಸಂಪರ್ಕಿಸುವ ನರಕ್ಕೆ ಆಪ್ಟಿಕ್ ನರ್ವ್ ಎಂದು ಕರೆಯಲಾಗುತ್ತದೆ. ಕಣ್ಣುಗಳಲ್ಲಿ ಬೆಳಕಿನ ಸೂಕ್ಷ್ಮತೆಯ ಪದರಗಳಿಂದ (ರೆಟಿನಾ) ಈ ಆಪ್ಟಿಕ್ ನರ್ವ್ ಮೆದುಳಿಗೆ ಚಿತ್ರಣವನ್ನು ಹೊತ್ತೊಯ್ಯುತ್ತದೆ. ಗ್ಲಾಕೊಮಾದಲ್ಲಿ ಈ ಆಪ್ಟಿಕ್ ನರ್ವ್ ಹಾನಿಗೊಳಗಾಗುತ್ತದೆ. ಈ ದೋಷದಲ್ಲಿ ಯಾವುದೇ ಆರಂಭಿಕ ಲಕ್ಷಣಗಳು ಇರುವುದಿಲ್ಲ. ಗ್ಲಾಕೊಮಾದಿಂದ ಬಳಲುತ್ತಿರುವ ಶೇ.50 ರಷ್ಟು ಜನರಿಗೆ ತಮ್ಮ ಪರಿಸ್ಥಿತಿ ಬಗ್ಗೆ ಅರಿವೇ ಇರುವುದಿಲ್ಲ. ಈ ರೋಗದ ಲಕ್ಷಣಗಳು ಬೆಳೆಯುತ್ತಾ ಹೋದರೂ ಅದು ಗಂಭೀರ ಸ್ಥಿತಿಗೆ ತಲುಪುವವರೆಗೆ ದೃಷ್ಟಿಯಲ್ಲಾಗುವ ಬದಲಾವಣೆ ಬಗ್ಗೆ ಗಮನಹರಿಸಿರುವುದೇ ಇಲ್ಲ.
ಗ್ಲಾಕೊಮಾದಿಂದ ಆಗುವ ದೃಷ್ಟಿ ನಷ್ಟವನ್ನು ಮತ್ತೆ ಸರಿಪಡಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕಣ್ಣಿನ ಮೇಲೆ ಉಂಟಾಗುತ್ತಿರುವ ಒತ್ತಡಗಳ ಬಗ್ಗೆ ಆಗಿಂದಾಗ್ಗೆ ಪರೀಕ್ಷೆ ನಡೆಸುತ್ತಿರಬೇಕು. ಆರಂಭಿಕ ಹಂತದಲ್ಲಿಯೇ ಈ ರೋಗವನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವುದೊಂದೇ ಮಾರ್ಗವಾಗಿದೆ.
60 ವರ್ಷ ಮೀರಿದವರಲ್ಲಿ, ಕುಟುಂಬ ಸದಸ್ಯರಲ್ಲಿ ಗ್ಲಾಕೊಮಾ ಇದ್ದರೆ ಆಂತರಿಕವಾಗಿ ಕಣ್ಣಿನ ಒತ್ತಡ ಅತಿ ಹೆಚ್ಚಾಗಿದ್ದರೆ, ಮಧುಮೇಹ, ಹೃದ್ರೋಗ, ಹೆಚ್ಚು ರಕ್ತದೊತ್ತಡ ಮತ್ತು ಅನಿಮಿಯಾದಂತಹ ರೋಗಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರೆ, ಈ ಹಿಂದೆ ಕಣ್ಣಿಗೆ ಏಟು ಬಿದ್ದಿದ್ದರೆ, ಕಾರ‍್ಟಿಕೊಸ್ಟೆರಾಯ್ಡ್ ಔಷಧಗಳನ್ನು ದೀರ್ಘಾವಧಿಯಿಂದ ಬಳಸುತ್ತಿದ್ದರೆ ಈ ಗ್ಲಾಕೊಮಾ ರೋಗದ ಸಾಧ್ಯತೆ ಹೆಚ್ಚು. ಈ ಕಾರಣದಿಂದಾಗಿ ಗ್ಲಾಕೊಮಾವು ಜಗತ್ತಿನಲ್ಲಿ 60 ವರ್ಷ ಮೀರಿದ ಜನರಲ್ಲಿ ಕೆಟರ‍್ಯಾಕ್ಟ್ ನಂತರ ಅಂಧತ್ವವನ್ನು ಉಂಟು ಮಾಡುವ ಎರಡನೇ ಪ್ರಮುಖ ರೋಗವಾಗಿದೆ. ಈ ರೋಗ ಯಾವುದೇ ವಯೋಮಾನದವರಿಗೂ ಬರಬಹುದು. ಆದರೆ, ಹೆಚ್ಚಾಗಿ ವೃದ್ಧರಲ್ಲಿ ಕಂಡುಬರುತ್ತದೆ.
ಗ್ಲಾಕೊಮಾದಲ್ಲಿ ಎರಡು ಮಾದರಿಗಳಿವೆ
ನ್ಯಾರೋ ಆ್ಯಂಗಲ್ ಗ್ಲಾಕೊಮಾ ಮತ್ತು ಓಪನ್ ಆ್ಯಂಗಲ್ ಗ್ಲಾಕೊಮಾ. ಎರಡನೆಯದು ಅಂದರೆ ಓಪನ್ ಆ್ಯಂಗಲ್ ಗ್ಲುಕೊಮಾ ಸಾಮಾನ್ಯವಾಗಿದೆ. ಕಣ್ಣಿನ ಒತ್ತಡದ ಪರಿಣಾಮ ಇದು ಕಾಣಿಸಿಕೊಳ್ಳುತ್ತದೆ. ಈ ಓಪನ್ ಆ್ಯಂಗಲ್ ಗ್ಲಾಕೊಮಾದಲ್ಲಿ ರೋಗಿಗೆ ನಿಖರವಾದ ಲಕ್ಷಣಗಳ ಅನುಭವವಾಗುವುದಿಲ್ಲ. ಇಲ್ಲಿ ಕಣ್ಣಿನ ಡ್ರೈನೇಜ್ ಕೆನಾಲ್‌ಗಳು ಮುಚ್ಚಿಹೋಗುವ ಪರಿಣಾಮ ಕಣ್ಣಿನ ಆಂತರಿಕ ಒತ್ತಡ ಹೆಚ್ಚಾಗುತ್ತದೆ ಮತ್ತು ಇದರಿಂದ ದೃಷ್ಟಿಯ ನರ ಹಾನಿಗೊಳಗಾಗುತ್ತದೆ. ನ್ಯಾರೋ -ಆ್ಯಂಗಲ್ ಗ್ಲಾಕೊಮಾ ತಕ್ಷಣಕ್ಕೆ ಆಗುವಂತಹದ್ದು, ಇಲ್ಲಿ ಐರಿಸ್ (ಕಣ್ಣಿನ ಬಣ್ಣದ) ಭಾಗ ಮುಂದಕ್ಕೆ ಎಳೆಯುವುದು ಅಥವಾ ತಳ್ಳಲ್ಪಡುತ್ತದೆ. ಇದರಿಂದ ಕಣ್ಣಿನ ಆಂತರಿಕ ಒತ್ತಡ ಹೆಚ್ಚಾಗಿ ತಡೆ ಉಂಟಾಗುತ್ತದೆ ಮತ್ತು ದೃಷ್ಟಿಯ ನರಕ್ಕೆ ಗಂಭೀರ ಸ್ವರೂಪದ ಹಾನಿಗೆ ಕಾರಣವಾಗುತ್ತದೆ.
ಓಪನ್-ಆ್ಯಂಗಲ್ ಗ್ಲಾಕೊಮಾದಲ್ಲಿ ರೋಗದ ಹಂತಗಳ ಆಧಾರದಲ್ಲಿ ಲಕ್ಷಣಗಳು ಗೋಚರಿಸುತ್ತವೆ. ಆದರೆ, ಬಾಹ್ಯ ಅಥವಾ ಮಧ್ಯಭಾಗದ ದೃಷ್ಟಿಗೆ ತೇಪೆಯಂತಹ ಅಂಧಕಾರದಂತಹ ಸೂಚನೆಗಳನ್ನು ಕಾಣಬಹುದಾಗಿದೆ. ನ್ಯಾರೋ–ಆ್ಯಂಗಲ್ ಗ್ಲಾಕೊಮಾದಲ್ಲಿ ಗಂಭೀರ ಸ್ವರೂಪದ ತಲೆನೋವು, ವಾಕರಿಕೆ ಮತ್ತು ವಾಂತಿ, ಕಣ್ಣಿನ ನೋವು ಮತ್ತು ಕಣ್ಣು ಕೆಂಪಾಗುವುದು, ಮಸುಕಾದ ದೃಷ್ಟಿ ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಸಂಭಾವ್ಯ ಲಕ್ಷಣಗಳನ್ನು ಅರಿತು ಆರಂಭದಲ್ಲಿಯೇ ಪರಿಸ್ಥಿತಿಯನ್ನು ಗುರುತಿಸುವುದು ಅತ್ಯಂತ ಮುಖ್ಯ. ದುರಾದೃಷ್ಟವಶಾತ್, ಗ್ಲಾಕೊಮಾಗೆ ಚಿಕಿತ್ಸೆ ಪಡೆಯದೇ ಹಾಗೇ ಬಿಟ್ಟರೆ ಇದು ಅಂಧತ್ವಕ್ಕೆ ಕಾರಣವಾಗುತ್ತದೆ. ಒಂದು ವೇಳೆ ಚಿಕಿತ್ಸೆ ಪಡೆದರೂ ಶೇ.15 ರಷ್ಟು ರೋಗಿಗಳು 20 ವರ್ಷಗಳಲ್ಲಿ ಕನಿಷ್ಠ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುತ್ತಾರೆ.
ತಡೆಗಟ್ಟುವುದು ಹೇಗೆ?
ಆರಂಭಿಕ ಹಂತದಲ್ಲಿಯೇ ಗ್ಲಾಕೊಮಾವನ್ನು ಪತ್ತೆ ಮಾಡುವ ಹಂತಗಳು ಈ ಸಮಸ್ಯೆ ಹೆಚ್ಚಾಗುವುದು ಅಥವಾ ಅಂಧತ್ವ ಬರುವುದನ್ನು ತಡೆಗಟ್ಟಲು ನೆರವಾಗುತ್ತವೆ.
ನಿಗದಿತ ಅವಧಿಯಲ್ಲಿ ಕಣ್ಣಿನ ತಪಾಸಣೆ: ನಿಗದಿತ ಸಮಯದಲ್ಲಿ ಕಣ್ಣಿನ ಸಮಗ್ರ ತಪಾಸಣೆ ಮಾಡಿಸಿಕೊಳ್ಳುವುದರಿಂದ ಕಣ್ಣಿಗೆ ಹಾನಿಯಾಗುವ ಮುನ್ನವೇ ಗ್ಲಾಕೊಮಾವನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಬಹುದಾಗಿದೆ. ಅಮೆರಿಕನ್ ಅಕಾಡೆಮಿ ಆಫ್ ಆಪ್ತಲ್ಮೋಲಾಜಿ ನೀವು 40 ವರ್ಷಕ್ಕಿಂತ ಕಡಿಮೆ ವಯೋಮಾನದವರಾಗಿದ್ದರೆ ಪ್ರತಿ 5–10ವರ್ಷಕ್ಕೊಮ್ಮೆ ಕಣ್ಣಿನ ಸಮಗ್ರ ತಪಾಸಣೆ ನಡೆಸಬೇಕೆಂದು ಶಿಫಾರಸು ಮಾಡಿದೆ.
40–54 ವಯೋಮಾನದವರಾಗಿದ್ದರೆ ಪ್ರತಿ 2–4 ವರ್ಷಕ್ಕೊಮ್ಮೆ, 55–64 ವರ್ಷದ ವಯೋಮಾನದವರಾಗಿದ್ದರೆ ಪ್ರತಿ 1–3ವರ್ಷಕ್ಕೊಮ್ಮೆ ಮತ್ತು 65 ವರ್ಷಕ್ಕಿಂತ ಹೆಚ್ಚಿದ್ದರೆ 1–2 ವರ್ಷಕ್ಕೊಮ್ಮೆ ಕಣ್ಣಿನ ಸಮಗ್ರ ತಪಾಸಣೆ ನಡೆಸಿ ಏನಾದರೂ ಲೋಪಗಳಿದ್ದರೆ ಅದಕ್ಕೆ ಚಿಕಿತ್ಸೆ ಪಡೆಯುವುದು ಸೂಕ್ತ ಎಂದು ಈ ಅಕಾಡೆಮಿ ಹೇಳಿದೆ.
ನಿಮ್ಮ ಕುಟುಂಬದ ಕಣ್ಣಿನ ಆರೋಗ್ಯದ ಇತಿಹಾಸ ತಿಳಿದುಕೊಳ್ಳಿ: ಕುಟುಂಬಗಳಲ್ಲಿ ಗ್ಲಾಕೊಮಾ ಹೆಚ್ಚಾಗಿ ಕಂಡುಬಂದರೆ ನೀವು ನಿಯಮಿತವಾಗಿ ತಪಾಸಣೆ ಮಾಡಿಸಿಕೊಂಡು ತಕ್ಷಣದಿಂದಲೇ ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳುವುದು ಉಚಿತ.
ನಿಯಮಿತವಾಗಿ ಸೂಕ್ತ ಐಡ್ರಾಪ್ಸ್ ಬಳಸಿ
ಕಣ್ಣಿನ ಒತ್ತಡ ಹೆಚ್ಚಾಗಿ ಕಣ್ಣನ್ನು ಹಾನಿ ಮಾಡುವುದನ್ನು ಗ್ಲಾಕೊಮಾ ಐಡ್ರಾಪ್ಸ್ ತಪ್ಪಿಸುತ್ತದೆ. ಒಂದು ವೇಳೆ ಗ್ಲಾಕೊಮಾದ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ನಿಮ್ಮ ವೈದ್ಯರು ನೀಡುವ ಐಡ್ರಾಪ್ಸ್ ಅನ್ನು ನಿಯಮಿತವಾಗಿ ಬಳಸುವುದು ಸೂಕ್ತ. ವೈದ್ಯರು ನೀಡಿದ ಸಲಹೆಗಳನ್ನು ಅನುಸರಿಸದಿರುವುದು, ಔಷಧಿಯನ್ನು ತೆಗೆದುಕೊಳ್ಳುವ ನಿರ್ಧಾರವನ್ನು ನೀವೇ ತೆಗೆದುಕೊಳ್ಳುವುದು ಮತ್ತು ನಿಯಮಿತವಾದ ತಪಾಸಣೆ ಮಾಡಿಸಿಕೊಳ್ಳದಿರುವಂತಹ ಕ್ರಮಗಳನ್ನು ಸಾಮಾನ್ಯವಾಗಿ ರೋಗಿಗಳು ಮಾಡುತ್ತಾರೆ. ಗ್ಲಾಕೊಮಾ ಇದೆ ಎಂಬುದು ಗೊತ್ತಾದರೆ ಜೀವನ ಪರ್ಯಂತ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ.
* ವಿಶ್ವದಲ್ಲಿ ಅಂಧತ್ವಕ್ಕೆ ಗ್ಲಾಕೊಮಾ ಎರಡನೇ ಪ್ರಮುಖ ಕಾರಣ
* ಈ ಕಾರಣದಿಂದ ಶೇ.8 ರಷ್ಟು ಅಂಧತ್ವದ ಪ್ರಕರಣಗಳು ದಾಖಲು
* ಭಾರತದಲ್ಲಿ 11.2 ದಶಲಕ್ಷಕ್ಕೂ ಅಧಿಕ ಜನರಲ್ಲಿ ಗ್ಲಾಕೊಮಾ ಇರುವುದು ಪತ್ತೆಯಾಗಿದೆ.
(ಲೇಖಕಿ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್‌ನಲ್ಲಿ ಕನ್ಸಲ್ಟೆಂಟ್ ನೇತ್ರತಜ್ಞೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.