ಹಗಲು-ರಾತ್ರಿಗಳ ದೈನಂದಿನ ಚಕ್ರ, ಬಿಸಿಲು-ಮಳೆ-ಚಳಿ–ಗಾಳಿಗಳ ಋತುಚಕ್ರ, ಸಿಹಿ-ಹುಳಿ-ಉಪ್ಪು-ಕಹಿ-ಖಾರ-ಒಗರು ಆರು ರುಚಿಗಳ ಷಡ್ರಸಭೋಜನ, ಸುಖ-ದುಃಖಗಳ ಸಮತೋಲನ – ಹೀಗೆ ವೈವಿಧ್ಯಮಯ ಎಲ್ಲವನ್ನೂ ಮೊದಲು ಸ್ವೀಕರಿಸುವ, ಒಪ್ಪಿಕೊಳ್ಳುವ ಮನೋಭಾವ ಬೇಕು.
***
ಸೃಷ್ಟಿಯೊಂದಿಗೆ ಲಯವೂ ಖಚಿತ. ಕೊನೆಯಾಗದೇ ಮತ್ತೊಂದು ಶುರುವಾಗುವುದಾದರೂ ಹೇಗೆ? ಹೊಸ ನೀರು, ಹಳೆ ಬೇರು, ಇದ ಹೀರಿ ಬೆಳೆದ ಬದುಕು ನಮ್ಮದು. ಹುಟ್ಟು ಮತ್ತು ಸಾವು, ನಡುವೆ ಬದುಕು ಎಲ್ಲವನ್ನೂ ಅನುಭವಿಸಿ ವೃದ್ಧಿ, ಸ್ಥಿತಿ, ಹ್ರಾಸಗಳನ್ನು ಕಾಣುತ್ತದೆ. ಹಗಲಿನಲ್ಲಿ ರಾತ್ರಿಯನ್ನು ಧ್ಯಾನಿಸುವುದು, ರಾತ್ರಿಯಲ್ಲಿ ಬೆಳಕಿಗಾಗಿ ಕಾಯುವುದೂ ಜೀವಿಗಳ ಸಹಜತೆ. ಮಳೆಗಾಲದಲ್ಲಿ ಬಿಸಿಲನ್ನು ನೆನೆದರೆ, ಬೇಸಿಗೆಯಲ್ಲಿ ಚಳಿಯನ್ನು ಬಯಸುತ್ತೇವೆ.
ಸುಖವೊಂದನ್ನೇ ಬಹಳಕಾಲ ಅನುಭವಿಸುವುದಕ್ಕೂ ಮೈ ಮನ ದಣಿಯುತ್ತದೆ. ಕಷ್ಟವಿದ್ದಾಗ ಅದು ಕಳೆದರೆ ಸಾಕು, ಅದೇ ಸುಖ ಎಂದುಕೊಳ್ಳುತ್ತೇವೆ.
ಸಿಹಿಯನ್ನು ಇಷ್ಟಪಟ್ಟು ತಿಂದೂ ಹುಳಿಯನ್ನು ಕಂಡು ಬಾಯಿ ನೀರೂರಿಸುತ್ತದೆ. ಹುಳಿ ಜೊತೆಗೆ ಉಪ್ಪನ್ನು ಚಪ್ಪರಿಸುತ್ತೇವೆ. ಕಹಿ-ಒಗರು ರುಚಿಸದಿದ್ದರೂ ಔಷಧವೆಂದು ಭಕ್ತಿಯಿಂದ ಸೇವಿಸುತ್ತೇವೆ. ಖಾರವನ್ನು ತಿನ್ನಲು ನಾಲಿಗೆ ಚಾಚಿದರೂ ದೇಹಕ್ಕೆ ಬಾಧಿಸುತ್ತದೆ.ಯಾವುದೇ ಒಂದನ್ನು ಸತತವಾಗಿ ಅನುಭವಿಸಲು ನಮಗೆ ಸಾಧ್ಯವಾಗುವುದೇ ಇಲ್ಲ. ಎಲ್ಲದರಲ್ಲೂ ಅತಿಯೂ ಮಿತಿಯೂ ಇರುತ್ತದೆ. ಅತಿಯಾದರೆ ಅನಾರೋಗ್ಯ. ಮಿತಿಯಲ್ಲೇ ಇದ್ದರೆ ಸ್ವಾಸ್ಥ್ಯ.
ಅದೇ ಬೇಕು, ಇದು ಬೇಡ – ಎಂಬ ದೂರು ಅನಿವಾರ್ಯತೆಗೆ ತಳ್ಳುತ್ತದೆ. ಯಾವುದು ಅನಿವಾರ್ಯವಾಗುತ್ತದೋ ಅದಕ್ಕೆ ನಾವು ದಾಸರಾಗುತ್ತೇವೆ. ಒಂದು ವಸ್ತು ಅಥವಾ ವಿಷಯದ ಮೇಲಿನ ಅವಲಂಬನೆ, ನಮ್ಮ ಸ್ವಾತಂತ್ರ್ಯವನ್ನು ಕಸಿಯುತ್ತದೆ. ಯಾವುದಕ್ಕೋ ಬಂಧಿಯಾದರೆ ಚಡಪಡಿಕೆಯಿಂದ ಬಳಲುತ್ತೇವೆ. ಈ ರೀತಿಯಾಗಿ ಅಸ್ವಸ್ಥತೆ ಕಾಡುವಾಗ ಜೀವನ ಸುಗಮವಾಗಿ ಸಾಗುವುದಿಲ್ಲ. ಇದು ಅನಾರೋಗ್ಯದ ಮೂಲಸರಣಿ.
ಹಗಲು-ರಾತ್ರಿಗಳ ದೈನಂದಿನ ಚಕ್ರ, ಬಿಸಿಲು-ಮಳೆ-ಚಳಿ–ಗಾಳಿಗಳ ಋತುಚಕ್ರ, ಸಿಹಿ-ಹುಳಿ-ಉಪ್ಪು-ಕಹಿ-ಖಾರ-ಒಗರು ಆರು ರುಚಿಗಳ ಷಡ್ರಸಭೋಜನ, ಸುಖ-ದುಃಖಗಳ ಸಮತೋಲನ – ಹೀಗೆ ವೈವಿಧ್ಯಮಯ ಎಲ್ಲವನ್ನೂ ಮೊದಲು ಸ್ವೀಕರಿಸುವ, ಒಪ್ಪಿಕೊಳ್ಳುವ ಮನೋಭಾವ ಬೇಕು. ಎಲ್ಲವನ್ನೂ ಒಂದು ಮಿತಿಯಲ್ಲೇ ಸರಿದೂಗಿಸಿಕೊಳ್ಳುವ ಅರಿವು, ವಿವೇಚನೆಯೂ ಇರಬೇಕು. ಪ್ರತಿಯೊಂದೂ ನಮ್ಮ ಬದುಕಿನ ಮೇಲೆ ಒಂದಿಲ್ಲೊಂದು ಪರಿಣಾಮ ಬೀರುತ್ತದೆ. ಒಟ್ಟಿನಲ್ಲಿ ಎಲ್ಲವೂ ಇದ್ದಾಗ ಜೀವನ ಸುಗಮಗೊಳ್ಳುತ್ತದೆ.
ದಿನರಾತ್ರಿಯ ಜೈವಿಕ ಗಡಿಯಾರವನ್ನು ಮೀರಿ ಬದುಕುವುದು ದುಸ್ತರ. ಮನುಷ್ಯ ಮೂಲತಃ ದಿನಚರಿಜೀವಿ. ಹಗಲು ಆಹಾರ, ದುಡಿಮೆ. ರಾತ್ರಿ ಸಹಜವಾಗಿ ನಿದ್ರಿಸುವುದು ಆರೋಗ್ಯಕರ. ಈ ಗಡಿಯಾರ ಅಸ್ತವ್ಯಸ್ತವಾದರೆ ಕಾಯಿಲೆ ಉಚಿತವಾಗುತ್ತದೆ. ಸೂರ್ಯೋದಯಕ್ಕೂ ಮುನ್ನ ಎಚ್ಚರವಾಗಿ, ಶೌಚ ಮುಗಿಸಿ, ದಿನದ ಚಟುವಟಿಕೆಗಳನ್ನು ಆರಂಭಿಸುವುದು ಉತ್ತಮ ಅಭ್ಯಾಸ. ದೀರ್ಘಕಾಲದ ಆರೋಗ್ಯಪೂರ್ಣ ಬದುಕಿಗೆ ಇದೇ ಮಂತ್ರ. ಬೆಳಿಗ್ಗೆ ಬೆಳಕು ಹರಿದ ಮೇಲೂ ಮುಸುಕು ಹಾಕಿಕೊಂಡು ಮಲಗುವುದು ಸೂರ್ಯನ ಎಳೆಯ ಕಿರಣಗಳ ಚೈತನ್ಯವನ್ನು ತಿರಸ್ಕರಿಸಿದಂತೆಯೇ. ‘ಆರೋಗ್ಯಂ ಭಾಸ್ಕರಾತ್ ಇಚ್ಛೇತ್’ – ಎನ್ನುತ್ತದೆ, ಉಪನಿಷತ್ತು. ಆರೋಗ್ಯಕ್ಕಾಗಿ ಸೂರ್ಯಾರಾಧನೆ ಮಾಡುವ ಹಿನ್ನೆಲೆ ಏನೆಂದರೆ ಸೂರ್ಯನಮಸ್ಕಾರದೊಂದಿಗೆ ದಿನಚರಿ ಆರಂಭಗೊಂಡು, ಉದಯರವಿಕಿರಣಗಳ ಬೆಳಕಿಗೆ ಮೈಮನ ತೆರೆದುಕೊಳ್ಳಲಿ ಎಂದು. ತೇಜಸ್ಸು ಶಾಖ ನೀಡಿ ನಮ್ಮೊಳಗಿನ ಜಡತೆಯನ್ನು ಕೊನೆಗೊಳಿಸುತ್ತದೆ. ಲವಲವಿಕೆ ಚಿಮ್ಮುತ್ತದೆ. ರಕ್ತಸಂಚಾರ ಚುರುಕಾಗುತ್ತದೆ. ಮನಸ್ಸು ಹಗುರಗೊಂಡು ದಿನವಿಡೀ ಕಾರ್ಯೋತ್ಸಾಹವಿರುತ್ತದೆ. ಮಲವಿಸರ್ಜನೆ ಸಹಜವಾಗಿಯೇ ಆಗಿ ಹಸಿವು ಸಮಯಕ್ಕೆ ಕಾಣಿಸುತ್ತದೆ. ರೋಗದಿಂದ ದೂರವಿರಲು ಇವೆಲ್ಲವೂ ಬೇಕೇ ಬೇಕು. ಹೀಗೆ ಆರಂಭಗೊಂಡು ದಿನವೊಂದು ಸಕಾಲದಲ್ಲಿ ರಾತ್ರಿ ಸೂರ್ಯಾಸ್ತದೊಂದಿಗೆ ಮುಗಿಯುವುದು. ಚಂದ್ರನ ಶೀತಲಸ್ಪರ್ಶ ದೇಹಾಯಾಸವನ್ನು ಶಮನಗೊಳಿಸಿದರೆ ಮನಸ್ಸನ್ನು ಶಾಂತವಾಗಿಸುತ್ತದೆ. ಹಗಲು ಸೇವಿಸಿದ ಆಹಾರದ ಸಾರ ರಾತ್ರಿಯ ನಿದ್ರೆಯಿಂದ ಸರ್ವ ಬೆಳವಣಿಗೆಗೆ ಪೂರಕ. ಇದೊಂದು ವ್ಯವಸ್ಥಿತ ಬದುಕು. ಹೀಗೆ ಮಾಡದೆ ಹಗಲು ನಿದ್ರಿಸುವುದು, ರಾತ್ರಿ ಜಾಗರಣೆ ಮಾಡುವುದು ಹೃದಯದೊತ್ತಡ, ರಕ್ತವಿಕಾರ, ಅಜೀರ್ಣ, ತಲೆನೋವು, ಮೈ ನೋವು, ಖಿನ್ನತೆ, ಒತ್ತಡ, ಬೊಜ್ಜು, ಕ್ಷಯರೋಗಗಳಿಗೆ ಮೂಲ. ರಾತ್ರಿ ನಿದ್ರಿಸದಿದ್ದರೆ ರೋಗನಿರೋಧಕ ಶಕ್ತಿ ಹಾಳಾಗುತ್ತದೆ. ಆರೋಗ್ಯಕ್ಕಾಗಿ ಬೆಳಕನ್ನೂ ಕತ್ತಲನ್ನೂ ಹಗಲು-ರಾತ್ರಿ ಸಮವಾಗಿ ಅನುಭವಿಸುವುದು ಮುಖ್ಯ.
ಬೇಸಿಗೆಯಲ್ಲಿ ಸೂರ್ಯನ ಕಿರಣಗಳು ತೀಕ್ಷ್ಣ. ಮಳೆ-ಚಳಿಗಾಲದಲ್ಲಿ ಮೃದು. ಇದು ಋತುಚಕ್ರ. ಇವೂ ಆರೋಗ್ಯಕ್ಕೆ ಅಗತ್ಯ. ಯಾವುದೇ ಒಂದು ಋತುವನ್ನು ಮಾತ್ರ ಅನುಭವಿಸುವುದೂ ಅನಾರೋಗ್ಯಕರ. ಋತುಗಳಿಗೆ ತಕ್ಕ ಪರಿಹಾರವನ್ನು ಮಾಡಿಕೊಳ್ಳಬೇಕಾಗುತ್ತದೆ. ಚಳಿಗಾಲದಲ್ಲಿ ದೈಹಿಕ ವೃದ್ಧಿ ವೇಗವನ್ನು ಪಡೆಯುತ್ತದೆ. ಹಸಿವು ಜಾಸ್ತಿ. ಪೋಷಕಾಂಶಯುಕ್ತ ಬಿಸಿಯಾದ ಸಿಹಿ, ಜಿಡ್ಡುಳ್ಳ ಘನಾಹಾರಗಳು ಬೇಕು. ಚಳಿಕಳೆದು ಬಿಸಿಲು ತೀವ್ರತೆ ಪಡೆಯುವಾಗ ದೇಹದೊಳಗೆ ಶೀತದಿಂದ ಗಟ್ಟಿಯಾಗಿದ್ದ ಸ್ರಾವಗಳು ಕರಗಿ ಸಂಚಾರವು ಹೆಚ್ಚುತ್ತದೆ. ಆದ್ದರಿಂದ ವಸಂತಗಾಲದಲ್ಲೆ ಕಫದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಕಫವನ್ನು ಹದಗೊಳಿಸುವ ಕಹಿ, ಖಾರ, ಒಗರಿನ ಆಹಾರ ಈ ಕಾಲದಲ್ಲಿ ಅಗತ್ಯ. ಬೇಸಿಗೆಯು ಇನ್ನೂ ತೀವ್ರ ಸ್ವರೂಪ ಪಡೆದುಕೊಂಡಿದೆ ಅನ್ನುವಾಗ ಸಿಹಿಮಿಶ್ರಿತ ಹುಳಿಯುಳ್ಳ ಹಣ್ಣು ಮುಂತಾದ ತಂಪು ದ್ರವಾಹಾರಗಳೇ ನಮ್ಮ ಬಾಯಾರಿಕೆ ತಣಿಸಿ ಬಿಸಿಲಿನಿಂದ ಬಳಲದಂತೆ ಕಾಪಾಡುತ್ತವೆ. ವಾತಾವರಣದಲ್ಲಿ ಬಿಸಿಗೆ ಆವಿಗೊಂಡ ತೇವಾಂಶ ಮೋಡ ಕಟ್ಟಿ ಮಳೆ ಹನಿಸುವಾಗ ಮತ್ತೆ ನಮ್ಮೊಳಗೆ ಉಷ್ಣತೆ ಏರುಪೇರಾಗುತ್ತದೆ. ಬಿಸಿಬಿಸಿಯಾದ ಉಪ್ಪು ಹುಳಿ ಖಾರವುಳ್ಳ ಎಲ್ಲಾ ರುಚಿಯ ಆಹಾರ ನಾಲಿಗೆಗೆ ಹಿತವೆನಿಸುತ್ತದೆ. ಮಳೆಯನ್ನು ಆನಂದಿಸುತ್ತಾ ಕೆಲಸಕ್ಕೂ ಬಿಡುವು ಕೊಡುತ್ತಾ ಬಾಯಾಡುತ್ತಾ ಈ ಕಾಲವೂ ಕಳೆಯುತ್ತದೆ. ಸಿಹಿಯನ್ನೇ ತಿಂದರೆ ದೇಹದಲ್ಲಿ ಅತಿಪೂರಣೆಯಿಂದ ಸ್ಥೌಲ್ಯ, ಪ್ರಮೇಹ, ಹೃದಯ-ನಾಳಗಳಲ್ಲಿ ಅವರೋಧ ಮುಂತಾದ ಸಂತರ್ಪಣದಿಂದ ಕಾಯಿಲೆಗಳು. ಹುಳಿ ಅತಿಯಾದರೆ ರಕ್ತ-ಪಿತ್ತದ ತೊಂದರೆಗಳು. ಉಪ್ಪು ಅತಿಯಾದರೆ ಬಲುಬೇಗ ಮುಪ್ಪು. ಕಹಿ-ಖಾರ-ಒಗರಿನಿಂದ ವಾತರೋಗ, ನೋವು. ರುಚಿಗಳೆಲ್ಲಾ ಇರುವ ತಾಜಾ ಆಹಾರದ ಅಭ್ಯಾಸ ಕಾಯಿಲೆಗಳಿಂದ ದೂರವಿರಲು ಸಹಾಯಕ.
ಮಳೆಯ ನಂತರ ಮತ್ತೆ ಬಿಸಿಲು ಮೂಡುವುದು. ಭೂಮಿಯ ಹಸಿರು ಕಣ್ಣುಗಳಿಗೆ ಸುಖ ತೋರುತ್ತದೆ. ಹೀಗೆ ಇರದೆ ಬರೀ ಚಳಿಗಾಲವೋ ಸತತ ಮಳೆಯೋ ಬರೀಬೇಸಿಗೆಯೋ ಇರುವ ಪ್ರದೇಶವನ್ನು ಗಮನಿಸಿ. ಅಲ್ಲಿ ಆರೋಗ್ಯಮಯಜೀವನ ನಡೆಸುವುದು ಸಾಕಷ್ಟು ಕಷ್ಟ. ಆದ್ದರಿಂದ ಎಲ್ಲಾ ಕಾಲಗಳೂ ಸರಿಯಾಗಿ ಬೇಕು. ಆಗಲೇ ಹದದ ಬದುಕು. ಏಕೆಂದರೆ ಪ್ರತಿ ಋತುವೂ ನಮ್ಮ ಮನಸ್ಸು ಮತ್ತು ದೇಹಗಳ ಸಮತೋಲನವನ್ನು ಕಾಯುತ್ತದೆ.
ಸುಖವೆಂದರೆ ಕೆಲಸವೇ ಇರದ ರಜಾದಿನಗಳು ಎಂದು ಹಲವರಿಗೆ ಅನಿಸುತ್ತದೆ. ದುಡ್ಡಿದ್ದರೆ ಸುಖ ಎಂದು ಮತ್ತೂ ಕೆಲವರಿಗೆ. ಆದರೆ ದೈಹಿಕ ಕೆಲಸವಿರದೆ ಬೊಜ್ಜು, ಮೇಹ ಮೊದಲಾದ ರೋಗಗಳು ಕಾಲಿಡುವಾಗ ಶಾರೀರಿಕ ಶ್ರಮಗಳೇ ಚಿಕಿತ್ಸೆ. ಗಳಿಕೆ ಅತಿಯಾದರೆ ದುಡಿಮೆ ಸಾಕು, ಕೂತು ತಿಂದುಂಡು ಹಾಯಾಗಿರುವ ಆಲಸ್ಯ ಮೈಗೂಡುತ್ತದೆ. ರೋಗದ ಮೂಲ ಇದೇ. ಆಯಾಸ, ಶ್ರಮದಾಯಕ ಕೆಲಸ ಸುಖಕರ. ಅತಿಯಾಗಿ ಶ್ರಮಪಟ್ಟು ದೇಹದಂಡನೆಯಾದರೆ ವಿರಾಮವೇ ಸುಖ. ಹೀಗೆ ಬದುಕಿಗೆ ಕಷ್ಟವೂ, ಮಾನಸಿಕ ಕ್ಲೇಶವೂ ಬೇಕು. ಸರಿದೂಗಿಸಲು ಸುಖವೂ ನಿರಾಳತೆಯೂ ಬೇಕು.
ಸಂತುಲಿತ ಸಮಗ್ರ ಜೀವನವೆಂದರೆ ಎಲ್ಲವನ್ನೂ ಕಾಲಕ್ಕೆ ಅನುಗುಣವಾಗಿ ಮಿತಿಯಲ್ಲೇ ಅನುಭವಿಸುವುದೇ ಅಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.