ADVERTISEMENT

ಬಂಜೆತನ ರಾಷ್ಟ್ರೀಯ ಆರೋಗ್ಯದ ಆದ್ಯತೆಯಾಗಲಿ;‌ ವಿಮೆ ವ್ಯಾಪ್ತಿಗೆ ತರಲು ತಜ್ಞರ ಮನವಿ

ಪಿಟಿಐ
Published 24 ಜುಲೈ 2024, 12:30 IST
Last Updated 24 ಜುಲೈ 2024, 12:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಬಂಜೆತನವು ರಾಷ್ಟ್ರೀಯ ಆರೋಗ್ಯದ ಆದ್ಯತೆಯನ್ನಾಗಿ ಪರಿಗಣಿಸುವ ಅಗತ್ಯವಿದ್ದು, ಇದನ್ನು ವಿಮೆ ವ್ಯಾಪ್ತಿಗೆ ತರಬೇಕು ಎಂದು ಇಂದಿರಾ ಐವಿಎಫ್‌ನ ಸಂಸ್ಥಾಪಕ ಡಾ. ಅಜಯ್ ಮುರಡಿಯಾ ಆಗ್ರಹಿಸಿದ್ದಾರೆ.

ಗ್ರಾಮೀಣ ಭಾಗವನ್ನೂ ಒಳಗೊಂಡಂತೆ ಬಂಜೆತನಕ್ಕೆ ಚಿಕಿತ್ಸೆ ನೀಡುವ ಸೌಲಭ್ಯವನ್ನು ಹೆಚ್ಚಿಸುವ ಅಗತ್ಯವಿದೆ. ಬಂಜೆತನಕ್ಕೆ ಚಿಕಿತ್ಸೆ ಪಡೆಯಲು ಕೇವಲ ಶ್ರೀಮಂತರಿಗೆ ಮಾತ್ರ ಸಾಧ್ಯ ಎಂಬಂತಾಗಿದೆ. ಬಡವರು ಈ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಇದನ್ನು ವಿಮಾ ವ್ಯಾಪ್ತಿಗೆ ತಂದಲ್ಲಿ ಹೆಚ್ಚು ಜನರಿಗೆ ಅನುಕೂಲವಾಗಲಿದೆ’ ಎಂದಿದ್ದಾರೆ.

ADVERTISEMENT

‘ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಭಾರತದ ಬಹಳಷ್ಟು ಜನರು ವೈದ್ಯಕೀಯ ಸೌಲಭ್ಯ ಪಡೆಯಲು ಸಾಧ್ಯವಾಗಿದೆ. ಈ ಯೋಜನೆಯೊಳಗೆ ಬಂಜೆತನ ನಿವಾರಣೆ ಚಿಕಿತ್ಸೆಯನ್ನೂ ತಂದಲ್ಲಿ, ಹೆಚ್ಚಿನ ಸಂಖ್ಯೆಯ ದಂಪತಿಗಳು ಸಂತಾನಭಾಗ್ಯವನ್ನು ಪಡೆಯಲು ಸಾಧ್ಯ’ ಎಂದು ಡಾ. ಅಜಯ್ ಅವರು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ಕೆಲ ಸಮೀಕ್ಷೆಗಳ ಪ್ರಕಾರ ದೇಶದಲ್ಲಿ 2.75 ಕೋಟಿ ದಂಪತಿಗಳು ಸಂತಾನಕ್ಕಾಗಿ ಪರದಾಡುತ್ತಿದ್ದಾರೆ. ಆದರೆ 2.75ಲಕ್ಷ ದಂಪತಿಗಳಿಗೆ ಮಾತ್ರ ಪ್ರತಿ ವರ್ಷ ಈ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತಿದೆ. ಇದೊಂದು ಸದ್ದಿಲ್ಲದೆ ಆವರಿಸುವ ಸಾಂಕ್ರಾಮಿಕವಾಗಿದ್ದು, ಪ್ರತಿ ಆರು ದಂಪತಿಯಲ್ಲಿ ಒಬ್ಬರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ನಿಧಾನವಾಗಿ ರಾಷ್ಟ್ರೀಯ ವಿಪತ್ತಾಗಿ ಬದಲಾಗುತ್ತಿದೆ. ಇದು ಉಲ್ಬಣಗೊಂಡರೆ ದೇಶದ ಸಾಮಾಜಿಕ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ’ ಎಂದಿದ್ದಾರೆ.

‘ಬಂಜೆತನ ನಿವಾರಣೆಗೆ ಸದ್ಯ ಲಭ್ಯವಿರುವ ಪ್ರತಿ ಸುತ್ತಿನ ಚಿಕಿತ್ಸೆಗೆ ₹2ಲಕ್ಷದಿಂದ ₹3ಲಕ್ಷ ಖರ್ಚಾಗುತ್ತಿದೆ. ಚಿಕಿತ್ಸೆಯು ಫಲವಂತಿಕೆಯವರೆಗೂ ಹಲವು ಸುತ್ತುಗಳನ್ನು ನಡೆಸಬೇಕಿರುವುದರಿಂದ ಹಲವು ಕುಟುಂಬಗಳು ಬಹಳಷ್ಟು ಹಣವನ್ನು ಕಳೆದುಕೊಂಡಿವೆ. ಬಂಜೆತನಕ್ಕೆ ಚಿಕಿತ್ಸೆ ನೀಡುವ ಸರ್ಕಾರಿ ಆಸ್ಪತ್ರೆಗಳು ವಿರಳ. ಇದರಿಂದಾಗಿ ಬಹಳಷ್ಟು ಕುಟುಂಬಗಳು ಸಂತಾನ ಪಡೆಯುವುದರಿಂದ ವಂಚಿತವಾಗಿವೆ’ ಎಂದು ಡಾ. ಮುರಡಿಯಾ ಹೇಳಿದ್ದಾರೆ.

‘ದೇಶದಲ್ಲಿ ಸುಮಾರು 2,500 ಬಂಜೆತನ ನಿವಾರಣೆ ಚಿಕಿತ್ಸಾ ಕೇಂದ್ರಗಳು ಕೆಲಸ ಮಾಡುತ್ತಿದ್ದು, ಇವುಗಳಲ್ಲಿ ಹಲವು ನಿರ್ದಿಷ್ಟ ಮಾರ್ಗಸೂಚಿಯನ್ನು ಪಾಲಿಸುತ್ತಿಲ್ಲ. ಇದು ಚಿಕಿತ್ಸೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಜತೆಗೆ ಚಿಕಿತ್ಸಾ ಕೇಂದ್ರಗಳು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿವೆ. ಹೀಗಾಗಿ ಬಂಜೆತನದಿಂದ ದೂರವಾಗಲು ಗ್ರಾಮೀಣ ಭಾಗದ ದಂಪತಿಗಳು ಪರದಾಡುವಂತಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.