ADVERTISEMENT

ಕೂದಲು: ಸೌಂದರ್ಯಕ್ಕೂ ಆರೋಗ್ಯಕ್ಕೂ

ಡಾ.ವಿಜಯಲಕ್ಷ್ಮಿ ಪಿ.
Published 27 ಜೂನ್ 2023, 1:10 IST
Last Updated 27 ಜೂನ್ 2023, 1:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಡಾ. ವಿಜಯಲಕ್ಷ್ಮಿ ಪಿ.

‘ಡಾಕ್ಟ್ರೇ, ವಿಪರೀತ ಕೂದಲು ಉದುರುತ್ತಿದೆ, ತಲೆ ನೆವೆ’, ಎಂದು ಹೇಳುವ ರೋಗಿಗಳು ಅನೇಕರಿದ್ದಾರೆ. ಇಬ್ಬರು ಹೆಣ್ಣುಮಕ್ಕಳು, ಹಿರಿಯರಿರಲಿ ಕಿರಿಯರಿರಲಿ, ಒಟ್ಟಿಗೆ ಕುಳಿತು ಮಾತನಾಡುವಾಗ, ಒಂದಲ್ಲಾ ಒಂದು ರೀತಿಯಲ್ಲಿ ಕೇಶರಕ್ಷಣೆಯ ಬಗ್ಗೆ ವಿಮರ್ಶಿಸುತ್ತಾರೆ. ಹೆಣ್ಣುಮಕ್ಕಳ ಸೌಂದರ್ಯವಿರುವುದೇ ಕೇಶದಲ್ಲಿ ಎನ್ನುವಷ್ಟು ಕೂದಲಿನ ರಕ್ಷಣೆಯ ಬಗ್ಗೆ ಕಾಳಜಿ ವಹಿಸುತ್ತಾರೆ. ಇನ್ನು ಗಂಡುಮಕ್ಕಳೇನೂ ಕಡಿಮೆಯಲ್ಲ; ಬೊಕ್ಕತಲೆಯ ತೊಂದರೆಯನ್ನು ತಿಳಿಸಲು ಒಂದು ಚಲನಚಿತ್ರವನ್ನೆ ತಯಾರಿಸಿದ್ದಾರಲ್ಲಾ! ಹುಟ್ಟಿದ ಮಗುವನ್ನು ನೋಡುವಾಗಲೂ ಮೊದಲು ನಮ್ಮಿಂದ ಬರುವ ಮಾತು ‘ಕೂದಲು ತುಂಬಾ ಚೆನ್ನಾಗಿದೆ’ ಎಂದು.

ಕೂದಲಿಗೇಕೆ ಇಷ್ಟು ಪ್ರಾಮುಖ್ಯ? ಕೂದಲು ಸೌಂದರ್ಯದ ಸಾಧನ ಮಾತ್ರವಲ್ಲದೆ, ದೇಹದ ಆರೋಗ್ಯಸೂಚಕವೂ ಆಗಿದೆ. ಕೂದಲಿನಲ್ಲಾಗುವ ಬದಲಾವಣೆಗಳು ಕೂದಲಿನ ಆರೋಗ್ಯದ ಜೊತೆಗೆ ದೇಹದ ಆರೋಗ್ಯವನ್ನೂ ನಿರ್ದೇಶಿಸುತ್ತದೆ.

ADVERTISEMENT

ಬೋಳುತಲೆಗೆ ಪ್ರಧಾನ ಕಾರಣ ಆನುವಂಶಿಕತೆ; ಅದು ದೇಹಕ್ಕೆ ವಯಸ್ಸಾಗುತ್ತಿರುವುದರ ಸೂಚಕವೂ ಹೌದು. ವಿನಾ ಕಾರಣ ನಿತ್ಯವೂ ಕೂದಲು ಸಿಕ್ಕಾಗುತ್ತಿದ್ದರೆ, ಅಗತ್ಯ ಪೋಷಕಾಂಶಗಳನ್ನು ಪರಿಪೂರ್ಣವಾಗಿ ಪರಿವರ್ತಿಸಲು ದೇಹಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಸೂಚಿಸುತ್ತದೆ.

ತಲೆಹೊಟ್ಟು, ಕೂದಲು ಸೀಳುವುದು ಇದ್ದರೆ, ದೇಹದಲ್ಲಿ ನೀರಿನಂಶ, ಜಿಡ್ಡಿನಂಶ ಕಡಿಮೆಯಾಗಿ ದೇಹ ಒಣಗುತ್ತಿದೆ ಎಂದರ್ಥ.

ವಿಪರೀತ ಕೂದಲು ಉದುರುವುದು ನಿರಂತರ ಆತಂಕ, ಸಿಟ್ಟು, ದ್ವೇಷ, ದುಃಖವನ್ನು ಅನುಭವಿಸುತ್ತಿರುವ ಸೂಚನೆಯೂ ಇರಬಹುದು ಅಥವಾ ಅಗತ್ಯ ಪೊಷಕಾಂಶಗಳು, ಕಬ್ಬಿಣ, ಸತು, ಪ್ರೊಟೀನುಗಳ ಕೊರತೆಯೂ ಕಾರಣವಾಗಿರಬಹುದು. ಥೈರಾಯ್ಡ್, ಯಂಡ್ರೋಜನ್, ಪ್ರೊಜೆಸ್ಚರಾನ್ ಮುಂತಾದ ಹಾರ್ಮೊನುಗಳ ಏರುಪೇರು ಕೂಡ ಕೂದಲು ಉದುರಲು ಕಾರಣವಾಗುತ್ತದೆ.

ಅಮ್ಲಪಿತ್ತ ನಿವಾರಕ ಔಷಧಗಳು, ವಿಟಮಿನ್ ‘ಎ’ ಮತ್ತು ‘ಇ’ ಪೋಷಕಾಂಶಗಳ ಮಿತಿ ಇಲ್ಲದ ಸೇವನೆ, ಕ್ಯಾನ್ಸರ್ ನಿವಾರಕ ಔಷಧಗಳ ಸೇವನೆ, ಕೆಲವು ವಿಷಕಾರಿ ಪದಾರ್ಥಗಳ, ಔಷಧಗಳ ನಿರಂತರ ಸೇವನೆ ಇವುಗಳ ಅಡ್ಡ ಪರಿಣಾಮವಾಗಿಯೂ ಕೂದಲು ಉದರುವುದನ್ನು ಕಾಣುತ್ತೇವೆ.
ಸೋರಿಯಾಸಿಸ್ ಮೊದಲಾದ ಚರ್ಮರೋಗಗಳಲ್ಲಿ, ಕೆಲವು ಲೈಂಗಿಕ ರೋಗಗಳಲ್ಲಿ, ಕೂದಲಿನ ಕೂಪಕ್ಕೆ ತಗಲುವ ಫಂಗಸ್, ಬ್ಯಾಕ್ಟೀರಿಯಾಗಳಿಂದಾಗಿ, ಕೂದಲಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಸಂದರ್ಭಕ್ಕೆ ತಕ್ಕಂತೆ, ಆಯಾ ಕಾಲದ ಫ್ಯಾಷನ್ನಿಗನುಗುಣವಾಗಿ ಕೇಶವಿನ್ಯಾಸವನ್ನು ಬದಲಾಯಿಸುವುದು, ಅದಕ್ಕಾಗಿ ಕೂದಲಿನ ಸ್ವಭಾವವನ್ನು ಬದಲಾಯಿಸುವಂತಹ ರಾಸಾಯನಿಕಗಳನ್ನು ಬಳಸುವುದು, ಬಿಗಿಯಾಗಿ ಎಳೆದು ಹಿಡಿದಿಡುವಂತಹ ಕೇಶವಿನ್ಯಾಸಗಳು ರೋಮಕೂಪಗಳ ಮೇಲೆ ಅಧಿಕ ಒತ್ತಡವನ್ನು ಹೇರಿ ಕೂದಲಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ.

ಯಾವುದೇ ವೈಜ್ಞಾನಿಕ ತಳಹದಿ ಇಲ್ಲದ, ಕೂದಲಿನ ಮೇಲಿನ ಪರಿಣಾಮವನ್ನು ತಿಳಿಯದೇ ಕೇವಲ ಜಾಹಿರಾತನ್ನು ನಂಬಿ ಉಪಯೋಗಿಸುವ ಕೇಶಸೌಂದರ್ಯ ಸಾಧನಗಳೂ ಕೂದಲಿನ ಆರೋಗ್ಯವನ್ನು ಹಾಳುಮಾಡುತ್ತವೆ.

ಕೂದಲಿನ ಆರೋಗ್ಯವನ್ನು ಕಾಪಾಡಲು ದೇಸೀ ಹಸುವಿನ ಹಾಲಿನ ಸೇವನೆ ಅತ್ಯಂತ ಪರಿಣಾಮಕಾರಿಯಾಗಿದೆ. ಅದು ಕೊಬ್ಬು, ಪ್ರೊಟೀನು, ಕ್ಯಾಲ್ಸಿಯಂ, ವಿಟಮಿನ್ ‘ಎ’ಗಳ ಹದವಾದ ಮಿಶ್ರಣವಾಗಿದೆ. ಇದು ಕೂದಲನ್ನು ಸೊಂಪಾಗಿಸಿ ಕಾಂತಿಯುತವಾಗಿ ಮಾಡುತ್ತದೆ. ಉಗುರು ಬೆಚ್ಚಗಿನ ಎಳ್ಳೆಣ್ಣೆ, ಕೊಬ್ಬರಿ ಎಣ್ಣೆಗಳ ಮಿಶ್ರಣವನ್ನು ನಿತ್ಯವೂ ತಲೆಗೆ ಹಚ್ಚುವುದರಿಂದ ಕೂದಲಿಗೆ ಸಂಬಂಧಿಸಿದ ರೋಗಗಳ ಜೊತೆಗೆ ನರದೌರ್ಬಲ್ಯ ಬಾರದಂತೆ ತಡೆಗಟ್ಟಬಹುದು. ತಲೆ ಅಥವಾ ಕೂದಲನ್ನು ತೊಳೆಯಲು ರಾಸಾಯನಿಕಗಳ ಬಳಕೆ ಒಳ್ಳೆಯದಲ್ಲ. ಸೀಗೆಪುಡಿ, ಚಿಗರೆಪುಡಿ, ಅಂಟುವಾಳದಕಾಯಿ, ಜೊತೆಗೆ ನೆಲ್ಲಿಕಾಯಿ ಮತ್ತು ಭೃಂಗರಾಜದ ಪುಡಿಗಳನ್ನು ಮಿಶ್ರಮಾಡಿ ಬಳಸುವುದರಿಂದ ಆರೋಗ್ಯಕರ ಕೂದಲನ್ನು ಪಡೆಯಬಹುದು ಮತ್ತು ಬಾಲನೆರೆಯನ್ನೂ ತಡೆಗಟ್ಟಬಹುದು.

ಆಹಾರ, ನಿದ್ರೆ, ಬ್ರಹ್ಮಚರ್ಯೆಗಳನ್ನು ಸಮಂಜಸವಾಗಿ ಪಾಲನೆ ಮಾಡುವುದರಿಂದ, ಹಾರ್ಮೋನುಗಳ ವ್ಯತ್ಯಾಸದಿಂದ ಉತ್ಪನ್ನವಾಗುವ ಎಲ್ಲಾ ಸಮಸ್ಯೆಗಳನ್ನೂ ತಡೆಗಟ್ಟಬಹುದು. ಸೂರ್ಯೋದಯಕ್ಕಿಂತ ಮುಂಚಿತವಾಗಿ ಏಳುವುದು, ರಾತ್ರಿ ನಿದ್ರೆಗೆಡದಿರುವುದು, ಸಕಾಲದಲ್ಲಿ ಸರಿಯಾದ ಆಹಾರವನ್ನು ಹಿತಮಿತವಾಗಿ ಸೇವಿಸುವುದು, ಬೇಳೆಕಾಳುಗಳು, ಹಸಿರು ತರಕಾರಿಗಳು, ಸಕಾಲದ ಹಣ್ಣುಗಳ ಯುಕ್ತಿಯುಕ್ತವಾದ ಸೇವನೆ, ಸಾತ್ವಿಕ ಚಿಂತನೆಗಳು, ಥೈರಾಯ್ಡ್, ಮುಂತಾದ ಹಾರ್ಮೋನುಗಳು ಸರಿಯಾಗಿ ಸ್ರವಿಸುವಂತೆ ಮಾಡುತ್ತದೆ. ಇದರಿಂದ ಕೂದಲು, ಶಕ್ತಿಯುತವಾಗಿಯೂ ಕಾಂತಿಯುತವಾಗಿಯೂ ಕೂಡಿರುತ್ತದೆ.

ತಲೆಹೊಟ್ಟು ಮತ್ತೊಂದು ಸಮಸ್ಯೆ. ಕೆಲವೊಮ್ಮ ತಲೆಯ ಚರ್ಮದ ಒಣಗುವಿಕೆಯಿಂದ, ಕೆಲವೊಮ್ಮೆ ಚರ್ಮವ್ಯಾಧಿಯ ಪೂರ್ವರೂಪವಾಗಿ, ಯಾವುದಾದರೂ ಸೊಂಕು ತಗುಲುವುದರಿಂದ, ಅಥವಾ ಅಲರ್ಜಿಗಳಿಂದ ಉತ್ಪನ್ನವಾಗಬಹುದು. ಎಣ್ಣೆ ಹಚ್ಚುವುದು, ಚರ್ಮದ ರೂಕ್ಷತೆಯನ್ನು ಕಡಿಮೆ ಮಾಡುವ ಮೆಂತ್ಯ, ಕಮಲದ ಹೂವಿನ ಪುಡಿ, ತ್ರಿಫಲಾಚೂರ್ಣ, ಮುಂತಾದ ದ್ರವ್ಯಗಳನ್ನು ತಲೆಗೆ ಲೇಪಮಾಡಿ ಸ್ನಾನ ಮಾಡುವುದು, ಹೊಟ್ಟನ್ನು ದೂರ ಮಾಡುವ ಒಂದು ಪರಿಹಾರ. ಯಾವುದಾದರೂ ಸೊಂಕಾಗಿದ್ದರೆ, ಅಲರ್ಜಿಯಿಂದಾಗಿ ತೊಂದರೆ ಆಗುತ್ತಿದ್ದರೆ, ವೈದ್ಯರನ್ನು ಕಂಡು ಸೂಕ್ತ ಪರಿಹಾರ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಸೊಂಕು ದೇಹದ ಬೇರೆ ಭಾಗಗಳಿಗೂ ಹರಡಬಹುದು, ಹೊಟ್ಟು ಬಿದ್ದ ಜಾಗದಲ್ಲಿ ಮೊಡವೆಯಂತಹ ಸಣ್ಣ ಸಣ್ಣ ಗುಳ್ಳೆಗಳಾಗಿ ತುರುಕೆ, ಉರಿ, ನೋವು ಉತ್ಪನ್ನವಾಗಬಹುದು. ಇಂತಹ ಸಂದರ್ಭದಲ್ಲಿ ಮನೆಮದ್ದಿಗೆ ಮೊರೆ ಹೋಗದೆ ಸೂಕ್ತವಾದ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಮಾಡಿಕೊಳ್ಳಬೇಕು.

ತಲೆಹೊಟ್ಟಿನಂತೆ ಕಂಡರೂ ಸೋರಿಯಾಸಿಸ್ ಮೊದಲಾದ ಚರ್ಮರೋಗಗಳು ಶಿರಸ್ಸಿನಲ್ಲಿ ಉತ್ಪನ್ನವಾಗುತ್ತವೆ. ಹೊಟ್ಟು, ಚರ್ಮರೋಗ ಇರುವವರು ಬಳಸಿದ ಬಾಚಣಿಗೆ, ಟವೆಲು, ಬಟ್ಟೆಗಳನ್ನು ಬಳಸುವುದರಿಂದಲೂ ಹರಡುತ್ತದೆ. ಆಗ ಚರ್ಮರೋಗದ ಚಿಕಿತ್ಸೆಯಿಂದ ಮಾತ್ರ ಇದರಿಂದ ಬಿಡುಗಡೆ ಪಡೆಯಲು ಸಾಧ್ಯ. ಯಾವುದೋ ಎಣ್ಣೆ, ಲೋಶನ್ಗಳ ಬಳಕೆಯಿಂದ ಗುಣವಾಗಬಹುದೆಂಬ ಪೊಳ್ಳು ನಂಬಿಕೆ, ಭರವಸೆಗಳಿಗೆ ಮರುಳಾಗಬಾರದು.

ಅತಿಯಾದ ಚಿಂತೆ, ಅತಿಯಾದ ಲೋಶನ್ಗಳ ಬಳಕೆಯಿಂದ, ತಲೆಯ ಕೆಲವು ಭಾಗಗಳಲ್ಲಿ ಮಾತ್ರ ಕೂದಲು ಉದುರಿ ನೆತ್ತಿಯ ಮೇಲೆ ಬೋಳುಕಲೆಗಳನ್ನು ಉಂಟುಮಾಡುತ್ತದೆ. ಆಗ ವೈದ್ಯರ ಸಲಹೆಯ ಮೇರೆಗೆ ಕಲೆ ಇರುವ ಭಾಗಕ್ಕೇ ಔಷಧಿ ಹಚ್ಚಿ, ಜೊತೆಗೆ ಕೆಲವು ಔಷಧಗಳನ್ನು ಸೇವಿಸಿ ಗುಣಮಾಡಿಕೊಳ್ಳಬೇಕು.

ಕೂದಲಿಗೆ ಅತಿ ಹೆಚ್ಚು ತೊಂದರೆ ಕೊಡುವುದರಲ್ಲಿ ಮೊದಲನೆಯ ಸ್ಥಾನ ಹೇನು, ಸೀರುಗಳಿಗೆ. ಅದು ವ್ಯಕ್ತಿಯ ಘನತೆಯನ್ನು ಸಾಮಾಜಿಕವಾಗಿಯೂ ವೈಯುಕ್ತಿಕವಾಗಿಯೂ ಘಾಸಿಗೊಳಿಸುತ್ತದೆ. ಕಹಿ ಜೀರಿಗೆ ಲೇಪ, ಎಣ್ಣೆಗಳನ್ನು ಹಚ್ಚಿ ಹೇನನ್ನು ದೂರಮಾಡಬಹುದು. ಅದು ವಿಪರೀತವಾಗಿದ್ದರೆ ಹುಳಕ್ಕೆ ಕೊಡುವ ಆಂತರಿಕ ಔಷಧಗಳ ಸೇವನೆಯ ಮೂಲಕ ಹೇನು ಸೀರುಗಳು ಉತ್ಪನ್ನವಾಗದಂತೆ ತಡೆಗಟ್ಟಬಹುದು.

ಶುದ್ಧ ಆಚಾರ-ವಿಚಾರಗಳಿಂದ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.