ಧನುರ್ವಾಯು ಹೊಸ ಕಾಯಿಲೆಯೇನೂ ಅಲ್ಲ. ಅದು ನಮ್ಮ ಪೂರ್ವಜರಿಗೂ ಗೊತ್ತಿತ್ತು. ವಾತದಿಂದ ಬರುವ ರೋಗವೆಂದು ಅವರು ಭಾವಿಸಿದ್ದರು. ಶರೀರವನ್ನು ಬಿಲ್ಲಿನಂತೆ ಬಗ್ಗಿಸುವ ರೋಗ ಎಂದು ಮಾಧವ ನಿದಾನವು ಹೇಳುತ್ತದೆ.
ಇದು ಗ್ರಾಂ ಸಕಾರಕ ಕ್ಲಾಸ್ಟ್ರಿಡಿಯಂ ಟಿಟ್ಯಾನಿ ಎಂಬ ರೋಗಾಣುವಿನಿಂದ ಬರುತ್ತದೆ. ಈ ರೋಗಾಣುಗಳು ಮಣ್ಣಿನಲ್ಲಿ, ಗೊಬ್ಬರದಲ್ಲಿ, ಅದರಲ್ಲೂ ಸಸ್ಯಾಹಾರಿ ಪ್ರಾಣಿಗಳ ಗೊಬ್ಬರದಲ್ಲಿ ಹೇರಳವಾಗಿರುತ್ತವೆ. ಸಸ್ಯಾಹಾರಿ ಪ್ರಾಣಿಗಳ ಕರುಳಿನಲ್ಲಿ ಅವುಗಳಿಗೆ ತೊಂದರೆ ಕೊಡದೆ, ಕಾಯಿಲೆಯನ್ನುಂಟು ಮಾಡದೆ ನಿರಪಾಯಕಾರಿಗಳಾಗಿ ಈ ರೋಗಾಣುಗಳು ಬಾಳುತ್ತವೆ.
ರೋಗಾಣುಗಳು ದೇಹದ ಒಂದಡೆ ನೆಲೆಸಿ ಕರಗುವಂತಹ ಹೊರ ವಿಷಾಣುಗಳನ್ನು ಉತ್ಪತ್ತಿ ಮಾಡುತ್ತವೆ. ಅವುಗಳಿಗೆ ಟಿಟನೋ ಲ್ಯೆಸಿನ್ ಮತ್ತು ಟಿಟಿನೋ ಸ್ಟಾಸ್ಮಿನ್‌ಗಳೆಂದು ಹೆಸರು. ಇವೆರಡರಲ್ಲಿ ಟೆಟ್‌ನೊ ಸ್ಟಾಸ್ಮಿನ್ ಅತೀ ಮುಖ್ಯವಾದುದು. ಟೆಟನೋ ಲೈಸಿಲ್ ಕೆಂಪು ಮತ್ತು ಬಿಳಿಯ ರಕ್ತ ಕಣಗಳನ್ನು ನಾಶಪಡಿಸುತ್ತದೆ. ಟೆಟನೋ ಸ್ಟಾಸ್ಮಿನ್ ನಾಲ್ಕು ವಿಧವಾಗಿ ನರಮಂಡಲಕ್ಕೆ ಮುತ್ತಿಗೆ ಹಾಕುತ್ತದೆ.
ಮಾಂಸಖಂಡಗಳಲ್ಲಿಯ ಚಾಲಕ ನರಗಳ ಕೊನೆ, ಮೆದುಳು ಬಳ್ಳಿ, ಮೆದುಳು ಮತ್ತು ಅನುವೇದಕ– ಈ ನಾಲ್ಕೂ ಸ್ಥಳದಲ್ಲಿ ಟೆಟಿನೊ ಸ್ಟಾಸ್ಮಿನ್ ಕೆಲಸ ಮಾಡುವುದರಿಂದ ರೋಗಿ ಸೆಟೆಯುವಂತೆ ಮಾಡುತ್ತದೆ.
ರೋಗದ ಲಕ್ಷಣಗಳು
ರೋಗದ ಅವಧಿ ಸಾಮಾನ್ಯವಾಗಿ 3–21 ದಿನಗಳು. ಸಾಮಾನ್ಯವಾಗಿ ಮೊದ ಮೊದಲು ಬಾಯಿಯನ್ನು ತೆರೆಯಲು ಕಷ್ಟವಾಗುವುದು. ಹಾಲು ಕುಡಿಯುತ್ತಿದ್ದ ಹಸುಗೂಸುಗಳು ಹಾಲು ಕುಡಿಯುವುದನ್ನು ನಿಲ್ಲಿಸುತ್ತವೆ. ಮೊಲೆ ಹಿಡಿಯುವುದಿಲ್ಲ. ಈ ತೊಂದರೆ ಮುಂದು ಮಾಡಿಕೊಂಡೆ ತಾಯಂದಿರು ಹಸುಗೂಸುಗಳನ್ನು ವೈದ್ಯರಲ್ಲಿಗೆ ತರಬಹುದು. ದವಡೆಯ ಮಾಂಸ ಖಂಡಗಳಲ್ಲಿ ಪ್ರಾರಂಭದ ಹಂತದಲ್ಲಿಯೇ ಬಿಗುವು ಕಾಣಿಸುವುದರಿಂದಾಗಿಯೂ ಮೆಲಕಾಡಿಸಲು ಬರುವುದಿಲ್ಲ. ಕೂಸುಗಳಿಗೆ ಮೊಲೆ ಚೀಪುವುದು ಸಾಧ್ಯವಾಗುವುದಿಲ್ಲ. ಈ ಹಂತದಲ್ಲಿ ನೋವಿರದ ಸೌಮ್ಯ ದವಡೆ ಕಚ್ಚುವುದು ಕಂಡು ಬರುತ್ತದೆ. ದವಡೆ ಕಚ್ಚಿದ ಒಪ್ಪಾರಿ ಬಾಯಿಯ, ಮೇಲೇರಿದ ಹುಬ್ಬಿನ ಮುಖ ವಿಶಿಷ್ಟವಾಗಿದ್ದು ಅದಕ್ಕೆ ಅಣಕು ನಗುವಿನ ಮುಖ ಎಂದು ಕರೆಯುವರು. ಕತ್ತು, ಬೆನ್ನು, ಹೊಟ್ಟೆ ಬಿಗಿದುಕೊಳ್ಳುವುದರ ಜೊತೆಗೆ ನೋವು ಕಾಣಿಸಿಕೊಳ್ಳುತ್ತದೆ. ಕತ್ತು ಹಿಂದಕ್ಕೆ ಬಾಗುತ್ತದೆ. ಕಾಲುಗಳು ಸೆಟೆಯುತ್ತವೆ. ಬೆನ್ನು ಬಿಲ್ಲಿನಂತೆ ಬಾಗಿ, ಹಾಸಿಗೆ ಮತ್ತು ಬೆನ್ನಿನ ಮಧ್ಯೆ ಯಾವ ಅಡಚಣೆಯೂ ಇಲ್ಲದೆ ಸರಳವಾಗಿ ಕೈ ತೂರಿಸುವಷ್ಟು ಸ್ಥಳವಿರುತ್ತದೆ.
ಮಾಂಸ ಖಂಡಗಳಲ್ಲಿ ಬಿಗುವು ಪದೇ ಪದೇ ಕಾಣಿಸಿದಾಗ ಅಣಕು ಮುಖ, ಬೆನ್ನು ಹಿಂದೆ ಬಾಗುವುದು, ಕಾಲು ಸೆಟೆ ಬಂದಂತೆ ನೀಡಿಕೊಂಡಿರುವುದು, ಕೈಗಳು ಮಡಿಚಿಕೊಂಡು ಮುಷ್ಟಿ ಗಟ್ಟಿಯಾಗುವುದು ಈ ರೋಗದ ವೈಶಿಷ್ಟ್ಯಗಳು. ಮುಖದ ಮಾಂಸ ಖಂಡಗಳು ಬಿಗಿದುಕೊಳ್ಳುವುದರಿಂದ ರೋಗಿ ಹಲ್ಲು ಕಿರಿಯುವಂತೆ ವಿಕಾರವಾಗಿ ಕಾಣಿಸುತ್ತಾನೆ. ಕೈಕಾಲುಗಳನ್ನು ಅಲುಗಾಡಿಸುವುದರಿಂದ ಇಲ್ಲವೆ ಮಾಂಸಖಂಡಗಳನ್ನು ಒತ್ತುವುದರಿಂದ ಬಿಗಿತ ಹೆಚ್ಚಾಗುತ್ತದೆ. ಸದ್ದು, ಗದ್ದಲ, ಬೆಳಕು, ಚಳಿ, ಗಾಳಿ ಕೊಠಡಿಗೆ ನುಗ್ಗಿದಾಗ ರೋಗಿಗೆ ಅಧಿಕ ನಡುಕ ಉಂಟಾಗುತ್ತದೆ. ರೋಗಿಯು ಕೊನೆಯ ಉಸಿರನ್ನು ಎಳೆಯುವವರೆಗೂ ಎಚ್ಚರವಾಗಿಯೇ ಇರುವುದು ಈ ರೋಗದ ವಿಶಿಷ್ಟ ಗುಣ.
ಚಿಕಿತ್ಸೆ ಹೇಗೆ?
ಆಸ್ಪತ್ರೆಯ ಆವರಣದಲ್ಲಿ ಪ್ರತ್ಯೇಕವಾಗಿರುವ ಕತ್ತಲ ಕೋಣೆಯಲ್ಲಿ ರೋಗಿಯನ್ನು ಉಪಚರಿಸಬೇಕು. ಈ ಕೋಣೆಯಲ್ಲಿ ಉಜ್ವಲ ಬೆಳಕು ಇರಬಾರದು, ಸದ್ದು ಗದ್ದಲಗಳಿಗೆ ಅವಕಾಶ ಇರಬಾರದು. ಒಟ್ಟಿನಲ್ಲಿ ಪ್ರಚೋದನಾತ್ಮಕ ಚಟುವಟಿಕೆಗಳಿಂದ ಮುಕ್ತನಾಗಿರಬೇಕು. ಪರೀಕ್ಷಾ ಪ್ರಮಾಣದ ಜೀವಿಷಾರೋಧಕ ಕೊಟ್ಟು ಯಾವ ತೊಡಕು ತೊಂದರೆಗಳು ಗೋಚರಿಸದಿದ್ದಲ್ಲಿ, ನಿಗದಿ ಪಡಿಸಿದ ಪೂರ್ಣ ಪ್ರಮಾಣದ ಜೀವಿಷಾರೋಧಕವನ್ನು ಕೊಡಬೇಕು. ದೇಹದ ಸೆಟೆಯನ್ನು ಕಡಿಮೆ ಮಾಡಲು ಮಾಂಸ ಖಂಡಗಳ ಸಡಿಲಿಕೆಗಳನ್ನು ಉಪಯೋಗಿಸಬೇಕು. ಕತ್ತಿನ ಮಾಂಸ ಖಂಡಗಳು ಬಿಗಿಯುವುದರಿಂದ ಆಹಾರ ಸೇವನೆ ಅಸಾಧ್ಯವಾಗಬಹುದು. ದೇಹಕ್ಕೆ ಅವಶ್ಯವಿರುವ ಪೋಷಕಾಂಶಗಳನ್ನು ಗ್ಲೂಕೋಸ್ ದ್ರವರೂಪದಲ್ಲಿ ಕೊಡುವುದು ಸೂಕ್ತ. ರೋಗಿಗೆ ನುಂಗುವುದಕ್ಕೆ ಕಷ್ಟವೆನಿಸಿದಾಗ ಮೂಗಿನ ಮೂಲಕ ನಾಳ ಹಾಕಿ ಆಹಾರವನ್ನು ಕೊಡುವುದು ತುಂಬ ಅಪಾಯಕಾರಿ. ರೋಗಿಗೆ ನಾಳವನ್ನು ಹಾಕುವಾಗಲೇ ರೋಗಿ ಉದ್ರೇಕಗೊಂಡು ಅನೈಚ್ಛಿಕ ಅನಾಹುತಗಳಿಗೆ ಅವಕಾಶ ಮಾಡಿಕೊಟ್ಟಂತಾಗುವುದು.
ರೋಗಿಯನ್ನು ಒಂದು ಮಗ್ಗಲಿಗೆ ಮಲಗಿಸಬೇಕು. ಹೀಗೆ ಮಾಡುವುದರಿಂದ ಗಂಟಲಲ್ಲಿಯ ಸ್ರವಿಕೆಗಳು ಸಂಗ್ರಹವಾಗುವುದು ತಪ್ಪುತ್ತದೆ. ಉಸಿರಾಟಕ್ಕೆ ವಿಪರೀತ ಕಷ್ಟ ಆದಲ್ಲಿ ಟ್ರಿಕಿಯಾ-ಸ್ಟಮಿ ಮಾಡಿ, ಉಸಿರುಗಟ್ಟುವಿಕೆಯನ್ನು ತಪ್ಪಿಸಬೇಕು.
ಪ್ರತಿಬಂಧಕ ಉಪಾಯಗಳು
* ಗರ್ಭಿಣಿಯರು, ಗರ್ಭಧಾರಣೆಯ 3 ತಿಂಗಳ ನಂತರ 4–6ವಾರಗಳ ಅಂತರದಲ್ಲಿ ಎರಡು ಟಿಟಾನಸ್ ಟಾಕ್ಸಾಯಿಡ್ ಚುಚ್ಚುಮದ್ದನ್ನು ತೆಗೆದುಕೊಳ್ಳುವುದರಿಂದ ತಾಯಿ ಮತ್ತು ಮಗುವನ್ನು ಈ ರೋಗದಿಂದ ರಕ್ಷಿಸಬಹುದು.
* ತರಬೇತಿ ಪಡೆದ ದಾದಿ ಸ್ವಚ್ಛ ವಾತಾವರಣದಲ್ಲಿ, ಜೀವಿಶುದ್ಧೀಕರಣಕ್ಕೊಳಪಟ್ಟ ಉಪಕರಣಗಳನ್ನು ಹೆರಿಗೆ ವೇಳೆಯಲ್ಲಿ ಉಪಯೋಗಿಸಬೇಕು.
* ಯಾವ ಗಾಯವೇ ಆಗಲಿ ದೇಹದ ಯಾವ ಭಾಗದಲ್ಲೇ ಆಗಿರಲಿ, ಚಿಕ್ಕದೇ ಆಗಿರಲಿ ಅದನ್ನು ಕಡೆಗಣಿಸದೇ ಸೂಕ್ತ ಚಿಕಿತ್ಸೆಯನ್ನು ತಪ್ಪದೆ ತೆಗೆದುಕೊಳ್ಳಬೇಕು.
* ಮಗುವಿಗೆ ಆರು ವಾರಗಳಾದ ನಂತರ 4–6 ವಾರಗಳ ಅಂತರದಲ್ಲಿ ಮೂರು ಬಾರಿ ಪೆಂಟಾವ್ಹೆಲೆಂಟ್ ಲಸಿಕೆಯನ್ನು ನೀಡಬೇಕು ಮತ್ತು 18–24 ತಿಂಗಳಲ್ಲಿ ತ್ರೀರೋಗ ಚುಚ್ಚುಮದ್ದನ್ನು ಕೊಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.