ನನ್ನಲ್ಲಿ ಹೇಳಲಾಗದಷ್ಟು ನೋವಿದೆ. ಜಗತ್ತಿನಲ್ಲಿ ನನ್ನಂತಹ ನತದೃಷ್ಟ ಯಾರೂ ಇಲ್ಲ ಅಂದುಕೊಂಡಿದ್ದೇನೆ. ನನಗೆ ಜೀವನ ಸಾಕಾಗಿದೆ. ಸೋತಿದ್ದೇನೆ. ಕಷ್ಟಗಳನ್ನು ಹೊರಗೆ ಹೇಳಿಕೊಳ್ಳುವಂತಿಲ್ಲ ಏನು ಮಾಡಬೇಕೋ ತೋಚುತ್ತಿಲ್ಲ. ಒಮ್ಮೆಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲೆ ಅನ್ನಿಸಿ ಬಿಡುತ್ತದೆ..
–ಹೆಸರು ಊರು ತಿಳಿಸಿಲ್ಲ.
ನಿಮ್ಮೊಳಗೆ ತೀವ್ರವಾದ ಬೇಸರ ಹತಾಶೆ ಅಸಹಾಯಕತೆಗಳು ತುಂಬಿಕೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ನಿಮ್ಮ ಜೀವನದ ಅಸಹನೀಯ ಪರಿಸ್ಥಿತಿಗಳ ಕುರಿತು ಪತ್ರದಲ್ಲಿ ವಿವರಗಳಿಲ್ಲ. ಆದರೆ ಪತ್ರದ ಧ್ವನಿಯಿಂದ ಕೆಲವು ವಿಚಾರಗಳನ್ನು ಗಮನಿಸಬಹುದು.
1. ನನ್ನೊಳಗೆ ಹೇಳಲಾಗದ ನೋವಿದೆ, ಅದರೆ ಯಾರಿಗೂ ಹೇಳುವಂತಿಲ್ಲ ಎಂದು ತಿಳಿಸಿದ್ದೀರಿ. ಎಂದರೆ ನಿಮಗೆ ಮಾನವೀಯ ಸಂಪರ್ಕಗಳು ಬಹಳ ಕಡಿಮೆ ಮಟ್ಟದಲ್ಲಿದೆ ಎನ್ನುವುದರ ಸೂಚನೆಯಲ್ಲವೇ? ನಮ್ಮನ್ನು ಅರ್ಥ ಮಾಡಿಕೊಳ್ಳುವವರು ಯಾರೂ ಇಲ್ಲ ಎಂದುಕೊಂಡು ಮಾನವೀಯ ಸಂಪರ್ಕಗಳನ್ನು ಕಡಿದುಕೊಳ್ಳುತ್ತಾ ಹೋದರೆ ನಮ್ಮ ಹತಾಶೆ ಅಸಹಾಯತೆಗಳು ಹೆಚ್ಚುತ್ತವೆ.
2. ನನ್ನಂತಹ ನತದೃಷ್ಟ ಯಾರೂ ಇಲ್ಲ ಎಂದಿದ್ದೀರಿ. ಇದರ ಸೂಚನೆಯೆಂದರೆ ನೀವು ಮಾನವೀಯ ಸಂಪರ್ಕವನ್ನು ಕಳೆದುಕೊಂಡು ಬೇರೆಯವರ ಪರಿಸ್ಥಿತಿಗಳತ್ತ ನೋಡುವುದನ್ನೂ ನಿಲ್ಲಿಸಿದ್ದೀರಿ. ನಮ್ಮದೇ ದುಃಖಗಳ ಸಾಗರದಲ್ಲಿ ಮುಳುಗಿಹೋದಾಗ ಅದರ ಆಳ ಹೆಚ್ಚುತ್ತಲೇ ಹೋಗುತ್ತದೆ.
3. ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನಿಸುತ್ತದೆ ಎಂದಿದ್ದೀರಿ. ತೀವ್ರ ಅಸಹಾಯಕತೆಯಿಂದ ಪರಿಹಾರಗಳು ಹೊಳೆಯದಿದ್ದಾಗ ಬದುಕನ್ನು ಕೊನೆಗಾಣಿಸಿ ಕಷ್ಟಗಳನ್ನು ಅನುಭವಿಸುವುದರಿಂದ ಓಡಿಹೋಗಬಹುದು ಎನ್ನಿಸುತ್ತದೆ. ಆತ್ಮಹತ್ಯೆಯ ಯೋಚನೆ ನೀವು ಅನುಭವಿಸುತ್ತಿರುವ ನೋವು ಅಸಹಾಯಕತೆಗಳಿಂದ ಬಂದಿದೆ. ಎದುರಿಸುವುದು ಅಸಾಧ್ಯ ಎನ್ನಿಸಿದಾಗ ಓಡಿಹೋಗುವ ದಾರಿ ಹುಡುಕತೊಡಗಿದ್ದೀರಿ ಅಲ್ಲವೇ?
ಪರಿಹಾರವನ್ನು ಕಂಡುಕೊಳ್ಳುವ ಮೊದಲು ಕೆಲವು ವೈಜ್ಞಾನಿಕ ವಿಚಾರಗಳನ್ನು ತಿಳಿಯೋಣ. ನಾವೆಲ್ಲರೂ ಸಂಘಜೀವಿಗಳು. ಗುಂಪಿನಲ್ಲಿ ಸುಖದುಃಖಗಳನ್ನು ಹಂಚಿಕೊಂಡು ಬದುಕನ್ನು ಹಗುರಾಗಿಸಿಕೊಳ್ಳುವುದು ಮಾನವರ ಮೂಲಪ್ರವೃತ್ತಿ. ಹೀಗೆ ಹಂಚಿಕೊಂಡಾಗ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರಕಬೇಕೆಂದಿಲ್ಲ.
ಆದರೆ ನಮ್ಮ ಕಷ್ಟಗಳನ್ನು ಸಹಾನುಭೂತಿಯಿಂದ ಆಲಿಸುವ ಕಿವಿಗಳಿವೆ ಮತ್ತು ಅವರು ನಮಗೆ ಮಾನಸಿಕ ಆಸರೆ ನೀಡಬಲ್ಲರು ಎನ್ನಿಸಿದಾಗ ನಮ್ಮ ಮಿದುಳು ನರಮಂಡಲಗಳು ಶಾಂತವಾಗುತ್ತವೆ. ಆಗ ನಮಗೆ ವಿವೇಕದಿಂದ ಕಾರ್ಯಪ್ರವೃತ್ತರಾಗುವುದು ಸಾಧ್ಯ. ಇಂತಹ ಆತ್ಮೀಯ ಸ್ನೇಹ ಸಂಬಂಧಗಳು ಬದುಕಿನಲ್ಲಿ ಭರವಸೆಯಾಗಿ ಉಳಿಯುತ್ತವೆ.
ನಿಮಗೆ ಇಂತಹ ಸ್ನೇಹಸಂಬಂಧಗಳ ಕೊರತೆಯಿದೆ ಎನ್ನಿಸುತ್ತಿದೆ. ಈ ವರೆಗಿನ ಜೀವನಾನುಭವದಲ್ಲಿ ನೀವು ಕಷ್ಟಗಳನ್ನು ಹೇಳಿಕೊಂಡಾಗ ನಿಮಗೆ ದೊರಕಿದ್ದು ತಿರಸ್ಕಾರ, ಅವಗಣನೆ, ಅವಮಾನ ಮುಂತಾದವುಗಳು ಆಗಿರಬೇಕಲ್ಲವೇ? ಬಹಳ ವರ್ಷಗಳಿಂದ ಯಾರೊಡನೆಯೂ ನಿಮ್ಮ ಮನೋವೇದನೆಯನ್ನು ಹಂಚಿಕೊಳ್ಳದೆ ಅವು ಸ್ಪೋಟಗೊಳ್ಳುವ ಹಂತಕ್ಕೆ ಬಂದಿದೆ.
ಸಮಸ್ಯೆಗಳಿಗೆ ನಿಧಾನವಾಗಿಯಾದರೂ ಪರಿಹಾರಗಳನ್ನು ಹುಡುಕುವುದು ನಿಮಗೆ ಸಾಧ್ಯವಾಗಬೇಕಾದರೆ ಇಂತಹ ಹತಾಶೆ ಅಸಹಾಯಕತೆಗಳ ಒತ್ತಡ ಕಡಿಮೆಯಾಗಬೇಕು. ಇದಕ್ಕೆ ಹಂಚಿಕೊಂಡು ಹಗುರಾಗುವುದೊಂದೇ ಪರಿಹಾರ.
ನಿಮ್ಮ ಸ್ನೇಹಿತರ ಅಥವಾ ಆತ್ಮೀಯರ ಗುಂಪಿನಲ್ಲಿ ಯಾವುದೇ ನಿರೀಕ್ಷೆಯಿಲ್ಲದೆ ನಿಮ್ಮ ಮಾನಸಿಕ ತೊಳಲಾಟಗಳನ್ನು ಹಂಚಿಕೊಳ್ಳಲು ಪ್ರಯತ್ನಿಸಿ. ಇದಕ್ಕೆ ಸೂಕ್ತವಾದ ವ್ಯಕ್ತಿಯನ್ನು ಹುಡುಕಿಕೊಳ್ಳಬೇಕು. ನಿಮ್ಮ ವೇದನೆಯನ್ನು ಅರ್ಥಮಾಡಿಕೊಳ್ಳದವರಾದರೆ ಹಳೆಯ ಅನುಭವಗಳಾದ ಅವಮಾನ ತಿರಸ್ಕಾರಗಳು ಮರುಕಳಿಸಬಹುದು. ನಿಮ್ಮ ಸುತ್ತಲೂ ಅಂತಹ ವ್ಯಕ್ತಿ ಇಲ್ಲ ಎನ್ನಿಸಿದರೆ ತಜ್ಞ ಮನೋಚಿಕಿತ್ಸಕರ ಸಹಾಯ ಪಡೆಯಿರಿ. ಮನೋಚಿಕಿತ್ಸಕರಲ್ಲಿ ಕೂಡ ನಿಮ್ಮ ಜೀವನದ ಸಂದರ್ಭದಲ್ಲಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳಿಲ್ಲದೆ ಇರಬಹುದು. ಆದರೆ ಅವರು ತಾತ್ಕಾಲಿಕವಾಗಿಯಾದರೂ ನಿಮಗೆ ತುರ್ತಾಗಿ ಅಗತ್ಯವಿರುವ ಮಾನವೀಯ ಸಂಪರ್ಕದ ಅನುಭವವನ್ನು ನೀಡಿ ಭಾವೋದ್ವೇಗಗಳನ್ನು ನಿಭಾಯಿಸಲು ಸಹಾಯ ಮಾಡುತ್ತಾರೆ. ಶುಭವಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.