ADVERTISEMENT

ಕ್ಷೇಮ–ಕುಶಲ | ಬಾಯಿ: ಆಹಾರಕ್ಕೂ ಆರೋಗ್ಯಕ್ಕೂ ಬಾಗಿಲು

ಡಾ.ಪಿ.ಸತ್ಯನಾರಾಯಣ ಭಟ್ಟ‌
Published 16 ಜುಲೈ 2024, 0:30 IST
Last Updated 16 ಜುಲೈ 2024, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   
ಶಿಶಿರ, ವಸಂತ, ಗ್ರೀಷ್ಮ, ವರ್ಷ, ಶರತ್ ಮತ್ತು ಹೇಮಂತ ಎಂಬ ಷಡೃತುಗಳು ದೇಹದ ದೋಷಗಳ ಚಯ, ಪ್ರಕೋಪ ಮತ್ತು ಪ್ರಶಮಕ್ಕೆ ಕಾರಣ.

ಕುತ್ತಿಗೆಯ ಮೇಲಣ ಅಂಗಗಳು ಮೂಗು, ಬಾಯಿ. ಗಂಟಲು, ಕಣ್ಣು, ಕಿವಿಗಳು. ಅವುಗಳಿಗೆ ಸದಾ ಕಫದ ಕಾಯಿಲೆಗಳ ಬಾಧೆ. ಹಾಗಾಗಿ ಅವುಗಳ ಆರೋಗ್ಯವನ್ನು ಸದಾ ಕಾಪಾಡಲು ಕಫದ ತೊಂದರೆ ತಡೆಯುವ ಕಾಳಜಿ ಅನಿವಾರ್ಯ. ಆಯಾ ಋತುವಿಗೆ ಅನುಸಾರವಾಗಿ ಹೊಂಗೆ, ಎಕ್ಕ, ಮತ್ತಿ, ಕರವೀರ, ಆಲ, ಅತ್ತಿ, ಬಸರಿ ಮುಂತಾದ ಸಸ್ಯಮೂಲದ ದಂತಕೂರ್ಚ, ಅಂದರೆ ‘ಟೂತ್ ಬ್ರಷ್’ಗಳ ಬಳಕೆ ಹಿಂದಿನ ಕಾಲದಲ್ಲಿ ಪ್ರಚಲಿತವಾಗಿತ್ತು. ನಾಲಿಗೆಯನ್ನು ಸ್ವಚ್ಛಗೊಳಿಸಲು ಬಳಸುವ ವಿಧಾನ ಬಾಯಿಯ ಆರೋಗ್ಯವನ್ನು ಕಾಪಾಡಲು ಅತಿ ಮುಖ್ಯ. ಒಂದು ಮಾತು ಇಲ್ಲಿ ಬಹಳ ಪ್ರಸ್ತುತ. ದೇಹವೆಂಬ ಯಂತ್ರಾಗಾರಕ್ಕೆ ಬಾಯಿಯೇ ಹೆದ್ದಾರಿ! ಅದರ ಆರೋಗ್ಯವನ್ನು ಸದಾ ಕಾಯಲು ಬಾಯಿಯ ಶುಚಿತ್ವ ಖಂಡಿತ ಅತ್ಯಗತ್ಯ. ಹಿಂದೆ ಚಿನ್ನ, ಬೆಳ್ಳಿ, ತಾಮದ ಸರಿಗೆ ಬಳಸಿ ಎಚ್ಚರಿಕೆಯಿಂದ ನಾಲಿಗೆ ಶುಚಿಗೊಳಿಸುತ್ತದ್ದರು. ಮಾವಿನ ಅಥವಾ ಗೇರು(ಗೋಡಂಬಿ), ಹಲಸು ಎಲೆಗಳನ್ನು ಬಳಸಿ ಹಲ್ಲುಗಳನ್ನು ಉಜ್ಜುವ ಪರಂಪರೆ ಇನ್ನೂ ಜೀವಂತ. ಎಲೆಯ ‘ನಡುನರ’ವನ್ನು (ಮಿಡ್ ರಿಬ್) ಸಹ ಬಳಸಿ ಒಗೆಯುವ ಅದ್ಭುತ ‘ಟಂಗ್ ಕ್ಲೀನರ್’! ಮೆಸ್‍ವಾಕ್ ಎಂಬ ಬಯಲು ಸೀಮೆಯ ಮರಕ್ಕೆ ಅಂತಹದೇ ದಂತಕೂರ್ಚದ ಪಟ್ಟ ಇದೆ.

ತಾಂಬೂಲವನ್ನು ಜಗಿಯಲು ಆಯುರ್ವೇದದಲ್ಲಿ ಮನ್ನಣೆ ಇದೆ. ಆದರೆ ತಂಬಾಕು ಅಥವಾ ಗುಟಕಾದಂತಹ ಅದರ ಯಾವುದೇ ಉತ್ಪನ್ನಗಳನ್ನು ದೂರವಿಡಿ. ರಕ್ತದ ಏರೊತ್ತಡ, ಕ್ಯಾನ್ಸರ್, ಮಿದುಳು ರಕ್ತಸ್ರಾವ, ಗುಂಡಿಗೆ ಕಾಯಿಲೆಗಳಿಗದು ರಹದಾರಿ ಎಂಬುದು ನೆನಪಿರಲಿ. ತಂಬಾಕು ಬಳಕೆದಾರರಲ್ಲಿ ಒಂದು ಎಚ್ಚರಿಕೆ ಮಾತು ನೆನಪಿರಲಿ. ಆರಂಭದಲ್ಲಿ ನೀಡಿದ ಬಾಯಿಯ ಅಂಗ ಪ್ರತ್ಯಂಗಗಳ ಪಟ್ಟಿಯಲ್ಲಿ ಬಹಳ ದೊಡ್ಡ ಕಾಯಿಲೆ ಬಂದೀತು. ‘ಲೋಳ್ಪದರ’ (ಮ್ಯೂಕಸ್ ಮೆಂಬ್ರೇನ್) ಬಣ್ಣ ಬದಲಾದರೆ, ನೆತ್ತರು ಒಸರಿದರೆ ಅಪಾಯ ಇದೆ. ಇದು ಯಾವುದೇ ವಯಸ್ಸಿನಲ್ಲಿ ಉಂಟಾದೀತು. ಎಚ್ಚರವಿರಲಿ. ಮರೆಗುಳಿತನ, ಅನಿದ್ರೆ, ಬಹಳ ಆಯಾಸ ಮತ್ತು ತಲೆತಿರುಗುಗಳಂತಹ ಸಣ್ಣ ತೊಂದರೆ ದೊಡ್ಡ ಅಪಾಯಗಳ ಹೆದ್ದಾರಿ. ಹಾಗಾಗಿ ಬಾಯಿಯ ಆರೋಗ್ಯಕ್ಕೆ, ದೇಹಾರೋಗ್ಯಕ್ಕೆ ಮೂಲಮಂತ್ರ ತಂಬಾಕು ಮತ್ತು ಧೂಮಪಾನದಿಂದ ಸದಾಕಾಲ ದೂರವಿರುವುದು.

ADVERTISEMENT

ವೀಳ್ಯದೆಲೆ, ಸಾದಾ ಅಡಿಕೆ, ಸುಣ್ಣ, ಲವಂಗ, ಕಾಚು, ಪಚ್ಚೆ ಕರ್ಪೂರ, ಏಲಕ್ಕಿ, ಜಾಕಾಯಿಯಂತಹ ಸುವಸ್ತುಗಳ ತಾಂಬೂಲ ಚರ್ವಣದ ಉಲ್ಲೇಖ ಆಯುರ್ವೇದ ಸಂಹಿತೆಗಳಲ್ಲಿದೆ. ಹಿತಮಿತದ ಬಳಕೆಯ ಮೂಲ ಉದ್ದೇಶ ಬಾಯಿ ಮತ್ತು ಅದರ ಒಳ ಅಂಗ, ಪ್ರತ್ಯಂಗದ ಆರೋಗ್ಯ ಪಾಲನೆ. ಅಂತಹ ಕಟ್ಟು ನಿಟ್ಟಿನ ತಾಂಬೂಲ ಸೇವನೆಯಿಂದ ದವಡೆ, ಹಲ್ಲುಸಾಲುಗಳ ಮಲ ನಾಶ. ಮಾತು ಸ್ಪಷ್ಟ. ದನಿ, ಸ್ವರಶುದ್ಧಿಗಳಾಗುತ್ತವೆ. ನಾಲಿಗೆ ಸ್ವಚ್ಛವಾಗುತ್ತದೆ. ಕಿವಿ, ಕಣ್ಣು, ಮೂಗು, ಗಂಟಲುಗಳು ನಿರ್ಮಲ. ಅನಗತ್ಯ ಜೊಲ್ಲು ಸುರಿತಕ್ಕೂ ಕಡಿವಾಣ. ಬಾಯಿಯ ರುಚಿವರ್ಧನೆ. ಹೃದಯದ ಆರೋಗ್ಯಕ್ಕೂ ಪೂರಕ.

ಆಹಾರ, ಅದನ್ನು ತಿನ್ನುವ ವಿಧಾನಕ್ಕೂ ಮತ್ತು ಬಾಯಿಯ ಆರೋಗ್ಯಕ್ಕೆ ನೇರ ಸಂಬಂಧವಿದೆ. ಹುಳಿಯನ್ನು ಜಾಸ್ತಿ ತಿಂದರೆ ಹಲ್ಲುಗಳಿಗೆ ಜುಮುಜುಮುತನವಾದೀತು. ಅತಿಯಾಗಿ ಮಧುರ ವಸ್ತು ತಿಂದರೆ ಕಫ ವೃದ್ಧಿ. ಬಾಯಿಯ ಕಾಯಿಲೆಗಳೂ ಕಾಣಿಸಿಕೊಂಡಾವು. ಆದರೆ ಅತಿಮಧುರ ಅಥವಾ ಜೇಷ್ಠಮಧುರ ಎಂಬ ಬೇರಿನ ಬಳಕೆಯಿಂದ ಬಾಯಿಹುಣ್ಣು ವಾಸಿಯಾಗುತ್ತದೆ. ಗಂಟಲು ಮತ್ತು ಸ್ವರ ಶುಧ್ಧಿ. ಕಷಾಯ ಮಾಡಿ ಕುಡಿದರೆ ಅಥವಾ ಬಾಯಿ ಮುಕ್ಕುಳಿಸಿದರೆ ಸಾಕು. ಸರಳ ಮನೆ ಮದ್ದು ಇದು.

ರಾತ್ರಿವೇಳೆ ಅಥೌಆ ಮುಂಜಾನೆ ತೆಂಗಿನೆಣ್ಣೆಯ ‘ಗಂಡೂಷ’, ಎಂದರೆ ಬಾಯಿಯನ್ನು ಮುಕ್ಕುಳಿಸುವಿಕೆಯಿಂದ ಹಲ್ಲು ಮತ್ತು ಬಾಯಿಯ ಇತರ ಉಪಾಂಗಗಳಿಗೆ ಆರೋಗ್ಯ; ಒಳಪದರಗಳಿಗೆ ಬಲ. ಮೊಗದ ಕಾಂತಿ ವೃದ್ಧಿಗೆ ಪೂರಕ. ಉಣ್ಣುವ ಆಹಾರವನ್ನು ಹತ್ತಾರು ಬಾರಿ ಜಗಿದು ಉಣಬೇಕು ಎನ್ನುವ ಮಾತು ಪ್ರಸಿದ್ಧ. ಸುಭಾಷಿತವೊಂದರ ತುಣುಕು ಹೀಗಿದೆ: ‘ಆಡಿನ ಹಾಗೆ ನಾವು ಚೆನ್ನಾಗಿ ಜಗಿದು ತಿನ್ನತಕ್ಕದ್ದು’. ಹೀಗೆ ತಿಂದು ಬಾಯಿಯ ಕಾಯಿಲೆಗಳನ್ನು ದೂರವಿಡುವಾ.

ನೆತ್ತಿಗೊತ್ತಿದ ಎಣ್ಣೆ ನೇರವಾಗಿ ಕೆಳಗಿಳಿದು ಮುಖಾರೋಗ್ಯಕ್ಕೆ ಸಹಕಾರಿ. ಎಣ್ಣೆಯ ಸಂಗಡ ತುಪ್ಪ ಬೆರಸಿ ಹದ ಬಿಸಿ ಮಾಡಿರಿ. ನೆತ್ತಿಗೊತ್ತಿರಿ. ದೇಹದ ’ಹೀಟ್’ಅನ್ನು ತೊಡೆದು ಹಾಕಿರಿ. ಮೂಗು ಕಟ್ಟುವ ತೊಂದರೆಯಿಂದಲೂ ಪರಿಹಾರ. ಇದು ಬಾಯಿಹುಣ್ಣು ನಿರೋಧಕ ಉಪಚಾರವೂ ಹೌದು. ಗಂಟಲುಬೇನೆಯನ್ನು ನೀಗಲೂ ಇಂತಹ ಸರಳ ಉಪಾಯ ಸಾಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.