ವಸಂತಋತುವು ಹೂವುಗಳ ಕಂಪನ್ನು ತರುವುದರೊಂದಿಗೆ ಅನೇಕ ಮಂದಿಗೆ ದೂಳು ಕೇಸರದ ಕಣಗಳ ಅಲರ್ಜಿಗಳನ್ನೂ ಹೊತ್ತು ತರುತ್ತದೆ!
ವಸಂತದಲ್ಲಿ ಅಲರ್ಜಿಯಿಂದ ದೂರವಿರಬೇಕೆಂದರೆ ಹೇಮಂತ–ಶಿಶಿರದಲ್ಲೇ ತಯಾರಿ ಪ್ರಾರಂಭಿಸಬೇಕು. ಅತಿ ಶೀತದಿಂದಾಗಿ ಕಫವಾತಗಳೆರಡೂ ಏಕಕಾಲಕ್ಕೆ ಪ್ರಕೋಪವಾಗುತ್ತದೆ. ಅದು ವಾತಾವರಣದಲ್ಲಿ ಬಿಸಿ ಏರಿದಂತೆ, ಘನೀಭೂತವಾದ ಕಫವು ಕರಗಲು ಪ್ರಾರಂಭಿಸುತ್ತದೆ.
ಕಫದ ಕರಗುವಿಕೆಗೆ ಹೊಂದುವಂತೆ ವಾತದ ಗತಿಯೂ ಇದ್ದರೆ, ವಸಂತದಲ್ಲಿ ಯಾವುದೇ ಅಡಚಣೆಗಳಿಲ್ಲದೆ ಬದುಕಬಹುದು. ಅವುಗಳಲ್ಲಿ ಹೊಂದಾಣಿಕೆ ಬಾರದಿದ್ದಾಗ, ದೇಹದಲ್ಲಿ ಅನೇಕ ವಿಧವಾದ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಕಫದ ಗಟ್ಟಿಯಾಗುವಿಕೆ ಹೆಚ್ಚಾಗಿದ್ದರೆ ಉಸಿರಾಟಕ್ಕೆ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ರೋಗಗಳು ಹೆಚ್ಚಾದರೆ, ವಾತದ ಗತಿಯು ಸರಿ ಇಲ್ಲದಿದ್ದಾಗ ಚರ್ಮಕ್ಕೆ, ಹೃದಯಕ್ಕೆ ಸಂಬಂಧಿಸಿದ ರೋಗಗಳು ಹೆಚ್ಚಾಗುತ್ತವೆ. ಈ ಕಫವಾತಗಳಲ್ಲಿ ಹೊಂದಾಣಿಕೆ ಕಾಪಾಡಿಕೊಂಡು ಪಿತ್ತವು ಉಲ್ಬಣವಾಗದಂತೆ ತಡೆಗಟ್ಟಿದರೆ ಆರೋಗ್ಯವು ಲಭಿಸಿದಂತೆ. ಇದಕ್ಕಾಗಿ ವೈದ್ಯಶಾಸ್ತ್ರಕ್ಕೆ ಪೂರಕವಾದ ಸಂಪ್ರದಾಯಗಳು ಆಚರಣೆಯಲ್ಲಿವೆ.
ಭಾರತದ ಬೇರೇ ಬೇರೇ ಪ್ರಾಂತ್ಯಗಳಲ್ಲಿ ಅಲ್ಲಿಯ ವಾತಾವರಣಕ್ಕೆ ಅನುಗುಣವಾಗಿ ವಿಧ ವಿಧವಾದ ಆಹಾರಪದ್ಧತಿಗಳು ರೂಢಿಯಲ್ಲಿವೆ. ಹಾಗೆಯೇ ಅನೇಕ ಹಬ್ಬಗಳ ಆಚರಣೆ, ಆಗ ತಯಾರಿಸಬೇಕಾದ ಆಹಾರಪದಾರ್ಥಗಳು, ಹಬ್ಬದ ನೀತಿನಿಯಮಗಳು ವಿಭಿನ್ನವಾಗಿದ್ದರೂ ಆಯಾ ದೇಶ ಮತ್ತು ಕಾಲಸ್ವಭಾವಕ್ಕೆ ಸೂಕ್ತವಾಗಿರುತ್ತವೆ.
ಚಳಿಗಾಲದಲ್ಲಿ ಸೂರ್ಯೋದಯ ತಡವಾದರೂ ಬೇಗ ಆಹಾರವನ್ನು ಸೇವಿಸಲು ಧನುರ್ಮಾಸದ ಆಚರಣೆಯನ್ನು ತಿಳಿಸುತ್ತದೆ ಶಾಸ್ತ್ರ. ಆಗಿನ ಪ್ರಧಾನವಾದ ಆಹಾರ ಹುಗ್ಗಿ ಅಥವಾ ಪೊಂಗಲ್. ಇದಕ್ಕೆ ಬಳಸುವ ಪದಾರ್ಥಗಳು ಕಫವಾತಗಳ ಏರುಪೇರನ್ನು ತಗ್ಗಿಸಿ, ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ದೇಹದ ಧಾತುಮಲಗಳು ತಮ್ಮ ಕೆಲಸವನ್ನು ತಡೆಯಿಲ್ಲದೆ ಮಾಡಲು ಸಹಾಯ ಮಾಡುತ್ತದೆ. ಅದಕ್ಕೆ ಉಪಯೋಗಿಸುವ ತುಪ್ಪವು ವಾತ–ಪಿತ್ತಗಳನ್ನು ಸಮವಾಗಿರಿಸಿದರೆ, ಎಳ್ಳು, ಒಣಕೊಬ್ಬರಿ ವಾತದ ಗತಿಗೆ ತಡೆಯಾಗದಂತೆ ಕಾಪಾಡುತ್ತದೆ, ಅಕ್ಕಿ ಹೆಸರುಬೇಳೆಗಳು ಧಾತುಪೋಷಣವನ್ನು ಮಾಡುವುದರೊಂದಿಗೆ, ಮಲಪ್ರವೃತ್ತಿಯೂ ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ.
ಜೀರಿಗೆ–ಮೆಣಸುಗಳು ಅಜೀರ್ಣವಾಗದಂತೆ, ದೇಹದ ಆಂತರಿಕ ಉಷ್ಣತೆ ಕಡಿಮೆಯಾಗದಂತೆ, ನೋಡಿಕೊಳ್ಳುತ್ತವೆ. ಹೀಗೆಯೆ ಸಿಹಿಹುಗ್ಗಿ ಅಥವಾ ಪೊಂಗಲ್‌ನಲ್ಲಿರುವ ಬೆಲ್ಲದ ಸಿಹಿ ಧಾತುಪೋಷಕವಾಗಿಯೂ, ಸಂದುಗಳಲ್ಲಿರುವ ಜಿಡ್ಡಿನ ಅಂಶವನ್ನು ಸರಿದೂಗಿಸಿಕೊಡುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಸಾಂಪ್ರದಾಯಿಕವಾದ ಆಹಾರಸೇವನೆಯು ಚಳಿಗಾಲದಲ್ಲಿ ಬರುವ ರೋಗಗಳನ್ನು ತಡೆಗಟ್ಟುವುದರ ಜೊತೆಗೆ ಕಫವಾತಗಳ ಸಮತ್ವದಿಂದಾಗಿ ವಸಂತದಲ್ಲಿ ಕಫವಾಗಲೀ ವಾತವಾಗಲೀ ರೋಗೋತ್ಪತ್ತಿ ಮಾಡದಂತೆ ತಡೆಗಟ್ಟುತ್ತದೆ.
ಚಳಿಗಾಲದಲ್ಲಿ ನಿತ್ಯಾಭ್ಯಂಗವು ವಾತಾವರಣದ ರೂಕ್ಷತೆಯಿಂದ ಚರ್ಮ ಒಡೆಯುವುದು, ಸಂದುನೋವುಗಳನ್ನು ತಡೆಗಟ್ಟುವುದರ ಜೊತೆಗೆ ವಾತದ ಗತಿಯನ್ನು ಸರಿಯಾಗಿಡುವುದರಿಂದ ಚರ್ಮಕ್ಕೆ ಸಂಬಂಧಿಸಿದ ಅಲರ್ಜಿಗಳು ಬಾರದಂತೆ ತಡೆಗಟ್ಟುತ್ತವೆ. ಚಳಿಗಾಲದಲ್ಲಿ ಮಾಡುವ ವ್ಯಾಯಾಮವೂ ದೇಹಧಾರ್ಢ್ಯವನ್ನೂ, ಆಂತರಿಕ ಉಷ್ಣತೆಯನ್ನೂ ಹೆಚ್ಚಿಸುತ್ತದೆ.
ವಸಂತದ ಬಿಸಿಲು ಪ್ರಾರಂಭವಾಗುವಾಗ ವಮನ ಅಥವಾ ವಾಂತಿ ಮಾಡಿಸುವ ಮೂಲಕ ಘನೀಕರಿಸಿದ, ಅಗತ್ಯಕ್ಕಿಂತ ಹೆಚ್ಚಾದ ಕಫವನ್ನು ಹೋರಹಾಕಬೇಕೆಂದು ಆಯುರ್ವೇದ ಹೇಳುತ್ತದೆ. (ಇದನ್ನು ವೈದ್ಯರ ಸಲಹೆ–ಮಾರ್ಗದರ್ಶನಗಂತೆಯೇ ಮಾಡಬೇಕು.) ಕರಗುತ್ತಿರುವ, ಅಗತ್ಯಕ್ಕಿಂತ ಹೆಚ್ಚಾಗಿರುವ ಕಫವನ್ನು, ದೇಹದಿಂದ ಮೂತ್ರದ ಮೂಲಕ ಹೊರಹಾಕುವುದು ಸೂಕ್ತ. ಅದಕ್ಕಾಗಿ ಬಿಸಿಲು ಹೆಚ್ಚಾಗುವಾಗ ನೀರನ್ನು ಹೆಚ್ಚಾಗಿ ಸೇವಿಸಬೇಕು. ಕೆಲವೊಮ್ಮೆ ತಣ್ಣೀರನ್ನು ಹೆಚ್ಚಾಗಿ ಸೇವಿಸುವುದು ಹಸಿವೆಯನ್ನು ಕಡಿಮೆ ಮಾಡಿ, ಅಜೀರ್ಣವನ್ನು ಉತ್ಪತ್ತಿ ಮಾಡಬಹುದು. ಇದು ಬಿಸಿಲು ಹೆಚ್ಚಾದಂತೆ ವಾತಾವರಣಕ್ಕೆ ದೇಹವು ಹೊಂದಿಕೊಳ್ಳದಂತೆ ತಡೆಗಟ್ಟಿ, ಕೆಮ್ಮು, ದಮ್ಮು, ಗಂಟುನೋವು, ಚರ್ಮರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ನೀರಿಗೆ ಶುಂಠಿ, ಕೊನ್ನಾರಿ ಗಡ್ಡೆ, ಮುಂತಾದವುಗಳನ್ನು ನೀರಿಗೆ ಹಾಕಿ ಕುದಿಸಿ ಕುಡಿಯಬೇಕು. ಇದು ಹೆಚ್ಚಾದ ಕಫವು ಮೂತ್ರದಲ್ಲಿ ಹೊರಹೋಗುವಂತೆ ಮಾಡುತ್ತದೆ; ಆದರೆ ಆಜೀರ್ಣವಾಗದಂತೆಯೂ ತಡೆಗಟ್ಟುತ್ತದೆ.
ಹೆಚ್ಚಾದ ಕಫವನ್ನು ಒಣಗಿಸಲು, ಕಫ ವೃದ್ಧಿಯಿಂದಾಗುವ ಅಗ್ನಿಮಾಂಧ್ಯವನ್ನು ನಿಯಂತ್ರಿಸಿ, ಜೀರ್ಣಶಕ್ತಿಯನ್ನು ಹೆಚ್ಚಿಸಲು ಶಿವರಾತ್ರಿಯ ಉಪವಾಸ, ರಾತ್ರಿ ಜಾಗರಣೆಯನ್ನು ವಿಧಿಸಿದ್ದಾರೆ ಎನಿಸುತ್ತದೆ. ಬಿಸಿಯಿಂದಾಗಿ ಪಿತ್ತವು ಅತಿಯಾಗದಂತೆ ದ್ರಾಕ್ಷಿ, ಮಾವು, ಇವುಗಳ ಸೇವನೆ, ತಂಪಾಗಿ ಗಾಳಿ ಬೀಸುವ, ನೆರಳಿರುವ, ಉದ್ಯಾನ, ನದಿ ಮುಂತಾದ ಪ್ರದೇಶಗಳ ವಿಹಾರ, ಮಾನಸಿಕ ಉಲ್ಲಾಸ, ಬದುಕಿನಲ್ಲಿ ಉತ್ಸಾಹ ತುಂಬುವ ಚಟುವಟಿಕೆಗಳು ವಸಂತದಲ್ಲಿ ಆರೋಗ್ಯವನ್ನು ಕಾಪಾಡುತ್ತವೆ.
ಯುಗಾದಿಯಲ್ಲಿ ಸೇವಿಸುವ ಬೇವು–ಬೇಲ್ಲಗಳೂ ವಸಂತದಲ್ಲಿ ಕಹಿ ಮತ್ತು ಸಿಹಿಗಳನ್ನು ಸಮನಾಗಿ ಸೇವಿಸಿದರೆ ಆರೋಗ್ಯಕರವೆಂದು ಸೂಚಿಸುವ ಆಚರಣೆಯೇ ಆಗಿದೆ. ವಸಂತದಲ್ಲಿ ಹೀರೆ, ಸೋರೆ, ಹೊಂಗೆ, ಬೇವಿನ ಹೂವು, ಇವುಗಳಿಂದ ತಯಾರಿಸಿದ, ಮಜ್ಜಿಗೆ ಹುಳಿ, ಮೇಲೋಗರ, ಗೊಜ್ಜು ಇವುಗಳು ಸ್ವಾಸ್ಥ್ಯವರ್ಧಕ ಆಹಾರಗಳು.
ಹೀಗೆ ನಮ್ಮ ಸಾಂಪ್ರದಾಯಿಕ ಆಚರಣೆಗಳು ಮತ್ತು ವೈದ್ಯಶಾಸ್ತ್ರದ ಸಲಹೆಗಳನ್ನು ಅರಿತು ನಡೆದರೆ ಆರೋಗ್ಯ ಪ್ರಾಪ್ತಿಯಾಗುವುದರಲ್ಲಿ ಎರಡು ಮಾತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.